More

  ಪ್ರೇಮ, ವಾತ್ಸಲ್ಯ, ಮಮತೆಯ ತ್ರಿವೇಣಿ ಸಂಗಮ!

  ‘ನಾನಿದ್ದೇನೆ… ಹೆದರಬೇಡ…!’

  ಯಾರಾದರೂ ತುಂಬ ಕಷ್ಟದಲ್ಲಿದ್ದಾಗ, ಸಮಸ್ಯೆಯಲ್ಲಿ ಸಿಲುಕಿದಾಗ, ದುಃಖದಲ್ಲಿ ಮುಳುಗಿರುವಾಗ ಅಥವಾ ಜೀವನೋತ್ಸಾಹ ಬತ್ತಿದ ಸಂದರ್ಭದಲ್ಲಿ ಒಂದೇಒಂದು ಮಾತು ಮನುಷ್ಯನನ್ನು ಮಾನಸಿಕವಾಗಿ ಮತ್ತೆ ಜೀವಂತಗೊಳಿಸಬಲ್ಲದು. ಅದುವೇ ಸಾಂತ್ವನ ಎಂಬ ಔಷಧ. ಆ ಸಾಂತ್ವನ ತುಟಿಯಿಂದ ಹೊರಟ ತೋರಿಕೆಯ ಮಾತುಗಳಾಗಿರಬಾರದು, ಹೃದಯದಿಂದ ಹೊರಟ ಭರವಸೆಯ ನುಡಿಗಳಾಗಿರಬೇಕು. ‘ಈ ಕಷ್ಟ ಕರಗಿ ಹೋಗುತ್ತೆ. ನಾನಿದ್ದೇನೆ, ಭಯಬೇಡ…’ ಎಂಬ ಕಳಕಳಿಯ ನುಡಿ ಮನುಷ್ಯನ ಬದುಕನ್ನೇ ಬದಲಿಸಬಲ್ಲದು. ಆದರೂ, ಎಷ್ಟೋ ಜನರು ತಮ್ಮವರೇ ಕಷ್ಟದಲ್ಲಿದ್ದರೂ ಇಂಥ ಸಾಂತ್ವನ ಹೇಳಲು ಹಿಂಜರಿಯುತ್ತಾರೆ. ಬೇರೆಯವರ ಕಷ್ಟ ಕಂಡು ಸುಖಿಸುವ ವಿಘ್ನಸಂತೋಷಿಗಳೂ ಇರುತ್ತಾರೆ. ಅದೇನೆ ಇರಲಿ, ಪ್ರೀತಿ, ವಾತ್ಸಲ್ಯ ಮತ್ತು ಮಮತೆ ಎಂಬ ತ್ರಿವೇಣಿ ಸಂಗಮವನ್ನು ಅಧ್ಯಾತ್ಮದ ಮೂಲಕ ದರ್ಶನ ಮಾಡಿಸಿದ, ಹೃದಯದ ಅಂಧಕಾರವನ್ನು ಕಳೆದ ಸಂತ-ಮಹಂತರು ಇಂದಿಗೂ ಭಕ್ತಕೋಟಿಗೆ ಭರವಸೆಯಾಗಿದ್ದಾರೆ, ಶಕ್ತಿಯಾಗಿದ್ದಾರೆ. ಅಷ್ಟೇ ಅಲ್ಲ, ಮನುಷ್ಯ ಪಥಭ್ರಷ್ಟನಾದಾಗ, ಸರಿಯಾದ ದಿಕ್ಕು ತೋರಿಸಿ, ಸಾರ್ಥಕ ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸುತ್ತಾರೆ.

  ಅವರೊಬ್ಬ ಮಹಾನ್ ಸಂತ, ಅಸಂಖ್ಯ ಜನರ ಆರಾಧ್ಯದೈವ. ದೇವರೇ ಇಲ್ಲ ಎಂದು ವಾದಿಸಿ ದೈವನಿಂದನೆ ಮಾಡಿದ ನಾಸ್ತಿಕರಿಗೆ ಭಗವಂತನ ದರ್ಶನ ಮಾಡಿಸಿದರು, ಧಾರ್ವಿುಕ ಆಚರಣೆಗಳೆಲ್ಲ ಗೊಡ್ಡು ಎಂದು ಮೂದಲಿಸಿದವರಿಗೆ ಶಕ್ತಿಯ ಮಹಿಮೆಯನ್ನು ತೋರಿಸಿಕೊಟ್ಟರು. ಬಡವರು, ದುರ್ಬಲರು ದುಃಖದಿಂದ ಕಣ್ಣೀರು ಹಾಕಿದಾಗ ಪ್ರೇಮದಿಂದಲೇ ಸರ್ವ ಶೋಕವನ್ನೂ ನಿವಾರಿಸಿದರು. ಭೌತಿಕ ಬಡತನವನ್ನೂ, ಆಂತರ್ಯದ ಬಡತನವನ್ನೂ ದೂರ ಮಾಡಿದರು. ಢೋಂಗಿ ಬಾಬಾಗಳು ಎದುರಾದಾಗ ಅಧ್ಯಾತ್ಮದ ನೈಜ ಅರ್ಥ ತಿಳಿಸಿಕೊಟ್ಟು, ಪರಿವರ್ತನೆ ಮಾಡಿದರು. ಪಾಪಿಗಳನ್ನು ಕ್ಷಮಿಸಿ, ಸತ್ಪಥದಲ್ಲಿ ನಡೆಯುವಂತೆ ಮಾಡಿದರು. ಜೀವನದ ಹೆಜ್ಜೆ-ಹೆಜ್ಜೆಯಲ್ಲೂ ಭಗವಂತನ ಅಸ್ತಿತ್ವವನ್ನು, ಅವನ ಪ್ರೇಮಕಾರುಣ್ಯವನ್ನು ತೋರಿಸಿಕೊಟ್ಟ ಅವರು ಸಕಲ ಭಕ್ತಜನರಿಗೆ ನೀಡಿದ ಅಭಯ ‘ಭಿವು ನಕೋಸ್ ಮೀ ತುಝಾ ಪಾಠೀಶಿ ಆಹೆ…!’ (ಹೆದರಬೇಡ, ನಾನು ನಿನ್ನ ಬೆಂಬಲಕ್ಕೆ ಇದ್ದೇನೆ)

  ಹೌದು, ಶ್ರೀಸ್ವಾಮಿ ಸಮರ್ಥ. ದತ್ತಾವತಾರಿಗಳಲ್ಲಿ ಮೂರನೇ ಗುರುಗಳು (ಶ್ರೀಪಾದ ಶ್ರೀವಲ್ಲಭ, ಶ್ರೀ ನರಸಿಂಹ ಸರಸ್ವತಿ, ಶ್ರೀಸ್ವಾಮಿ ಸಮರ್ಥ). ಕರ್ನಾಟಕ-ಮಹಾರಾಷ್ಟ್ರ ಗಡಿಪ್ರದೇಶದಲ್ಲಿರುವ ಸೋಲಾಪುರ ಜಿಲ್ಲೆಯ ಅಕ್ಕಲಕೋಟದಲ್ಲಿ ನೆಲೆಸಿ, ಧರ್ಮ, ನೈತಿಕತೆಯ ವಿಜಯವನ್ನು ಸಾಕ್ಷಾತ್ಕರಿಸಿದವರು. ಸ್ವಾಮಿ ಸಮರ್ಥರೆಂದರೆ ಅದು ಪ್ರೇಮ ಎಂಬ ವಿಶಾಲ ಸಾಗರ. ಅದೆಷ್ಟು ಅಂತಃಕರಣ… ಅವರು ಅಧ್ಯಾತ್ಮ ಸಾಧನೆಯ ಔನ್ನತ್ಯದಲ್ಲಿದ್ದರೂ ಲೌಕಿಕರ ಸಂದೇಹಗಳನ್ನು ನಿವಾರಿಸಿದರು, ಅನುಮಾನಗಳನ್ನು ಪರಿಹರಿಸಿದರು. ಸಮಸ್ಯೆಗಳಿಗೆ ಪರಿಹಾರವಾಗಿ ನಿಂತರು. ಆ ಶಕ್ತಿಯ ಮುಂದೆ ಯಾರೂ ದೊಡ್ಡವರಲ್ಲ, ಜೀವನಕ್ಕಿಂತ ಯಾವುದೂ ಶ್ರೇಷ್ಠವಲ್ಲ ಎಂದು ಸಾರಿದರು. ಅನ್ನಪೂರ್ಣೆ, ಪಾಂಡುರಂಗ ವಿಠ್ಠಲ, ಶಿವನ ರೂಪದಲ್ಲಿ ದರುಶನ ನೀಡಿ ಅಚ್ಚರಿಗೊಳಿಸಿದರು. ಮೊನ್ನೆ ಏಪ್ರಿಲ್ 3 ಸ್ವಾಮಿ ಸಮರ್ಥರ ಪ್ರಕಟ ದಿನ. ದತ್ತಾವತಾರಿ ನರಸಿಂಹ ಸರಸ್ವತಿಗಳು 1457ರ ಹೊತ್ತಲ್ಲಿ ಶ್ರೀಶೈಲದ ಕರ್ದಳಿವನ ಎಂಬ ಸ್ಥಳದಲ್ಲಿ ಅವತಾರವನ್ನು ಕೊನೆಗಳಿಸಿದರು. 350 ವರ್ಷಗಳ ನಂತರ ಅದೇ ಸ್ಥಳದಲ್ಲಿ ಸ್ವಾಮಿ ಸಮರ್ಥರಾಗಿ ಪ್ರಕಟವಾದರು. ಪಂಢರಪುರ ಸೇರಿದಂತೆ ಹಲವು ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತ, ಅವರು ಬಂದು ನೆಲೆನಿಂತದ್ದು ಅಕ್ಕಲಕೋಟದಲ್ಲಿ. ಅಲ್ಲಿ ಚೋಳಪ್ಪ ಎಂಬ ಸದ್ಗೃಹಸ್ಥನ ಮನೆಯಲ್ಲಿ ಅನೇಕ ವರ್ಷಗಳ ಕಾಲ ನೆಲೆಸಿದರು ಮತ್ತು ವಿಶಾಲವಾದ ಆಲದ ಮರ (ವಟವೃಕ್ಷ)ದಡಿ ಕುಳಿತೇ ಭಕ್ತಿಸಾಮ್ರಾಜ್ಯವನ್ನು ಸ್ಥಾಪಿಸಿದರು, ಅಸಂಖ್ಯ ಜನರನ್ನು ಉದ್ಧರಿಸಿದರು. ಹಸಿದವರಿಗೆ ಕೈತುತ್ತು ನೀಡಿದರು, ನೊಂದವರ ಕಣ್ಣೀರು ಒರೆಸಿ, ಕಷ್ಟಗಳನ್ನು ಪರಿಹರಿಸಿದರು. ದುಷ್ಟರಿಗೆ, ಅಧರ್ವಿುಗಳಿಗೆ ಪಾಠ ಕಲಿಸಿದರು. ಪ್ರಸಕ್ತ, ಈ ವಟವೃಕ್ಷವೇ ಸ್ವಾಮಿ ಸಮರ್ಥರ ಸಮಾಧಿ ಮಂದಿರವಾಗಿದ್ದು, ಚೋಳಪ್ಪ ಭಾವು ಮನೆ ಆಶ್ರಮವಾಗಿದೆ. ದಿನವೂ ಸಾವಿರಾರು ಭಕ್ತರು ಇಲ್ಲಿ ಭೇಟಿ ನೀಡುತ್ತಿದ್ದು, ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದಿಂದ ಪ್ರಸಾದದ ವ್ಯವಸ್ಥೆ ಇದೆ. ಯಾತ್ರಿಕರು ಉಳಿದುಕೊಳ್ಳಲು ಭಕ್ತನಿವಾಸಗಳಿವೆ. ಅಕ್ಕಲಕೋಟದ ಖಂಡೋಬಾ ಮಂದಿರದಲ್ಲಿ ಆರಂಭದ ಕೆಲ ದಿನಗಳನ್ನು ಕಳೆದ ಅವರು, ಬಳಿಕ ಸ್ಥಳೀಯ ದರ್ಗಾದಲ್ಲಿಯೂ ಕೆಲ ಸಮಯ ತಂಗಿದ್ದರು. ಬಳಿಕ, ಚೋಳಪ್ಪನ ಭಕ್ತಿಗೆ ಪ್ರಸನ್ನರಾಗಿ ಅವರ ಮನೆಯಲ್ಲಿ ಇದ್ದು, ಭಗವಂತ ಭಕ್ತರ ಹೃದಯದಲ್ಲಿ ಅಷ್ಟೇ ಅಲ್ಲ, ಸಾಮಾನ್ಯರ ಅತೀ ಸಾಮಾನ್ಯ ಮನೆಯಲ್ಲೂ ನೆಲೆಸಬಲ್ಲ ಎಂಬುದನ್ನು ತೋರಿಸಿಕೊಟ್ಟರು.

  ಮಹಾರಾಷ್ಟ್ರದಲ್ಲಿ ಭಕ್ತಿಪರಂಪರೆಗೆ ಬಹುದೊಡ್ಡ ಇತಿಹಾಸ ಮತ್ತು ಶಕ್ತಿಯಿದೆ. ಸಮರ್ಥ ರಾಮದಾಸ ಸ್ವಾಮಿ, ಸಂತ ಜ್ಞಾನೇಶ್ವರ ಮಹಾರಾಜ್, ತುಕಾರಾಂ ಮಹಾರಾಜ್, ಗಜಾನನ ಮಹಾರಾಜ್, ಏಕನಾಥ ಮಹಾರಾಜ್, ಗೊಂದವಲೇಕರ್ ಮಹಾರಾಜ್… ಹೀಗೆ ಶುದ್ಧಭಕ್ತಿಯ ಸಾರ್ಥಕತೆಯಲ್ಲಿಯೇ ಭಗವಂತನನ್ನು ಕಂಡುಕೊಂಡರು. ಸ್ವಾಮಿ ಸಮರ್ಥರು ಅದೇ ಭಕ್ತಿಪ್ರವಾಹವನ್ನು ಮತ್ತಷ್ಟು ವಿಶಾಲಗೊಳಿಸಿದರು. ‘ಜೀವನದ ಉದ್ದೇಶ ಅರ್ಥಮಾಡಿಕೊಳ್ಳಿ’ ಎಂದು ಕಣ್ಣು ತೆರೆಸಿದರು. 21 ವರ್ಷಗಳ ಕಾಲ ಅಕ್ಕಲಕೋಟದಲ್ಲಿ ನೆಲೆಸಿ, 30 ಏಪ್ರಿಲ್, 1878ರಂದು ವಟವೃಕ್ಷದಡಿಯೇ ದೇಹತ್ಯಾಗ ಮಾಡಿದರು. ಅಲ್ಲಿನ ರಾಜನಿಂದ ಹಿಡಿದು ಅಕ್ಕಲಕೋಟದ ಕಡುಬಡವನವರೆಗೂ ಎಲ್ಲರ ಮೇಲೂ ಕೃಪೆ ತೋರಿದರು. ಕ್ರಾಂತಿಕಾರಿ ವಾಸುದೇವ ಬಲವಂತ ಫಡ್ಕೆ ಸಮರ್ಥರ ದರ್ಶನ ಪಡೆದು, ಹೋರಾಟಕ್ಕಾಗಿ ಆಶೀರ್ವಾದ ಕೋರಿದ್ದರು. ಒಣಪಾಂಡಿತ್ಯ ಪ್ರದರ್ಶನದಿಂದ ಯಾವುದೇ ಪ್ರಯೋಜನವಿಲ್ಲ ಎಂದು ವೇದಗಳ ದರ್ಶನ ಮಾಡಿಸಿದ್ದ ಸ್ವಾಮಿ ಸಮರ್ಥರು, ಹೋಳಿಹಬ್ಬದ ಸಂದರ್ಭದಲ್ಲಿ ಹಲವು ಭಕ್ತರ ಮನೆಯಲ್ಲಿ ಏಕಕಾಲದಲ್ಲಿ ಪ್ರಸಾದ ಸ್ವೀಕರಿಸಿದ್ದರು! ಮನುಷ್ಯ ಹೇಗೆ ಬದುಕಬೇಕು ಎಂದು ಬೋಧಿಸಿ, ಆದರ್ಶಗಳನ್ನು ಪ್ರತಿಷ್ಠಾಪಿಸಿದರು.

