ಹಗರಿಬೊಮ್ಮನಹಳ್ಳಿ: ಪಟ್ಟಣ ಸೇರಿ ತಾಲೂಕಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಜನರು ಹೊಸ ಬಟ್ಟೆ, ಹೂ, ಹಣ್ಣು, ದೀಪಾಲಂಕಾರ ವಸ್ತುಗಳು, ಪಟಾಕಿ ಖರೀದಿಯ ಭರಾಟೆಯಲ್ಲಿ ತೊಡಗಿರುವುದು ಕಂಡುಬಂತು.
ಈ ವರ್ಷ ಉತ್ತಮ ಮಳೆಯಾದ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಹಬ್ಬ ಕಳೆಗಟ್ಟಿದೆ. ಪಟ್ಟಣದ ಬಸವೇಶ್ವರ ಬಜಾರದಲ್ಲಿ ಹಬ್ಬದ ಸಾಮಗ್ರಿ ಖರೀದಿಯಲ್ಲಿ ಜನರು ನಿರತರಾಗಿದ್ದರು. ಒಂದು ಮಾರು ಚೆಂಡು ಹೂವಿನ ಬೆಲೆ 150-200 ರೂ., ಮಲ್ಲಿಗೆ 200-250 ರೂ., ಯಾವುದೇ ಹಣ್ಣು ಖರೀದಿಸಿದರೂ ಕೆಜಿಗೆ 200 ರೂ. ಬೆಲೆ ಇದೆ. ಬಾಳೆ, ಕುಂಬಳಕಾಯಿ, ಇತರ ಅಲಂಕಾರಿಕ ವಸ್ತುಗಳ ಮಾರಾಟ ಜೋರಾಗಿತ್ತು.
ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಒಂದೇ ದಿನ ಬಂದಿರುವ ಕಾರಣ ಸಡಗರ, ಸಂಭ್ರಮ ಹೆಚ್ಚಿದೆ. ಈಗ ಮಾರುಕಟ್ಟೆಯಲ್ಲಿ ದೀಪಾಲಂಕಾರ ವಸ್ತುಗಳು ಪ್ಲಾಸ್ಟಿಕ್, ಇತರ ವಸ್ತುಗಳ ಮುಂದೆ ನಮ್ಮ ಮಣ್ಣಿನ ಪ್ರಣತಿಗಳು ಮಾರಟ ಮಂದಗತಿಯಲ್ಲಿದೆ. ಆಧುನಿಕ ಸ್ಪರ್ಶ ನೀಡಿ ಎಷ್ಟೇ ಅಲಂಕಾರ ಮಾಡಿದರೂ ಗ್ರಾಹಕರು ಇತ್ತ ಬರುವುದು ಕಡಿಮೆಯಾಗಿದೆ ಎಂದು ಮಣ್ಣಿನ ದೀಪಗಳ ವ್ಯಾಪಾರಿ ಕುಂಬಾರ ಪಾಂಡಪ್ಪ ಅಳಲು ತೋಡಿಕೊಂಡರು.