ತಡರಾತ್ರಿ ಮಧುಗೆ ಬಿ ಫಾರಂ: ಪ್ರಚಾರಕ್ಕೆ ಸಿದ್ದರಾಮಯ್ಯ, ಡಿಕೆಶಿಯೂ ಬರಲಿದ್ದಾರೆ ಎಂದ ದೇವೇಗೌಡ

ಬೆಂಗಳೂರು: ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಬೆಂಬಲದೊಂದಿಗೆ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿರುವ ಜೆಡಿಎಸ್​ ತನ್ನ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಿದ್ದು, ಭಾನುವಾರ ತಡರಾತ್ರಿ ಬಿ ಫಾರಂ ನೀಡಿದೆ.

ವಿದೇಶ ಪ್ರವಾಸದಲ್ಲಿದ್ದ ಮಧು ಬಂಗಾರಪ್ಪ, ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾನುವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದರು. ಅಲ್ಲಿಂದ ನೇರವಾಗಿ ಎಚ್​.ಡಿ ದೇವೇಗೌಡರ ನಿವಾಸಕ್ಕೆ ತೆರಳಿದ ಮಧು ಅವರಿಗೆ ಅಲ್ಲಿಯೇ ಬಿ ಫಾರಂ ಕೂಡ ನೀಡಲಾಯಿತು. ಅಚ್ಚರಿಯೆಂದರೆ, ಮಂಗಳೂರಿನಲ್ಲಿದ್ದ ಎಚ್​.ಡಿ ಕುಮಾರಸ್ವಾಮಿ ಅವರು ರಾತ್ರಿಯೇ ಬೆಂಗಳೂರಿಗೆ ಆಗಮಿಸಿ, ಮಧು ಬಂಗಾರಪ್ಪ ಅವರೊಂದಿಗೆ ದೇವೇಗೌಡರ ನಿವಾಸಕ್ಕೆ ತೆರಳಿದರು ಎನ್ನಲಾಗಿದೆ.

ಮಂಡ್ಯ ಕ್ಷೇತ್ರದ ಚುನಾವಣೆ ವಿಚಾರವಾಗಿ ಅಷ್ಟಾಗಿ ಅಸ್ತೆ ವಹಿಸದ ಕುಮಾರಸ್ವಾಮಿ ಅವರು, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರ ಗೆಲುವಿಗಾಗಿ ಹೆಚ್ಚು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರ ರಾಜಕೀಯ ತವರು ಜಿಲ್ಲೆಯಾಗಿರುವ ಶಿವಮೊಗ್ಗದಲ್ಲಿ ಜೆಡಿಎಸ್​ಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಂಡು, ಆ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳಿಗೆ ಶಿವಮೊಗ್ಗದ ಮೂಲಕವೇ ಪೆಟ್ಟು ನೀಡುವುದು ಕುಮಾರಸ್ವಾಮಿ ಅವರ ನಿಲುವಾಗಿದೆ ಎಂದು ಪಕ್ಷದ ಮೂಲಗಳು ತಿಳಸಿವೆ.

ಇನ್ನು ರಾತ್ರಿ ಮಧು ಬಂಗಾರಪ್ಪ ಅವರಿಗೆ ಟಿಕೆಟ್​ ನೀಡಿರುವ ಬಗ್ಗೆ ದೇವೇಗೌಡರು ಸೋಮವಾರ ಬೆಳಗ್ಗೆ ಟ್ವೀಟ್​ ಕೂಡ ಮಾಡಿದ್ದಾರೆ. ಮೈತ್ರಿ ಕೂಟದ ಬೆಂಬಲದೊಂದಿಗೆ ಮಧು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು ಈ ಕುರಿತು ಸೋಮವಾರ ಮಾತನಾಡಿರುವ ದೇವೇಗೌಡರು, ” ಶಿವಮೊಗ್ಗದಿಂದ ಮಧು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಚುನಾವಣೆ ಪ್ರಚಾರಕ್ಕೆ ನಾನು ಹೋಗುತ್ತೇನೆ. ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್​ ವೇಣುಗೋಪಾಲ್​ ಸೇರಿದಂತೆ ಕಾಂಗ್ರೆಸ್​ ನಾಯಕರೂ ಬರುತ್ತಾರೆ. ಮುಖ್ಯಮಂತ್ರಿಯೂ ಬರಲಿದ್ದಾರೆ. ನಾವೆಲ್ಲ ಒಟ್ಟಿಗೇ ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.