ಸಚಿವ ಸಂಪುಟ ವೇದನೆ, 22ಕ್ಕೂ ವಿಸ್ತರಣೆ ಅನುಮಾನ

ಬೆಂಗಳೂರು: ಸಂಪುಟ ವಿಸ್ತರಣೆಯನ್ನು ಡಿ.22ಕ್ಕೆ ನಡೆಸುವ ಬಗ್ಗೆ ಸಚಿವಾಕಾಂಕ್ಷಿಗಳಲ್ಲಿ ಅನುಮಾನ ಬಲವಾಗುತ್ತಿದ್ದು, ಪರ್ಯಾಯ ದಾರಿಯಲ್ಲಿ ಒತ್ತಡ ತಂತ್ರ ಅನುಸರಿಸಲು ಪ್ರಯತ್ನ ಆರಂಭಿಸಿದ್ದಾರೆ.

ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ವನದಂತೆ ಡಿ.22ರಂದು ಸಂಪುಟ ವಿಸ್ತರಣೆ ನಡೆಯಲಿದೆ. ಯಾವುದೇ ಕಾರಣಕ್ಕೂ ಆ ದಿನದಂದು ವಿಸ್ತರಣೆ ಅಸಾಧ್ಯ. ಸದ್ಯಕ್ಕೆ ಸಂಪುಟ ವಿಸ್ತರಣೆ ನಡೆಯುವುದೇ ಇಲ್ಲ ಎಂಬ ತೀರ್ವನಕ್ಕೆ ಕಾಂಗ್ರೆಸ್​ನ ಶಾಸಕರು ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಗೋಳು ಹೇಳಿಕೊಳ್ಳಲು ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸುತ್ತ ಶಾಸಕರು ಗಿರಕಿ ಹೊಡೆಯಲಾರಂಭಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ತಡವಾಗುತ್ತಿರುವುದರಿಂದ ಸರ್ಕಾರದ ವರ್ಚಸ್ಸು ಹೆಚ್ಚಾಗುವುದಿಲ್ಲ, ಅದು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ನಷ್ಟ. ಹೀಗಾಗಿ ಕೂಡಲೇ ಮಧ್ಯ ಪ್ರವೇಶಿಸಿ ವಿಸ್ತರಣೆಗೆ ನೀವೇ ಪ್ರಯತ್ನಿಸಬೇಕೆಂದು ಪಕ್ಷದ ಹಿರಿಯ ಸಚಿವಾಕಾಂಕ್ಷಿಗಳು ಕೋರಿಕೆ ಮುಂದಿಟ್ಟಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ, ಈಗಾಗಲೇ ಐವರು ಸಚಿವಾಕಾಂಕ್ಷಿಗಳು ಖರ್ಗೆ ಭೇಟಿ ಮಾಡಿ ಕೋರಿಕೆ ಮಂಡಿಸಿದ್ದಾರೆ. ಸಂಪುಟ ವಿಸ್ತರಣೆಗೆ ಜೆಡಿಎಸ್​ನಿಂದ ಯಾವುದೇ ಅಡೆತಡೆ ಇಲ್ಲ. ಸಿಎಂ ಕುಮಾರಸ್ವಾಮಿ ಅಥವಾ ಎಚ್.ಡಿ.ರೇವಣ್ಣ ಅವರಲ್ಲಿ ಮಾತನಾಡಿದರೆ, ನಾವು ಈ ಕ್ಷಣವೇ ಸಿದ್ಧ ಎನ್ನುತ್ತಿದ್ದಾರೆ. ನಮ್ಮ ಪಕ್ಷದ ಕೆಲವು ನಾಯಕರೇ ತೊಡರುಗಾಲಾಗಿದ್ದಾರೆಂದು ಖರ್ಗೆ ಮುಂದೆ ದೂರಿತ್ತಿದ್ದಾರೆ. ಪಕ್ಷದಲ್ಲಿ ಗೊಂದಲಗಳಿಲ್ಲ ಎಂದರೆ ನಮ್ಮನ್ನು ಕೇಳುವವರಿರಲ್ಲ ಎಂದು ಪಕ್ಷದ ಕೆಲ ನಾಯಕರೇ ಸಂಪುಟ ವಿಸ್ತರಣೆಗೆ ಅಡ್ಡಿ ಪಡಿಸುತ್ತಿದ್ದಾರೆ. ಹೀಗಾಗಿ ನೀವೇ ಈ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತನ್ನಿ ಎಂದು ಒತ್ತಾಯಿಸಿದ್ದಾರೆ. ಇನ್ನೊಂದೆಡೆ, ಸಚಿವಾಕಾಂಕ್ಷಿಗಳು ಎಂ.ಬಿ.ಪಾಟೀಲ್, ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ಹಿಂದಿನ ಅನುಭವ ಹೇಳಿಕೊಂಡ ಶಿವಕುಮಾರ್, ಸಮಾಧಾನವಾಗಿರುವಂತೆ ಸಲಹೆ ನೀಡಿ ಕಳುಹಿಸಿದರು ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆಯವರೆಗೂ ಸಂಪುಟ ವಿಸ್ತರಣೆ ಇಲ್ಲ, ಈಗ ಡಿ.22ಕ್ಕೆ ಸಂಪುಟ ವಿಸ್ತರಣೆ ಮಾಡುವುದಾಗಿ ಘೊಷಿಸಿದ್ದಾರೆ. ಆ ಬಗ್ಗೆ ಭರವಸೆ ನಮಗಿಲ್ಲ.

