ಭದ್ರೇಗೌಡ ಬೆಂಗಳೂರಿನ 54ನೇ ಉಪ ಮೇಯರ್

ಬೆಂಗಳೂರು: ರಮೀಳಾ ಉಮಾಶಂಕರ್ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಉಪ ಮೇಯರ್ ಸ್ಥಾನಕ್ಕೆ ನಿರೀಕ್ಷೆಯಂತೆ ಕಾಂಗ್ರೆಸ್- ಜೆಡಿಎಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾಗಪುರ ವಾರ್ಡ್​ನ ಭದ್ರೇಗೌಡ ಆಯ್ಕೆಯಾಗಿದ್ದಾರೆ.

ಬುಧವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಉಪಮೇಯರ್ ಹಾಗೂ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಪೈಕಿ 11 ಸಮಿತಿಗಳಿಗೆ ತಲಾ 11 ಸದಸ್ಯರಂತೆ 121 ಹಾಗೂ ನಗರ ಯೋಜನೆ ಸ್ಥಾಯಿ ಸಮಿತಿಗೆ 9 ಸದಸ್ಯರನ್ನು ಆಯ್ಕೆ ಮಾಡಲಾಯಿತು. ಇನ್ನಿಬ್ಬರು ಸದಸ್ಯರ ಆಯ್ಕೆಗಾಗಿ ಮತ್ತೊಮ್ಮೆ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ನಿರ್ಧರಿಸಿದ್ದಾರೆ.

ಚುನಾವಣೆ ಹಿಂದಿನ ದಿನದವರೆಗೂ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸು ವುದಾಗಿ ಬಿಜೆಪಿ ತಿಳಿಸಿತ್ತು. ಅದರಂತೆ ರಾಮಮೂರ್ತಿನಗರ ವಾರ್ಡ್ ಕಾಪೋರೇಟರ್ ಪದ್ಮಾವತಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಸೋಲಿನ ಮುಖಭಂಗ ತಪ್ಪಿಸಲು ನಾಮಪತ್ರ ಸಲ್ಲಿಸದಂತೆ ಪದ್ಮಾವತಿ ಅವರಿಗೆ ಪಕ್ಷದ ಮುಖಂಡರು ಸೂಚನೆ ನೀಡಿದ್ದರು. ಹೀಗಾಗಿ ಭದ್ರೇಗೌಡ ಉಪಮೇಯರ್ ಆಗಿ ಅವಿರೋಧ ಆಯ್ಕೆಯಾದರು.

ಚುನಾವಣಾಧಿಕಾರಿ ಶಿವಯೋಗಿ ಕಳಸದ ಬೆಳಗ್ಗೆ 11.30ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಮೊದಲಿಗೆ ಕೌನ್ಸಿಲ್ ಸಭಾಂಗಣದಲ್ಲಿ ಹಾಜರಿದ್ದ ಮತದಾರರ ಸಹಿ ಪಡೆದುಕೊಳ್ಳಲಾಯಿತು. ಆನಂತರ 2 ನಿಮಿಷ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಯಿತು. ಭದ್ರೇಗೌಡ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಅವರನ್ನು ಅವಿರೋಧ ಆಯ್ಕೆ ಮಾಡಿರುವುದಾಗಿ ಶಿವಯೋಗಿ ಕಳಸದ ಘೋಷಿಸಿದರು.

ಸಲ್ಲಿಕೆಯಾಗದ ನಾಮಪತ್ರ: ಉಪಮೇಯರ್ ಚುನಾವಣೆ ನಂತರ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ಆರಂಭಿಸಲಾಯಿತಾದರೂ, ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ನಗರ ಯೋಜನೆ ಸ್ಥಾಯಿ ಸಮಿತಿಗಳಿಗೆ ತಲಾ ಒಬ್ಬರು ಹೆಚ್ಚುವರಿ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ 12.30ರವರೆಗೆ ಮುಂದೂಡಿದರು.

ಬಿಜೆಪಿ ಸದಸ್ಯೆಯ ಮೀ ಟೂ ಆರೋಪ

ತಮಗೆ ಬೇಕಾದ ಸ್ಥಾಯಿ ಸಮಿತಿಗೆ ಸದಸ್ಯರನ್ನಾಗಿ ಮಾಡಲು ಪಕ್ಷದ ಮುಖಂಡರು ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಸದಸ್ಯೆ ನೇತ್ರಾ ಪಲ್ಲವಿ ಮುಖಂಡರ ವಿರುದ್ಧ ಮೀಟೂ ಆರೋಪ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ನೇತ್ರಾ, ‘ಅಂದವಾಗಿರುವ ಸದಸ್ಯೆಯರು ಅವರು ಕರೆದಾಗ ಹೋಗಲಿಲ್ಲ ಎಂದರೆ ಯಾವುದೇ ಸ್ಥಾನಮಾನ ನೀಡುವುದಿಲ್ಲ’ ಎಂದು ಅಳಲು ತೋಡಿಕೊಂಡರು. ಈ ಆರೋಪದ ಬಗ್ಗೆ ಆರ್. ಅಶೋಕ್ ಸೇರಿ ಯಾವುದೇ ಬಿಜೆಪಿ ಮುಖಂಡರು ಉತ್ತರಿಸಲಿಲ್ಲ.

ಶಾಸಕರ ಅಣತಿ

ಚುನಾವಣೆ ಪ್ರಕ್ರಿಯೆ ಆರಂಭವಾದಾಗ ಕಾನೂನು ಮತ್ತು ನಿಯಮದಂತೆ ಚುನಾವಣೆ ನಡೆಸುವುದಾಗಿ ಚುನಾವಣಾಧಿಕಾರಿ ತಿಳಿಸಿದರು. ಅದರೆ, ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ಅಣತಿಯಂತೆ ಚುನಾವಣೆ ನಡೆಸಿದರು. ಪ್ರಮುಖವಾಗಿ ನಗರ ಯೋಜನೆ ಸ್ಥಾಯಿ ಸಮಿತಿ ಚುನಾವಣೆ ವೇಳೆ ನಾಮಪತ್ರ ಹಿಂಪಡೆಯಲು 5 ನಿಮಿಷ ಕಾಲಾವಕಾಶ ನೀಡುವುದಾಗಿ ಘೋಷಿಸಿದರು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವಿನ ಸಂಧಾನ ಮಾತುಕತೆ 30 ನಿಮಿಷಕ್ಕೂ ಹೆಚ್ಚು ಕಾಲ ನಡೆಯಿತು. ಗಡುವು ಮುಗಿದಿದ್ದರೂ, ಮುಂದಿನ ಪ್ರಕ್ರಿಯೆ ನಡೆಸದೆ ಚುನಾವಣಾಧಿಕಾರಿ ಕಾಲಹರಣ ಮಾಡಿದರು. ಕಾಂಗ್ರೆಸ್ ಶಾಸಕರಾದ ರಾಮಲಿಂಗಾರೆಡ್ಡಿ, ಮುನಿರತ್ನ ಸೇರಿ ಇನ್ನಿತರರು ಚುನಾವಣಾ ಪ್ರಕ್ರಿಯೆ ಮುಂದುವರಿಸದೆ ಕೆಲಕಾಲ ಸ್ಥಗಿತ ಗೊಳಿಸುವಂತೆ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದರು.

ಬಹುತೇಕ ಶಾಸಕ, ಸಂಸದರು ಗೈರು

ಉಪಮೇಯರ್ ಮತ್ತು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆಯ ಮತದಾರರಾಗಿದ್ದ ಸಂಸದರು, ಶಾಸಕರಲ್ಲಿ ಬಹುತೇಕರು ಗೈರು ಹಾಜರಾಗಿದ್ದರು.

ಬಂಡಾಯಗಾರರು ಮರಳಿ ಗೂಡಿಗೆ

ಮೇಯರ್ ಚುನಾವಣೆ ವೇಳೆ

ಪಕ್ಷದ ವರಿಷ್ಠರ ಮೇಲೆ ಮುನಿಸಿಕೊಂಡು ಬಿಜೆಪಿಗೆ ಬೆಂಬಲ ನೀಡಿದ್ದ ಜೆಡಿಎಸ್ ಸದಸ್ಯರಾದ ಮಂಜುಳಾ ಮತ್ತು ದೇವದಾಸ್ ಬುಧವಾರ ಚುನಾವಣೆ ವೇಳೆ ಜೆಡಿಎಸ್ ಸದಸ್ಯರೊಂದಿಗೆ ಕಾಣಿಸಿಕೊಂಡರು.

ತಂತ್ರ- ಪ್ರತಿತಂತ್ರಗಳು

ಮೊದಲಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು. 13 ಸದಸ್ಯರಿಂದ ನಾಮಪತ್ರ ಸಲ್ಲಿಕೆಯಾಗಿದ್ದರೂ ಕೊನೆಗೆ ಕಾಂಗ್ರೆಸ್​ನ ಆರ್ಯ ಶ್ರೀನಿವಾಸ್ ಮತ್ತು ಪಕ್ಷೇತರ ಲಕ್ಷ್ಮೀನಾರಾಯಣ್ ನಾಮಪತ್ರ ಹಿಂಪಡೆದರು. ಅದರಿಂದ ಉಳಿದ 11 ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಯಿತು. ನಂತರ ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ವೇಳೆ ಪಕ್ಷೇತರ ಸದಸ್ಯ ಚಂದ್ರಪ್ಪರೆಡ್ಡಿ ನಾಮಪತ್ರ ಹಿಂಪಡೆಯುವಂತೆ ಮಾಡಲು ಬಿಜೆಪಿ ತಂತ್ರ ರೂಪಿಸಿತ್ತು. ಅದರಂತೆ ಪಕ್ಷದ ಸದಸ್ಯರೊಬ್ಬರಿಂದ ಹೆಚ್ಚುವರಿ ನಾಮಪತ್ರ ಸಲ್ಲಿಸಿತು. ಆ ಮೂಲಕ 11 ಸ್ಥಾನಕ್ಕೆ 13 ನಾಮಪತ್ರ ಸಲ್ಲಿಕೆಯಾಗುವಂತಾಗಿತ್ತು. ಹೀಗಾದರೆ ಚುನಾವಣೆ ನಡೆಸಬೇಕಾದ ಪರಿಸ್ಥಿತಿ ನಿರ್ವಣವಾಗಿತ್ತು. ಕಾಂಗ್ರೆಸ್ ಶಾಸಕರಾದ ರಾಮಲಿಂಗಾರೆಡ್ಡಿ, ಮುನಿರತ್ನ, ಬಿ. ಬಸವರಾಜು ಇನ್ನಿತರರು ಬಿಜೆಪಿ ಶಾಸಕರಾದ ವಿಶ್ವನಾಥ್, ಸತೀಶ್​ರೆಡ್ಡಿ ಜತೆ ಮಾತುಕತೆ ನಡೆಸಿ ತಮ್ಮ ಸದಸ್ಯರ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದರು. ಚಂದ್ರಪ್ಪರೆಡ್ಡಿ ನಾಮಪತ್ರ ಹಿಂಪಡೆದರೆ ತಮ್ಮ ಪಕ್ಷದ ಸದಸ್ಯರು ಹಾಕಿರುವ ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಮಾಡುತ್ತೇವೆ ಎಂದು ವಿಶ್ವನಾಥ್ ಹೇಳಿದರು. ಕೊನೆಗೆ ರಾಮಲಿಂಗಾರೆಡ್ಡಿ, ಚಂದ್ರಪ್ಪರೆಡ್ಡಿ ಅವರ ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಿದರು. ನಂತರ ಬಿಜೆಪಿಯ ನಾರಾಯಣರಾಜು ಮತ್ತು ಗುರುಮೂರ್ತಿರೆಡ್ಡಿ ನಾಮಪತ್ರ ವಾಪಸ್ ಪಡೆದರು. ಕಾಂಗ್ರೆಸ್​ನ ರಾಜಣ್ಣ ಕೂಡ ನಾಮಪತ್ರ ಹಿಂಪಡೆದಿದ್ದರಿಂದ ಸ್ಥಾಯಿ ಸಮಿತಿಗೆ 9 ಸದಸ್ಯರನ್ನು ಮಾತ್ರ ಆಯ್ಕೆ ಮಾಡುವಂತಾಯಿತು.

ಬಿಜೆಪಿಯಲ್ಲಿ ಕಿತ್ತಾಟ

ಸ್ಥಾಯಿ ಸಮಿತಿಯಲ್ಲಿ ತಮ್ಮ ಕ್ಷೇತ್ರದ ಸದಸ್ಯರಿಗೆ ಸ್ಥಾನ ಕೊಡಿಸಬೇಕೆಂಬ ಕಾರಣಕ್ಕಾಗಿ ಬಿಜೆಪಿ ಶಾಸಕರಾದ ಆರ್. ಅಶೋಕ್ ಮತ್ತು ಸತೀಶ್​ರೆಡ್ಡಿ ಕಿತ್ತಾಟ ನಡೆಸಿದರು. ಬೆಳಗ್ಗೆ 9 ಗಂಟೆಗೆ ಬಿಬಿಎಂಪಿ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ಸಭೆ ನಡೆಸಿದ ಸಂದರ್ಭದಲ್ಲಿ ಪ್ರಮುಖ ಸ್ಥಾಯಿ ಸಮಿತಿಗೆ ತಮ್ಮ ಬೆಂಬಲಿಗ ಸದಸ್ಯರನ್ನು ನೇಮಿಸುವಂತೆ ಸತೀಶ್​ರೆಡ್ಡಿ ಪಟ್ಟು ಹಿಡಿದರು. ಅದಕ್ಕೆ ಒಪ್ಪದ ಅಶೋಕ್, ಅವರ ವಿರುದ್ಧ ಗರಂ ಆದರು. ಕೊನೆಗೆ ಸಂಸದ ಪಿ.ಸಿ. ಮೋಹನ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿದರು.

ಸಂಭಾವ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಪಟ್ಟಿ

ತೆರಿಗೆ ಮತ್ತು ಆರ್ಥಿಕ: ಹೇಮಲತಾ ಗೋಪಾಲಯ್ಯ, ಬೃಹತ್ ಸಾರ್ವಜನಿಕ ಕಾಮಗಾರಿ: ಲಾವಣ್ಯ ಗಣೇಶ್, ಅಪೀಲು: ಸುಜಾತಾ ರಮೇಶ್, ಸಾಮಾಜಿಕ ನ್ಯಾಯ: ಸೌಮ್ಯಾ ಶಿವಕುಮಾರ್, ಲೆಕ್ಕಪತ್ರ: ವೇಲುನಾಯ್ಕರ್, ಆರೋಗ್ಯ: ಮುಜಾಹಿದ್ ಪಾಷಾ, ಆಡಳಿತ ಮತ್ತು ಸುಧಾರಣೆ: ಆನಂದ್, ತೋಟಗಾರಿಕೆ: ಐಶ್ವರ್ಯಾ, ವಾರ್ಡ್ ಮಟ್ಟದ ಕಾಮಗಾರಿಗಳು: ಉಮ್ಮೇ ಸಲ್ಮಾ, ಶಿಕ್ಷಣ ಸ್ಥಾಯಿ ಸಮಿತಿ: ಇಮ್ರಾನ್ ಪಾಷಾ, ಮಾರುಕಟ್ಟೆ: ಫರೀದಾ ಇಸ್ತಿಯಾಕ್, ನಗರ ಯೋಜನೆ: ಸದಸ್ಯರ ಆಯ್ಕೆ ಬಾಕಿ ಇದೆ.

ಇಬ್ಬರು ಪಕ್ಷೇತರರಿಗೆ ಮಾತ್ರ ಅವಕಾಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಜಾರಿಗೆ ಬರಲು ಕಾರಣರಾದ 6 ಪಕ್ಷೇತರ ಸದಸ್ಯರಲ್ಲಿ ಇಬ್ಬರಿಗೆ ಮಾತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ದೊರೆಯಲಿದೆ. ಉಪಮೇಯರ್ ಅಥವಾ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಲಕ್ಷ್ಮೀನಾರಾಯಣ್​ಗೆ ಯಾವುದೇ ಸಮಿತಿಯಲ್ಲಿ ಸ್ಥಾನ ನೀಡದೆ ಕಾಂಗ್ರೆಸ್ ಅಚ್ಚರಿ ಮೂಡಿಸಿದೆ. ಬಿಜೆಪಿ ಹಠದಿಂದ ಸಮಿತಿ ಸದಸ್ಯ ಸ್ಥಾನಕ್ಕೆ ಸಲ್ಲಿಸಲಾಗಿದ್ದ ನಾಮಪತ್ರವನ್ನು ಚಂದ್ರಪ್ಪ ರೆಡ್ಡಿ ಹಿಂಪಡೆಯುವಂತಾಗಿದೆ. ಈ ಬಾರಿ ಆನಂದ್ ಮತ್ತು ಮುಜಾಹಿದ್ ಪಾಷಾಗೆ ಮಾತ್ರ ಸ್ಥಾಯಿ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.

ಸೇಡು ತೀರಿಸಿಕೊಂಡ ಶಾಸಕ ವಿಶ್ವನಾಥ್?

ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪತ್ನಿ ವಾಣಿಶ್ರೀ ಅವರ ಸೋಲಿಗೆ ಬಿಬಿಎಂಪಿ ಸದಸ್ಯ ಚಂದ್ರಪ್ಪ ರೆಡ್ಡಿ ಕಾರಣ ಎಂಬ ಸಿಟ್ಟು ಶಾಸಕ ಎಸ್.ಆರ್. ವಿಶ್ವನಾಥ್​ಗಿತ್ತು. ಈ ಹಿನ್ನೆಲೆಯಲ್ಲಿಯೇ ಚಂದ್ರಪ್ಪಗೆ ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯರಾಗುವುದಕ್ಕೆ ಅವಕಾಶ ನೀಡದೆ ನಾಮಪತ್ರ ಹಿಂಪಡೆಯುವಂತೆ ಮಾಡಲಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಅದರ ಜತೆಗೆ ಮೇಯರ್ ಚುನಾವಣೆ ವೇಳೆ ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದ ಚಂದ್ರಪ್ಪ ರೆಡ್ಡಿ, ಕೊನೆಗೆ ಕಾಂಗ್ರೆಸ್ ಪರವಾಗಿ ನಿಂತಿದ್ದರು. ಆ ಕೋಪವನ್ನು ಬಿಜೆಪಿ ಶಾಸಕರು ಸ್ಥಾಯಿ ಸಮಿತಿ ಚುನಾವಣೆಯಲ್ಲಿ ತೀರಿಸಿಕೊಂಡಿದ್ದಾರೆ ಎಂಬ ಮಾತುಗಳಿವೆ.

ಸ್ಥಾಯಿ ಸಮಿತಿ ಸದಸ್ಯರ ವಿವರ

# ತೆರಿಗೆ ಮತ್ತು ಆರ್ಥಿಕ: ಭಾರತಿ ರಾಮಚಂದ್ರ, ಮೋಹನ್ ಕುಮಾರ್, ಕೆ. ಸೋಮಶೇಖರ್, ಎಲ್. ಶ್ರೀನಿವಾಸ್, ವಿ. ಶಿವಪ್ರಕಾಶ್, ಬಿ.ಎನ್. ನಿತೀನ್ ಪುರುಷೋತ್ತಮ, ಆರ್.ಜೆ. ಲತಾ ಕುವರ್ ರಾಥೋಡ್, ಜಿ. ಬಾಲಕೃಷ್ಣ, ಅಜ್ಮಲ್ ಬೇಗ್, ಎಸ್.ಪಿ. ಹೇಮಲತಾ ಹಾಗೂ ಎಂ. ಆನಂದ್

# ನಗರ ಯೋಜನೆ: ರಾಜಶೇಖರ್, ಮಮತಾ ಶರವಣ, ಪ್ರತಿಭಾ ಧನರಾಜ್, ಸರಸ್ವತಮ್ಮ, ಎಸ್. ಸಂಪತ್​ರಾಜು, ಎನ್. ನಾಗರಾಜು, ಆರ್.ವಿ. ದೇವರಾಜ್, ಎಸ್.ಜಿ. ನಾಗರಾಜ್ ಹಾಗೂ ಪಿ. ಆನಂದ್

# ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ: ದೀಪಿಕಾ ಎಲ್. ಮಂಜುನಾಥ ರೆಡ್ಡಿ, ಎಂ. ಶಾಮಲಾ, ಜಿ. ಇಂದಿರಾ, ಜಯಲಕ್ಷ್ಮಮ್ಮ ಪಿಳ್ಳಪ್ಪ, ಶ್ರೀಲತಾ ಸಿ.ಜಿ., ಗೋಪಿನಾಥರಾಜು, ಕೆ. ದೇವದಾಸ್, ನೇತ್ರಾವತಿ ಕೃಷ್ಣೇಗೌಡ, ಶಿಲ್ಪಾ ಅಭಿಲಾಷ್, ಎನ್. ಮಂಜುನಾಥ್, ಆರ್. ಪದ್ಮಾವತಿ ಅಮರನಾಥ್ ಹಾಗೂ ಉಮೇಸಲ್ಮಾ.

# ಲೆಕ್ಕಪತ್ರ: ಕೆ. ರಾಜೇಶ್ವರಿ ಚೋಳರಾಜು, ಎನ್. ಭವ್ಯಾ, ಚಂದ್ರಮ್ಮ ಕೆಂಪೇಗೌಡ, ಶ್ವೇತಾ ವಿಜಯಕುಮಾರ್, ಆರ್. ಪ್ರಭಾವತಿ ರಮೇಶ್, ಮೀನಾಕ್ಷಿ, ಬಿ.ಎನ್. ಮಂಜುನಾಥ್ ರೆಡ್ಡಿ, ಎಂ.ಕೆ. ಗುಣಶೇಖರ್, ನೌಶೀರ್ ಅಹ್ಮದ್, ಎಂ. ವೇಲುನಾಯಕರ್ ಹಾಗೂ ಅಬ್ದುಲ್ ರಕೀಬ್ ಝಾಕೀರ್

# ಶಿಕ್ಷಣ: ಎಂ.ಮಾಲತಿ, ಲಲಿತಾ ಟಿ. ನಾರಾಯಣ್, ಎನ್. ಜಯಪಾಲ್, ಕೆ. ಗಣೇಶ್ ರಾವ್ ಮಾನೆ, ಮಧುಕುಮಾರಿ ವಾಗೀಶ್, ಜೆ.ಎನ್. ಶ್ರೀನಿವಾಸಮೂರ್ತಿ, ಚಂದ್ರಕಲಾ ಗಿರೀಶ್ ಲಕ್ಕಣ್ಣ, ಇಮ್ರಾನ್ ಪಾಷಾ, ಶೋಭಾ ಗೌಡ, ಜಿ.ಕೆ. ವೆಂಕಟೇಶ್ ಹಾಗೂ ಆರ್. ರೂಪಾ

# ಅಪೀಲುಗಳು: ವಾಣಿಶ್ರೀ ರಾವ್, ಶಶಿರೇಖಾ, ಕೆ. ವೀಣಾ ಕುಮಾರಿ, ಪುಷ್ಪಾ ಬಿ.ಎಂ. ಮಂಜುನಾಥ, ಬಿ. ಸುಮಂಗಲಾ, ಸವಿತಾ ವಿ. ಕೃಷ್ಣ, ಸುಜಾತಾ ಡಿ.ಸಿ. ರಮೇಶ್, ಎನ್. ಉಮಾ, ಎಂ. ಮಹದೇವ್, ಮಹಮ್ಮದ್ ರಿಜ್ವಾನ್ ನವಾಬ್ ಹಾಗೂ ವಿ. ಸುರೇಶ್

# ತೋಟಗಾರಿಕೆ: ಶಿಲ್ಪಾ ಶ್ರೀಧರ್, ಹನುಮಂತಯ್ಯ, ಭಾಗ್ಯಮ್ಮ ಕೃಷ್ಣಯ್ಯ, ಉಮಾದೇವಿ ನಾಗರಾಜ, ಕೆ.ವಿ. ರಾಜೇಂದ್ರ ಕುಮಾರ್, ಎಂ. ಆಂಜನಪ್ಪ, ಜಿ. ಕೋಕಿಲಾ ಚಂದ್ರಶೇಖರ್, ಮಂಜುಳಾ ವಿಜಯಕುಮಾರ್, ಎಲ್. ಗೋವಿಂದರಾಜು, ಬಿ.ಎನ್. ಐಶ್ವರ್ಯಾ ಹಾಗೂ ಲಲಿತ, ತಿಮ್ಮನಂಜಯ್ಯ

# ಬೃಹತ್ ಸಾರ್ವಜನಿಕ ಕಾಮಗಾರಿ: ಆಶಾ ಸುರೇಶ್, ಎಂ.ಸಿ. ಜಯಪ್ರಕಾಶ್, ಎಂ.ಬಿ. ದ್ವಾರಕಾನಾಥ್, ಸರ್ವಮಂಗಳಾ, ಡಿ. ಮುನಿ ಲಕ್ಷ್ಮಮ್ಮ, ನೇತ್ರಾ ನಾರಾಯಣ್, ಎಂ. ಗಾಯತ್ರಿ, ರಾಧಮ್ಮ ವೆಂಕಟೇಶ್, ಲಾವಣ್ಯಾ ಗಣೇಶ್ ರೆಡ್ಡಿ, ಕೆ.ಎಂ.ಚೇತನ್ ಹಾಗೂ ಎ.ಸಿ. ಹರಿಪ್ರಸಾದ್

# ಸಾಮಾಜಿಕ ನ್ಯಾಯ: ಮಹಾಲಕ್ಷ್ಮೀ ಎಚ್. ರವೀಂದ್ರ, ಆನಂದ್ ಪಿ. ಹೊಸೂರು, ಎಸ್.ಲೋಕೇಶ್, ಎ. ಕೋದಂಡರೆಡ್ಡಿ, ಮುನಿಸ್ವಾಮಿ, ಪಿ. ಸೌಮ್ಯಾ, ಡಿ. ಪ್ರಮೋದ್, ಜಿ. ಕೃಷ್ಣಮೂರ್ತಿ, ಮಂಜುಳಾ, ಮಂಜುಳಾ ಎನ್. ಸ್ವಾಮಿ, ಆರ್ಯ ಶ್ರೀನಿವಾಸ್

# ಮಾರುಕಟ್ಟೆ: ಆರ್. ರೇಖಾ, ಕುಮಾರಿ ಪಳಿನಿಕಾಂತ್, ಎಂ. ಶಶಿರೇಖಾ, ಎ.ವಿ. ನಂದಿನಿ ವಿಜಯವಿಠ್ಠಲ್, ಬಿ.ಎಂ. ಶೋಭಾ, ಫರೀದಾ ಇಸ್ತಿಯಾಕ್, ಆರ್. ಸಂಪತ್​ರಾಜ್, ಆರ್.ಎಸ್. ಸತ್ಯನಾರಾಯಣ, ಜಿ. ಮಂಜುನಾಥ್, ಸೀಮಾ ಅಲ್ತಾಫ್ ಖಾನ್, ಪದ್ಮಾವತಿ

# ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ: ಎಚ್.ಎ. ಕೆಂಪೇಗೌಡ, ಜಿ. ಮಂಜುನಾಥ ರಾಜು, ಯಶೋದಾ ಲಕ್ಷ್ಮೀಕಾಂತ್, ಹೇಮಲತಾ ಸತೀಶ್, ವಿ. ಬಾಲಕೃಷ್ಣ, ಗಂಗಮ್ಮ, ಜಿ. ಪದ್ಮಾವತಿ, ಹಾನ್ನಾ ಭುವನೇಶ್ವರಿ, ಎಸ್. ಆನಂದ್​ಕುಮಾರ್, ಪಿ.ವಿ. ಮಂಜುನಾಥ್, ಎಂ. ಚಂದ್ರಪ್ಪ

# ಸಾರ್ವಜನಿಕ ಆರೋಗ್ಯ: ಡಿ. ಎನ್. ರಮೇಶ್, ದೀಪಾ ನಾಗೇಶ್, ಎಂ. ಸತೀಶ್, ಜೆ.ಎಂ. ಸವಿತಾ ಮಾಯಣ್ಣ ಗೌಡ, ಆರ್. ಪ್ರತಿಮಾ, ಪಾರ್ತಿಬರಾಜನ್, ಶೋಭಾ ಜಗದೀಶ್ ಗೌಡ, ಟಿ. ರಾಮಚಂದ್ರ, ಎ. ಮುಜಾಹಿದ್ ಪಾಷಾ, ಎಸ್.ಅನ್ವರ್ ಪಾಷಾ, ನಾಜೀಮ್ ಖಾನಂ

ಬಿಬಿಎಂಪಿ ಸದಸ್ಯರೆಲ್ಲರನ್ನೂ ಪಕ್ಷಭೇದ ಮರೆತು ಒಟ್ಟಿಗೆ ಕರೆದುಕೊಂಡು ಕೆಲಸ ಮಾಡುತ್ತೇನೆ. ನಗರದ ಅಭಿವೃದ್ಧಿಗಾಗಿ ಮೇಯರ್ ಜತೆಗೂಡಿ ಶ್ರಮಿಸುತ್ತೇನೆ.

| ಭದ್ರೇಗೌಡ ಉಪಮೇಯರ್