ಸಮ್ಮೇಳನಾಧ್ಯಕ್ಷರಾಗಿ ಡಾ.ಯೋಗಣ್ಣ ಆಯ್ಕೆ

ಮೈಸೂರು: ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ವತಿಯಿಂದ ಮಂಗಳೂರಿನಲ್ಲಿ ಮೇ 26ರಂದು ನಡೆಯುವ ಕನ್ನಡ ವೈದ್ಯ ಬರಹಗಾರರ ಪ್ರಥಮ ರಾಜ್ಯ ಸಮ್ಮೇಳನಾಧ್ಯಕ್ಷರಾಗಿ ನಗರದ ವೈದ್ಯ ಸಾಹಿತಿ, ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಆಯ್ಕೆಯಾಗಿದ್ದಾರೆ.

ಸಮ್ಮೇಳನದಲ್ಲಿ ವೈದ್ಯಕೀಯ ವೃತ್ತಿಯ ತಲ್ಲಣಗಳು, ವಿನೋದ ಪ್ರಸಂಗಗಳು, ವೈದ್ಯಕೀಯ ಸಾಹಿತ್ಯ ಸೇರಿ ಆರು ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಅಣ್ಣಯ್ಯ ಕುನಾಲ್ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಪ್ರಾದೇಶಿಕ ಭಾಷೆಯೊಂದರಲ್ಲಿ ದೇಶದಲ್ಲಿ ನಡೆಯುತ್ತಿರುವ ಪ್ರಥಮ ಕನ್ನಡ ವೈದ್ಯ ಬರಹಗಾರರ ಸಮ್ಮೇಳನ ಇದಾಗಿದೆ. ಅಂದಾಜು 300 ವೈದ್ಯ ಬರಹಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್, ಐಎಂಎ ರಾಜ್ಯಾಧ್ಯಕ್ಷ ಡಾ.ಅನ್ನದಾನಿ ಮೇಟಿ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.