ಕಾಫಿನಾಡಿಗೆ ಕಾಂಗ್ರೆಸ್ ಅಭ್ಯರ್ಥಿ ಹಾಕಿ

ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್​ಗೆ ದೊಡ್ಡ ಪೆಟ್ಟು ಬೀಳಲಿದೆ. ಈ ಬಗ್ಗೆ ಕೆಪಿಸಿಸಿ ಹಾಗೂ ಎಐಸಿಸಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.

ಜಿಲ್ಲೆಯ ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ರಾಜ್ಯ ಉಪಾಧ್ಯಕ್ಷರಾದ ಎಂ.ಎಲ್.ಮೂರ್ತಿ, ಮೋಟಮ್ಮ ಮತ್ತಿತರೆ ಮುಖಂಡರು ಬುಧವಾರ ಸಭೆ ಸೇರಿ ರ್ಚಚಿಸಿದ್ದೇವೆ. ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಬಾರದು ಎಂದು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಇದೇ ಜಿಲ್ಲೆ. ಅವರ ಜನ್ಮ ಶತಾಬ್ದಿ ಆಚರಿಸುತ್ತಿರುವ ಈ ಸಂದರ್ಭ ಮಿತ್ರ ಪಕ್ಷಕ್ಕೆ ಬಿಟ್ಟುಕೊಟ್ಟಲ್ಲಿ ಕಾಂಗ್ರೆಸ್​ಗೆ ಹಿನ್ನಡೆ ಆಗಲಿದೆ ಎಂಬ ವಿಚಾರವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಗಮನ ಸೆಳೆಯಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್​ನಿಂದಲೇ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು. ಈಗಾಗಲೇ ಹಾಸನ, ಶಿವಮೊಗ್ಗ, ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗಿದೆ. ಈಗ ಮೈಸೂರು, ತುಮಕೂರನ್ನೂ ಕೇಳುತ್ತಿದ್ದಾರೆ. ಹೀಗಿರುವಾಗ ಉಡುಪಿ- ಚಿಕ್ಕಮಗಳೂರು ಕ್ಷೇತ್ರವನ್ನೂ ಬಿಟ್ಟುಕೊಟ್ಟರೆ ದಕ್ಷಿಣ ಕರ್ನಾಟಕದ ಬಹುತೇಕ ಕ್ಷೇತ್ರಗಳನ್ನು ಅವರಿಗೇ ಬಿಟ್ಟುಕೊಟ್ಟಂತಾಗುತ್ತದೆ ಎಂಬ ವಿಚಾರವನ್ನು ವರಿಷ್ಠರ ಗಮನಕ್ಕೆ ತರಲಾಗಿದೆ ಎಂದರು.

ಈ ಬಾರಿ ಚಿಕ್ಕಮಗಳೂರು ಜಿಲ್ಲೆಯವರನ್ನೇ ಕಾಂಗ್ರೆಸ್​ನಿಂದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು. ಜಿಲ್ಲೆಯಿಂದ ಜಿಲ್ಲಾಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್, ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷೆ ಡಾ. ಆರತಿ ಕೃಷ್ಣ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮತ್ತು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಕಾಂಕ್ಷಿಗಳಾಗಿದ್ದು, ಅವರ ಹೆಸರನ್ನು ಕೆಪಿಸಿಸಿಯಿಂದ ಎಐಸಿಸಿಗೆ ಕಳುಹಿಸಲಾಗಿದೆ ಎಂದು ಹೇಳಿದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರಿಗೆ ಪಕ್ಷ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು ಎಂದು ಈಗಾಗಲೆ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಿಕ್ಕಮಗಳೂರಿನ ಎಚ್.ಪಿ.ಮಂಜೇಗೌಡ, ಮೂಡಿಗೆರೆಯ ಸುರೇಂದ್ರ, ಕಳಸದ ಕೆ.ಎಚ್.ಶ್ರೀನಿವಾಸ್, ತರೀಕೆರೆಯ ಡಾ. ರಾಮಚಂದ್ರಪ್ಪ, ಅಜ್ಜಂಪುರದ ಎ.ಸಿ.ಚಂದ್ರಪ್ಪ, ಕಡೂರಿನ ಚಂದ್ರಮೌಳಿ ಸುದ್ದಿಗೋಷ್ಠಿಯಲ್ಲಿದ್ದರು.