ಜಾವಾ ಪ್ರಿಯರಿಗೆ ಶುಭ ಸುದ್ದಿ: ನವೆಂಬರ್​ 15ಕ್ಕೆ ಹೊಸ ಬೈಕ್​ನ ಮಾದರಿ ಅನಾವರಣ

ದೆಹಲಿ: ಒಂದು ಕಾಲದಲ್ಲಿ ಭಾರತ ರಸ್ತೆಗಳಲ್ಲಿ ಅಬ್ಬರಿಸಿದ್ದ, ಬಹುಜನಪ್ರಿಯ ಬೈಕ್​ ಜಾವಾದ ಪುನಾರಾಗಮನವಾಗುತ್ತಿದೆ. ಮುಂದಿನ ನವೆಂಬರ್​ 15ರಂದು ಬೈಕ್​ನ ಹೊಸ ಅವತರಣಿಗೆ ಅನಾವರಣಗೊಳ್ಳಲಿದೆ. ಆ ಕ್ಷಣಕ್ಕಾಗಿ ಜಾವಾ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.

ಜಾವಾ ಮೋಟಾರ್​ ಸೈಕಲ್​ ಅನ್ನು ಭಾರತಕ್ಕೆ ಪುನರ್​ ಪರಿಚಯಿಸುವ ಮಹತ್ವಾಕಾಂಕ್ಷೆ ಹೊಂದಿರುವ ಮಹೀಂದ್ರಾ ಕಂಪನಿ ಕಳೆದ ವಾರವಷ್ಟೇ ಉದ್ದೇಶಿತ ಹೊಸ ಮಾದರಿಯ ಜಾವಾ ಎಂಜಿನ್​ ಅನ್ನು ಬಿಡುಗಡೆ ಮಾಡಿತ್ತು. ಹಳೆ ಶೈಲಿಯ, ಅತ್ಯಾಧುನಿಕ ತಂತ್ರಜ್ಞಾನದ ಎಂಜಿನ್​ ಬೈಕ್​ ಪ್ರಿಯರ ಮನಸೂರೆ ಮಾಡಿತ್ತು. ಎಂಜಿನ್​ಗೇ ಫಿದಾ ಆಗಿದ್ದ ಯುವ ಸಮುದಾಯ ಸಂಪೂರ್ಣ ಬೈಕ್​ನ ದರ್ಶನಕ್ಕಾಗಿ ಕಾದು ಕುಳಿತಿರುವಾಗಲೇ ಮಹೀಂದ್ರಾದಿಂದ ಸಂತಸದ ಸಂಗತಿಯೊಂದು ಹೊರ ಬಿದ್ದಿದೆ. ಬರುವ ತಿಂಗಳು, ಅಂದರೆ, ನವೆಂಬರ್​ 15ರಂದು ಬೈಕ್​ನ ಹೊಸ ರೂಪವನ್ನು ಅನಾವರಣ ಮಾಡುವುದಾಗಿ ಮಹೀಂದ್ರಾ ಘೋಷಿಸಿದೆ.

ಜಾವಾದ ಅತ್ಯಾಕರ್ಷಕ ಮತ್ತು ಗಾಂಭೀರ್ಯದ ರಚನೆಗೆ ಮನಸೋತಿದ್ದ ಮಹೀಂದ್ರಾ ಕಂಪನಿ, ಅದನ್ನು ಭಾರತದ ರಸ್ತೆಗಳಿಗೆ ಪುನಃ ಇಳಿಸುವ ಯೋಜನೆ ಹಾಕಿಕೊಂಡಿದೆ. ಬೈಕ್​ನ ಗತ ಕಾಲದ ವೈಭವವನ್ನು ಪುನರ್​ಸ್ಥಾಪಿಸಲೆಂದೇ ಬ್ರಾಂಡ್​ ಅನ್ನು ಖರೀದಿಸಿ, ಭಾರತದಲ್ಲಿ ಉತ್ಪಾದನೆ, ಮಾರಾಟದ ಹಕ್ಕು ಪಡೆದಿದೆ. ಸದ್ಯ ಎಂಜಿನ್​ ಅನ್ನು ಮಾತ್ರ ಬಿಡುಗಡೆ ಮಾಡಿರುವ ಮಹೀಂದ್ರಾ ಕಂಪನಿ, ಹೊಸ ಮಾದರಿಯ ಜಾವಾ ಬೈಕ್​ನ ರಚನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ, ಒಂದೇ ಮಾದರಿಯ ಎಂಜಿನ್​ನ ಮೂರು ಬಗೆಯ ಬೈಕ್​ಗಳನ್ನು ಹೊರ ತರಲು ಕಂಪನಿ ಉದ್ದೇಶಿಸಿದೆ.

ಬೈಕ್​ನ ಎಂಜಿನ್ ಬಿಡುಗಡೆ ಮಾಡಿದ್ದ ಮಹೀಂದ್ರಾ ಕಂಪನಿ, ಹಳೆ ಮಾದರಿಯ ಬೈಕ್​ನ ಎಂಜಿನ್​ನಲ್ಲಿ ಯಾವುದೇ ಬದಲಾವಣೆಯನ್ನೂ ಮಾಡದೆ, ತಂತ್ರಜ್ಞಾನ ಅಡಿಕೆಯೊಂದಿಗೆ ಹೊರತಂದಿರುವುದಾಗಿ ತಿಳಿಸಿತ್ತು. ಎಂಜಿನ್​ 293 ಸಿಸಿ ಸಾಮರ್ಥ್ಯವನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ. ಹೊಸ ಮಾದರಿಯ ಈ ಎಂಜಿನ್​ ಲಿಕ್ವಿಡ್​ ಕೂಲ್ಡ್ ಆಗಿದ್ದು, 27 ಬಿಎಚ್​ಪಿ ಮತ್ತು 28 ಎನ್​ಎಂ ಗರಿಷ್ಠ ಟಾರ್ಕ್​ ಹೊಂದಿದೆ. ಈ ಎಂಜಿನ್​ಗೆ 6 ಸ್ಪೀಡ್​ ಗಿಯರ್​ ಬಾಕ್ಸ್​ ಇದೆ.

ಸದ್ಯ ಭಾರತದ ರಸ್ತೆಗಳಲ್ಲಿ ಅಬ್ಬರಿಸುತ್ತಿರುವ ರಾಯಲ್​ ಎನ್​​ಫೀಲ್ಡ್​ ಬೈಕ್​ಗಳಿಗೆ ಜಾವಾ ಪ್ರಬಲ ಪ್ರತಿಸ್ಪರ್ಧಿ ಎಂದೇ ಬಿಂಬಿತವಾಗಿದ್ದು, ಭಾರತೀಯ ಯುವ ಸಮುದಾಯದಲ್ಲಿ ಹೆಚ್ಚಿನ ನಿರೀಕ್ಷೆಗಳೂ ಇವೆ. ಜಾವಾ ಕಂಪನಿ 1990ರಲ್ಲೇ ಭಾರತದಲ್ಲಿ ತನ್ನ ಬೈಕ್​ಗಳ ಉತ್ಪಾದನೆ ಮತ್ತು ಮಾರಾಟವನ್ನು ನಿಲ್ಲಿಸಿತ್ತು. ಅದರೊಂದಿಗೆ ಹಳೇ ಜಾವಾ ಬೈಕ್​ಗಳು ವಿಂಟೇಜ್​, ರೆಟ್ರೋ ಮಾದರಿಗಳಾದವು. ಮೂರು ದಶಕಗಳ ಹಿಂದೆ ಜಾವಾ ಭಾರತದಲ್ಲಿ ತನ್ನ ಸದ್ದು ನಿಲ್ಲಿಸಿತ್ತಾದರೂ, ಅದರ ಅಭಿಮಾನಿ ಬಳಗಕ್ಕೇನೂ ಕಡಿಮೆ ಇರಲಿಲ್ಲ. ಈಗಲೂ ಅದಕ್ಕೆ ದೇಶಾದ್ಯಂತ ಅಭಿಮಾನಿಗಳಿವೆ. ಜಾವಾ ಕ್ಲಬ್​ಗಳಿವೆ. ಅಗಾಗ್ಗೆ ಅಭಿಮಾನಿಗಳೆಲ್ಲ ಕೂಡಿ ಅದರ ನೆನಪುಗಳನ್ನು ಮೆಲುಕು ಹಾಕುತ್ತಲೇ ಇರುತ್ತಾರೆ. ಆದರೆ, ಇಷ್ಟು ದಿನ ಸೀಮಿತವಾಗಿದ್ದ ಜಾವಾ ಕ್ಲಬ್​ನ ಸದಸ್ಯತ್ಯ ಹೊಸ ಬೈಕ್​ನ ಪುನರಾಗಮನದಿಂದೊಂದಿಗೆ ಮತ್ತಷ್ಟು ಹಿಗ್ಗುವುದಂತೂ ಪಕ್ಕಾ.