ಮಡಿಕೇರಿ:
೨೦೨೩ರ ವಿಧಾನಸಭಾ ಚುನಾವಣೆ ಕೊಡಗಿನಲ್ಲಿ ಜೆಡಿಎಸ್ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ. ಮಡಿಕೇರಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ನಾಪಂಡ ಮುತ್ತಪ್ಪ ಶೇ.೪ರಷ್ಟು ಮಾತ್ರ ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದು, ವಿರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ನ ಮನ್ಸೂರ್ ಅಲಿ ಅವರಿಗೆ ನೋಟಾಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮತಗಳು ಬಿದ್ದಿದೆ. ಮತ್ತೊಂದು ಕಡೆ ಬಿಜೆಪಿ ಸೋತಿದ್ದರೂ ಎರಡೂ ಕಡೆಯಲ್ಲಿ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಮತ ಗಳಿಸಿದೆ.
ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ ಕೂಡಲೇ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಕ್ಷೇತ್ರಾದ್ಯಂತ ಚಟುವಟಿಕೆಯಿಂದ ಇದ್ದ ನಾಪಂಡ ಮುತ್ತಪ್ಪ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದ್ದರು. ಪಕ್ಷದಿಂದ ಪ್ರಚಾರಕ್ಕಾಗಿ ಭವಾನಿ ರೇವಣ್ಣ ಹೊರತು ಪಡಿಸಿ ಬೇರೆ ಯಾರು ಬಾರದಿದ್ದರೂ ತಾವೇ ಪಂಚರತ್ನ ರಥ ಯಾತ್ರೆ ನಡೆಸುವ ಮೂಲಕ ಮಡಿಕೇರಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ಕೊಡಗಿನಲ್ಲೇ ಸಂಚಲನ ಮೂಡಿಸಿದ್ದರು. ನಾಮಪತ್ರ ಸಲ್ಲಿಕೆ ನಂತರ ಮುತ್ತಪ್ಪ ಅವರ ಪ್ರಚಾರ ವೈಖರಿ ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರನ್ನೇ ದಂಗುಬಡಿಸಿತ್ತು. ಆದರೆ ಮತದಾನದ ಹಿಂದಿನ ದಿನ ಅವರೇ ಹೇಳಿಕೊಂಡಂತೆ ಸಂಪನ್ಮೂಲ ಕೊರತೆ ಕಾರಣ ನೀಡಿ ತೆಗೆದುಕೊಂಡ ನಿರ್ಧಾರ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಮುಂದಿನ ಭವಿಷ್ಯದ ಬಗ್ಗೆ ಕಾರ್ಯಕರ್ತರು ಆತಂಕಪಡುವಂತೆ ಮಾಡಿದೆ.
ಚಲಾವಣೆ ಆದ ಮತಗಳ ಪೈಕಿ ಶೇ. ೪ರಷ್ಟು ಅಂದರೆ ೬,೨೩೩ ಮತಗಳು ಮಾತ್ರ ಮುತ್ತಪ್ಪ ಅವರಿಗೆ ಬಂದಿದೆ. ಈ ಹಿಂದೆ ೨೦೧೮ರಲ್ಲಿ ಜೀವಿಜಯ ಅವರು ಸ್ಪರ್ಧೆ ಮಾಡಿದ್ದ ಸಂದರ್ಭ ಪಕ್ಷ ಶೇ. ೩೨ರಷ್ಟು ಮತ ಗಳಿಸುವ ಮೂಲಕ ೨ನೇ ಸ್ಥಾನದಲ್ಲಿ ಇತ್ತು. ೨೦೧೩ರಲ್ಲೂ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಿ.ಎ. ಜೀವಿಜಯ ಶೇ. ೪೮ರಷ್ಟು ಮತ ಗಳಿಸಿ ತೀವ್ರ ಪೈಪೋಟಿ ಕೊಡುವ ಮೂಲಕ ಅಂದಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಬೆವರಿಳಿಸಿದ್ದರು. ಇಂತಹ ಪಕ್ಷ ಪ್ರಸಕ್ತ ಚುನಾವಣೆಯಲ್ಲಿ ಶೋಚನೀಯ ಸ್ಥಿತಿ ತಲುಪಿದೆ.
ವಿರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಈಗ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿಗೆ ಈಗಿನ ಅಭ್ಯರ್ಥಿ ತಂದಿಟ್ಟಿದ್ದಾರೆ. ಇಲ್ಲಿ ನೋಟಾಕ್ಕೆ ೧,೬೩೬ ಮತ ಬಂದಿದ್ದರೆ, ಜೆಡಿಎಸ್‌ನ ಮನ್ಸೂರ್ ಅಲಿ ಕೇವಲ ೧,೧೨೧ ಮತಗಳನ್ನು ಮಾತ್ರ ಪಡೆದಿಕೊಂಡಿದ್ದಾರೆ. ಚಲಾವಣೆಯಾದ ಮತಗಳಲ್ಲಿ ಶೇ.೧ರಷ್ಟು ಮತ ಮಾತ್ರ ಇವರಿಗೆ ಬಂದಿದೆ. ೨೦೧೮ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದ ಸಂಕೇತ್ ಪೂವಯ್ಯ ೧೧,೨೨೪ ಮತಗಳನ್ನು ಪಡೆದುಕೊಂಡು ಶೇ. ೭ರಷ್ಟು ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ೨೦೧೩ರಲ್ಲಿ ಜೆಡಿಎಸ್ ಹುರಿಯಾಳು ಆಗಿದ್ದ ದಂಬೆಕೋಡಿ ಮಾದಪ್ಪ ೫,೮೮೦ ಮತಗಳನ್ನು ಪಡೆದುಕೊಂಡಿದ್ದರು. ಈ ಮೂಲಕ ಅಲ್ಪಸ್ವಲ್ಪ ಉಸಿರಾಡುವಂತಿದ್ದ ಪಕ್ಷವನ್ನು ಈಗ ವೆಂಟಿಲೇಟರ್‌ಗೆ ಕಳುಹಿಸಿದಂತಾಗಿದೆ.
ಬಿಜೆಪಿ ಎರಡು ಕ್ಷೇತ್ರಗಳನ್ನು ಕಳೆದುಕೊಂಡಿದ್ದರೂ ಮತ ಗಳಿಕೆಯಲ್ಲಿ ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಸಾಧನೆ ಮಾಡಿದೆ. ಮಡಿಕೇರಿ ಕ್ಷೇತ್ರದಲ್ಲಿ ಎಂ.ಪಿ ಅಪ್ಪಚ್ಚುರಂಜನ್ ೮೦,೪೭೭ ಮತಗಳನ್ನು ಗಳಿಸಿ ಶೇ. ೪೫ರಷ್ಟು ಮತ ಪಡೆದುಕೊಂಡಿದ್ದರೆ, ೨೦೧೮ರ ಚುನಾವಣೆಯಲ್ಲಿ ೭೦,೬೩೧ ಮತಗಳನ್ನು ಗಳಿಸಿ ಶೇ. ೪೨ರಷ್ಟು ಮತ ಪಡೆದುಕೊಂಡಿದ್ದರು. ವಿರಾಜಪೇಟೆ ಕ್ಷೇತ್ರದಲ್ಲಿ ಕೆ.ಜಿ. ಬೋಪಯ್ಯ ಈ ಚುನಾವಣೆಯಲ್ಲಿ ೭೯,೫೦೦ ಮತಗಳನ್ನು ಪಡೆದು ಶೇ.೪೭ರಷ್ಟು ಮತ ಗಳಿಸಿದ್ದರೆ. ೨೦೧೮ರ ಚುನಾವಣೆಯಲ್ಲಿ ೭೭,೯೪೪ ಮತಗಳನ್ನು ಪಡೆದುಕೊಂಡಿದ್ದರು. ಆದರೆ ಶೇಕಡವಾರು ಪ್ರಮಾಣದಲ್ಲಿ ಶೇ.೪೯ರಷ್ಟು ಮತ ಬಂದಿತ್ತು. ಈ ಬಾರಿ ಶೇ. ೨ರಷ್ಟು ಮತಗಳನ್ನು ಕಳೆದುಕೊಂಡಿದ್ದಾರೆ.