ಜೆಡಿಎಸ್‌ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ: ಅಚ್ಚರಿ ಹೇಳಿಕೆ ನೀಡಿದ ಜೆಡಿಎಸ್‌ ಸಚಿವ ಜಿ ಟಿ ದೇವೇಗೌಡ

ಮೈಸೂರು: ಮೈತ್ರಿ ಸರಿಯಾಗಿ ಕೆಲಸ ಮಾಡಿಲ್ಲ. ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮೈಸೂರು- ಕೊಡಗು ಲೋಕಸಭಾ ಚುನಾವಣೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡಬೇಕಿತ್ತು. ಮೈತ್ರಿಯಲ್ಲಿ ಎರಡೂ ಕಡೆ ತಪ್ಪಾಗಿದೆ. ಸ್ಥಳೀಯವಾಗಿ ಜೆಡಿಎಸ್- ಕಾಂಗ್ರೆಸ್ ಜಿದ್ದಾಜಿದ್ದಿನ ಚುನಾವಣೆ ನಡೆಸಿದ್ದವು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಜೆಡಿಎಸ್‌ನವರು ಬಿಜೆಪಿಗೆ ವೋಟ್ ಹಾಕಿದ್ದಾರೆ. ಉದ್ಬೂರು ಗ್ರಾಮ ಪಂಚಾಯಿತಿ ಸೇರಿದಂತೆ ಕೆಲವು ಕಡೆ ಹೀಗಾಗಿದೆ ಎಂದು ತಿಳಿಸಿದರು.

ಒಂದು ವೇಳೆ ಜೆಡಿಎಸ್- ಕಾಂಗ್ರೆಸ್ ಒಟ್ಟಾಗಿದ್ದರೆ ಬಿಜೆಪಿಗೆ 5 ಸ್ಥಾನ ಗೆಲ್ಲುವುದಕ್ಕೂ ಜಾಗ ಇರುತ್ತಿರಲಿಲ್ಲ. ನಾವು ತಡವಾಗಿ ಮೈತ್ರಿ ಮಾಡಿಕೊಂಡೆವು. ಪರಿಣಾಮ ಕಾರ್ಯಕರ್ತರು ಒಟ್ಟಾಗಲು ಸಾಧ್ಯವಾಗಲಿಲ್ಲ. ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪರ ಕೆಲಸ ಮಾಡಿಲ್ಲ ಎಂಬ ಆರೋಪಗಳಿದ್ದ ಬೆನ್ನಲ್ಲೇ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಬಹಿರಂಗವಾಗಿಯೇ ಸಚಿವ ಜಿಟಿಡಿ ಒಪ್ಪಿಕೊಂಡಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ಅದು ಕೇಂದ್ರದಲ್ಲಿ ಯಾರು ಪ್ರಧಾನಿಯಾಗಬೇಕು ಎಂಬುದರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಡೆಡ್‌ಲೈನ್ ಫಿಕ್ಸ್ ಆಗುತ್ತಲೇ ಇದೆ. ಕುಮಾರಸ್ವಾಮಿ ಸಿಎಂ, ಡಾ.ಜಿ.ಪರಮೇಶ್ವರ್ ಡಿಸಿಎಂ ಆದಾಗಿನಿಂದಲೂ ಹಲವಾರು ಬಾರಿ ಡೆಡ್‌ಲೈನ್ ಫಿಕ್ಸ್ ಆಗಿದೆ. ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)