ಸಂಸೆ ಶ್ರೀ ಪದ್ಮಾವತಿ ದೇವಿ ವಿಜೃಂಭಣೆ ಮಹೋತ್ಸವ

ಕಳಸ: ಸಂಸೆಯ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಜಾತ್ರೆ ಮಹೋತ್ಸವ ಸಂಭ್ರಮದಿಂದ ನಡೆಯಿತು.

ಐದು ದಿನಗಳ ಕಾಲದ ಜಾತ್ರಾ ಮಹೋತ್ಸವಕ್ಕೆ ಊರನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ, ನಿತ್ಯ ನಿಧಿ ಸಹಿತ ಗ್ರಾಮ ಬಲಿ, ಬಸದಿಯಲ್ಲಿ ಭಗವಾನ್ ಶಾಂತಿನಾಥ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಬ್ರಹ್ಮರಥದಲ್ಲಿ ಶಾಂತಿನಾಥ ತೀರ್ಥಂಕರರ ಮತ್ತು ಶ್ರೀ ವರಮಹಾಲಕ್ಷಿ್ಮೕ ವಿರಾಜಮಾನರಾಗುವುದನ್ನು ಕಣ್ತುಂಬಿಸಿಕೊಳ್ಳಲು ಭಕ್ತ್ತರು ಕಾತುರದಿಂದ ಕಾಯುತ್ತಿದ್ದರು. ಮಧ್ಯಾಹ್ನ ಮಂಗಳ ವಾದ್ಯಗಳು, ಛತ್ರಿ ಚಾಮರಗಳೊಂದಿಗೆ ಹೂವಿನ ಅಲಂಕಾರದಿಂದ ಸಿಂಗರಿಸಿದ ಶಾಂತಿನಾಥ ತೀರ್ಥಂಕರರ ಮತ್ತು ವರಮಹಾಲಕ್ಷ್ಮೀ ದೇವರ ಉತ್ಸವ ಮೂರ್ತಿ ಹೊತ್ತುಕೊಂಡು ಬರಲಾಯಿತು.

ದೇವರ ಮೂರ್ತಿ ಕಂಡು ಸೇರಿದ ಸಾವಿರಾರು ಭಕ್ತರು ಭಕ್ತಿ, ಭಾವ ಪರವಶವಾದರು. ಮೂರ್ತಿಗಳನ್ನು ಅಲಂಕೃತ ಬ್ರಹ್ಮ ರಥದಲ್ಲಿ ಕೂರಿಸಲಾಯಿತು. ಶ್ವೇತ ವಸ್ತ್ರಧಾರಿಗಳು ರಥ ಎಳೆದರು.

ರಾತ್ರಿ ದೇವರಮನೆ ದೇವಾಲಯಕ್ಕೆ ಮಾತೃ ಸನ್ನಿಧಾನಕ್ಕೆ ಪದ್ಮಾವತಿ ಅಮ್ಮನವರ ಬಿಜಯ, ಮಲ್ಲೇಶ್ವರದಿಂದ ಧರ್ಮದೇವತೆಗಳ ಭಂಡಾರ ಹಿತ್ತಲಮಕ್ಕಿಗೆ ಬಂದು ಅಮ್ಮನವರನ್ನು ಎದುರುಗೊಂಡು ಆಕರ್ಷಿತರಾಗಿ ಮೆರವಣಿಗೆಯಲ್ಲಿ ಅರಮನೆ ಚಾವಡಿಗೆ ಬರಲಾಯಿತು. ಚಾವಡಿಯಿಂದ ದೇವಸ್ಥಾನಕ್ಕೆ ರಾಜಬೀದಿಯಲ್ಲಿ ಲಾಲಿಕೆ ಜೋಡುಪಲ್ಲಕ್ಕಿ ಉತ್ಸವ ನಡೆದು ಸಮವಸರಣ ಪೂಜೆ ನಂತರ ರಾಜಬೀದಿಯಲ್ಲಿ ಬ್ರಹ್ಮರಥೋತ್ಸವ ನಡೆಯಿತು.

ಗ್ರಾಮ ಪ್ರದಕ್ಷಿಣೆಗೆ ತೆರಳಿದ ದೇವರು ಜಾತಿ, ಮತ, ವರ್ಗ ಭೇದವಿಲ್ಲದೆ ಬ್ರಹ್ಮರಥದಲ್ಲಿ ಕುಳಿತು ಮನೆ, ಮನೆ ಬಾಗಿಲಲ್ಲಿ ನೀಡುವ ಹಣ್ಣು, ಕಾಯಿ, ಫಲ ಪುಷ್ಪಗಳನ್ನು ಸ್ವೀಕರಿಸುತ್ತ ಭಕ್ತರ ಮನದಾಳದಲ್ಲಿರುವ ಸಂಕಷ್ಟಗಳನ್ನು ನಿವಾರಿಸುತ್ತ ಮರಳಿ ದೇಗುಲವನ್ನು ಸೇರಿದರು. ಕಳಸ, ಕುದುರೆಮುಖ, ಜಾಂಬ್ಳೆ, ನೆಲ್ಲಿಬೀಡು, ಮುಳ್ಳೋಡಿ, ಹೊರನಾಡು ಮುಂತಾದ ಗ್ರಾಮಗಳ ಸಾವಿರಾರು ಜನರು ಗಂಧ ಪ್ರಸಾದ ಸ್ವೀಕರಿಸಿದರು.

Leave a Reply

Your email address will not be published. Required fields are marked *