ಅಚ್ಚುಕಟ್ಟಾಗಿರಲಿ ಜಾತ್ರಾ ಮಹೋತ್ಸವ

ಹಾಸನ: ಭಕ್ತರಿಗೆ ಯಾವುದೇ ರೀತಿಯ ಅನನುಕೂಲವಾಗದಂತೆ ಅಚ್ಚುಕಟ್ಟಾಗಿ ಹಾಸನಾಂಬ ಜಾತ್ರಾ ಮಹೋತ್ಸವ ಸಂಘಟಿಸಲು ಅಧಿಕಾರಿಗಳು ಶ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚಿಸಿದರು.

ಹಾಸನಾಂಬ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ಧತೆ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶೇಷ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಈಗಾಗಲೆ ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಧಿಕಾರಿಗಳ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿದ್ದೇನೆ. ಸ್ವಚ್ಛತೆಗೆ ಆದ್ಯತೆ ನೀಡಬೇಕು ಹಾಗೂ ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ ವ್ಯವಸ್ಥೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಸುರಕ್ಷತಾ ವ್ಯವಸ್ಥೆ ಬಗ್ಗೆಯೂ ವಿಶೇಷ ನಿಗಾ ವಹಿಸಲಾಗುತ್ತಿದೆ, ವಾಹನದ ಪಾರ್ಕಿಂಗ್, ಪಾಸ್‌ಗಳು ಹಾಗೂ ಪ್ರಸಾದ ವಿತರಣೆಗೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಬೇಕು ಎಂದರು.

ನಗರ ಸ್ವಚ್ಛತೆಯ ಜವಾಬ್ದಾರಿಯನ್ನು ನಗರಸಭೆ ಹಾಗೂ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ದೇವಾಲಯದ ಆವರಣದಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮತ್ತಿತರ ಕಾರ್ಯಗಳನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಬೇಕು ಎಂದು ಸೂಚಿಸಿದರು.

ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲಗಳಾಗುವಂತೆ ಹಾಗೂ ಈ ಹಿಂದಿನ ಲೋಪಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಇದು ಹಾಸನ ನಗರದ ಅಧಿದೇವತೆಯ ಉತ್ಸವ, ಜನರ ಹಬ್ಬ, ಹಾಗಾಗಿ ಇದನ್ನು ಸಾಂಪ್ರದಾಯಿಕವಾಗಿ ಹಾಗೂ ಸಂಭ್ರಮದಿಂದ ಆಚರಿಸಬೇಕು. ಇದರಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯ. ಆದ್ದರಿಂದ ಎಲ್ಲರನ್ನೂ ಒಳಗೊಂಡಂತೆ ಉತ್ಸವ ನಡೆಯಲಿ ಎಂದು ಸಲಹೆ ನೀಡಿದರು.

ಶಾಸಕರ ಸಲಹೆ ಮೇರೆಗೆ ಹಾಸನಾಂಬೆ ದೇಗುಲಕ್ಕೆ ಎಲ್‌ಇಡಿ ದೀಪಾಲಂಕಾರ, ಹೂವಿನ ಅಲಂಕಾರ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಸೆಸ್ಕ್‌ಗೆ ವಹಿಸಲಾಯಿತು. ನಗರ ಪ್ರವೇಶಿಸುವ 6 ರಸ್ತೆಗಳಲ್ಲಿ ಮತ್ತು ದೇವಾಲಯದ ಮುಂಭಾಗದಲ್ಲಿ ಸ್ವಾಗತ ಕಮಾನುಗಳನ್ನು ಹಾಕುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್‌ನಿವಾಸ್ ಸೆಪಟ್ ಮಾತನಾಡಿ, ಭಕ್ತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ವಾಹನ ನಿಲುಗಡೆಗೆ ಅಗತ್ಯ ಸ್ಥಳ ನಿಗದಿಪಡಿಸಲಾಗುವುದು. ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಲಾಗುವುದು ಎಂದರು.

ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಪ್ರಭಾರ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಮಾತನಾಡಿ, ದೇವಾಲಯದಲ್ಲಿ ಈ ಹಿಂದೆ ಅನುಸರಿಸಲಾದ ಕ್ರಮಗಳು, ಈ ಬಾರಿ ಜಾರಿಗೊಳಿಸಲು ಉದ್ದೇಶಿಸಿರುವ ಸುಧಾರಣಾ ಕ್ರಮಗಳ ಬಗ್ಗೆ ವಿವರಿಸಿದರು.

ಉತ್ಸವ ಆರಂಭದ ದಿನ ಜಿಲ್ಲೆಯ ವಿವಿಧ ಕಲಾತಂಡಗಳಿಂದ ನಗರದಾದ್ಯಂತ ಡೊಳ್ಳು ಕುಣಿತ, ವೀರಗಾಸೆ, ಚಂಡೆ, ಕೋಲಾಟ ಮುಂತಾದ ಆಕರ್ಷಕ ಪ್ರದರ್ಶನ ನಡೆಯಲಿವೆ ಎಂದು ಅವರು ಹೇಳಿದರು.

ಈ ಬಾರಿ ದೇವಸ್ಥಾನದ ಮುಂದೆ ಯಾವುದೇ ವೇದಿಕೆ ಕಾರ್ಯಕ್ರಮಗಳು ಇರುವುದಿಲ್ಲ, ಬದಲಾಗಿ ದೇವಸ್ಥಾನದ ಬಾಗಿಲು ಹಾಕುವ ದಿನ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಸಾಂಸ್ಕೃತಿಕ ಮತ್ತು ಕೃತಜ್ಞತೆ ಅರ್ಪಣೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅಲ್ಲಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ. ದೇವಸ್ಥಾನದ ಮುಂದೆ ಯಾವುದೇ ಅಂಗಡಿ ಮುಂಗಟ್ಟುಗಳಿಗೆ ಈ ಬಾರಿ ಅವಕಾಶ ನಿರಾಕರಿಸಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಂ, ಆಧ್ಯಾತ್ಮಿಕ ಪುಸ್ತಕ ಮಾರಾಟಕ್ಕಾಗಿ ಮಳಿಗೆ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು.

ಮುಜರಾಯಿ ತಹಸೀಲ್ದಾರ್ ಶಾರದಾಂಬ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಸಿ.ಎಸ್.ಮಂಜು, ತಹಸೀಲ್ದಾರ್ ಮೇಘನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎನ್.ಕುಂಬಾರ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

 

Leave a Reply

Your email address will not be published. Required fields are marked *