ಸಿದ್ದರಾಮಯ್ಯಗೆ ಸಿಎಂ ಆಫರ್‌ ಕೊಟ್ಟ ಜೆಡಿಎಸ್‌! ರೇಸ್‌ನಲ್ಲಿ ಡಿಕೆಶಿ, ಖರ್ಗೆ; ಯಾರಾಗಲಿದ್ದಾರೆ ನೂತನ ಮುಖ್ಯಮಂತ್ರಿ?

ಬೆಂಗಳೂರು: ಮೈತ್ರಿ ಸರ್ಕಾರದ ಬಹುಮತ ಸಾಬೀತು ನಾಳೆ ನಡೆಯಲಿದ್ದು, ಸರ್ಕಾರ ಉಳಿಸಿಕೊಳ್ಳಲೇ ಬೇಕಿರುವ ಹಠಕ್ಕೆ ಬಿದ್ದಿರುವ ಜೆಡಿಎಸ್‌ ಇದೀಗ ಮುಖ್ಯಮಂತ್ರಿ ಸ್ಥಾನದ ಆಫರ್‌ನ್ನು ಕಾಂಗ್ರೆಸ್‌ಗೆ ನೀಡಿದೆ ಎಂದು ಹೇಳಲಾಗಿದ್ದು, ಈ ವಿಚಾರವನ್ನು ಸಚಿವ ಡಿ ಕೆ ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್​ನವರು ನಾವು ಎಲ್ಲಾ ತ್ಯಾಗಕ್ಕೂ ಸಿದ್ಧ ಎಂದು ಮುಖ್ಯಮಂತ್ರಿ, ಅವರ ಪಕ್ಷದವರು ಮುಕ್ತ ಕಂಠದಿಂದ ಹೇಳಿದ್ದಾರೆ. ಸರ್ಕಾರ ಉಳಿಯಲಿ. ನಾವು ಎಲ್ಲ ತ್ಯಾಗಕ್ಕೂ ಸಿದ್ಧವಿದ್ದೇವೆ ನಿಮ್ಮಲ್ಲಿ ಯಾರು ಬೇಕಾದರೂ ಕುಳಿತುಕೊಳ್ಳಲಿ ಎಂದು ಹೇಳಿದ್ದಾರೆ. ಅವರೇ ಕುಳಿತುಕೊಳ್ಳಬೇಕು ಎಂದೇನಿಲ್ಲ. ನನಗೂ, ಸಿದ್ದರಾಮಯ್ಯ, ಪರಮೇಶ್ವರ್‌ ಮತ್ತು ಖರ್ಗೆ ಅವರಿಗೂ ಹೇಳಿದ್ದಾರೆ. ಹೈಕಮಾಂಡ್‌ಗೂ ಈ ವಿಚಾರವನ್ನು ತಿಳಿಸಲಾಗಿದೆ ಎಂದರು.

ನಾಳೆ ಏನಾಗಬಹುದು ಎನ್ನುವ ವಿಚಾರಕ್ಕೆ ಉತ್ತರಿಸಿ, ನಾನು ನಂಬಿಕೆಯಲ್ಲಿ ಬದುಕಿದವನು. ನಮಗೆ ವಿಶ್ವಾಸವಿದೆ. ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ನಮ್ಮೆಲ್ಲ ಶಾಸಕರನ್ನು ಮನವೊಲಿಸುವ ವಿಶ್ವಾಸ ನಮಗಿದೆ. ಬಿಜೆಪಿಯವರ ಟ್ರಿಕ್ಸ್‌ನ್ನು ನಾವು ಬೇಡ ಎನ್ನಲಾಗುವುದಿಲ್ಲ. ಅವರದ್ದು ಅವರು ಮಾಡಿಕೊಳ್ಳಲಿ ಎಂದರು.

ನಾನು ಏನೇ ಮಾಡಿದರೂ ಮಾಧ್ಯಮಗಳ ಮುಂದೆಯೇ ಮಾಡುತ್ತೇನೆ. ರಾಜೀನಾಮೆ ಕೊಡುವವರನ್ನು ಬೇಡ ಬನ್ನಿ ಎಂದು ಕಾಲಿಗೆ ಬಂದು ಕರೆದುಕೊಂಡು ಬರುವುದು ಸ್ಟಂಟ್‌ ಅಲ್ಲ. ಓರ್ವ ಸಚಿವನಾಗಿ ಅವರನ್ನು ತಡೆಯುವುದು ನನ್ನ ಕರ್ತವ್ಯ. ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ಈಗ ಏನು ಹೇಳಲಾಗುವುದಿಲ್ಲ. ಈಗ ಅತೃಪ್ತ ಶಾಸಕರು ಮೂರು ಭಾಗವಾಗಿ ಮೂರು ಕಡೆಗೆ ಶಿಫ್ಟ್‌ ಆಗಿದ್ದಾರೆ. ಅವರು ಚಿಕ್ಕ ಮಕ್ಕಳಲ್ಲ ಎಂದು ಹೇಳಿದರು.

ನಾಳೆ ದೋಸ್ತಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿರುವ ಬೆನ್ನಲ್ಲೇ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ಆರಂಭವಾಗಿದೆ. ಜೆಡಿಎಸ್​​​​​​ ಕೊಟ್ಟ ಸಿಎಂ ಆಫರ್​ಗೆ ಕೈ ಪಡೆಯಲ್ಲಿ ಸಂಚಲನ ಉಂಟಾಗಿದ್ದು, ಇದರ ಬೆನ್ನಲ್ಲೇ ಸಚಿವ ಜಮೀರ್​ ಕರೆದುಕೊಂಡು ಕಾವೇರಿಯಿಂದ ಅಜ್ಞಾತ ಸ್ಥಳಕ್ಕೆ ಸಿದ್ದರಾಮಯ್ಯ ತೆರಳಿದ್ದಾರೆ. ಬೆಂಗಾವಲು ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ತರಾತುರಿಯಲ್ಲಿ ನಿರ್ಗಮಿಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *