ಚುನಾವಣೆ ನಂತರ ನೆಲಕಚ್ಚಲಿದೆ ಕಾಂಗ್ರೆಸ್

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಜಿಲ್ಲೆಯಲ್ಲಿ ನೆಲ ಕಚ್ಚುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್ ಹೇಳಿದರು.

ಕ್ಷೇತ್ರ ಬಿಟ್ಟುಕೊಟ್ಟಿರುವ ಕಾಂಗ್ರೆಸ್ ಬಿಜೆಪಿಗೆ ಎದುರಾಳಿಯೇ ಅಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಶುದ್ಧ ಆಡಳಿತ ಕಾರಣದಿಂದ ಭಾರತ ವಿಶ್ವ ಮಟ್ಟದಲ್ಲಿ ಘನತೆ ಸಂಪಾದಿಸಿದೆ. ಅಂಥವರ ಹೆಸರು ಹೇಳಿಯೇ ಶೋಭಾ ಕರಂದ್ಲಾಜೆ ಮತಯಾಚನೆ ಮಾಡುತ್ತಿದ್ದಾರೆ. ಇದನ್ನೇ ಮುಖವಾಡವೆಂದು ಜೆಡಿಎಸ್ ಅಭ್ಯರ್ಥಿ ಹೇಳಿರುವುದು ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದರು.

ಸ್ಥಳೀಯ ಜೆಡಿಎಸ್ ಅಭ್ಯರ್ಥಿಯು ರಾಹುಲ್ ಗಾಂಧಿ ಹೆಸರು ಹೇಳಿದರೆ ಮತ ಬರುವುದಿಲ್ಲ. ಏಕೆಂದರೆ ದೇಶದ್ರೋಹಿಗಳಿಗೆ ಬೆಂಬಲಿಸುವ ಪ್ರಣಾಳಿಕೆಯನ್ನು ಕಾಂಗ್ರೆಸ್ ರೂಪಿಸಿದೆ. ಭಾರತದ ಅಸ್ತಿತ್ವ ರಕ್ಷಿಸುವ ಕಾನೂನುಗಳಾದ ದೇಶದ್ರೋಹ, ಅಸ್ಪಾ ಬದಲಾವಣೆ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ದೇಶದ ವಿರುದ್ಧ ಹೋರಾಟ ಮಾಡುವವರಿಗೆ ಬೆಂಬಲವಾಗಿ ನಿಲ್ಲುವ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಹೆಸರು ಹೇಳಿದರೆ ಜೆಡಿಎಸ್​ಗೆ ಮತ ಬರುವುದಿಲ್ಲ ಎಂದು ತಿಳಿಸಿದರು.

ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್​ಗೆ ಕರಾವಳಿಯಲ್ಲೇ ಬೆಂಬಲ ಸಿಗುತ್ತಿಲ್ಲ. ಮೀನುಗಾರಿಕೆ ಸಚಿವರಾಗಿದ್ದಾಗ ಯಾವ ಕೆಲಸವನ್ನೂ ಮಾಡಲಿಲ್ಲ. ಹಾಗಾಗಿ ಅಲ್ಲಿನ ಜನ ತಿರುಗಿ ಬಿದ್ದಿದ್ದಾರೆ. ಸ್ವ ಕ್ಷೇತ್ರದಲ್ಲಿ ಸಲ್ಲದ ಪ್ರಮೋದ್​ಗೆ ಚಿಕ್ಕಮಗಳೂರು ಜಿಲ್ಲೆಯ ಜನ ಮಣೆ ಹಾಕವುದಿಲ್ಲ ಎಂದರು.

ದೇಶದಲ್ಲಿ ಸೈನಿಕರು ಒಳ-ಹೊರಗೆ ರಕ್ಷಣೆ ಮಾಡುತ್ತಿದ್ದಾರೆ. ದೇಹದ ಬಿಳಿರಕ್ತ ಕಣದಂತೆ ಒಳಗಿನ ಶತ್ರುಗಳ ವಿರುದ್ಧ ಆರ್​ಎಸ್​ಎಸ್ ಹೋರಾಟ ಮಾಡುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಾಪಂ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ, ಶ್ರೀಕಾಂತ ಪೈ, ರಾಜಪ್ಪ, ನಾರಾಯಣ, ಕೋಟೆ ಅನಿಲ್ ಇದ್ದರು.

ಯಾವುದೇ ರಾಜಕೀಯ ಪಕ್ಷದ ಯಶಸ್ಸಿನ ಹಿಂದೆ ಸಮರ್ಥ ನಾಯಕತ್ವ ಬೇಕು. ಬಿಜೆಪಿಗೆ ಗಟ್ಟಿ ನಾಯಕ ಸಿಕ್ಕಿದ್ದಾರೆ. ಹೀಗಾಗಿ ಅವರ ಹೆಸರಿನಲ್ಲಿಯೇ ದೇಶಕ್ಕಾಗಿ ಚುನಾವಣೆ ನಡೆಯುತ್ತಿದೆ. ದೇಶ ರಕ್ಷಿಸುವ ಸೈನಿಕರಿಗೆ ಮಾರ್ಗದರ್ಶಕರಾಗಿ ಪ್ರಧಾನಿ ಕೆಲಸ ಮಾಡಿದ್ದಾರೆ. | ಸಿ.ಎಚ್.ಲೋಕೇಶ್, ಬಿಜೆಪಿ ಜಿಲ್ಲಾ ವಕ್ತಾರ

Leave a Reply

Your email address will not be published. Required fields are marked *