ಕೆಪಿಎಸ್​ಸಿ ಅಧ್ಯಕ್ಷ ಹುದ್ದೆಗೆ ದೋಸ್ತಿ ಜಟಾಪಟಿ?

ಬೆಂಗಳೂರು: ಸಚಿವ ಸ್ಥಾನಗಳ ಜತೆಗೆ ಪ್ರತಿಷ್ಠಿತ ಹುದ್ದೆಗಳು ಜೆಡಿಎಸ್ ಪಾಲಾಗುತ್ತಿವೆ ಎಂಬ ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್ ನಾಯಕರ ಅಸಮಾಧಾನದ ನಡುವೆಯೇ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹುದ್ದೆಯೂ ಜೆಡಿಎಸ್ ಪಾಲಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಕೆಪಿಎಸ್​ಸಿ ಅಧ್ಯಕ್ಷ ಶ್ಯಾಮ್ಟ್ ಅವಧಿ ಡಿ.7ಕ್ಕೆ ಪೂರ್ಣಗೊಳ್ಳಲಿದ್ದು, ಆ ಹುದ್ದೆಗೆ ಜೆಡಿಎಸ್​ನಲ್ಲಿ ದೊಡ್ಡ ಮಟ್ಟದ ಲಾಬಿ ಶುರುವಾಗಿದೆ. ಕೆಲವರು ಜೆಡಿಎಸ್ ವರಿಷ್ಠ ದೇವೇಗೌಡರ ಮೇಲೆ ಪ್ರಭಾವ ಬೀರಲಾರಂಭಿಸಿದ್ದರೆ, ಮತ್ತೆ ಕೆಲವರು ಮುಖ್ಯಮಂತ್ರಿಗೆ ದುಂಬಾಲು ಬೀಳುತ್ತಿದ್ದಾರೆ. ಇನ್ನು ಕೆಲವರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೊರೆ ಹೋಗಿದ್ದಾರೆ. ಮತ್ತೊಬ್ಬರು ಡಿ.ಕೆ. ಬ್ರದರ್ಸ್ ಬೆನ್ನು ಬಿದ್ದಿದ್ದಾರೆ.

ರೇಸ್​ನಲ್ಲಿರುವವರು…

ಕೆಪಿಎಸ್​ಸಿ ಹಾಲಿ ಸದಸ್ಯ ರಘುನಂದನ್ ರಾಮಣ್ಣ, ಲಕ್ಷ್ಮೀನಾರಾಯಣ ಕುರ್ಚಿಗಾಗಿ ಪೈಪೋಟಿಗೆ ಬಿದ್ದಿದ್ದಾರೆ. ಬೆಂ. ಗ್ರಾಮಾಂತರ ಡಿಸಿ ಕರೀಗೌಡ, ಐಎಎಸ್ ಅಧಿಕಾರಿ ವಿ.ಶಂಕರ್ ಹೆಸರು ಚಾಲ್ತಿಯಲ್ಲಿವೆ. ರಘುನಂದನ್ ಪರ ಡಿಕೆಶಿ ಬ್ರದರ್ಸ್ ಇದ್ದರೆ, ಹತ್ತಿರದ ಸಂಬಂಧಿಯೂ ಆಗಿರುವ ಕರೀಗೌಡರಿಗೆ ಪಟ್ಟ ಕಟ್ಟಲು ದೇವೇಗೌಡರು ಉತ್ಸುಕತೆ ತೋರಿದ್ದಾರೆ.

ಕೆಇಆರ್​ಸಿ 2 ಹುದ್ದೆಗೆ 20+ ಅರ್ಜಿ

ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಹಾಗೂ ಕಾನೂನು ಸದಸ್ಯ ಸ್ಥಾನಕ್ಕೆ ಅರ್ಜಿಗಳ ಮಹಾಪೂರವೇ ಬಂದಿದೆ. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟ ಐಎಎಸ್ ಅಧಿಕಾರಿಗಳು ಸೇರಿ 20ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ಅರ್ಜಿ ಸಲ್ಲಿಸಲು ಮಂಗಳವಾರ ಕೊನೇ ದಿನವಾಗಿತ್ತು. ಕೆಪಿಎಸ್​ಸಿ ಅಧ್ಯಕ್ಷ ಟಿ. ಶ್ಯಾಮ್ಟ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಎಸ್.ಕೆ.ಪಟ್ಟನಾಯಕ್, ಎಂ.ಲಕ್ಷ್ಮೀನಾರಾಯಣ್, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಹಿಂದಿನ ಎಂಡಿ ಆಗಿದ್ದ ಎಸ್.ಪಿ.ಸಕ್ರಿ ಅರ್ಜಿ ಸಲ್ಲಿಸಿರುವ ಪ್ರಮುಖರು. ಕೇವಲ 7ನೇ ತರಗತಿ ಪಾಸಾಗಿರುವ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿರುವುದು ವಿಶೇಷ. ನಿವೃತ್ತ ನ್ಯಾ.ಶ್ರೀನಿವಾಸಗೌಡ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚಿಸಲಾಗಿದೆ.