ಆಟೋ ಬಾಡಿಗೆ ಕೇಳಿದ್ದಕ್ಕೆ ಚಾಕುವಿನಿಂದ ಇರಿತ

ಜಯಪುರ: ಆಟೋ ಬಾಡಿಗೆ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬ ಚಾಲಕನಿಗೆ ಹಣ ನೀಡದೆ ಆತನಿಗೇ ಕಾರದಪುಡಿ ಎರಚಿ ಚಾಕುವಿನಿಂದ ಇರಿದ ಘಟನೆ ಕಟ್ಟೆಮನೆ ಸಮೀಪದ ಮಕ್ಕಿಮನೆಯಲ್ಲಿ ನಡೆದಿದೆ. ಆರೋಪಿ ಮಕ್ಕಿಮನೆಯ ದಿನೇಶ್​ನನ್ನು ಬಂಧಿಸಲಾಗಿದೆ. ಮಕ್ಕಿಮನೆ ಚಂದ್ರು ಅವರ ಮಗ ದಿನೇಶ್, ಶನಿವಾರ ರಾತ್ರಿ 10 ಗಂಟೆಗೆ ಕೊಪ್ಪದಿಂದ ಮಕ್ಕಿಮನೆಗೆ ತೆರಳಲು ಹರೀಶ್ ಅವರ ಆಟೋವನ್ನು ಬಾಡಿಗೆ ಮಾಡಿಕೊಂಡು ಬಂದಿದ್ದಾನೆ. ತನ್ನ ಮನೆ ಬಳಿ ಇಳಿದ ಬಳಿಕ ಆಟೋ ಚಾಲಕ ಹರೀಶ್ ಬಾಡಿಗೆ ಹಣ ಕೇಳಿದ್ದಾನೆ. ಆಗ ಹರೀಶ್ ಮೇಲೆ ದಿನೇಶ್ ಮೇಲೆ ಖಾರದ ಪುಡಿ ಎರಚಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ. ತಪ್ಪಿಸಿಕೊಂಡು ಬಂದ ಹರೀಶ್ ಕೂಡಲೇ ಜಯಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಎಎಸ್​ಐ ಸೂರಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಕಾಡಿನ ಬಂಡೆ ನಡುವೆ ಅವಿತು ಕುಳಿತಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.