ಅಭಿವೃದ್ಧಿಗೆ ಮುಖ್ಯಮಂತ್ರಿ ನಿರಾಸಕ್ತಿ

ಶೃಂಗೇರಿ: ವಿಧಾನಸಭೆಯಲ್ಲಿ ಕೇವಲ 37 ಸ್ಥಾನ ಪಡೆದಿರುವ ಜೆಡಿಎಸ್ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕುಟುಂಬ ರಾಜಕಾರಣಕ್ಕಷ್ಟೇ ಸೀಮಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಶೃಂಗೇರಿ ಶ್ರೀಮಠದ ಉಭಯ ಶ್ರೀಗಳ ಆಶೀರ್ವಾದ ಪಡೆದ ನಂತರ ರೈತ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಅಲ್ಪ ಸ್ಥಾನಗಳಲ್ಲಿ ಗೆದ್ದಿರುವ ಜೆಡಿಎಸ್ ಅಧಿಕಾರದಲ್ಲಿದೆ. ಮುಖ್ಯಮಂತ್ರಿಯಾದರೆ 24 ತಾಸಿನಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದ ಎಚ್.ಡಿ.ಕುಮಾರಸ್ವಾಮಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ರಾಜ್ಯ ಬರಗಾಲಕ್ಕೆ ತುತ್ತಾದರೂ ನೀರಾವರಿ ಯೋಜನೆಗಳಿಗೆ ತಿಲಾಂಜಲಿ ಇಟ್ಟಿದೆ ಎಂದು ಟೀಕಿಸಿದರು.

ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಹಗರಣಗಳಲ್ಲೇ ಮುಳುಗಿತ್ತು. 2ಜಿ, ಕಲ್ಲಿದ್ದಲು ಮತ್ತಿತರೆ ಹಗರಣಗಳಿಂದ ದೇಶದ ಅರ್ಥಿಕತೆಯನ್ನೇ ಹಾಳುಮಾಡಿತ್ತು. ಮೋದಿ ಸರ್ಕಾರದ ಯಾವುದೇ ಸಂಸದರು ಭ್ರಷ್ಟಾಚಾರ ಮಾಡಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಭಾರತ ಉತ್ತಮ ಪ್ರಗತಿ ಕಾಣುತ್ತಿದೆ. ಅಮೆರಿಕ, ಜಪಾನ್, ರಷ್ಯಾ, ಫ್ರಾನ್ಸ್ ಮುಂತಾದ ದೇಶಗಳು ಭಾರತದ ಅರ್ಥಿಕ ಪ್ರಗತಿಯನ್ನು ಕೊಂಡಾಡಿದ್ದಾರೆ. ಕೃಷಿಕರ ಅಭಿವೃದ್ಧಿಗಾಗಿ ದೇಶದ 12.50 ಅನ್ನದಾತರಿಗೆ 75 ಸಾವಿರ ಕೋಟಿ, ಸಾಮಾನ್ಯ ಜನರ ಆರೋಗ್ಯಕ್ಕಾಗಿ 50 ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದು ಹೇಳಿದರು.

ಈ ಬಾರಿ ದೇಶದ ಎಲ್ಲೆಡೆ ಮೋದಿ ಆಲೆ ಇದೆ. ಬಿಜೆಪಿ ಕಳೆದ ಬಾರಿಗಿಂತ ಶೇ.10ರಿಂದ 12ರಷ್ಟು ಹೆಚ್ಚು ಮತ ಗಳಿಸಲಿದೆ. ದೇಶದಲ್ಲಿ ಪಕ್ಷ 300ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಮೋದಿಗೆ ರಾಜ್ಯದಲ್ಲೂ ಅನುಕೂಲಕರ ವಾತಾವರಣವಿದ್ದು, ಕನಿಷ್ಠ 22 ಸ್ಥಾನಗಳಲ್ಲಿ ಗೆಲ್ಲಲು ಕಾರ್ಯಕರ್ತರ ಜತೆ ದುಡಿಯುತ್ತೇವೆ ಎಂದರು.

ತಾಪಂ ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್, ತಾಲೂಕು ಬಿಜೆಪಿ ಅಧ್ಯಕ್ಷ ಎಚ್.ಎಸ್.ನಟೇಶ್, ಜಿಪಂ ಸದಸ್ಯ ಬಿ.ಶಿವಶಂಕರ್, ಜಿಪಂ ಮಾಜಿ ಉಪಾಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ, ಎನ್.ಆರ್.ಪುರ ತಾಪಂ ಅಧ್ಯಕ್ಷೆ ಜಯಶೀಲಾ ಮೋಹನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪುಣ್ಯಪಾಲ್, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ದಿನೇಶ್ ಹೊಸೂರ್, ಮುಖಂಡರಾದ ಶ್ರೀಧರ್ ರಾವ್, ಸುರೇಶ್ ಇತರರಿದ್ದರು.

ಬೇಲೂರು-ಚಿಕ್ಕಮಗಳೂರು ರೈಲು ಮಾರ್ಗ ಶೀಘ್ರ

ಬೇಲೂರು-ಚಿಕ್ಕಮಗಳೂರು ಮತ್ತು ಶೃಂಗೇರಿ-ಮಂಗಳೂರು ರೈಲ್ವೆ ಮಾರ್ಗ ನಿರ್ವಣಕ್ಕೆ ಈಗಾಗಲೆ ರೈಲ್ವೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಜಿಲ್ಲೆಯ ಮೆಣಸಿನಹಾಡ್ಯದ 124 ಮನೆಗಳಿಗೆ ದೀನದಯಾಳ್ ಉಪಾಧ್ಯಾಯ ವಿದ್ಯುತ್ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡಲಾಗಿದೆ. ಕ್ಷೇತ್ರದ ರಸ್ತೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಸಿಆರ್​ಎಫ್ ನಿಧಿ ನೀಡಲಾಗಿದೆ. ಸ್ಥಳೀಯ ಶಾಸಕರು ಅದನ್ನು ತಾವೇ ತಂದಿದ್ದು ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಸಂಸದರನ್ನು ನಿರ್ಲಕ್ಷಿಸಿ ಶಂಕುಸ್ಥಾಪನೆ ಮಾಡುತ್ತಿದ್ದಾರೆ ಎಂದು ದೂರಿದರು.

ದೇಶದ ರಕ್ಷಣಾ ಸಮಿತಿ ಸದಸ್ಯಳಾಗಿ ಗಡಿಯಲ್ಲಿ ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಮೋದಿ ಸರ್ಕಾರವು ಸೈನಿಕರ ಹಿತರಕ್ಷಣೆಗಾಗಿ 1 ಲಕ್ಷ ಕೋಟಿ ರೂ. ಅನುದಾನ ವಿನಿಯೋಗಿಸಿದೆ. ಸೈನಿಕರಿಗೆ ನೈಟ್​ವಿಷನ್ ಗ್ಲಾಸ್ ವಿತರಿಸಲಾಗಿದೆ. ಪುಲ್ವಾಮಾ ಘಟನೆ ಬಳಿಕ ಕೇಂದ್ರ ಸರ್ಕಾರ ಉಗ್ರರ ವಿರುದ್ಧ ತೆಗೆದುಕೊಂಡ ನಿರ್ಧಾರ ದೇಶದ ಘನತೆಯನ್ನು ಜಾಗತಿಕವಾಗಿ ಹೆಚ್ಚಿಸಿದೆ. ಈ ಬಾರಿ ಲೋಕಸಬಾ ಚುನಾವಣೆಯಲ್ಲಿ ಮೋದಿ ವಿರುದ್ಧ ಮಹಾಟಬಂಧನ್​ನಲ್ಲಿ ಪಾಕಿಸ್ತಾನ ಮತ್ತು ಚೀನಾ ಕೂಡ ಸೇರಿಕೊಂಡಿವೆ ಎಂದು ಲೇವಡಿ ಮಾಡಿದರು.