ಹೊನ್ನಾಳಿ: ತಾಲೂಕಿನ ಘಂಟ್ಯಾಪುರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವರ ಕೆಂಡಾರ್ಚನೆ ಮತ್ತು ಜಾತ್ರಾ ಮಹೋತ್ಸವ ಧಾರ್ವಿುಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ನಡುವೆ ಮಂಗಳವಾರ ಸಂಭ್ರಮದಿಂದ ನಡೆಯಿತು.
ವೀರಭದ್ರೇಶ್ವರ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮೂಲಕ ಪೂರ್ವ ಕಾಲದ ಹಳೆಯ ದೇವಸ್ಥಾನದ ಮುಂಭಾಗದಲ್ಲಿ ನಿರ್ವಿುಸಿದ್ದ ಹೊಂಡದವರೆಗೂ ತರಲಾಯಿತು. ಆನಂತರ ವಿಶೇಷ ಪೂಜೆಯೊಂದಿಗೆ ಪಲ್ಲಕ್ಕಿ ಹೊತ್ತ ಭಕ್ತರು ಕೆಂಡ ಹಾಯುವ ಮೂಲಕ ಭಕ್ತರಿಗೆ ಕೆಂಡ ಹಾಯಲು ಅನುವು ಮಾಡಿಕೊಟ್ಟರು. ಮುತ್ತೈದೆಯರು, ಹರಕೆ ಹೊತ್ತ ಭಕ್ತರು ಕೆಂಡ ತುಳಿದು ಭಕ್ತಿ ಸಮರ್ಪಿಸಿದರು. ಪುರವಂತರ ವೀರಗಾಸೆ ನೃತ್ಯ ಗಮನಸೆಳೆಯಿತು.
ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಶಿವಕುಮಾರ್, ಉಪಾಧ್ಯಕ್ಷ ಶಿವಕುಮಾರ ನಾಯ್ಕ, ಸದಸ್ಯರಾದ ಎಸ್.ಡಿ. ರಮೇಶನಾಯ್ಕ, ಲಕ್ಷ್ಮೀಬಾಯಿ, ಹನುಮಂತನಾಯ್ಕ, ಮಮತಾ ಅನಂತ ನಾಯ್ಕ, ಮುಖಂಡ ಕುಬೇರನಾಯ್ಕ, ವಕೀಲ ಕುಬೇರ ನಾಯ್ಕ, ತಾಂಡ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಮಾರುತಿ ನಾಯ್ಕ, ಜಿ.ಪಂ. ಮಾಜಿ ಸದಸ್ಯ ಸುರೇಂದ್ರ ನಾಯ್ಕ, ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಬುಧವಾರ ರಾತ್ರಿ ತರೀಕೆರೆಯ ಕುಮಾರ್ ಮೆಲೊಡಿ ಆಕೆಸ್ಟ್ರಾ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.