More

    ತುಮಕೂರು ಪಾಲಿಕೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ; ವರಿಷ್ಠರ ಅಂಗಳಕ್ಕೆ ತೆನೆ ಚೆಂಡು

    ತುಮಕೂರು: ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮುಂದುವರಿಸುವುದೊ ಅಥವಾ ಬಿಜೆಪಿಯೊಂದಿಗೆ ಹಳೇ ‘ದೋಸ್ತಿ’ ಮರುಪ್ರತಿಷ್ಠಾಪಿಸುವುದೋ ಎಂದು ಜೆಡಿಎಸ್ ಕಾರ್ಪೋರೇಟರ್‌ಗಳ ಜಿಜ್ಞಾಸೆಗೆ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಮನೆಯಲ್ಲಿನ ಉಪಹಾರ ಕೂಟದಲ್ಲೂ ಒಮ್ಮತದ ನಿರ್ಧಾರ ಸಾಧ್ಯವಾಗಲಿಲ್ಲ.

    ಪಾಲಿಕೆಯ 2ನೇ ಅವಧಿಯ ಮೇಯರ್, ಉಪಮೇಯರ್ ಸ್ಥಾನಗಳಿಗೆ ಜ.30ರಂದು ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮುಂದುವರಿಸುವ ಕುರಿತು ಚರ್ಚಿಸಲು ಜೆಡಿಎಸ್ ಕಾರ್ಪೋರೇಟರ್‌ಗಳು ಗುರುವಾರ ಬೆಳಗಿನ ಉಪಹಾರ ನೆಪದಲ್ಲಿ ಶ್ರೀನಿವಾಸ್ ಮನೆಯಲ್ಲಿ ಸೇರಿಕೊಂಡಿದ್ದರು. ಕೆಲವರು ಕೈ ಹಿಡಿಯಲು ಒಲವು ತೋರಿದರೆ, ಇನ್ನೂ ಕೆಲವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಅಭಿವೃದ್ಧಿ ದೃಷ್ಟಿಯ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಹೋಗುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ವರಿಷ್ಠರ ಅಂಗಳಕ್ಕೆ ಚೆಂಡು: ಮೊದಲ ಅವಧಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸದೆ ತಟಸ್ಥವಾಗಿದ್ದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅವಿರೋಧವಾಗಿ ಅಧಿಕಾರ ಹಿಡಿದಿತ್ತು. ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದರೆ ರಾಜಕೀಯವಾಗಿ ನಷ್ಟವೂ ಇಲ್ಲ, ಲಾಭವೂ ಇಲ್ಲ. ಹಾಗಾಗಿ, ಜೆಡಿಎಸ್‌ನ ಕೆಲವು ಕಾರ್ಪೋರೇಟರ್‌ಗಳು ನಗರದ ಹಿತದೃಷ್ಟಿಯಿಟ್ಟುಕೊಂಡು ಬಿಜೆಪಿಯೊಂದಿಗೆ ಹೆಜ್ಜೆ ಹಾಕುವುದೇ ಉತ್ತಮವೆಂದು ಲೆಕ್ಕ ಮುಂದಿಟ್ಟಿದ್ದಾರೆ.

    ಕಾಂಗ್ರೆಸ್‌ನಲ್ಲಿ 3 ಬಣ: ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಪ್ರಬಲವಾಗಿ ಪ್ರತಿಪಾದಿಸಿರುವ ಕಾಂಗ್ರೆಸ್‌ನಲ್ಲಿ ಅಧಿಕಾರ ಗದ್ದುಗೆಗೇರಲು ಬಾರೀ ಪೈಪೋಟಿ ಎದುರಾಗಿದೆ. 3 ಬಣಗಳು ಸೃಷ್ಟಿಯಾಗಿದ್ದು ಫರಿದಾಬೇಗಂ ಪರ ಒಂದು, ಮುಜಿದಾಖಾನಂ ಪರ ಮತ್ತೊಂದು ಹಾಗೂ ಕಾಂಗ್ರೆಸ್ ಬೆಂಬಲಿಸಿರುವ ಪಕ್ಷೇತರ ಸದಸ್ಯೆ ನೂರುನ್ನಿಸಾ ಪರ ಒಂದು ಬಣ ಸೇರಿ ಕಾಂಗ್ರೆಸ್‌ನಲ್ಲೀಗ 3 ಬಣಗಳಾಗಿವೆ. ಫರಿದಾಬೇಗಂ ಪರ ವರಿಷ್ಠರು ಒಲವು ತೋರಿದ್ದಾರೆ ಎನ್ನಲಾಗಿದೆ.

    ಸಭೆಯಲ್ಲಿದ್ದ ಪ್ರಮುಖರು: ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆದ ಉಪಾಹಾರ ಕೂಟದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಆರ್.ಸಿ. ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಮುಖಂಡರಾದ ಗಂಗಣ್ಣ, ಬೆಳ್ಳಿ ಲೋಕೇಶ್ , ಕೆಂಪರಾಜು ಸೇರಿ ಮೇಯರ್ ಲಲಿತಾ ಪತಿ ಬದಲು ರವೀಶ್ ಜಹಾಂಗೀರ್, ಕಾರ್ಪೋರೇಟರ್ ನಾಜಿಮಾಬಿ ಹಾಗೂ ಶಶಿಕಲಾ ಬದಲು ಅವರ ಪತಿ, ಎಲ್ಲ ಕಾರ್ಪೋರೇಟರ್‌ಗಳಿದ್ದರು.

    27ಕ್ಕೆ ಅಜ್ಞಾತ ಸ್ಥಳಕ್ಕೆ ದಳಪತಿಗಳು !: ಕಾಂಗ್ರೆಸ್ ಅಥವಾ ಬಿಜೆಪಿ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಜಿಜ್ಞಾಸೆ ಹಿನ್ನೆಲೆಯಲ್ಲಿ ಜೆಡಿಎಸ್‌ನಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಜ.27ಕ್ಕೆ ಕಾರ್ಪೋರೇಟರ್‌ಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲು ಸಭೆಯಲ್ಲಿ ಪಕ್ಷದ ಜಿಲ್ಲಾ ಮುಖಂಡರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

    ವರಿಷ್ಠರ ಗಮನಕ್ಕೆ ತರಲು ನಿರ್ಧಾರ: ಕಾರ್ಪೋರೇಟರ್‌ಗಳ ‘ಭಿನ್ನ’ ಅಭಿಪ್ರಾಯಗಳಿಂದ ಕಾಂಗ್ರೆಸ್ ಜತೆ ಮೈತ್ರಿ ಮುಂದುವರಿಸಬೇಕೆಂಬ ಬಗ್ಗೆ ಸಹಮತಕ್ಕೆ ಬರಲಿಕ್ಕೆ ಆಗಲಿಲ್ಲ. ಹಾಗಾಗಿ, ಪಕ್ಷದ ವರಿಷ್ಠರ ಗಮನಕ್ಕೆ ತಂದು ನಂತರ ಅಂತಿಮ ನಿರ್ಧಾರ ಕೈಗೊಳ್ಳಲು ಜಿಲ್ಲೆಯ ಮುಖಂಡರು ನಿರ್ಧರಿಸಿದರು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts