ಲಕ್ಷ್ಮೇಶ್ವರ: ಆದ್ರಳ್ಳಿ ಗ್ರಾಮದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಶಿರಹಟ್ಟಿ ಸಂಸ್ಥಾನಮಠದ ಜ. ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ವೈಭವದಿಂದ ನೆರವೇರಿತು.
ಆದ್ರಳ್ಳಿ ಶ್ರೀಕುಮಾರ ಮಹಾರಾಜರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಖ್ಯಾತ ಜ್ಯೋತಿಷಿ ಆನಂದ ಗುರೂಜಿ ಮತ್ತು ಅವರ ಪುತ್ರನ ಮೆರವಣಿಗೆ ನಡೆಯಿತು.
ಫಕೀರ ಸಿದ್ಧರಾಮ ಜಗದ್ಗುರುಗಳು ಶ್ರೀಮಠದ ಸಂಪ್ರದಾಯದಂತೆ ಧಿರಿಸುಗಳನ್ನು ಧರಿಸಿಕೊಂಡು ಅಡ್ಡಪಲ್ಲಕ್ಕಿ ಏರಿ ಆಶೀರ್ವಾದ ನೀಡಿದರು. ಗ್ರಾಮದಿಂದ ಪ್ರಾರಂಭವಾದ ಮೆರವಣಿಗೆ ಗವಿಸಿದ್ಧೇಶ್ವರ ಗುಡ್ಡದವರೆಗೂ ಸಾಗಿಬಂದಿತು. ಮೆರವಣಿಗೆಯಲ್ಲಿ ಆನೆ, ಒಂಟೆ, ಡೊಳ್ಳು, ನಂದಿಕೋಲ ಕುಣಿತ, ಸೇರಿ ವಿವಿಧ ಕಲಾ ತಂಡಗಳು, ಸಕಲ ವಾಧ್ಯ ವೈಭವಗಳು ಮೇಳೈಸಿದವು. ಗ್ರಾಮದ ನೂರಾರು ಮಹಿಳೆಯರು ತಲೆಯ ಮೇಲೆ ಬುತ್ತಿ, ಪೂರ್ಣ ಕುಂಭ ಹೊತ್ತು ಸಾಗಿದ್ದು ವಿಶೇಷವಾಗಿತ್ತು. ಸಹಸ್ರಾರು ಭಕ್ತರು ಫಕೀರ ಸಿದ್ಧರಾಮ ಮಹಾಸ್ವಾಮಿಜಿ ಕೀ ಜೈ ಎಂಬ ಉದ್ಘೋಷಗಳು ಮುಗಿಲು ಮುಟ್ಟಿದ್ದವು,
ಶ್ರೀ ಮಹಾಂತ ಬಸವಲಿಂಗ ಮಹಾಸ್ವಾಮಿಗಳು, ಉಮೇಶ ವಡ್ಡರ, ನಾಗೇಶ ಲಮಾಣಿ, ಚನ್ನಪ್ಪ ಲಮಾಣಿ, ಅಲ್ಲಾಭಕ್ಷ ವಾಲಿಕಾರ, ಮಾಂತೇಶ ಹರಿಜನ, ಶಂಕರಗೌಡ ಪಾಟೀಲ, ಶೇಖಪ್ಪ ಲಮಾಣಿ, ದೇವಪ್ಪ ಲಮಾಣಿ, ಸುರೇಶ ಲಮಾಣಿ, ಚಂದ್ರಕಾಂತ ಲಮಾಣಿ, ಶೇಖಪ್ಪ ನಾಯಕ, ಪರಮೇಶ ಲಮಾಣಿ ಇದ್ದರು.