ಜೆಡಿಎಸ್‌ಗೆ 6 ಸ್ಥಾನವೇ ಗಟ್ಟಿ!

ಬೆಂಗಳೂರು: ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿಗೆ ಹೊರಟಿರುವ ಕಾಂಗ್ರೆಸ್, ಸೀಟು ಹಂಚಿಕೆ ವಿಚಾರದಲ್ಲಿ ಮೇಲುಗೈ ಸಾಧಿಸಲು ತಂತ್ರ ರೂಪಿಸುತ್ತಿದೆ. 28 ಕ್ಷೇತ್ರಗಳ ಪೈಕಿ ಜೆಡಿಎಸ್ 12ಕ್ಕೆ ಈಗಾಗಲೇ ಬೇಡಿಕೆ ಇಟ್ಟಿದೆ. ಯಾವ ಕ್ಷೇತ್ರಗಳು ಎಂಬುದನ್ನು ಎರಡೂ ಪಕ್ಷದ ನಾಯಕರ ನಡುವೆ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳದೆ ಇರಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೈ ಮುಖಂಡರು, ಮೈತ್ರಿಯಿಂದ ರಾಜ್ಯದಲ್ಲಿ ಕಾಂಗ್ರೆಸ್‌ಗೆ ನಷ್ಟವೇ ಆಗಲಿದೆ. ಹೆಚ್ಚೆಂದರೆ ಆರು ಕ್ಷೇತ್ರಗಳನ್ನೇ ಬಿಟ್ಟುಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ. ಮೈತ್ರಿ ಉದ್ದೇಶವೇ ಬಿಜೆಪಿ ಸೋಲಿಸುವುದು. ಈ ಸಂದರ್ಭದಲ್ಲಿ 10 ಬೇಕು, 12 ಬೇಕೆಂಬ ವಾದವೇ ಸರಿಯಲ್ಲ. ಗೆಲುವೇ ಮಾನದಂಡವಾಗಬೇಕಾಗುತ್ತದೆ. ಇದೇ ಪಕ್ಷದ ನಿಲುವು ಕೂಡ ಎಂದು ವಿವರಿಸುತ್ತಾರೆ. ಮಂಡ್ಯ, ಹಾಸನ, ಶಿವಮೊಗ್ಗ ಸೇರಿ ಇನ್ನು ಮೂರು ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡುವ ಚರ್ಚೆಯಾಗಿದೆ. ಬೆಂಗಳೂರು ಉತ್ತರ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ಬೆಳಗಾವಿ ಅಥವಾ ಚಿಕ್ಕೋಡಿ ಪೈಕಿ ಒಂದು ಕ್ಷೇತ್ರ ಬಿಟ್ಟುಕೊಡಬಹುದು. ಇದರ ಹೊರತು ಸೀಟು ಹಂಚಿಕೆ ಬೇರೇನೂ ಆಗುವುದಿಲ್ಲ. ಜೆಡಿಎಸ್‌ನವರು ಬೆಂಗಳೂರು ಉತ್ತರ ಸೇರಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ. ಈ ಕ್ಷೇತ್ರಗಳಲ್ಲೆಲ್ಲ ಕಾಂಗ್ರೆಸ್ ಹೆಚ್ಚು ಪ್ರಭಾವವಿದೆ. ಜೆಡಿಎಸ್ ಕಣಕ್ಕಿಳಿದರೆ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಡುತ್ತಾರೆ.

ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ ಮೊದಲ ವಾರ ಅಂತಿಮ ಗೊಳಿಸಲಾಗುವುದು. ಹಾವೇರಿಯಲ್ಲಿ ಮಾ.9ರಂದು ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ.
| ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ

ಮಂಡ್ಯ ನಿರ್ಣಾಯಕ
ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರನ್ನು ಪಕ್ಷದಿಂದ ಕಣಕ್ಕಿಳಿಸಿದರೆ ಖಂಡಿತ ಗೆಲುವು ನಮ್ಮದೆ. ಆದರೆ, ಮೈತ್ರಿ ಉಳಿಯಬೇಕೆಂದರೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಅನಿವಾರ್ಯ. ಸದ್ಯದ ಆದ್ಯತೆ ಮೈತ್ರಿ ಉಳಿಸಿಕೊಳ್ಳುವುದೇ ಆಗಿದೆ. ಒಂದೊಮ್ಮೆ ಸೀಟು ಹಂಚಿಕೆಯಲ್ಲಿ ಒಮ್ಮತ ಮೂಡದೆ ಇದ್ದು, ್ರೆಂಡ್ಲಿ ೈಟ್ ಎಂಬುದು ನಿರ್ಧಾರವಾದರೆ ಖಂಡಿತವಾಗಿ ಸುಮಲತಾರೇ ಕಾಂಗ್ರೆಸ್ ಅಭ್ಯರ್ಥಿಯಾಗಿರುತ್ತಾರೆ ಎಂದು ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *