ಜಯಲಲಿತಾ ಸಾವು ಪ್ರಕರಣ: ಲಂಡನ್​ನ ವೈದ್ಯ ರಿಚರ್ಡ್​ ಬೀಲ್​ಗೆ ಸಮನ್ಸ್​!

ಚೆನ್ನೈ: ಜಯಲಲಿತಾ ಅವರ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ತನಿಖಾ ಆಯೋಗ ಲಂಡನ್​ ಮೂಲದ ವೈದ್ಯ ಡಾ. ರಿಚರ್ಡ್​ ಬೀಲ್​ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​​ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ವೈದ್ಯ ಬೀಲ್​ ಅವರು ಜ.09ರಂದು ಆಯೋಗದ ಎದುರು ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಒಳಪಡಲಿದ್ದಾರೆ.

ಇದರ ಜತೆಗೇ, ತಮಿಳುನಾಡಿನ ಆರೋಗ್ಯ ಸಚಿವ ಸಿ. ವಿಜಯಬಾಸ್ಕರ್ ಅವರಿಗೆ ಜ.7ರಂದು ಮತ್ತು ​ ಉಪ ಮುಖ್ಯಮಂತ್ರಿ ಪನ್ನೀರ್​ಸೆಲ್ವಮ್​ ಅವರು ಜ.8ರಂದು ಆಯೋಗದ ಮುಂದೆ ಹಾಜರಾಗಬೇಕು ಎಂದೂ ಸಮನ್ಸ್​​ ಜಾರಿಯಾಗಿದೆ. ಅಲ್ಲದೆ, ಲೋಕಸಭೆಯ ಉಪ ಸ್ಪೀಕರ್​ ತಂಬಿದೊರೈ ಅವರಿಗೂ ಸಮನ್ಸ್​​ ​ ನೀಡಲಾಗಿದ್ದು, ಅವರಿಗೆ ಜ.11ರಂದು ವಿಚಾರಣೆ ನಿಗದಿ ಮಾಡಲಾಗಿದೆ.

ಜಯಲಲಿತಾ ಅವರ ಸಾವಿನ ಕುರಿತಂತೆ ತಮಿಳುನಾಡಿನಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎ. ಆರ್ಮುಗಸ್ವಾಮಿ ಅವರ ನೇತೃತ್ವದಲ್ಲಿ ತನಿಖಾ ಆಯೋಗ ರಚನೆ ಮಾಡಿದೆ. ಈ ಆಯೋಗದ ಅವಧಿಯನ್ನು ತಮಿಳುನಾಡು ಸರ್ಕಾರ ಈಗಾಗಲೇ ಎರಡು ಬಾರಿ ವಿಸ್ತರಿಸಿದೆ.

ಈ ನಡುವೆ, ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಿದ್ದ ಚೆನ್ನೈನ ಅಪೋಲೊ ಅಸ್ಪತ್ರೆ ಶುಕ್ರವಾರ ತನಿಖಾ ಆಯೋಗಕ್ಕೆ ಅಫಿಡವೆಟ್​ವೊಂದನ್ನು ಸಲ್ಲಿಸಿದ್ದು, ಜಯಾ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು ವೈದ್ಯರು, ತಜ್ಞ ರಿರುವ ಸಮಿತಿಯನ್ನು ರಚಿಸಲು ಮನವಿ ಮಾಡಿಕೊಂಡಿದೆ.

One Reply to “ಜಯಲಲಿತಾ ಸಾವು ಪ್ರಕರಣ: ಲಂಡನ್​ನ ವೈದ್ಯ ರಿಚರ್ಡ್​ ಬೀಲ್​ಗೆ ಸಮನ್ಸ್​!”

Comments are closed.