  ನಮ್ಮಲ್ಲಿ ಶ್ರೇಷ್ಠತನವನ್ನು, ನಿಜವಾದ ಸತ್ವವನ್ನು ಗುರುತಿಸುವಲ್ಲಿ ಬಹುತೇಕರು ಎಡವುತ್ತಾರೆ. ಎಲ್ಲವನ್ನೂ ಪೂರ್ವಗ್ರಹದಿಂದಲೇ, ಅನುಮಾನದಿಂದಲೇ ನೋಡಿ, ಆ ಬಳಿಕ ಮರುಗುತ್ತಾರೆ. ಸ್ವಾಮಿ ಸಮರ್ಥರ ವಿಷಯದಲ್ಲೂ ಹೀಗೇ ಆಯಿತು ಅನ್ನಿ. ಅಸಂಖ್ಯ ಭಕ್ತರು ಅವರನ್ನು ಆರಾಧಿಸುತ್ತಿದ್ದರೂ, ಕೆಲವರು ಅವರನ್ನು ಹೀಯಾಳಿಸಿದರು, ಪರೀಕ್ಷಿಸಿದರು, ಅವಹೇಳನ ಮಾಡಿದರು, ಇನ್ನಿಲ್ಲದಂತೆ ಕಾಟ ಕೊಟ್ಟರು. ಆದರೇನಂತೆ… ಸ್ವಾಮಿ ಸಮರ್ಥರು ಶಿವಸ್ಮರಣೆ ಮಾಡುತ್ತ ಎಲ್ಲರನ್ನೂ ಕ್ಷಮಿಸಿ ಬಿಡುತ್ತಿದ್ದರು. ಮತ್ತೆ ಕೆಲವರಿಗೆ ತಾವು ಯಾರು ಎಂಬುದರ ದರ್ಶನ ಮಾಡಿಸಿ, ಅವರ ಜನ್ಮವನ್ನು ಸಾರ್ಥಕಗೊಳಿಸಿದರು. ತಾವು ನಿಮಿತ್ತಕ್ಕೆ ದೇಹ ಬಿಟ್ಟರೂ, ಶಕ್ತಿ ಎಲ್ಲಿಯೂ ಹೋಗುವುದಿಲ್ಲ ಎಂಬ ಅಭಯ ನೀಡಿದರು. ಹಾಗಾಗಿಯೇ, ಇಂದು ಅಕ್ಕಲಕೋಟಗೆ ಸಾವಿರಾರು ಭಕ್ತರು ಪ್ರತಿನಿತ್ಯ ಬರುತ್ತಾರೆ. ‘ಶ್ರೀ ಸ್ವಾಮಿ ಸಮರ್ಥ, ಜೈ ಜೈ ಸ್ವಾಮಿ ಸಮರ್ಥ’ ಎಂಬ ನಾಮಸ್ಮರಣೆಯಲ್ಲಿ ಎಲ್ಲ ದುಃಖವನ್ನೂ ಮರೆಯುತ್ತಾರೆ. ಅಲ್ಲಿನ ಕಣ-ಕಣದಲ್ಲೂ ಸಮರ್ಥರ ಮಹಿಮೆ, ಲೀಲೆಗಳನ್ನು ಕಾಣಬಹುದು. ಭಕ್ತರಿಗೆ ಬೇರೆ-ಬೇರೆ ರೂಪಗಳಲ್ಲಿ ದರ್ಶನ ನೀಡುವ ಅವರು ಉದ್ಧರಿಸಿದ ಜೀವಗಳೆಷ್ಟೋ, ಕರುಣಿಸಿದ ವರಪ್ರಸಾದಗಳೆಷ್ಟೋ…

  ಬದುಕಿನ ಉದ್ದೇಶ, ಸಾರ್ಥಕತೆ ಬಗ್ಗೆ ವೇದ, ಉಪನಿಷತ್, ಭಗವದ್ಗೀತೆಯಲ್ಲಿ ಹೇಳಿದ್ದರೂ, ನಮ್ಮ ಜನರಿಗೆ ಪ್ರಾಯೋಗಿಕ ನಿದರ್ಶನಗಳು ಬೇಕು. ಸ್ವಾಮಿ ಸಮರ್ಥರು ಅನೇಕ ಸಂದೇಶಗಳ ಮೂಲಕ ಅವನ್ನು ಜನಮಾನಸಕ್ಕೆ ತಲುಪಿಸಿದರು. ಮಾನವೀಯತೆ, ಶುದ್ಧಪ್ರೇಮ, ಭಕ್ತಿಯ ಶಕ್ತಿ ಅನನ್ಯ ಎಂದು ಸಾರಿದರು.

  ಸಮರ್ಥರ ಸಂದೇಶ
  •   ಸುಖ, ಸಮಾಧಾನ, ಶಾಂತಿ ಹಾಗೂ ಆನಂದ-ಇವೇ ಜೀವನದ ನಿಜವಾದ ಐಶ್ವರ್ಯ.
  •   ನೀತಿ, ನ್ಯಾಯ ಮತ್ತು ಕೃಪೆಯೇ ನಿಜವಾದ ಧರ್ಮ.
  •   ಸರ್ವಕಾಲದಲ್ಲಿಯೂ ಕಾರ್ಯತತ್ಪರತೆಯೇ ನಿಜವಾದ ಯಶಸ್ಸು.
  •   ನಿಜರೂಪದ (ಶಕ್ತಿಯ) ಸ್ಪಷ್ಟ ಮತ್ತು ನಿಖರ ಅರಿವೇ ನೈಜ ಜ್ಞಾನ.
  •   ಈ ಮೇಲ್ಕಂಡ ಎಲ್ಲ ಸಂಗತಿಗಳೂ ಇದ್ದು ನಿಸ್ವಾರ್ಥವಾಗಿ ಇರುವುದೇ ವೈರಾಗ್ಯ.
  •   ಯಾರಲ್ಲಿ ಧರ್ಮವಿದೆಯೋ ಅವರಿಗೆ ಜಯ ನಿಶ್ಚಿತ
  •   ವೇಳೆಯ ಅಪವ್ಯಯ ಮಾಡಬಾರದು. ಜೀವನದ ಪ್ರತಿಯೊಂದು ಕ್ಷಣವೂ ಸಾರ್ಥಕವಾಗುವಂತೆ ನೋಡಿಕೊಳ್ಳಿ.
  •   ವಿದ್ವತ್ತಿನ ಮೆರವಣಿಗೆ ಮಾಡುವುದಕ್ಕೆ ಮೊದಲು ಅಂತರಂಗ ಎಷ್ಟು ಶುದ್ಧವಾಗಿದೆ ಎಂದು ಪರೀಕ್ಷಿಸಿಕೊಳ್ಳಿ. ಅಂತರಂಗಶುದ್ಧಿಗೆ ಗಮನ ನೀಡಿ.
  •   ಹೆದರಬೇಡಿ, ನಾನು ನಿಮ್ಮ ಸಂಕಟಗಳನ್ನು ಕಳೆಯುವೆ, ನಿಮ್ಮ ಬೆನ್ನಿಗೆ ಬೆಂಬಲವಾಗಿ ಇರುವೆ.

  ಸಮರ್ಥರ ಆಪ್ತಶಿಷ್ಯರಾದ ಬಾಳಪ್ಪ ಮಹಾರಾಜ್ ಹೇಳುವಂತೆ, ‘ಸದ್ಗುರುವೇ ಟೊಂಕಕಟ್ಟಿ ನಿಂತಿರುವಾಗ ಶಿಷ್ಯನಿಗೆ ಏನು ಚಿಂತೆ? ವಿಶ್ವಾಸವಿಟ್ಟಂತೆ ಫಲ ದೊರೆಯುವುದು. ಮುಖ್ಯವಾಗಿ ಶ್ರದ್ಧೆ ಬೇಕು’. ಹೌದು, ನಮ್ಮಲ್ಲಿ ಈ ಗುರುಪರಂಪರೆಯೇ ಸಾತ್ವಿಕ ಮನಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಿ, ಸಮಾಜದಲ್ಲಿ ಸದಾಚಾರ ಸ್ಥಾಪಿಸುವಂತೆ ಮಾಡಿದೆ. ಸ್ವಾಮಿ ಸಮರ್ಥರನ್ನು ಒಮ್ಮೆ ಸ್ಮರಿಸಿಕೊಂಡರೂ ಅವರ ದಯಾಭಾವ, ಪ್ರೇಮಭಾವ, ಕ್ಷಮಾಗುಣ, ಜ್ಞಾನನಿಧಿ, ವಾತ್ಸಲ್ಯದ ರೂಪಗಳೇ ಕಣ್ಮುಂದೆ ಬರುತ್ತವೆ. ಆ ಮಹಾನ್ ಶಕ್ತಿಯ ಇರುವಿಕೆಯನ್ನು ತೋರಿಸಲೆಂದೇ ಸಮರ್ಥರಂಥ ಮಹಾನುಭಾವರು

  ಭೂವಿಗೆ ಬರುತ್ತಾರೆ, ಲೀಲೆಗಳನ್ನು ಮಾಡುತ್ತಾರೆ. ಆ ಜೀವನದರ್ಶನದಿಂದ ನಾವೇನು ಪಡೆದಿದ್ದೇವೆ, ಅವರ ಸಂದೇಶಗಳಲ್ಲಿ ಎಷ್ಟನ್ನು ಹೃದ್ಗತಗೊಳಿಸಿದ್ದೇವೆ ಎಂಬುದರ ಮೇಲೆ ಬದುಕಿನ ಸಾರ್ಥಕತೆಯಿದೆ. ಭಾರತವನ್ನು ಸದಾ ಕಾಪಾಡುತ್ತಿರುವ ಇಂಥ ಗುರುಪರಂಪರೆಗೆ ನಮೋ ನಮಃ. ಸ್ವಾಮಿ ಸಮರ್ಥರು ತಮ್ಮ ಭಕ್ತರನ್ನೂ, ಜನಸಾಮಾನ್ಯರನ್ನೂ ಅಷ್ಟೇ ಸಮರ್ಥರನ್ನಾಗಿಸಿದರು. ಆ ಸ್ಪಂದನೆಯ ಮಹತ್ವ ಅರ್ಥಮಾಡಿಕೊಂಡರೆ ಹೊಸ ಹೊಳಹುಗಳು ಗೋಚರಿಸಬಹುದು. ಅಲ್ಲವೇ?

  (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts