ಆಸಿಸ್​, ಕಿವೀಸ್​ ವಿರುದ್ಧದ ಏಕದಿನ ಸರಣಿಯಿಂದ ಬುಮ್ರಾಗೆ ವಿಶ್ರಾಂತಿ​: ಯುವ ಆಟಗಾರರಿಗೆ ಅವಕಾಶ

ನವದೆಹಲಿ: ಆಸಿಸ್​ ವಿರುದ್ಧದ ಟೆಸ್ಟ್​ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಟೀಂ ಇಂಡಿಯಾದ ವೇಗಿ ಜಸ್​ಪ್ರೀತ್​ ಬುಮ್ರಾ ಅವರಿಗೆ ಮುಂದಿನ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ.

ಆಸಿಸ್​ ವಿರುದ್ಧ ನಡೆಯುವ ಏಕದಿನ ಸರಣಿ ಹಾಗೂ ನ್ಯೂಜಿಲೆಂಡ್ ಪ್ರವಾಸದಿಂದ ಬುಮ್ರಾ ಅವರನ್ನು ಕೈಬಿಡಲಾಗಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ 21 ವಿಕೆಟ್​ ಪಡೆಯುವ ಮೂಲಕ ಭಾರತದ ಐತಿಹಾಸಿಕ ಟೆಸ್ಟ್​ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬೌಲರ್​ಗಿರುವ ಕೆಲಸದೊತ್ತಡವನ್ನು ಗಮನದಲ್ಲಿಟ್ಟುಕೊಂಡು ಬುಮ್ರಾ ಅವರಿಗೆ ಸಾಕಷ್ಟು ವಿಶ್ರಾಂತಿ ಬೇಕಾಗಿರುವುದರಿಂದ ಅವರನ್ನು ಮುಂದಿನ ಪಂದ್ಯಗಳಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಬುಮ್ರಾ ಅವರ ಸ್ಥಾನಕ್ಕೆ ಯುವ ಬೌಲರ್​ ಮಹಮ್ಮದ್​ ಸಿರಾಜ್​ ಅವರನ್ನು ಆಯ್ಕೆ ಮಾಡಲಾಗಿದ್ದು, ಶನಿವಾರದಿಂದ ಸಿಡ್ನಿಯಲ್ಲಿ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಜನವರಿ 23ರಿಂದ ನ್ಯೂಜಿಲೆಂಡ್​ನಲ್ಲಿ ಆರಂಭವಾಗುವ ಐದು ಪಂದ್ಯಗಳ ಏಕದಿನ ಸರಣಿಗೆ ಕೊಹ್ಲಿ ನೇತೃತ್ವದ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮತ್ತೊಬ್ಬ ವೇಗಿ ಸಿದ್ದಾರ್ಥ್​ ಕೌಲ್​ ನ್ಯೂಜಿಲೆಂಡ್​ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬುಮ್ರಾ ಸ್ಥಾನವನ್ನು ತುಂಬಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಫೆಬ್ರವರಿ 24ರಿಂದ ಐದು ಪಂದ್ಯಗಳ ಏಕದಿನ ಸರಣಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯಲಿದ್ದು, ಭಾರತ ಆತಿಥ್ಯ ವಹಿಸಿದೆ. ಮೊಹಲಿಯಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. (ಏಜೆನ್ಸೀಸ್​)