ಅರಕಲಗೂಡು : ಇತಿಹಾಸ ಪ್ರಸಿದ್ಧ ಚಿಕ್ಕ ಬೊಮ್ಮನಹಳ್ಳಿ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಮಾ. 28ರಂದು ನೆರವೇರಲಿದೆ. ಸುಕ್ಷೇತ್ರದಲ್ಲಿ ಹಲವು ದಶಕಗಳಿಂದ ರಂಗನಾಥಸ್ವಾಮಿ ಜಾತ್ರೆ ಪ್ರಸಿದ್ಧಿ ಗಳಿಸಿದೆ. ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಈ ಬಾರಿಯೂ ವಿಜೃಂಭಣೆಯಿಂದ ಜಾತ್ರೆ ಜರುಗಲಿದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ರಥೋತ್ಸವದ ಅಂಗವಾಗಿ ಮಾ. 27ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಧರ್ಮ ಧ್ವಜ ಸ್ಥಾಪನೆ ನೆರವೇರಿಸುವ ಮೂಲಕ ಧಾರ್ಮಿಕ ವಿಧಿಗಳಿಗೆ ಚಾಲನೆ ನೀಡಲಾಗುವುದು. 28ರ ಬೆಳಗ್ಗೆ ಸ್ವಾಮಿಯ ಮೂಲ ವಿಗ್ರಹಕ್ಕೆ ಅಭಿಷೇಕ, ಪುಣ್ಯಾಹ, ಹೋಮ, ವಿವಿಧ ಪೂಜೆ ನಡೆಯಲಿವೆ. ಸಂಜೆ 4ಕ್ಕೆ ರಂಗನಾಥಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಲಿದೆ. ಬಳಿಕ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು. ಅರಕಲಗೂಡು ಬಿಜಿಎಸ್ ಕಾಲೇಜು ಪ್ರಾಂಶುಪಾಲ ಮಹೇಶ್ ಹೊಡೆನೂರು ಇದ್ದರು.

TAGGED:jatre news