ಆಸ್ಪತ್ರೆ ಮುಂದೆ ಅಮ್ಮ ಅಭಿಮಾನಿಗಳು

ಚೆನ್ನೈ: ಹೃದಯಾಘಾತ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳಲು ಸಹಸ್ರಾರು ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಅಭಿಮಾನಿಗಳ ಗುಂಪನ್ನು ತಡೆಯಲ್ಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸಹಸ್ರಾರು ಮಹಿಳಾ ಅಭಿಮಾನಿಗಳು ಆಸ್ಪತ್ರೆ ಮುಂದೆ ಕುಳಿತು ಕಣ್ಣೀರಿಡುತ್ತಿದ್ದಾರೆ. ಅಭಿಮಾನಿಗಳ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ಮಾಡಿರುವ ಬಗ್ಗೆ ವರದಿಯಾಗಿದೆ.

ತತ್ಕ್ಷಣಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಕರ್ನಾಟಕದ ಎರಡು ಬಸ್ಗಳ ಮೇಲೆ ಕಲ್ಲು ತೂರಾಟವೂ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗಡಿ ಭಾಗದಿಂದ ಮುಂದಕ್ಕೆ ಕರ್ನಾಟಕದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ತಮಿಳುನಾಡಿನಲ್ಲಿರುವ ಬಸ್ಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗುತ್ತಿದೆ. ಅಲ್ಲದೇ ತಮಿಳುನಾಡಿನಲ್ಲಿರುವ ಪ್ರವಾಸಿ ಕನ್ನಡಿಗರು ಕರ್ನಾಟಕದತ್ತ ಹೆಜ್ಜೆ ಹಾಕುತ್ತಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿದೆ.

ದೆಹಲಿಯಿಂದ ವೈದ್ಯರ ತಂಡ ಆಗಮನ

ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುವ ಸಲುವಾಗಿ ದೆಹಲಿಯಿಂದ ಈಗಾಗಲೇ ತಜ್ಞ ವೈದ್ಯರ ತಂಡವೊಂದು ಚೆನ್ನೈಗೆ ಆಗಮಿಸುತ್ತಿದೆ. ಎಂಟು ಗಂಟೆಯ ವೇಳೆಗೆಲ್ಲಾ ಪರೀಕ್ಷೆ ನಡೆಸಿ, ಮುಂದೆ ಯಾವ ರೀತಿಯ ಚಿಕಿತ್ಸೆ ನಡೆಸಬೇಕೆನ್ನುವ ನಿರ್ಧಾರಕ್ಕೆ ಬರಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಮೂಲಗಳ ಪ್ರಕಾರ ಜಯಲಲಿತಾ ಅವರಿಗೆ ಈಗಾಗಲೇ ತಾತ್ಕಾಲಿಕವಾಗಿ ಸಣ್ಣದೊಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎನ್ನುವ ಮಾಹಿತಿ ಇದೆ.

ಇಬ್ಬರು ಕೇಂದ್ರ ಸಚಿವರು ಚೆನ್ನೈಗೆ

ಜಯಲಲಿತಾ ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಸಾಕಷ್ಟು ಬಿಗುವಿನ ವಾತಾವರಣ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದ ಇಬ್ಬರು ಸಚಿವರನ್ನು ಚೆನ್ನೈಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಭಾರಿ ಭದ್ರತೆ

ಜನಪ್ರಿಯ ಸಿಎಂ ಜಯಾ ಅವರು ಮತ್ತೆ ಅನಾರೋಗ್ಯಕ್ಕೆ ಕಾರಣರಾದ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಅಭಿಮಾನಿಗಳು ಆಸ್ಪತ್ರೆಯ ಕಡೆ ದೌಡಾಯಿಸುತ್ತಿದ್ದಾರೆ. ಇದರಿಂದ ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯಬಹುದು ಎನ್ನುವ ಕಾರಣಕ್ಕಾಗಿ ನಗರಾದ್ಯಂತ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಆಸ್ಪತ್ರೆಗೆ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸರ್ಪಗಾವಲು ನೀಡಲಾಗಿದೆ. ಜತೆ ಜೊತೆಗೇ ಗಡಿ ಭಾಗದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *