Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಧನುರ್ಮಾಸದಲ್ಲೇ ಸಂಪುಟ ಮುಹೂರ್ತ

Thursday, 06.12.2018, 5:30 AM       No Comments

ಬೆಂಗಳೂರು: ಮೈತ್ರಿ ಸರ್ಕಾರದ ಪಾಲಿಗೆ ಅಗ್ನಿಪರೀಕ್ಷೆ ಎಂದೇ ವಿಶ್ಲೇಷಿಸಲಾಗುತ್ತಿರುವ ಎಚ್​ಡಿಕೆ ಸಂಪುಟದ ವಿಸ್ತರಣೆಯೆಂಬ ಗಜ ಪ್ರಸವಕ್ಕೆ ಕೊನೆಗೂ ದಿನಾಂಕ ನಿಶ್ಚಯವಾಗಿದೆ. ಲಾಭ, ನಷ್ಟದ ಲೆಕ್ಕಾಚಾರಗಳನ್ನೆಲ್ಲ ಮುಗಿಸಿ, ಅಳೆದೂತೂಗಿ ಈ ಸಂಬಂಧ ಒಮ್ಮತಕ್ಕೆ ಬಂದಿರುವ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಡಿ.21ರಂದು ಮುಗಿಯಲಿರುವ ಬೆಳಗಾವಿ ಅಧಿವೇಶನದ ಮರು ದಿನವೇ ಸಂಪುಟ ವಿಸ್ತರಣೆಗೆ ಕೈಹಾಕುವ ತೀರ್ಮಾನ ಕೈಗೊಂಡಿವೆ. ಆದರೆ ಧನುರ್ವಸದಲ್ಲಿ ನಿಗದಿಯಾಗಿರುವ ಈ ಮುಹೂರ್ತ ತಮ್ಮ ‘ಮಂತ್ರಿಗಿರಿ’ ಆಸೆಗೆ ತಣ್ಣೀರೆರಚಬಹುದೆಂಬ ಆತಂಕ ಆಕಾಂಕ್ಷಿಗಳನ್ನು ಕಾಡಲಾರಂಭಿಸಿದೆ.

ಸಂಪುಟ ವಿಸ್ತರಣೆ ಜತೆಯಲ್ಲೇ ಶಾಸಕರನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡುವ ತೀರ್ವನವೂ ಸಮನ್ವಯ ಸಮಿತಿ ಸಭೆಯಲ್ಲಿ ಹೊರಬಿದ್ದಿದೆ. ಹಾಗೆಯೇ 9 ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನಮಾನ ಕಲ್ಪಿಸಲು ನಿರ್ಧರಿಸಲಾಗಿದೆ.

ಸಚಿವ ಸಂಪುಟ ವಿಸ್ತರಿಸಿದರೆ ಅದರಿಂದ ಸರ್ಕಾರದ ಮೇಲೆ ಆಗಬಹುದಾದ ಪ್ರತಿಕೂಲ ಪರಿಣಾಮಗಳ ಕುರಿತು ಬುಧವಾರ ಕುಮಾರಕೃಪ ಅತಿಥಿಗೃಹದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಅಂದಾಜಿಸಿದ ಉಭಯ ಪಕ್ಷಗಳ ನಾಯಕರು ಅಧಿವೇಶನ ಮುಗಿದ ಮರು ದಿನವೇ ಪ್ರಕ್ರಿಯೆ ಪೂರ್ಣಗೊಳಿಸುವ ನಿರ್ಧಾರಕ್ಕೆ ಬಂದರು.

ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸರ್ಕಾರ ಸುಗಮವಾಗಿ ಸಾಗಲು ಚರ್ಚೆ ನಡೆಸಿದ್ದೇವೆ. ಶಾಸಕರ ಸಮಸ್ಯೆಗಳನ್ನು ಕೂಡಲೇ ಅಟೆಂಡ್ ಮಾಡುವಂತೆ ತಿಳಿಸಿದ್ದೇವೆ. ಜಾರಕಿಹೊಳಿ ಸಹಿತ ಕಾಂಗ್ರೆಸ್ ಅಥವಾ ಜೆಡಿಎಸ್​ನ ಯಾವುದೇ ಶಾಸಕರೂ ರಾಜೀನಾಮೆ ನೀಡಲ್ಲ ಎಂದರು. ಬಿಜೆಪಿಯವರು ಸರ್ಕಾರ ರಚಿಸುವ ಹಗಲು ಕನಸು ಕಾಣುತ್ತಿದ್ದಾರೆ, ಆ ಪ್ರಯತ್ನದಲ್ಲಿ ಅವರು ಯಶ ಕಾಣಲ್ಲ ಎಂದ ಅವರು, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ಸಂದೇಹಕ್ಕೇನು ಕಾರಣ?

# ಧನುರ್ಮಾಸದ ಕಾರಣ ಸಂಪುಟ ವಿಸ್ತರಣೆಗೆ ಜ.15ರವರೆಗೂ ದೇವೇಗೌಡರ ಕುಟುಂಬ ಒಪು್ಪವುದು ಅನುಮಾನ.

# ಸಂಪುಟದಲ್ಲಿರುವ ಅನೇಕರು 2-3 ಖಾತೆ ಹೊಂದಿದ್ದಾರೆ. ಹೊಸದಾಗಿ ಸೇರ್ಪಡೆ ಯಾದರೆ ಅಧಿಕಾರ ಕಡಿಮೆಯಾಗುತ್ತದೆಂಬ ಕಾರಣಕ್ಕೆ ಅಡ್ಡಗಾಲು., ಪಕ್ಷದಲ್ಲಿ ಗೊಂದಲ, ಸಮಸ್ಯೆ ಇದ್ದರೆ ನಮಗೆ ಬೆಲೆ ಎಂದು ಕೆಲವರು ಅಂದುಕೊಂಡಿದ್ದಾರೆ, ಹೀಗಾಗಿ ಸಮಸ್ಯೆ ಜೀವಂತವಾಗಿಡುವುದೇ ಅವರ ಉದ್ದೇಶ.


ಭುಗಿಲೆದ್ದ ಆಕ್ರೋಶ

ಬೆಂಗಳೂರು: ಸಂಪುಟ ವಿಸ್ತರಣೆ ಆಗುವುದೇ ಇಲ್ಲ ಎಂಬ ನಿಚ್ಚಳ ಅಭಿಪ್ರಾಯಕ್ಕೆ ಬಂದಿರುವ ಕಾಂಗ್ರೆಸ್ ಸಚಿವಾಕಾಂಕ್ಷಿಗಳಲ್ಲಿ ಆಕ್ರೋಶ ಇಮ್ಮಡಿಗೊಂಡಿದೆ. ‘ನವೆಂಬರ್​ನಲ್ಲೇ ಸಂಪುಟ ವಿಸ್ತರಣೆ ಎಂದು ಪದೇಪದೆ ಹೇಳುತ್ತಿದ್ದ ಮುಖಂಡರು ಈಗ ಸಂಪುಟ ವಿಸ್ತರಣೆ ಯನ್ನು ಡಿ.22ಕ್ಕೆ ನಿಗದಿ ಮಾಡಿದ್ದಾರೆ. ಆ ದಿನವೂ ಸಂಪುಟ ವಿಸ್ತರಣೆ ಆಗಲ್ಲ. ಇದು ಖಚಿತ’ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ. ‘ಸಂಪುಟ ವಿಸ್ತರಣೆ ವಿಚಾರದಲ್ಲಿ ನನ್ನಂತೆ ಅನೇಕರಲ್ಲಿ ಅಸಮಾಧಾನ ಇದೆ. ಅದು ಯಾವ ರೂಪದಲ್ಲಿ ಹೊರಬರುತ್ತದೋ ಗೊತ್ತಿಲ್ಲ ನಾವು ಪಕ್ಷ ನಿಷ್ಠರು, ನಮ್ಮ ಶ್ರಮ, ಹಣ ಎಲ್ಲವನ್ನೂ ನೀಡಿದ್ದೇವೆ. ಈಗ ನಮ್ಮನ್ನು ಕಡೆಗಣಿಸಿದರೆ ಸೂಕ್ತ ಸಂದರ್ಭದಲ್ಲಿ ತಕ್ಕ ಶಾಸ್ತಿಯಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

10ರಿಂದ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಡಿ.22ರಂದೇ ಸಂಪುಟ ವಿಸ್ತರಿಸಲು ಎಲ್ಲರೂ ಒಪ್ಪಿದ್ದಾರೆ. ಕಾಂಗ್ರೆಸ್​ನಿಂದ ಆರು, ಜೆಡಿಎಸ್​ನಿಂದ ಇಬ್ಬರು ಸಚಿವ ಸ್ಥಾನ ಪಡೆಯಲಿದ್ದಾರೆ. ಇವರೊಂದಿಗೆ 20 ಕಾಂಗ್ರೆಸ್ ಶಾಸಕರು, 10 ಜೆಡಿಎಸ್ ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡಲಾಗುತ್ತದೆ.

| ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷ

ಅಸಮಾಧಾನ ಪ್ರಸ್ತಾಪ

ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರ ಕೆಲಸ ಆಗುತ್ತಿಲ್ಲ ಎಂಬ ಗಂಭೀರ ಆಪಾದನೆ ವಿಚಾರ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಶಾಸಕರ ಕೆಲಸವನ್ನು ಆದ್ಯತೆ ಮೇಲೆ ಮಾಡಿಕೊಡಬೇಕೆಂದು ಸಿಎಂಗೆ ಸಲಹೆ ನೀಡಲಾಯಿತು. ಈ ಸಲಹೆಗೆ ಸಿಎಂ ತಲೆಯಾಡಿಸಿದರೆಂದು ಮೂಲಗಳು ತಿಳಿಸಿವೆ.

ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ‘ಶಾಸಕರ ಸಣ್ಣ ಪುಟ್ಟ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ಅದನ್ನು ಪರಿಹರಿಸುವುದಾಗಿ ಸಿಎಂ ಹೇಳಿದ್ದಾರೆ’ ಎಂದರು.

ಸಭಾಪತಿ ಯಾರು?

ವಿಧಾನಪರಿಷತ್ ಸಭಾಪತಿ ಸ್ಥಾನ ತಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ಬೇಡಿಕೆಗೆ ಸಮನ್ವಯ ಸಮಿತಿ ಸಭೆಯಲ್ಲಿ ಸ್ಪಷ್ಟತೆ ಮೂಡಿಲ್ಲ. ಹಂಗಾಮಿ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿಯವರನ್ನು ಮಂತ್ರಿ ಮಂಡಲಕ್ಕೆ ಸೇರಿಕೊಳ್ಳಲು ಸಿಎಂ ಉತ್ಸುಕರಾಗಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಸಭಾಪತಿ ಸ್ಥಾನ ಕಾಂಗ್ರೆಸ್ ಪಾಲಿಗೆ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಆದರೆ, ಅಂತಿಮ ತೀರ್ಮಾನ ಗುರುವಾರ ಸ್ಪಷ್ಟಗೊಳ್ಳಲಿದೆ.

ಸಂಪುಟಕ್ಕೆ ಹೋಗಲು ಹೇಳ್ತೀವಿ

ಸತತವಾಗಿ ಸಂಪುಟ ಸಭೆಗೆ ಗೈರುಹಾಜರಾಗುತ್ತಿರುವ ರಮೇಶ್ ಜಾರಕಿಹೊಳಿ ಬಗ್ಗೆ ಬೇರೆ ರೀತಿ ಏಕೆ ವ್ಯಾಖ್ಯಾನಿಸುತ್ತೀರಿ, ಸಂಪುಟಕ್ಕೆ ಹೋಗಿಲ್ಲ ಎಂದರೆ ಹೋಗುವಂತೆ ಹೇಳುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.

