ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ: ದೇಶಪಾಂಡೆ

ಬಾಗಲಕೋಟೆ: ಉತ್ತರ ಕರ್ನಾಟಕಕ್ಕೆ ಸಮ್ಮಿಶ್ರ ಸರಕಾರದಿಂದ ಅನ್ಯಾಯವಾಗಿಲ್ಲ. ನಾನು ಕೂಡ ಉತ್ತರ ಕರ್ನಾಟಕದವನಲ್ಲವೇ? ಉತ್ತರ ಕರ್ನಾಟಕ ಸಾಕಷ್ಟು ಅಭಿವೃದ್ಧಿಯಾಗಿದೆ. ಇನ್ನೂ ಏನು ಮಾಡಬೇಕು ಹೇಳಿ? ಅದರ ಬಗ್ಗೆ ಚರ್ಚೆ ಮಾಡೋಣ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರ ಕನ್ನಡ ಮಾತೆ, ಕನ್ನಡ ನಾಡನ್ನು ಒಂದೇ ದೃಷ್ಟಿಯಿಂದ ನೋಡುತ್ತದೆ. ಸಮಗ್ರ ಕರ್ನಾಟಕ ಅಭಿವೃದ್ಧಿ ಸರ್ಕಾರದ ಮುಖ್ಯ ಧ್ಯೇಯ ಎಂದು ಹೇಳಿದರು.

ಸಮ್ಮಿಶ್ರ ಸರಕಾರ ಲೋಕಸಭೆ ನಂತರ ಇರುವುದಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ವಿರೋಧ ಪಕ್ಷವಾಗಿ ಅವರು ಆ ರೀತಿ ಮಾತನಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಅಧಿಕಾರ ನಡೆಸಬೇಕೆಂದು ಅವರಿಗೆ ಕನಸಿದೆ. ಆ ಬಗ್ಗೆ ನಮ್ಮನ್ನು ಪ್ರಶ್ನೆ ಯಾಕೆ ಕೇಳುತ್ತೀರಿ ಎಂದರು.

ಲೋಕಸಭಾ ಚುನಾವಣೆ ಆಗಲಿ ಯಾವುದೇ ಚುನಾವಣೆ ಆಗಲಿ, ಮತದಾರರು ದೇವರು. ಅವರ ನಿರ್ಧಾರಕ್ಕೆ ತಲೆ ಬಾಗುವುದು ನಮ್ಮ ಧರ್ಮ ಹಾಗೂ ಕರ್ತವ್ಯ. ಸಮ್ಮಿಶ್ರ ಸರಕಾರಕ್ಕೆ ನಾಡಿನ ಜನ ಬೆಂಬಲ ಕೊಡುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಬಹುತೇಕ ಸ್ಥಾನಗಳು ಜೆಡಿಎಸ್, ಕಾಂಗ್ರೆಸ್ ಪಕ್ಷಕ್ಕೆ ಬರುತ್ತವೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ 9 ಜನ ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬ ಬಿಎಸ್‌ವೈ ಪುತ್ರ ಬಿ.ವೈ. ರಾಘವೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕೇವಲ 9 ಶಾಸಕರು ಎಂದು ಹೇಳಿದ್ದಾರೆ. 82 ಶಾಸಕರು ಎಂದು ಹೇಳಿಲ್ಲವಲ್ಲ ಎಂದು ವ್ಯಂಗ್ಯವಾಡಿದರು.