ಇಂಗ್ಲೆಂಡ್ ಚೇಸಿಂಗ್ ದಾಖಲೆ: ಜೇಸನ್ ರಾಯ್ ಶತಕ, ಪಾಕ್​ಗೆ ಸರಣಿ ಸೋಲು

ನಾಟಿಂಗ್​ಹ್ಯಾಂ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ 4ನೇ ಬಾರಿ 340ಕ್ಕೂ ಅಧಿಕ ಮೊತ್ತವನ್ನು ಚೇಸಿಂಗ್ ಮಾಡಿದ ವಿಶ್ವದಾಖಲೆಯೊಂದಿಗೆ ಆತಿಥೇಯ ಇಂಗ್ಲೆಂಡ್ ತಂಡ ಸತತ 3ನೇ ಗೆಲುವು ಕಂಡಿದೆ. ಶುಕ್ರವಾರ ನಡೆದ 4ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್, ಪ್ರವಾಸಿ ಪಾಕಿಸ್ತಾನವನ್ನು 3 ವಿಕೆಟ್​ಗಳಿಂದ ಮಣಿಸಿದೆ. ಇದರಿಂದ 5 ಪಂದ್ಯಗಳ ಸರಣಿಯನ್ನು 3-0 ಮುನ್ನಡೆಯೊಂದಿಗೆ ಜಯಿಸಿದ ಇಂಗ್ಲೆಂಡ್ ವಿಶ್ವಕಪ್​ಗೆ ಭರ್ಜರಿಯಾಗಿ ಸಜ್ಜಾಗಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕ್, ಬಾಬರ್ ಅಜಮ್ (115 ರನ್, 112 ಎಸೆತ, 13 ಬೌಂಡರಿ, 1 ಸಿಕ್ಸರ್) ಶತಕದ ನೆರವಿನಿಂದ 7 ವಿಕೆಟ್​ಗೆ 340 ರನ್ ಪೇರಿಸಿತು. ಈ ಸವಾಲು ಬೆನ್ನಟ್ಟಿದ ಇಂಗ್ಲೆಂಡ್, ಜೇಸನ್ ರಾಯ್ (114 ರನ್, 89 ಎಸೆತ, 11 ಬೌಂಡರಿ, 4 ಸಿಕ್ಸರ್) ಬಾರಿಸಿದ ಏಕದಿನ ಕ್ರಿಕೆಟ್​ನ 8ನೇ ಶತಕ ಮತ್ತು ಕೊನೇ ಹಂತದಲ್ಲಿ ಗೆಲುವಿನ ಇನಿಂಗ್ಸ್ ಆಡಿದ ಆಲ್ರೌಂಡರ್ ಬೆನ್​ಸ್ಟೋಕ್ಸ್ (71* ರನ್, 64 ಎಸೆತ, 5 ಬೌಂಡರಿ, 3 ಸಿಕ್ಸರ್) ಅರ್ಧಶತಕದಿಂದ 49.3 ಓವರ್​ಗಳಲ್ಲಿ 7 ವಿಕೆಟ್​ಗೆ 341ರನ್ ಪೇರಿಸಿ ಜಯಿಸಿತು. ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಅಂತಿಮ ಪಂದ್ಯ ಭಾನುವಾರ ಲೀಡ್ಸ್​ನಲ್ಲಿ ನಡೆಯಲಿದೆ.

ಪಾಕಿಸ್ತಾನ:7 ವಿಕೆಟ್​ಗೆ 340 (ಬಾಬರ್ 115, ಫಖರ್ ಜಮಾನ್ 57, ಮೊಹಮದ್ ಹಫೀಜ್ 59, ಶೊಯಿಬ್ ಮಲಿಕ್ 41, ಟಾಮ್ ಕರ›ನ್ 75ಕ್ಕೆ 4), ಇಂಗ್ಲೆಂಡ್: 49.3 ಓವರ್​ಗಳಲ್ಲಿ 7 ವಿಕೆಟ್​ಗೆ 341 (ಜೇಸನ್ 114, ಬೆನ್​ಸ್ಟೋಕ್ಸ್ 71*, ಇಮಾದ್ ವಾಸಿಂ 62ಕ್ಕೆ 2).

ಮಗಳ ಚಿಂತೆಯಲ್ಲೂ ಮಿಂಚಿದ ಜೇಸನ್!

ಕೇವಲ 7 ವಾರ ಪ್ರಾಯದ ಮಗಳು ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಂತೆ ನಡುವೆ ಕಣಕ್ಕಿಳಿದು ಆಡಿದ ಜೇಸನ್ ರಾಯ್, ಇಂಗ್ಲೆಂಡ್​ಗೆ ಅವಿಸ್ಮರಣೀಯ ಜಯ ತಂದರು. ಮಗಳನ್ನು ರಾತ್ರಿ 1.30ಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಬೆಳಗ್ಗೆ 8.30ರ ತನಕ ನಾನು ಅಲ್ಲೆ ಇದ್ದು ನಂತರ ತಂಡದ ಅಭ್ಯಾಸವನ್ನು ಸೇರಿಕೊಂಡೆ ಎಂದು ರಾಯ್ ಹೇಳಿದರು. ಪಂದ್ಯ ಮುಗಿದ ಬೆನ್ನಲ್ಲೆ ರಾಯ್ ಆಸ್ಪತ್ರೆಗೆ ಮರಳಿದರು.

04. ಇಂಗ್ಲೆಂಡ್ ತಂಡ ಒಟ್ಟಾರೆ 4ನೇ, ಈ ವರ್ಷ 3ನೇ ಹಾಗೂ 4 ದಿನಗಳ ಅಂತರದಲ್ಲಿ 2ನೇ ಬಾರಿ 340 ರನ್ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಬೆನ್ನಟ್ಟಿ ಜಯಿಸಿತು. ಭಾರತ 3 ಬಾರಿ ಈ ಸಾಧನೆ ಮಾಡಿದ್ದು ಹಿಂದಿನ ದಾಖಲೆ.

Leave a Reply

Your email address will not be published. Required fields are marked *