ಮಧು ಬಂಗಾರಪ್ಪ‌ ಅವರಲ್ಲಿದೆ ಬಂಗಾರಪ್ಪರ ಹೋರಾಟದ ಗುಣ: ಕುಮಾರಸ್ವಾಮಿ ಬಣ್ಣನೆ

ಶಿವಮೊಗ್ಗ: ಮಧು ಬಂಗಾರಪ್ಪ‌ ಅವರು ಬಂಗಾರಪ್ಪ ಅವರ ಹೋರಾಟದ ಗುಣಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಅವರ ಸ್ಪರ್ಧೆಯನ್ನು ಇಡೀ ದೇಶವೇ ಗಮನಿಸುತ್ತಿದೆ. ಇಲ್ಲಿನ ಫಲಿತಾಂಶ 2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಶಿವಮೊಗ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಜೆಡಿಎಸ್​-ಕಾಂಗ್ರೆಸ್​ ಜಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, “ಇಲ್ಲಿನ ಚುನಾವಣಾ ಫಲಿತಾಂಶ 2019ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಅಲ್ಲದೆ, ಉಪ ಚುನಾವಣೆಯಲ್ಲಿ ಗೆದ್ದರೆ ಮೈತ್ರಿ ಸರ್ಕಾರಕ್ಕೆ ಮತ್ತಷ್ಟು ಬಲ ಬಂದಂತಾಗುತ್ತದೆ. ಇದಕ್ಕಾಗಿ ಮಧು ಬಂಗಾರಪ್ಪ ಗೆಲ್ಲಬೇಕಾಗಿದೆ. ಅವರಲ್ಲಿ ಬಂಗಾರಪ್ಪ ಅವರ ಹೋರಾಟದ ಗುಣಗಳಿವೆ. ಅದಕ್ಕಾಗಿಯೇ ಅವರು ಒಮ್ಮತದ ಅಭ್ಯರ್ಥಿಯಾಗಿದ್ದಾರೆ,” ಎಂದು ಸಿಎಂ ಹೇಳಿದರು.

“ರೈತರ ಕಷ್ಟ ನೋಡಿ 45 ಸಾವಿರ ಕೋಟಿ‌ ರೂಪಾಯಿ‌ ರೈತರ ಸಾಲ‌ಮನ್ನಾ ಮಾಡಲು ಉದ್ದೇಶಿಸಿದ್ದೆವೆ. ಮುಂದಿನ ತಿಂಗಳು 10 ಲಕ್ಷ‌ ರೈತ ಕುಟುಂಬಗಳನ್ನು ಬೆಂಗಳೂರಿಗೆ ಕರೆಯಿಸಿ ಸಾಲಮನ್ನಾದ ಋಣಮುಕ್ತ ಪತ್ರ ನೀಡಲಿದ್ದೇವೆ. ಸಿದ್ದರಾಮಯ್ಯ ಅವರ ಯೋಜನೆಗಳನ್ನೂ ‌ಮುಂದುವರಿಸುವ ಜೊತೆಗೆ ಇನ್ನಷ್ಟು ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ಆದರೆ‌ ವಿಪಕ್ಷ ಬಿಜೆಪಿ, ಸರ್ಕಾರವನ್ನು ಅಸ್ಥಿರಗೊಳಿಸಲು ವಿಫಲ ಯತ್ನ ನಡೆಸುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐದೂ ಕ್ಷೇತ್ರ ಗೆಲ್ಲುತ್ತೇವೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ಉಪಚುನಾವಣೆಯಲ್ಲಿ ಮಧು ಬಂಗಾರಪ್ಪ‌ ಗೆದ್ದೇ ಗೆಲ್ಲುತ್ತಾರೆ. 5 ಕ್ಷೇತ್ರಗಳಲ್ಲೂ ಬಿಜೆಪಿ ವಿರುದ್ಧವಾಗಿ ಗಾಳಿ‌ ಬೀಸುತ್ತಿದೆ. ಯಡಿಯೂರಪ್ಪ, ಈಶ್ವರಪ್ಪ‌ ಎಷ್ಟೇ ಹೇಳಿಕೊಳ್ಳಬಹುದು. ಆದರೆ ಗೆಲುವು ನಮ್ಮದೇ,” ಎಂದು ಅವರು ಹೇಳಿದರು.

“ಪ್ರತಿ ಬಾರಿ ಹಸಿರು ಶಾಲು‌ ಹಾಕಿಕೊಂಡು ಬಂದು ಪ್ರಮಾಣ ವಚನ ಸ್ವೀಕರಿಸುವ ಯಡಿಯೂರಪ್ಪ‌, ಅಧಿಕಾರ ಸಿಕ್ಕ ಎರಡೇ ತಿಂಗಳಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸುತ್ತಾರೆ,” ಎನ್ನುವ ಮೂಲಕ 2008ರಲ್ಲಿ ಹಾವೇರಿಯಲ್ಲಿ ನಡೆದ ರೈತರ ಮೇಲಿನ ಗೋಲಿಬಾರ್​ ಪ್ರಕರಣವನ್ನು ಸಿದ್ದರಾಮಯ್ಯ ನೆನಪಿಸಿದರು.

ಎಲ್ಲರೂ ಒಟ್ಟಿಗಿರದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ

ಮಾಜಿ ಪ್ರದಾನಿ‌ ದೇವೇಗೌಡ ಮಾತನಾಡಿ, “ಹಿಂದು ಮುಸ್ಲಿಂ ಕ್ರಿಶ್ಚಿಯನ್ನರು ಒಂದಾಗಿ ಬಾಳದಿದ್ದರೆ‌‌ ದೇಶಕ್ಕೆ ಭವಿಷ್ಯವಿಲ್ಲ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಒಂದಾಗದೇ ಇರುವುದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಿಂದಲೇ ಮೈತ್ರಿ ಪರ್ವ ಆರಂಭವಾಗಲಿದೆ,” ಎಂದರು.

ನನಗೆ ವೈಯಕ್ತಿಕವಾಗಿ ಇಷ್ಟವಿರಲಿಲ್ಲ

ಮೈತ್ರಿ ಪಕ್ಷಗಳ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, “ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ವೈಯಕ್ತಿವಾಗಿ ನನಗೆ ಇಷ್ಟವಿರಲಿಲ್ಲ. ಆದರೆ ಪಕ್ಷದ ಮುಖಂಡರ ತೀರ್ಮಾನಕ್ಕೆ ಬದ್ಧನಾಗಿ ಸ್ಪರ್ಧಿಸಿದ್ದೇನೆ. ಇದೊಂದು ರೀತಿಯಲ್ಲಿ ದೈವೇಚ್ಛೆ. ಸಮ್ಮಿಶ್ರ ಸರ್ಕಾರ ಇನ್ನಷ್ಟು ಗಟ್ಟಿಯಾಗಲು, ದೇಶಕ್ಕೂ ಒಳ್ಳೆಯದಾಗಲೂ ನಾನು ಸ್ಪರ್ಧೆ ಮಾಡಿದ್ದೇನೆ. ನನಗೆ ನಾಲ್ಕು ತಿಂಗಳು ಸಮಯ ಸಿಕ್ಕರೂ 9 ವರ್ಷ ಜಿಲ್ಲೆ ಕಳೆದುಕೊಂಡದ್ದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ. ನನ್ನ ಗೆಲುವು ಸಮ್ಮಿಶ್ರ ಸರ್ಕಾರದ ಗೆಲುವು, ನಮ್ಮ ತಂದೆಯ ಗೆಲುವು,” ಎಂದು ಹೇಳಿದರು.

ಐದು ವರ್ಷಕ್ಕೆ ಆಶೀರ್ವಾದ ಮಾಡಿ

ಸಚಿವ ಡಿ.ಕೆ ಶಿವಕುಮಾರ್​ ಮಾತನಾಡಿ, “ಶಿವಮೊಗ್ಗ ಜನತೆ ಈ ಬಾರಿ ಇತಿಹಾಸ ಸೃಷ್ಟಿ ಮಾಡಬೇಕು. ಇದೊಂದು ಐತಿಹಾಸಿಕ ಸಭೆ. ಶಿವಮೊಗ್ಗದ ಫಲಿತಾಂಶವನ್ನು ಇಡಿ ರಾಷ್ಟ್ರದ ಜನ ನೋಡುತ್ತಿದ್ದಾರೆ. ಇಲ್ಲಿನ ಪ್ರಜ್ಞಾವಂತ ಜನ ಯಾವ ರೀತಿ ತೀರ್ಪು ನೀಡುತ್ತಾರೆ ಎಂದು ಕಾತರರಾಗಿದ್ದಾರೆ. ಮಧು ಬಂಗಾರಪ್ಪ ಅವರಿಗೆ ಐದು ತಿಂಗಳಿಗೆ ಆಶೀರ್ವಾದ ಮಾಡಿ ಎಂದು ಕೇಳಲು ನಾವು ಬಂದಿಲ್ಲ.‌ ಐದು ವರ್ಷ ಐದು ತಿಂಗಳಿಗೆ ಅವಕಾಶ ನೀಡಿ ಎಂದು ಕೇಳಲು ಬಂದಿದ್ದೇವೆ,” ಎಂದರು. ಈ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಗೂ‌ ಮಧು ಬಂಗಾರಪ್ಪ ಅವರೇ ಅಭ್ಯರ್ಥಿ ಎಂದು ಪರೋಕ್ಷವಾಗಿ ಘೋಷಿಸಿದರು.

ಜೆಡಿಎಸ್​ಗೆ ಜೈಕಾರ ಹಾಕಿಸಿದ ಡಿಕೆಶಿ!

ಸಮಾರಂಭದಲ್ಲಿ ಭಾಷಣ ಮಾಡಲು ಬಂದ ಸಚಿವ ಡಿ.ಕೆ.ಶಿವಕುಮಾರ್​ ಅವರು ಮೊದಲಿಗೆ ಬೋಲೋ ಭಾರತ್​ ಮಾತಾ ಕಿ ಎಂದು ಘೋಷಣೆ ಕೂಗಿದರು. ಆಗ ಜನತೆ ಜೈ ಎಂದರು. ಅದಾದ ನಂತರ ಡಿಕೆಶಿ ಕಾಂಗ್ರೆಸ್​ ಪಾರ್ಟಿ ಕಿ ಎಂದು ಘೋಷಣೆ ಕೂಗಿದರು, ಆಗಲು ಜನತೆ ಜೈ ಎಂದರು. ಕಾಂಗ್ರೆಸ್​ಗೆ ಜೈಕಾರ ಹಾಕಿಸಿದ ನಂತರ, ಎರಡೂ ಪಕ್ಷಗಳ ಸಮಾವೇಶವಾಗಿದ್ದ ಕಾರಣಕ್ಕೆ ಜೆಡಿಎಸ್​ಗೂ ಜೈ ಕಾರ ಹಾಕಿಸುವ ಅನಿವಾರ್ಯತೆಗೆ ಸಿಲುಕಿದ ಡಿಕೆಶಿ ಬೋಲೋ ಜೆಡಿಎಸ್​ ಪಾರ್ಟಿ ಕೀ ಎಂದು ಕೂಗಿದರು, ಆಗ ಜನರೂ ಜೈಕಾರ ಹಾಕಿದರು. ನಂತರ ಲಘುಬಗೆಯಲ್ಲೇ ಮಾತನಾಡಿದ ಅವರು, “ನನ್ನ ರಾಜಕೀಯ ಜೀವನದಲ್ಲಿ ಜೆಡಿಎಸ್​ಗೆ ಜೈಕಾರ ಹಾಕಿಸಿದ್ದು ಇದೇ ಮೊದಲು,” ಎಂದು ಹೇಳಿದರು. ಡಿಕೆಶಿಯನ್ನು ನೋಡಿ ನಗುತ್ತಿದ್ದ ಬಂಡೆಪ್ಪ ಕಾಶೆಂಪುರ ಅವರತ್ತ ತಿರುಗಿದ ಡಿಕೆಶಿ, ” ಎಂಥ ಪರಿಸ್ಥಿತಿ ಬಂತು ಇವರಿಗೆ ಎಂದು ಬಂಡೆಪ್ಪ ಕಾಶೆಂಪುರ್​ ನಗುತ್ತಿದ್ದಾರೆ ನೋಡಿ,” ಎಂದಾಗ ಇಡೀ ಸಮಾವೇಶದ ಜನ ನಗೆ ಗಡಲಲ್ಲಿ ತೇಲಿದರು.