ಮೈತ್ರಿ ಧರ್ಮ ಪಾಲನೆ ಸಂದೇಶ ಸಾರಲು ಇಂದು ಮಂಡ್ಯದಲ್ಲಿ ಕಾಂಗ್ರೆಸ್​ ಜೆಡಿಎಸ್​ ಜಂಟಿ ಬಲಪ್ರದರ್ಶನ

ಮಂಡ್ಯ: ಮಂಡ್ಯದಲ್ಲಿ ಜೆಡಿಎಸ್​ ಮತ್ತು ಕಾಂಗ್ರೆಸ್​ ನಡುವೆ ಭಿನ್ನಾಭಿಪ್ರಾಯಗಳಿವೆ. ಮೈತ್ರಿ ಧರ್ಮ ಪಾಲನೆ ಅಸಾಧ್ಯ ಎಂಬ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಜೆಡಿಎಸ್​ ಮತ್ತು ಕಾಂಗ್ರೆಸ್​ ನಾಯಕರು ಒಂದೇ ವೇದಿಕೆಯಡಿ ಬರಲಿದ್ದಾರೆ. ಈ ಮೂಲಕ ಮೈತ್ರಿ ಸಂದೇಶ ಸಾರಲು ನಿರ್ಧರಿಸಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್​ ಪುಟ್ಟರಾಜು ಅವರ ನೇತೃತ್ವದಲ್ಲಿ ಇಂದು ಜೆಡಿಎಸ್​ ಮತ್ತು ಕಾಂಗ್ರೆಸ್​ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇದರ ಮೂಲಕ ಎರಡೂ ಪಕ್ಷಗಳು ಒಟ್ಟಾಗಿವೆ ಎಂಬ ಸಂದೇಶ ಸಾರಲು ನಾಯಕರು ನಿರ್ಧರಿಸಿದ್ದಾರೆ.

ಈ ಸುದ್ದಿಗೋಷ್ಠಿಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರ್​, ಜಿಲ್ಲಾ ಕಾಂಗ್ರೆಸ್​ನ ನಾಯಕರು, ಜೆಡಿಎಸ್​ನ ಎಲ್ಲ ಶಾಸಕರು ಪಾಲ್ಗೊಳ್ಳಲಿದ್ದಾರೆ.

ಮಂಡ್ಯದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿರುವ ಸುಮಲತಾ ಅಂಬರೀಷ್​ ಅವರಿಗೆ ಕಾಂಗ್ರೆಸ್​ ಮುಖಂಡ ಸಚ್ಚಿದಾನಂದ ಸೇರಿದಂತೆ ಕೆಲ ಕಾಂಗ್ರೆಸ್​ ನಾಯಕರು ಬಹಿರಂಗ ಬೆಂಬಲ ಘೋಷಣೆ ಮಾಡಿದ್ದಾರೆ. ಇನ್ನುಳಿದಂತೆ ಕೆಲ ಮಾಜಿ ಶಾಸಕರೂ ಸುಮಲತಾ ಅವರನ್ನು ಬೆಂಬಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲೇ ನಡೆಯುತ್ತಿರುವ ಇಂದಿನ ಈ ಸುದ್ದಿಗೋಷ್ಠಿ ಕುತೂಹಲಕ್ಕೆ ಕಾರಣವಾಗಿದೆ.