More

    ಮತದಾನ ಮಹತ್ವ ಕುರಿತು ಜಾಗೃತಿ ಜಾಥಾ

    ಮಡಿಕೇರಿ:

    ಕೊಡಗು ಜಿಲ್ಲಾಡಳಿತ, ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ, ಕೊಡಗು ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಜಾಥಾ ಶುಕ್ರವಾರ ನಡೆಯಿತು.
    ಜಿ.ಪಂ.ಸಿಇಒ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾವು ಮಹದೇವ ಪೇಟೆಯ ಎ.ವಿ.ಶಾಲೆ ಬಳಿಯಿಂದ ಆರಂಭವಾಗಿ ಮಹದೇವಪೇಟೆಯ ಪ್ರಮುಖ ರಸ್ತೆ ಮೂಲಕ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ ತಲುಪಿತು.

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಈ ವೇಳೆ ಮಾತನಾಡಿ ಮೇ ೧೦ ರಂದು ನಡೆಯುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಅರ್ಹರೆಲ್ಲರೂ ಮತದಾನ ಮಾಡುವ ಮೂಲಕ ಸಂಭ್ರಮಿಸಬೇಕು.
    ಜಿಲ್ಲಾಡಳಿತ, ಸ್ವೀಪ್ ಸಮಿತಿ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮತದಾನ ಮಹತ್ವ ಕುರಿತು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತಪ್ಪದೇ ಮತದಾನ ಮಾಡುವಂತಾಗಬೇಕು ಎಂದರು.
    ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮಾತನಾಡಿ ೧೮ ವರ್ಷ ಪೂರ್ಣಗೊಂಡವರು ಕಡ್ಡಾಯವಾಗಿ ಮತದಾನ ಮಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು.

    ಮತದಾನದ ಮಹತ್ವ ಕುರಿತು ಹಲವು ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಮತದಾನವು ಮೇ ೧೦ ರಂದು ಬೆಳಗ್ಗೆ ೭ ರಿಂದ ಸಂಜೆ ೬ ಗಂಟೆಯವರೆಗೆ ನಡೆಯಲಿದ್ದು, ತಪ್ಪದೇ ಮತ ಚಲಾಯಿಸುವಂತಾಗಬೇಕು. ಪ್ರಜಾಪ್ರಭುತ್ವವ ಹಬ್ಬವನ್ನು ಮತ ಹಾಕುವ ಮೂಲಕ ಸಂಭ್ರಮಿಸಬೇಕು ಎಂದರು.
    ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿದರು.

    ಜಾಥಾದಲ್ಲಿ ವಿಶೇಷಚೇತನರು ತ್ರಿಚಕ್ರ ವಾಹನದ ಮೂಲಕ ಪಾಲ್ಗೊಂಡು ಗಮನ ಸೆಳೆದರು. ಕೊಡಗು ಜಿಲ್ಲಾ ಚುನಾವಣಾ ರಾಯಬಾರಿಗಳಾದ ಬಸವರಾಜ ಬಡಿಗೇರ್, ಕೆ.ಎಸ್.ಈಶ್ವರಿ, ಕೆ.ಯು.ರವಿ ಮುತ್ತಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್, ಜಾನಪದ ಪರಿಷತ್ ತಾಲೂಕು ಘಕಟಕದ ಅಧ್ಯಕ್ಷರಾದ ಅನಿಲ್ ಎಚ್.ಟಿ., ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕನ್ನಂಡ ಕವಿತಾ ಬೊಳ್ಳಪ್ಪ, ಲಯನ್ಸ್ ಕ್ಲಬ್‌ನ ದಾಮೋದರ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ ಮತ್ತಿತರರು ಇದ್ದರು.
    ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳು, ಇತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

    ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ವೃತ್ತದಲ್ಲಿ ಎಲ್ಲರೂ ಒಂದೆಡೆ ಸೇರಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts