ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಕೈಗೆ ಸಂಪುಟ ಸಂಕಷ್ಟ

ಬೆಂಗಳೂರು: ಬಳ್ಳಾರಿಯನ್ನು ಪುನಃ ಕೈವಶ ಮಾಡಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಬೀಗುತ್ತಿರುವ ಕಾಂಗ್ರೆಸ್​ನಲ್ಲಿ ಈಗ ಸಂಪುಟ ವಿಸ್ತರಣೆಯ ಸಂಕಷ್ಟ ಆರಂಭವಾಗಿದೆ.

ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದ 2 ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆದಿದೆ. ಅದರಲ್ಲೂ 19 ವರ್ಷಗಳ ನಂತರ ಬಳ್ಳಾರಿಯನ್ನು ತೆಕ್ಕೆಗೆ ಪಡೆದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಸಿದೆ.

ಕಾಂಗ್ರೆಸ್ ನಾಯಕರ ಒಗ್ಗಟ್ಟು, ರೂಪಿಸಿದ ತಂತ್ರಗಾರಿಕೆ, ಎಲ್ಲಿಯೂ ಎದುರಾಳಿಗಳನ್ನು ವೈಯಕ್ತಿಕ ವಿಚಾರದಲ್ಲಿ ಟೀಕಿಸದೆ, ಪರಿಸ್ಥಿತಿಯನ್ನು ತಮ್ಮಿಷ್ಟದಂತೆ ಬಳಸಿಕೊಂಡಿದ್ದರಿಂದ ಜಮಖಂಡಿ ವಿಧಾನಸಭಾ ಕ್ಷೇತ್ರ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ.

ವಿಸ್ತರಣೆ ಸಂಕಷ್ಟ: ಎರಡು ಕ್ಷೇತ್ರಗಳಲ್ಲಿ ಗೆದ್ದ ನಂತರವೇ ಈಗ ವಿಸ್ತರಣೆಯ ಸಂಕಷ್ಟ ಕಾಂಗ್ರೆಸ್​ಗೆ ಎದುರಾಗಿದೆ. ಎರಡು ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಶಾಸಕರು ಸಂಪುಟದಲ್ಲಿ ಅವಕಾಶ ಕೊಡುವಂತೆ ಒತ್ತಡ ತರಲಾರಂಭಿಸಿದ್ದಾರೆ. ಬಳ್ಳಾರಿಯಲ್ಲಿ ಎಲ್ಲ ಶಾಸಕರು ತಮ್ಮ ಕ್ಷೇತ್ರದಲ್ಲಿ ಪಕ್ಷಕ್ಕೆ ಉತ್ತಮ ಲೀಡ್ ಕೊಡಿಸಿದ್ದಾರೆ. ಅವರೆಲ್ಲರೂ ಸಂಪುಟ ಸೇರುವ ಆಸಕ್ತಿ ತೋರಿಸಿದ್ದಾರೆ. ಅದೇ ರೀತಿ ಜಮಖಂಡಿಯಲ್ಲಿ ಕೆಲಸ ಮಾಡಿರುವ ಕೆಲ ಶಾಸಕರು ಮಂತ್ರಿ ಆಗುವ ಆಸೆ ಹೊಂದಿದ್ದಾರೆ.ಕಾಂಗ್ರೆಸ್​ಗೆ ಈಗ ಯಾರನ್ನು ಮಂತ್ರಿ ಮಾಡಬೇಕೆಂಬುದೇ ದೊಡ್ಡ ಪ್ರಶ್ನೆ. ಕಾಂಗ್ರೆಸ್​ಗೆ ಲಭ್ಯವಿರುವುದು 6 ಸ್ಥಾನಗಳು ಮಾತ್ರ. ಅವುಗಳಿಗೆ ಒಂದೂವರೆ ಡಜನ್​ನಷ್ಟು ಶಾಸಕರು ಆಸಕ್ತರಾಗಿದ್ದಾರೆ. ಯಾವ ರೀತಿಯಲ್ಲಿ ಸಮಾಧಾನ ಮಾಡಲಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಸಿದ್ದು-ಪರಂ 1 ಗಂಟೆ ಚರ್ಚೆ

ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳಿಗೆ ನೇಮಕ ಕುರಿತಂತೆ ಡಿಸಿಎಂ ಡಾ. ಜಿ. ಪರಮೇಶ್ವರ್ ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಒಂದು ಗಂಟೆಗೂ ಹೆಚ್ಚು ಕಾಲ ರ್ಚಚಿಸಿದರು. ಮಂಗಳವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜತೆ ನಡೆಸಿದ ಮಾತುಕತೆ ವಿವರವನ್ನು ಪರಮೇಶ್ವರ್​ಗೆ ಸಿದ್ದರಾಮಯ್ಯ ನೀಡಿದರು. ಆದಷ್ಟು ಬೇಗ ವಿಸ್ತರಣೆ ಪೂರ್ಣಗೊಳಿಸಬೇಕು, ಅಧಿಕಾರದ ಹಂಚಿಕೆ ಆಗಬೇಕು. ಜಿಲ್ಲೆಗಳಲ್ಲಿ ಕೆಲ ನೇಮಕಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ನ್ಯಾಯ ಸಿಗುತ್ತಿಲ್ಲ. ಈ ಬಗ್ಗೆ ಎಚ್ಚರವಹಿಸುವಂತೆ ಪರಮೇಶ್ವರ್​ಗೆ ತಿಳಿಸಿದರು. ಸಂಪುಟ ವಿಸ್ತರಣೆ, ನಿಗಮ-ಮಂಡಳಿಗೆ ನೇಮಕ ಸಂಬಂಧ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿದ್ದು, ಅವೆಲ್ಲವನ್ನೂ ಒಗ್ಗೂಡಿಸಿ ಒಮ್ಮತದ ಅಭ್ಯರ್ಥಿ ಆಯ್ಕೆಗೆ ನಾಯಕರು ಚಿಂತನೆ ನಡೆಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ವೇಳೆ ಮೈತ್ರಿ ಮಾಡಿಕೊಳ್ಳುವಾಗ ಯಾವ ರೀತಿ ಎಚ್ಚರಿಕೆ ವಹಿಸಬೇಕೆಂಬ ಬಗ್ಗೆಯೂ ಮಾತುಕತೆ ನಡೆದಿದೆ.

ಕಾಂಗ್ರೆಸ್​ನಲ್ಲಿನ್ನು ಪರಿಷತ್ ಪೈಪೋಟಿ

ಬಳ್ಳಾರಿಯಲ್ಲಿ ಉಗ್ರಪ್ಪ ಜಯ ಗಳಿಸಿರುವ ಕಾರಣಕ್ಕೆ ರದ್ದಾಗುವ ವಿಧಾನಪರಿಷತ್ ಸ್ಥಾನ ಭರ್ತಿ ಮಾಡಲು ಕಾಂಗ್ರೆಸ್​ಗೆ ಹೊಸ ಅವಕಾಶ ಸಿಕ್ಕಿದೆ. 2014ರಲ್ಲಿ ನಾಮನಿರ್ದೇಶಿತಗೊಂಡಿದ್ದ ವಿ.ಎಸ್. ಉಗ್ರಪ್ಪ ಅವಧಿ 2020ರ ಜೂ.23ಕ್ಕೆ ಮುಕ್ತಾಯಗೊಳ್ಳುತ್ತಿದೆ. ಕಾಂಗ್ರೆಸ್​ನಲ್ಲಿ ಈ ಒಂದು ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಈಗಾಗಲೇ ಆರಂಭವಾಗಿದೆ. ಮಾಜಿ ಸಚಿವರಾದ ಮೋಟಮ್ಮ, ರಾಣಿ ಸತೀಶ್, ಮಾಜಿ ಮೇಯರ್ ರಾಮಚಂದ್ರಪ್ಪ, ನಾಮನಿರ್ದೇಶನ ತಪ್ಪಿದ ಮುಖ್ಯಮಂತ್ರಿ ಚಂದ್ರು, ಬಳ್ಳಾರಿಯ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ, ಮಾಜಿ ಶಾಸಕ ನಾಗರಾಜ ಛಬ್ಬಿ, ಸೂರಜ್ ಹೆಗ್ಡೆ, ನಿವೇದಿತಾ ಆಳ್ವ, ಜಲಜಾ ನಾಯ್್ಕ ಸೇರಿ ಹಲವರ ಹೆಸರು ಕೇಳಿಬರುತ್ತಿವೆ. ಹೈಕಮಾಂಡ್ ಮಟ್ಟದಲ್ಲಿ ಯಾರ ಹೆಸರು ತೀರ್ಮಾನ ಆಗಲಿದೆ ಎಂದು ಕಾದು ನೋಡಬೇಕು.

ಉಗ್ರಪ್ಪ ಭಯೋತ್ಪಾದಕ!

ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂಚಾಲಿತ ಭಾಷಾಂತರದಿಂದಾಗಿ ಬಳ್ಳಾರಿ ಕಾಂಗ್ರೆಸ್ ಸಂಸದ ಉಗ್ರಪ್ಪ ‘ಟೆರರಿಸ್ಟ್’ ಆಗಿದ್ದಾರೆ. ಬಳ್ಳಾರಿಯಲ್ಲಿ ಜಯಿಸಿದ್ದಕ್ಕೆ ವಿ.ಎಸ್. ಉಗ್ರಪ್ಪ ಅವರಿಗೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಫೇಸ್​ಬುಕ್​ನಲ್ಲಿ ಶುಭಾಶಯ ಕೋರಿ ಕನ್ನಡದಲ್ಲಿ ಪೋಸ್ಟ್ ಹಾಕಿದ್ದಾರೆ. ಫೇಸ್​ಬುಕ್​ನ ಸ್ವಯಂಚಾಲಿತ ಭಾಷಾಂತರ ವ್ಯವಸ್ಥೆ ಇದನ್ನು ಇಂಗ್ಲಿಷ್​ಗೆ ತರ್ಜುಮೆ ಮಾಡಿದ್ದು, ಉಗ್ರಪ್ಪ ಹೆಸರನ್ನು ಶ್ರೀ ‘ಟೆರರಿಸ್ಟ್ ್ಸ ಎಂದು ಬರೆದಿದೆ. ಈ ಪೋಸ್ಟ್ ಸಾಕಷ್ಟು ಖಾತೆಗಳಲ್ಲಿ ಹರಿದಾಡುತ್ತಿದೆ.