ಪ್ರಥಮ ಪ್ರಧಾನಿ ನೆಹರುಗೆ ಸಾರಥಿಯಾಗಿದ್ದರು ಈ ಹಿರಿಯಜ್ಜ!

«ಮೂರು ಬಾರಿ ಕಾರಿನಲ್ಲಿ ಕರೆತಂದರೂ ಮಾತನಾಡಿರಲಿಲ್ಲವಂತೆ * ಪ್ರತಿಬಾರಿ 100 ರೂ. ನೀಡುತ್ತಿದ್ದ ಚಾಚಾ»

ಹರೀಶ್ ಮೋಟುಕಾನ ಮಂಗಳೂರು
ಇಂದು ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನ. ಕರಾವಳಿ ನಂಟು ಹೊಂದಿದ್ದ ನೆಹರು ಹಲವು ಬಾರಿ ಮಂಗಳೂರಿಗೆ ಭೇಟಿ ನೀಡಿದ್ದರು. ಆಗ ಅವರಿಗೆ ಸಾರಥಿಯಾಗಿದ್ದ ಅಪರೂಪದ ಹಿರಿಯಜ್ಜ ಸುಳ್ಯದ ಕನಕಮಜಲು ಗ್ರಾಮದ ಕೊರಂಬಡ್ಕ ಮೋನಪ್ಪ ಗೌಡ.
98 ವರ್ಷದಲ್ಲೂ ಆರೋಗ್ಯವಂತರಾಗಿರುವ ಇವರು ಯಾರ ಸಹಾಯವಿಲ್ಲದೆ ಕನಕಮಜಲು ಪೇಟೆಗೆ ಬಂದು ಹೋಗುತ್ತಾರೆ. ಪರಿಚಯಸ್ಥರನ್ನು ಗುರುತು ಹಿಡಿದು ಮಾತನಾಡಿಸುತ್ತಾರೆ. ಸಭೆ, ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ.
ಮೋನಪ್ಪ ಗೌಡ ಮಂಗಳೂರು ತಾಜ್‌ಮಹಲ್ ಸಂಸ್ಥೆಯಲ್ಲಿ 33 ವರ್ಷ ಕಾರು ಚಾಲಕರಾಗಿದ್ದರು. ಆಗ ಲೋಕಸಭಾ ಸದಸ್ಯರಾಗಿದ್ದ ಶ್ರೀನಿವಾಸ ಮಲ್ಯರು ಸುತ್ತಾಡಲು ತಾಜ್‌ಮಹಲ್ ಸಂಸ್ಥೆ ಕಾರುಗಳನ್ನು ಬಾಡಿಗೆಗೆ ಪಡೆಯುತ್ತಿದ್ದರು. ಆಗ ಕಾರಿನ ಚಾಲಕರಾಗಿದ್ದ ಮೋನಪ್ಪ ಗೌಡರು ಮಲ್ಯರೊಂದಿಗೆ ದೆಹಲಿಗೂ ಹೋಗಿ ಬಂದಿದ್ದರು.
ಈ ಸಂದರ್ಭದಲ್ಲಿಯೇ ಮೋನಪ್ಪ ಗೌಡರು ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರಿಗೆ ಸಾರಥಿಯಾದದ್ದು. ನೆಹರು ಮಂಗಳೂರಿಗೆ ಬರುತ್ತಿದ್ದಾಗ ವಿಮಾನ ನಿಲ್ದಾಣದಿಂದ ಅವರನ್ನು ತಾಜ್‌ಮಹಲ್ ಹೋಟೆಲ್‌ಗೆ ಕಾರಿನಲ್ಲಿ ಕರೆ ತರುತ್ತಿದ್ದದ್ದು ಮತ್ತು ಹಿಂತಿರುಗಿ ವಿಮಾನ ನಿಲ್ದಾಣಕ್ಕೆ ಬಿಡುತ್ತಿದ್ದದ್ದು ಮೋನಪ್ಪ ಗೌಡರು. ಹೀಗೆ ಅವರಿಗೆ ಮೂರು ಬಾರಿ ಸಾರಥಿಯಾಗಿದ್ದರು. ನೆಹರು ಮಾತ್ರವಲ್ಲ ಅನೇಕ ರಾಜಕೀಯ ನಾಯಕರನ್ನು, ಉನ್ನತ ಅಧಿಕಾರಿಗಳನ್ನು, ಚಿತ್ರನಟರನ್ನು ಕಾರಿನಲ್ಲಿ ಕರೆ ತಂದಿದ್ದಾರೆ. ಶ್ರೀನಿವಾಸ ಮಲ್ಯರ ಜತೆ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮನೆಯಲ್ಲೂ ವಾಸ್ತವ್ಯ ಹೂಡಿರುವುದನ್ನು ಸ್ಮರಿಸುತ್ತಾರೆ.

6 ವರ್ಷ ಕಾರಂತರ ಸಾರಥಿ
ಪುತ್ತೂರಿನ ಪರ್ಲಡ್ಕದಲ್ಲಿದ್ದ ಡಾ.ಶಿವರಾಮ ಕಾರಂತರು ಕಾರಿಗೆ ಚಾಲಕನನ್ನು ಹುಡುಕುತ್ತಿದ್ದರು. ವಿಷಯ ತಿಳಿದು ಅಲ್ಲಿಗೆ ಹೋದ ಮೋನಪ್ಪ ಗೌಡರನ್ನು ಚಾಲಕನಾಗಿ ಮಾಡಿಕೊಂಡರು. ಬಳಿಕ ಆರು ವರ್ಷ ಕಾಲ ಅವರ ಒಡನಾಡಿಯಾಗಿದ್ದರು. ಕಾರಂತರು ವಿದೇಶಕ್ಕೆ ತೆರಳಿದ ಸಂದರ್ಭ ಅಲ್ಲಿಂದ ಚಾಲಕ ವೃತ್ತಿ ಬಿಟ್ಟು ಬಂದರು.

ಕ್ಲೀನರ್ ಆಗಿದ್ದವರು ಚಾಲಕರಾದರು
ಮೋನಪ್ಪ ಗೌಡರು ಬಾಲ್ಯದಲ್ಲಿ ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ತಂದೆಯ ಜತೆ ಕೃಷಿಯಲ್ಲಿ ತೊಡಗಿಕೊಂಡಿದ್ದ ಅವರು ಬಳಿಕ ಪುತ್ತೂರಿನ ಸಿ.ಪಿ.ಸಿ. ಕಂಪನಿ ವಾಹನಗಳ ಕ್ಲೀನರ್ ಆಗಿ ಸೇರಿ ನಿರ್ವಾಹಕನಾಗಿ ಚಾಲಕರಾದರು. ಲಾರಿ ಚಾಲಕರಾಗಿದ್ದ ಅವರು ಬಳಿಕ ಡಾ.ಶಿವರಾಮ ಕಾರಂತರ ಚಾಲಕರಾದರು. ನಂತರ ತಾಜ್‌ಮಹಲ್‌ನಲ್ಲಿ ಕಾರು ಚಾಲಕರಾಗಿದ್ದರು. ಸಹೋದರನ ಅಕಾಲಿಕ ಮರಣದ ಕಾರಣ 1988ರಲ್ಲಿ ಅನಿವಾರ್ಯವಾಗಿ ಮನೆ ಕಡೆಗೆ ಮುಖ ಮಾಡಬೇಕಾಯಿತು. ಆ ಬಳಿಕ ಕೃಷಿ ಕಾಯಕದಲ್ಲಿ ತೊಡಗಿಕೊಂಡರು.

ನೆಹರು ಅವರು ಪ್ರಯಾಣದ ಸಂದರ್ಭ ನನ್ನೊಂದಿಗೆ ಏನನ್ನೂ ಮಾತನಾಡಿಲ್ಲ. ಅವರು ಮಾತನಾಡುತ್ತಿದ್ದರೆ ನನಗೆ ಉತ್ತರಿಸಲು ಹಿಂದಿಯಾಗಲಿ, ಇಂಗ್ಲಿಷ್ ಆಗಲಿ ಬರುತ್ತಿರಲಿಲ್ಲ. ಮೂರು ಬಾರಿಯೂ ನೆಹರು ಕಾರು ಇಳಿದು ಹೋಗುವಾಗ ನನಗಾಗಿ ಕಾರಿನಲ್ಲಿ ನೂರು ರೂಪಾಯಿ ಇರಿಸಿ ಹೋಗಿದ್ದರು.
ಮೋನಪ್ಪ ಗೌಡ, ಕನಕಮಜಲು, ಸುಳ್ಯ