| ಗಣೇಶ್ ಕಂಪ್ಲಿ ಕಾಂಗ್ರೆಸ್ ಶಾಸಕ

22ರಂದೇ ಸಂಪುಟ ವಿಸ್ತರಣೆ ನಡೆಯುತ್ತದೆ. ಧನುರ್ವಸವೂ ಇಲ್ಲ, ಪನುರ್ವಸವೂ ಇಲ್ಲ. 21ರಂದು ದೆಹಲಿಗೆ ಹೋಗಿ ಒಪ್ಪಿಗೆ ಪಡೆದು ಬರುತ್ತೇವೆ.

| ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

ಸಚಿವ ಸಂಪುಟ ವಿಸ್ತರಣೆ ಡಿ.22ಕ್ಕೆ ನಡೆಯಲಿದ್ದು, ಮುಂದಕ್ಕೆ ಹೋಗುವ ಸಾಧ್ಯತೆ ಬಹುತೇಕ ಇಲ್ಲ. ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಯಾರೂ ನನ್ನೊಂದಿಗೆ ಮಾತನಾಡಿಲ್ಲ. ಎಂಎಲ್​ಎ ಅಂದರೆ ಮಾರುಕಟ್ಟೆಯಲ್ಲಿನ ಬದನೆಕಾಯಿ ಅಲ್ಲ. ಕಾಂಗ್ರೆಸ್ ಶಾಸಕನಾಗಿ ನನ್ನನ್ನು ಜನ ಆಯ್ಕೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಯ ಆಪರೇಷನ್​ಗೆ ಬಲಿಯಾಗುವುದಿಲ್ಲ.

| ಸಿ.ಎಸ್. ಶಿವಳ್ಳಿ ಕುಂದಗೋಳ ಶಾಸಕ

ಸಿದ್ದರಾಮಯ್ಯ ಯಾವಾಗ ಬೇಕಾದರೂ ಸಿಎಂ ಆಗಬಹುದು!

ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬಹುದು ಎಂಬ ಹೊಸ ರಾಜಕೀಯ ಸಮೀಕರಣವೊಂದು ಚರ್ಚೆಗೆ ಗ್ರಾಸವಾಗಿದೆ. ಆದರೆ, ‘ಈಗ ಮುಖ್ಯಮಂತ್ರಿ್ರ ಹುದ್ದೆ ಖಾಲಿ ಇಲ್ಲ, ಮುಂದಿನ ಚುನಾವಣೆ ಬಳಿಕ ಜನಾಶೀರ್ವಾದ ಮಾಡಿದರೆ ನೋಡೋಣ’ ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬೆಳವಣಿಗೆ ಮುನ್ನೆಲೆಗೆ ಬಂದಿದ್ದು ಕಂಪ್ಲಿ ಕಾಂಗ್ರೆಸ್ ಶಾಸಕ ಗಣೇಶ್ ಕಾರಣಕ್ಕೆ. ‘ಸಿದ್ದರಾಮಯ್ಯರೇ ಮತ್ತೆ ಮುಖ್ಯಮಂತ್ರಿಯಾಗಬೇಕು, ನಾನೂ ಸೇರಿ ಹಲ ಶಾಸಕರ ಆಶಯ ಇದೇ ಆಗಿದೆ. ಹಾಗೆಯೇ 40-50 ಜನ ಶಾಸಕರು ಸಿದ್ದರಾಮಯ್ಯ ಬೆನ್ನಿಗಿದ್ದಾರೆ. ಅವರು ಯಾವಾಗ ಬೇಕಾದರೂ ಮತ್ತೆ ಸಿಎಂ ಆಗಬಹುದು’ ಎಂದಿದ್ದರು. ಈ ಹೇಳಿಕೆಯಿಂದ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿತ್ತು.