ದಳದಲ್ಲಿ ಸಂಪುಟ ಕಸರತ್ತು

ಬೆಂಗಳೂರು: ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಸಚಿವ ಸಂಪುಟವನ್ನು ಭರ್ತಿ ಮಾಡುವ ಚಿಂತನೆ ನಡೆದಿದ್ದು, ಮೈತ್ರಿ ಸರ್ಕಾರದಲ್ಲಿ ಖಾಲಿ ಇರುವ 8 ಸಚಿವ ಸ್ಥಾನಗಳ ಪೈಕಿ ಎರಡು ಸ್ಥಾನಗಳಿಗೆ ಜೆಡಿಎಸ್ ಭರ್ತಿ ಮಾಡಬೇಕಿದೆ. ಹೀಗಾಗಿ ಪಕ್ಷದಲ್ಲಿ ಕಸರತ್ತು ಆರಂಭಗೊಂಡಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ಗೆ ಅಲ್ಪಸಂಖ್ಯಾತ ಸಮುದಾಯದ ಮತಗಳು ಅಷ್ಟಾಗಿ ದಕ್ಕಿಲ್ಲ ಎಂಬ ವಿಚಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಚಿಂತೆಗೀಡು ಮಾಡಿತ್ತು. ಮಾತ್ರವಲ್ಲ, ಕುಮಾರಸ್ವಾಮಿ ಸ್ಪರ್ಧಿಸಿದ್ದ ರಾಮನಗರ ಕ್ಷೇತ್ರದಲ್ಲೂ ಮುಸ್ಲಿಂ ಸಮುದಾಯದ ಮತಗಳು ಕೈ ಹಿಡಿದಿರಲಿಲ್ಲ. ಹೀಗಾಗಿ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ನಿರ್ಣಯಕ್ಕೆ ಬರಲಾಗಿದೆ. ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್​ಗೆ ಮಂತ್ರಿ ಸ್ಥಾನ ಒಲಿಯುವ ಸಾಧ್ಯತೆಗಳಿವೆ. ಅವರೂ ಪ್ರಯತ್ನಿಸಿದ್ದು, ಸಿಎಂ ಎಚ್​ಡಿಕೆ ಒಲವೂ ಇದೆ.

ಬಿಎಸ್​ಪಿಯಿಂದ ಆಯ್ಕೆಯಾಗಿದ್ದ ಎನ್.ಮಹೇಶ್ ರಾಜೀನಾಮೆಯಿಂದ ತೆರವಾದ ಮತ್ತೊಂದು ಸ್ಥಾನವು ಪರಿಶಿಷ್ಟ ಜಾತಿಗೆ ಸೇರಿದ ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರಿಗೆ ದಕ್ಕಲಿದೆ ಎನ್ನಲಾಗುತ್ತಿದೆ. ಎಚ್.ಡಿ.ರೇವಣ್ಣ ಇದಕ್ಕೆ ಒಪು್ಪತ್ತಿಲ್ಲ. ಹೀಗಾಗಿ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ. ಒಟ್ಟು ಐವರು ದಲಿತ ಶಾಸಕರು ಜೆಡಿಎಸ್​ನಲ್ಲಿದ್ದಾರೆ. ದೇವೇಗೌಡರು ದಲಿತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಲು ತಯಾರಿಲ್ಲ. ಹೀಗಾಗಿ 4ನೇ ಬಾರಿಗೆ ಆಯ್ಕೆಯಾಗಿರುವ ಎಚ್​ಕೆಕೆಗೆ ಈ ಸಚಿವ ಸ್ಥಾನ ಬಹುತೇಕ ಖಚಿತ.

ಮುಂಬೈ ವದಂತಿಗೆ ತೆರೆ: ಕಾಂಗ್ರೆಸ್ ಶಾಸಕರು ಮುಂಬೈಗೆ ಹಾರುವ ವಿಚಾರಕ್ಕೆ ಕೆಪಿಸಿಸಿ ಸ್ಪಷ್ಟನೆ ನೀಡಿದೆ. ‘ಯಾರು ಬೇಕಾದರೂ ದೆಹಲಿ, ಮುಂಬೈ, ಸಿಂಗಾಪುರಕ್ಕೆ ಹೋಗಬಹುದು. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ? ಹತ್ತು ಜನ ಶಾಸಕರಲ್ಲ, ಐವತ್ತು ಶಾಸಕರು ಹೋಗಿರಬಹುದು ನೋಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಕೆಲವೊಂದು ಸಣ್ಣಪುಟ್ಟ ಸಮಸ್ಯೆ ಇರಬಹುದು, ಅದನ್ನು ನಾವೇ ಕುಳಿತು ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ. ಶಾಸಕರಿಗೆ ಸಂಪುಟ ವಿಸ್ತರಣೆ, ನಿಗಮ -ಮಂಡಳಿ ನೇಮಕ ಮಾಡಬೇಕು. ಕ್ಷೇತ್ರಗಳಲ್ಲಿ ಕೆಲಸಗಳೂ ಆಗಬೇಕು ಎಂಬ ಬೇಸರ ಇರುತ್ತದೆ. ಆದರೆ, ಯಾರೂ ಪಕ್ಷ ಬಿಡುವ, ಸರ್ಕಾರಕ್ಕೆ ತೊಂದರೆ ಕೊಡುವ ಯೋಚನೆ ಮಾಡಿಲ್ಲ ಎಂದರು.

ಮಾಧ್ಯಮಗಳಲ್ಲಿ ಯಾರು ಬಿಜೆಪಿಗೆ ಹೋಗುತ್ತಾರೆ ಎಂದು ವದಂತಿ ಹಬ್ಬಿದೆಯೋ ಅವರೆಲ್ಲರೂ ಕರೆ ಮಾಡಿದ್ದರು. ಈಗಷ್ಟೇ ಬಿ.ಸಿ. ಪಾಟೀಲ್, ಎಂ.ಟಿ.ಬಿ. ನಾಗರಾಜ್ ಕೂಡ ಮಾತನಾಡಿದ್ದಾರೆ. ಅಂತಹ ಯಾವ ಬೆಳವಣಿಗೆಯೂ ಆಗಿಲ್ಲ ಎಂದು ಹೇಳಿದರು.

ಡಿಕೆಶಿ ವರ್ಸಸ್ ಜಾರಕಿಹೊಳಿ: ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಶೀತಲ ಸಮರ ಮುಂದುವರಿದಿದೆ. ‘ನನ್ನ ಹೆಸರನ್ನು ಡ್ಯಾಮೇಜ್ ಮಾಡಲಾಗುತ್ತಿದೆ. ನಮ್ಮದೇ ಪಕ್ಷದ ಸ್ವಯಂಘೊಷಿತ ಪ್ರಭಾವಿ ನಾಯಕರು ಹೀಗೆ ಮಾಡುತ್ತಿದ್ದಾರೆ ಎಂದು ಡಿಕೆಶಿ ವಿರುದ್ಧ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲ ವಿಚಾರಗಳಿಗೆ ನಮ್ಮಲ್ಲಿ ಗೊಂದಲ ಇದ್ದದ್ದು ನಿಜ. ಈಗ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅದನ್ನು ಬಗೆಹರಿಸಿದ್ದಾರೆ. ನಾನು ಬೆಂಗಳೂರು ಬಿಟ್ಟು ಎಲ್ಲೂ ಹೋಗಿಲ್ಲ. ಮುಂಬೈಗೆ ಹೋಗಿದ್ದೇನೆ ಎಂಬುದು ಸುಳ್ಳು ಎಂದರು.

ಇನ್ನೊಂದೆಡೆ ರಮೇಶ್ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದ್ದು, ನನ್ನ ಮೇಲೆ ಯಾರು ಬೇಕಾದರೂ ಪ್ರಹಾರ ಮಾಡಲಿ. ಅವರು ಯೂತ್ ಕಾಂಗ್ರೆಸ್​ನಿಂದ ಬೆಳೆದು ಬಂದವರು, ರಮೇಶ್ ಇಮೇಜ್ ಏಕೆ ಹಾಳು ಮಾಡ್ತೀರಾ..? ಅವರು ಆತ್ಮೀಯ ಗೆಳೆಯ ಎಂದಿದ್ದಾರೆ.

ಸುಧಾಕರ್ ವಿರುದ್ಧ ದೂರು: ಮಾಧ್ಯಮಗಳಲ್ಲಿ ಬರುತ್ತಿರುವ ವದಂತಿಗಳ ಹಿಂದೆ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಇದ್ದಾರೆ. ಅವರೇ ಮಾಧ್ಯಮಗಳಿಗೆ ತಪು್ಪ ಮಾಹಿತಿ ನೀಡುತ್ತಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆ ವೇಳೆ ಸ್ಥಾನ ಸಿಗುವ ಭರವಸೆ ಇದೆ. ಸಚಿವ ಸ್ಥಾನದ ಬದಲಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರೆ ತಿರಸ್ಕರಿಸಿ ಕ್ಷೇತ್ರದ ಜನತೆಯೊಂದಿಗೆ ಇರುತ್ತೇನೆ. ಪಕ್ಷ ಬಿಡುವುದಿಲ್ಲ. ನಾನು ಮುಂಬೈಗೆ ಹೋಗಿದ್ದೇನೆ ಎನ್ನುವ ಸುದ್ದಿ ಸುಳ್ಳು. ಎಲ್ಲಿಯೂ ಹೋಗಿಲ್ಲ. ಭದ್ರಾವತಿಯಲ್ಲೇ ಇದ್ದೇನೆ.

| ಬಿ.ಕೆ.ಸಂಗಮೇಶ್ವರ್ ಕಾಂಗ್ರೆಸ್ ಶಾಸಕ

ರೆಸಾರ್ಟ್​ಗಳೂ ನಡೆಯಬೇಕಲ್ಲ. ಆದ್ದರಿಂದ ರೆಸಾರ್ಟ್ ರಾಜಕೀಯ ನಡೆಯಲಿ ಬಿಡಿ. ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಭೇಟಿಯಾಗಿರುವ ಬಗ್ಗೆ ಅವರಿಬ್ಬರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆ ಕುರಿತು ಹೇಳುವುದು ಏನೂ ಇಲ್ಲ.

| ಎಚ್.ಡಿ. ಕುಮಾರಸ್ವಾಮಿ ಸಿಎಂ