ಜೆಡಿಎಸ್-ಕಾಂಗ್ರೆಸ್​ನಲ್ಲಿ ಮೈತ್ರಿ ಗೊಂದಲ

ಶಿವಮೊಗ್ಗ: ‘ಯಾರಿಗೆ ನಡೆಯುವ ಶಕ್ತಿ ಇರುವುದಿಲ್ಲವೋ ಅವರು ಊರುಗೋಲು ಬಯಸುತ್ತಾರೆ. ಇಲ್ಲವೇ ಅನ್ಯರ ಸಹಕಾರ ಪಡೆಯುತ್ತಾರೆ. ಹೀಗಾಗಿ ಮೈತ್ರಿ ಸರ್ಕಸ್ ನಡೆಯುತ್ತಿದೆ’. ಹೀಗೆಂದು ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕುರಿತು ಬಿಜೆಪಿ ವಿಭಾಗೀಯ ಪ್ರಭಾರಿ ಆಯನೂರು ಮಂಜುನಾಥ್ ಲೇವಡಿ ಮಾಡಿದರು.

ಮೈತ್ರಿ ಬಗ್ಗೆ ಜೆಡಿಎಸ್-ಕಾಂಗ್ರೆಸ್​ನಲ್ಲೇ ಗೊಂದಲವಿದೆ. ಅವರ ಗೊಂದಲ ನಮಗೆ ಇನ್ನಷ್ಟು ಅನುಕೂಲ ಮಾಡಿಕೊಡಲಿದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮತದಾನದ ಮೂಲಕ ಮೈತ್ರಿಗೆ ಪಾಠ ಕಲಿಸುತ್ತಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಯಾರು ಮೈತ್ರಿ ಮಾಡಿಕೊಂಡರೂ ನಮಗೇನೂ ನಷ್ಟವಿಲ್ಲ. ಗೆಲ್ಲುವುದು ನಮ್ಮ ಅಭ್ಯರ್ಥಿಯೇ ಎಂದು ಆಯನೂರು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಪಾವಧಿಗೆ ಉಪಚುನಾವಣೆ ನಡೆಸುತ್ತಿರುವ ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣಾ ಆಯೋಗ ಯಾರ ಅಭಿಪ್ರಾಯವನ್ನೂ ಕೇಳುವುದಿಲ್ಲ. ಒಂದು ರಾಜಕೀಯ ಪಕ್ಷವಾಗಿ ನಾವು ಚುನಾವಣೆ ಎದುರಿಸಲೇಬೇಕು. ಸಂವಿಧಾನದಲ್ಲಿ ಇರುವ ಅವಕಾಶವನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತವೆಯಷ್ಟೇ. ಉಪಚುನಾವಣೆ ನಡೆಯದಂತೆ ರಾಜಕಾರಣ ನಡೆಸುವಷ್ಟು ನಮ್ಮ ದೇಶದ ರಾಜಕೀಯ ವ್ಯವಸ್ಥೆ ಪ್ರಬುದ್ಧವಾಗಿಲ್ಲ ಎಂದು ಅಭಿಪ್ರಾಯಪಟ್ಟರು.