ಶಾಸಕಾಂಗ ಪಕ್ಷದ ಸಭೆ ಮುಂದಕ್ಕೆ

ಕಾಂಗ್ರೆಸ್ ಶಾಸಕರ ಮನವೊಲಿಸುವ ಉದ್ದೇಶದಿಂದ ಡಿ.8ರಂದು ಕಡೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಂದೂಡಲು ಸಮನ್ವಯ ಸಮಿತಿ ನಿರ್ಧರಿಸಿತು. ಈ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯೋಜನೆ ರೂಪಿಸಲಾಗಿತ್ತು. ಆದರೆ, ಡಿ.22ರಂದು ಸಂಪುಟ ವಿಸ್ತರಣೆಗೆ ದಿನ ನಿಗದಿಪಡಿಸಿರುವ ಕಾರಣ ಶಾಸಕಾಂಗ ಪಕ್ಷದ ಸಭೆಯನ್ನು ಬೆಳಗಾವಿಯಲ್ಲೇ ನಡೆಸಲು ತೀರ್ವನಿಸಲಾಯಿತು.

ರಾಹುಲ್, ಗೌಡರ ಒಪ್ಪಿಗೆ

ಸಂಪುಟ ವಿಸ್ತರಣೆ ಕುರಿತಂತೆ ಸಮನ್ವಯ ಸಮಿತಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಂದ ಅನುಮತಿ ಪಡೆದುಕೊಂಡಿದೆ.

ಮುಗಿದಿಲ್ಲ ಸಂದೇಹ

ಡಿ.22ರಂದೇ ವಿಸ್ತರಿಸುವುದಾಗಿ ಸಮನ್ವಯ ಸಮಿತಿ ಅಧ್ಯಕ್ಷರು ಘಂಟಾಘೋಷವಾಗಿ ಮಾಧ್ಯಮದ ಮುಂದೆ ಜಗಜ್ಜಾಹೀರುಗೊಳಿಸಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಸಚಿವಾಕಾಂಕ್ಷಿಗಳಿಲ್ಲ. ಡಿ.10ರಿಂದ ಆರಂಭವಾಗುವ ಬೆಳಗಾವಿ ಅಧಿವೇಶನಕ್ಕೆ 16ಕ್ಕಿಂತ ಹೆಚ್ಚು ಕಾಂಗ್ರೆಸ್ ಶಾಸಕರು ಗೈರು ಹಾಜರಾಗುತ್ತಾರೆಂಬ ಬೆಳವಣಿಗೆ ನಡೆದ ಹಿನ್ನೆಲೆಯಲ್ಲಿ ಡಿ.22ರಂದು ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಪಡಿಸಿದ್ದಾರೆ, ಇದೆಲ್ಲ ಕಣ್ಣೊರೆಸುವ ತಂತ್ರ ಎಂದು ಸಚಿವಾಕಾಂಕ್ಷಿಯೊಬ್ಬರು ತಿಳಿಸಿದ್ದಾರೆ.

ಸಂಪುಟದಲ್ಲಿ ಯಾರಿಗೆ ಅವಕಾಶ?

ಕಾಂಗ್ರೆಸ್

1. ರಹೀಂಖಾನ್

2. ಎಂಟಿಬಿ ನಾಗರಾಜ್ ಅಥವಾ ಸಿ.ಎಸ್. ಶಿವಳ್ಳಿ

3. ಬಿ.ಸಿ.ಪಾಟೀಲ್

4. ಅಮರೇಗೌಡ ಬಯ್ಯಾಪುರ

5. ತುಕಾರಾಂ ಅಥವಾ ಪರಮೇಶ್ವರ ನಾಯಕ್

ಜೆಡಿಎಸ್​ನಿಂದ

1. ಎಚ್.ಕೆ. ಕುಮಾರಸ್ವಾಮಿ ಅಥವಾ ಅನ್ನದಾನಿ

2. ಬಿ.ಎಂ. ಫಾರೂಕ್

3. ಬಿ. ಸತ್ಯನಾರಾಯಣ

Leave a Reply

Your email address will not be published. Required fields are marked *

Back To Top