ಬಂಡಾಯದ ಲಾಭಕ್ಕೆ ಜೆಡಿಎಸ್, ಬಿಎಸ್ಪಿ ಅಣಿ

ಪ್ರತಾಪ್ ಟಿ.ಕೋಡಿನರಸೀಪುರ ನಂಜನಗೂಡು
ನಗರಸಭೆ ಅಖಾಡದಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ತಲೆದೋರಿದ್ದ ಬಂಡಾಯ ಬಿಸಿ ತಣ್ಣಗಾಗಿಸುವ ಅಂತಿಮ ಪ್ರಯತ್ನ ಮುಗಿದರೂ ಒಳಬೇಗುದಿ ಆರಿದಂತೆ ಕಾಣುತ್ತಿಲ್ಲ. ಈತನ್ಮಧ್ಯೆ ಹೆಚ್ಚು ಸ್ಥಾನ ಗೆದ್ದು ಬೀಗುವ ಉಭಯ ಪಕ್ಷಗಳ ವೇಗಕ್ಕೆ ಜೆಡಿಎಸ್, ಬಿಎಸ್ಪಿ ಬ್ರೇಕ್ ಹಾಕಲು ಅಣಿಯಾಗಿವೆ.

ಕಾಂಗ್ರೆಸ್, ಬಿಜೆಪಿಯಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದ ಐವರು ಕಣದಿಂದ ಹಿಂದೆ ಸರಿದಿದ್ದರೆ, ಕೆಲ ವಾರ್ಡ್‌ಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಒಳೇಟು ಕೊಡಲು ಕಣದಲ್ಲಿ ಮುಂದುವರಿದಿದ್ದಾರೆ. ಸಂಸದ ಆರ್.ಧ್ರುವನಾರಾಯಣ, ಶಾಸಕ ಬಿ.ಹರ್ಷವರ್ಧನ್ ತಮ್ಮ ಪಕ್ಷದಿಂದ ಬಂಡಾಯವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನ ನಡೆಸಿದರೂ ಕೆಲವರು ಜಗ್ಗಿಲ್ಲ. ಇದು ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಚಿಂತೆಗೀಡು ಮಾಡಿದೆ. ಕೆಲ ವಾರ್ಡ್‌ಗಳಲ್ಲಿ ಬಂಡಾಯದ ಲಾಭ ಪಡೆಯಲು ಜೆಡಿಎಸ್, ಬಿಎಸ್ಪಿ ಹವಣಿಸುತ್ತಿವೆ.

ಶಮನವಾಗದ ಬಂಡಾಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪತನಕ ಲಾಬಿ ನಡೆದಿದ್ದ 24ನೇ ವಾರ್ಡ್‌ನಲ್ಲಿ ಬಂಡಾಯ ಕಾವು ಜೋರಾಗಿದೆ. ಬಿಜೆಪಿಯಿಂದ ಟಿಕೆಟ್ ಪಡೆಯುವಲ್ಲಿ ಕಡೆಗೂ ಶಕ್ತರಾದ ಎಚ್.ಎಸ್.ಮಹದೇವಸ್ವಾಮಿಗೆ ಇದೇ ಪಕ್ಷದಿಂದ ಸ್ಪರ್ಧೆ ಬಯಸಿದ್ದ ಎನ್.ಎಸ್.ಗಣೇಶ್, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಘ್ನೇಶ್ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಬಿಜೆಪಿಯಲ್ಲೇ ಗುರುತಿಸಿಕೊಂಡಿದ್ದ ಷಣ್ಮುಖಸ್ವಾಮಿ ಕೂಡ ಕಣದಲ್ಲಿದ್ದಾರೆ. ಹೀಗಾಗಿ ಬಿಜೆಪಿ ಮತ ವಿಭಜನೆಯಾದರೆ ಎದುರಾಳಿಗಳಿಗೆ ಪ್ಲಸ್ ಆಗಲಿದೆ ಎಂಬ ಆತಂಕ ಬಿಜೆಪಿಯದ್ದು.
ಬಿಜೆಪಿ ಬೂತ್ ಅಧ್ಯಕ್ಷರಾಗಿದ್ದ ರತ್ನಾಕರ ಪಕ್ಷೇತರರಾಗಿ 16ನೇ ವಾರ್ಡ್‌ನಲ್ಲಿ ಕಣದಲ್ಲಿದ್ದಾರೆ. ಜೆಡಿಎಸ್‌ನಿಂದ ವಲಸೆ ಬಂದ ಪುಟ್ಟರಾಜುಗೆ ಇಲ್ಲಿ ಬಿಜೆಪಿ ಮಣೆಹಾಕಿದೆ. ಈ ವಾರ್ಡ್‌ನಲ್ಲಿ ಬಿಎಸ್ಪಿ ಸಾಂಪ್ರದಾಯಿಕ ಮತಗಳಿರುವುದರಿಂದ ಡಿ.ಶಿವಕುಮಾರ್ ಅವರನ್ನು ಅಭ್ಯರ್ಥಿಯಾಗಿಸಿದೆ. ಎಂಟು ಅಭ್ಯರ್ಥಿಗಳಿರುವ ಈ ವಾರ್ಡ್‌ನಲ್ಲಿ ಮತ ಚದುರಿ ಹೋಗುವ ಸಾಧ್ಯತೆಯಿದೆ.

4ನೇ ವಾರ್ಡ್‌ನಲ್ಲಿ ಬಿಜೆಪಿ ಕಾರ್ಯಕರ್ತರಾದ ಸುಂದರೇಶ್, 5ನೇ ವಾರ್ಡ್‌ನಲ್ಲಿ ಎನ್.ಕೃಷ್ಣ ಕೂಡ ಪಕ್ಷೇತರರಾಗಿ ಅಖಾಡದಲ್ಲಿದ್ದಾರೆ. 25ನೇ ವಾರ್ಡ್‌ನಲ್ಲಿ ಬಿಜೆಪಿ ಕಾರ್ಯಕರ್ತ ಆನಂದ್ ತನ್ನ ಸಹೋದರಿ ಮಂಗಳಮ್ಮ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಬಿಸಿಎಂ ಮೋರ್ಚಾ ಉಪಾಧ್ಯಕ್ಷರಾಗಿದ್ದ ಸಿದ್ದರಾಜು ತಮ್ಮ ಪತ್ನಿ ಎಚ್.ಪ್ರಭಾ ಅವರನ್ನು ಪಕ್ಷೇತರರಾಗಿ ನಿಲ್ಲಿಸಿ ಬಂಡಾಯ ಸಾರಿದ್ದಾರೆ. 23ರಲ್ಲಿ ಬಿಜೆಪಿಯ ಹನುಮಯ್ಯ ಕೂಡ ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದಾರೆ. ಈ ಬಂಡಾಯದ ಮಧ್ಯೆಯೇ ಬಿಜೆಪಿಗೆ ತನ್ನ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೂ ಬಂಡಾಯ ಬಿಸಿ ತಟ್ಟಿದೆ. 6ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಅಲ್ಮಾಸ್ ಭಾನು, 21ನೇ ವಾರ್ಡ್‌ನಲ್ಲಿ ಎನ್.ಎಸ್.ಮಹದೇವಪ್ಪ,17ನೇ ವಾರ್ಡ್‌ನಲ್ಲಿ ಅಸ್ಗರ್, 5ನೇ ವಾರ್ಡ್‌ನಲ್ಲಿ ಯೋಗೇಶ್ ಸ್ಪರ್ಧಿಸಿದ್ದು, ಕಾಂಗ್ರೆಸ್‌ಗೆ ಹೊಡೆತ ಬೀಳುವ ಆತಂಕವಿದೆ.

ಇಬ್ಬರೇ ಅಭ್ಯರ್ಥಿ: 7ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಪುರಸಭೆ ಮಾಜಿ ಅಧ್ಯಕ್ಷ ಎಂ.ಶ್ರೀಧರ್ ಹಾಗೂ ಬಿಜೆಪಿಯಿಂದ ಕರವೇ ತಾಲೂಕು ಅಧ್ಯಕ್ಷ ಮಹದೇವಪ್ರಸಾದ್ ಇಬ್ಬರೇ ಕಣದಲ್ಲಿದ್ದಾರೆ. 31ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಮಹದೇವಮ್ಮ, ಬಿಜೆಪಿಯಿಂದ ನಾಗಮಣಿ ಮಾತ್ರ ಅಖಾಡದಲ್ಲಿದ್ದಾರೆ. ಉಳಿದಂತೆ 10 ವಾರ್ಡ್‌ಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಮೂವರೇ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಅಲ್ಲಿಯೂ ಪ್ರಬಲ ಪೈಪೋಟಿ ಹೆಚ್ಚಿದೆ.

ಅಧ್ಯಕ್ಷೆ, ಉಪಾಧ್ಯಕ್ಷರಿಗೆ ಅಗ್ನಿಪರೀಕ್ಷೆ: ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಪಿ.ಪುಷ್ಪಲತಾ 12ನೇ ವಾರ್ಡ್‌ನಲ್ಲಿ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿಯಿಂದ ಗಾಯತ್ರಿ, ಜೆಡಿಎಸ್‌ನಿಂದ ಆರ್.ಜ್ಯೋತಿ ಕಣದಲ್ಲಿದ್ದಾರೆ. ಉಪಾಧ್ಯಕ್ಷ ಎಂ.ಪ್ರದೀಪ್ 14ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದು, ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಮಾದೇಶ್, ಬಿಎಸ್ಪಿಯಿಂದ ಆರ್.ಆದರ್ಶ ಪೈಪೋಟಿಗಿಳಿದಿದ್ದಾರೆ. ನಗರಸಭೆ ಮಾಜಿ ಉಪಾಧ್ಯಕ್ಷ ದೊರೆಸ್ವಾಮಿ 20ನೇ ವಾರ್ಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

ಟಿಕೆಟ್ ತಪ್ಪಿದವರ ಮೇಲಾಟ: ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿ ತಟಸ್ಥ ನಿಲುವು ತೋರುತ್ತಿರುವವ ಮೇಲಾಟ ಕಾಂಗ್ರೆಸ್, ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಬಿಜೆಪಿಯಿಂದ 20ನೇ ವಾರ್ಡ್‌ಗೆ ಪಿ.ಮಹೇಶ್ ಅತ್ತಿಖಾನೆ, 17ನೇ ವಾರ್ಡ್‌ಗೆ ಪಿ.ಶ್ರೀನಿವಾಸರೆಡ್ಡಿಗೆ ವರಿಷ್ಠರು ಟಿಕೆಟ್ ಖಾತ್ರಿ ಮಾಡುತ್ತಿದ್ದಂತೆ ನಾಮಪತ್ರಕ್ಕೆ ಸಿದ್ಧತೆ ನಡೆಸಿದ್ದರು. 17ನೇ ವಾರ್ಡ್‌ನಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಪಟ್ಟಿಗೆ ಜೋತು ಬಿದ್ದು ಶ್ರೀನಿವಾಸ್‌ರೆಡ್ಡಿಗೆ ಟಿಕೆಟ್ ತಪ್ಪಿತು.

ಇನ್ನು 20ನೇ ವಾರ್ಡ್‌ನಲ್ಲಿ ಮಾಜಿ ಉಪಾಧ್ಯಕ್ಷ ದೊರೆಸ್ವಾಮಿಗೆ ನೀಡಬೇಕೆಂದು ಪಟ್ಟು ಹಿಡಿದಿದ್ದರಿಂದ ಮಹೇಶ್ ಅತ್ತಿಖಾನೆಗೂ ಸಿಗಲಿಲ್ಲ. ಇನ್ನು ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದ ದಸಂಸ ಸಂಘಟನೆ ಒಂದು ವಾರ್ಡ್‌ಗೆ ಟಿಕೆಟ್ ನೀಡುವಂತೆ ಧ್ರುವನಾರಾಯಣ ಬಳಿ ಪಟ್ಟು ಹಿಡಿದಿತ್ತು. ಕೊನೆ ಕ್ಷಣದಲ್ಲಿ ಟಿಕೆಟ್ ಸಿಗಲಿಲ್ಲ. ಟಿಕೆಟ್ ಕೈತಪ್ಪಿದವರು ಸದ್ಯ ತಟಸ್ಥರಾಗಿ ಉಳಿದಿದ್ದಾರೆ. ಇವರೆಲ್ಲಾ ಆಯಾ ಪಕ್ಷಕ್ಕೆ ಬೆಂಬಲ ನೀಡುವರೋ, ಚುನಾವಣಾ ಮೇಲಾಟದಲ್ಲಿ ಒಳೇಟು ಕೊಡುವರೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *