ಇವರ ಶಕ್ತಿ, ಜೀವನಪ್ರೀತಿಗೆ ವಿಧಿಯೂ ಮಂಡಿಯೂರಿತು!

ವರ ಜೀವನಸಂಘರ್ಷವನ್ನು ಇಟ್ಟುಕೊಂಡು ಕನಿಷ್ಠ ಎರಡಾದರೂ ಪ್ರೇರಣಾದಾಯಿ ಸಿನಿಮಾಗಳನ್ನು ಮಾಡಬಹುದು! ಆರಂಭದಲ್ಲೇ ಹೀಗೇಕೆ ಹೇಳುತ್ತಿದ್ದೇನೆ ಎಂದರೆ, ಹೆಣ್ಣೆಂದರೆ ಅಬಲೆ, ಭೋಗದ ವಸ್ತು, ದುಡಿಯುವ ಯಂತ್ರವೆಂದೇ 21ನೇ ಶತಮಾನದಲ್ಲೂ ಬಿಂಬಿಸಲಾಗುತ್ತಿದೆ, ಅದೇ ನವರಾತ್ರಿ ಹೊತ್ತಲ್ಲಿ ‘ಜೈ ಮಾತಾ ದಿ’ ಎಂದು ಘೋಷಣೆ ಹಾಕಲಾಗುತ್ತೆ! ಎಂಥ ವೈರುಧ್ಯ! ಹೆಣ್ಣೆಂದರೆ ಎಂಥ ಸಂಕಷ್ಟಗಳು ಬಂದರೂ ಎದೆಯೊಡ್ಡಿ ನಿಲ್ಲುವ ಆತ್ಮಶಕ್ತಿ, ದುಷ್ಟಶಕ್ತಿಗಳು ಎದುರಾದರೆ ತಾನೇ ಕಾಳಿಯಾಗಿ ಹೋರಾಡುವ ಗಟ್ಟಿಗಿತ್ತಿ,

ದುಃಖಗಳನ್ನು ನಿವಾಳಿಸಿ ಎಸೆದು ಹೊಸ ಬದುಕು ಆರಂಭಿಸುವ ಉತ್ಸಾಹಗಾರ್ತಿ, ಜೀವನವನ್ನು ಅದಮ್ಯವಾಗಿ ಪ್ರೀತಿಸುವ ಮಹಾಶಕ್ತಿ! ಅದಕ್ಕೆಂದೇ, ದೇವತೆಗಳು ಕೂಡ ಅಸುರಶಕ್ತಿಗಳನ್ನು ನಾಶ ಮಾಡಲು ದೇವಿಯರ ಮೊರೆ ಹೋಗಿದ್ದು! ಮೇಲೆ ಉಲ್ಲೇಖಿಸಿರುವ ಮಹಿಳೆ ಮೂಲಾನಕ್ಷತ್ರ ಎಂಬ ಕಳಂಕವನ್ನು ಸೋಲಿಸಿದರು, ಅದರ ಬೆನ್ನಿಗೆ ಎಚ್​ಐವಿ ಎಂಬ ‘ನಕ್ಷತ್ರ’ ಅಂಟಿಕೊಂಡಾಗ ಅದರೊಂದಿಗೂ ಹೋರಾಡಿದರು. ಆ ವಿಧಿ, ತನ್ನವರು ಎಂದುಕೊಂಡವರೆಲ್ಲ ತಿರುಗಿಬಿದ್ದಾಗಲೂ ಎಷ್ಟು ಕಷ್ಟಗಳು ಬರುತ್ತವೋ ಬರಲಿ ಎಂದು ಜೀವನದೊಂದಿಗೆ ಅಕ್ಷರಶಃ ಹೋರಾಟಕ್ಕಿಳಿದರು. ಗೆಲುವು ತಮ್ಮದಾದಾಗ ಅಂತಃಕರಣದ ವಿಶಾಲ ಲೋಕದಲ್ಲಿ ‘ಆಶ್ರಯ’ ಎಂಬ ಪುಟ್ಟಗೂಡನ್ನು ಕಟ್ಟಿ ಇತರರಿಗೆ ಹೊಸಬಾಳು ನೀಡುತ್ತಿದ್ದಾರೆ, ಬದುಕನ್ನು ಹೊಸದೃಷ್ಟಿಯಿಂದ ನೋಡುವಂತೆ ಪ್ರೇರೇಪಿಸಿ ‘ಇನ್ನೂ ಮಾಡ್ಲಿಕ ಭಾಳ ಕೆಲಸ ಅದಾವು’ ಅಂತ ದಿನಕ್ಕೆ 15-16 ಗಂಟೆ ದುಡಿಯುತ್ತಿದ್ದಾರೆ.

ಸಫಲಾ ನಾಗರತ್ನಾ ಈ ತಾಯಿಯ ಹೆಸರು. ಕುಂದಾನಗರಿ ಎಂಬ ಹೆಗ್ಗಳಿಕೆಯ ಬೆಳಗಾವಿಯಲ್ಲಿ ಜೀವನದ ಕುಂದಾ-ಬೇವು ಎರಡನ್ನೂ ಉಂಡವರು. ಚೆನ್ನಾಗಿ ಓದಿ ಸೇನೆಗೆ ಸೇರಿ ದೇಶಸೇವೆ ಮಾಡಬೇಕು ಎಂಬ ಕನಸನ್ನು ಕಟ್ಟಿಕೊಂಡಿದ್ದ ಅವರಿಗೆ ಬಾಲ್ಯದಲ್ಲಿ ಭರಪೂರ್ ಆಗಿ ದೊರೆತಿದ್ದು ಬಡತನದ ನೋವು-ಬವಣೆ. ಇಬ್ಬರು ಅಣ್ಣಂದಿರು, ಅಕ್ಕ, ಅಪ್ಪ-ಅಮ್ಮ ಇದ್ದ ದೊಡ್ಡ ಕುಟುಂಬ. ಎಸ್​ಎಸ್​ಎಲ್​ಸಿ ಮುಗಿಯುತ್ತಿದ್ದಂತೆ 16ನೇ ವಯಸ್ಸಿಗೆ ಮದುವೆ ಮಾಡಲಾಯಿತು. ಪತಿಗೆ ಅಟೋಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ. ಹೊಸ ಸಂಸಾರ ರೂಪಿಸಿಕೊಳ್ಳುತ್ತಿದ್ದ ಹೊತ್ತಲ್ಲೇ ಆಘಾತ ಎದುರಾಯಿತು. ಒಮ್ಮೆ ರಕ್ತ ನೀಡಲು ಹೋಗಿದ್ದ ಪತಿಗೆ ಯಾವುದೋ ಅಪಸವ್ಯದಿಂದ ಎಚ್​ಐವಿ ಅಂಟಿಕೊಂಡಿತು. ಗಂಡನಿಂದ ನಾಗರತ್ನಾ ಅವರಿಗೂ ಬಂತು. ಇಪ್ಪತ್ತು ವರ್ಷಗಳ ಹಿಂದಿನ ಘಟನೆ ಇದು. ಈಗಿನಂತೆ ಚಿಕಿತ್ಸೆಗಳು ಮುಂದುವರಿದಿರಲಿಲ್ಲ. ಅಷ್ಟೇ ಅಲ್ಲ, ಇವರ ಕುಟುಂಬದ ವೈದ್ಯರೇ ಇವರನ್ನು ಎದುರು ಕೂಡಿಸಿಕೊಂಡು-‘ನೋಡಮ್ಮ ನೀವು ಬದುಕೋದೇ ಮೂರ್ನಾಲ್ಕು ತಿಂಗಳು. ಈ ಅವಧಿಯಲ್ಲಿ ನಿಮಗೆ ಹೇಗೆ ಬೇಕೋ ಹಾಗೆ ಬದುಕಿ ಬಿಡಿ’ ಎಂದರು! ವೈದ್ಯರೇ ಹೀಗೆ ಸಾವಿನ ಭವಿಷ್ಯವಾಣಿ ನುಡಿದ ಮೇಲೆ ಮನೆಯನ್ನು ಸ್ಮಶಾನಮೌನ, ಅಳು ಆವರಿಸಿಕೊಂಡವು. ನಾಗರತ್ನಾ ದೀರ್ಘ ಖಿನ್ನತೆಗೆ ಜಾರಿದರು. ಆದರೂ, ಯಾರ ಮುಂದೆಯೂ ವಿಷಯ ತಿಳಿಸಲಿಲ್ಲ, ಮನೆಮಂದಿಗೂ ಕೂಡ. ನೋವು ಉಣ್ಣುತ್ತ ಯಾವ ತಪ್ಪಿಗೆ ಈ ಶಿಕ್ಷೆ ಎಂದು ಹಣೆಬರಹವನ್ನು ಶಪಿಸತೊಡಗಿದರು. ಇವರದ್ದು ಮೂಲಾನಕ್ಷತ್ರವಾಗಿದ್ದರಿಂದ ಮನೆಯವರು ಮೊದಲೆಲ್ಲ ತಾತ್ಸಾರದಿಂದಲೇ ಕಂಡಿದ್ದರು.

ಅವಕಾಶದ ಎಲ್ಲ ಬಾಗಿಲುಗಳು ಮುಚ್ಚಿದರೂ ಬೆಳಕಿನ ಕಿರಣವೊಂದು ಹೇಗೋ ನುಗ್ಗಿಬರುತ್ತದೆ ಎನ್ನುತ್ತಾರಲ್ಲ ಹಾಗೇ ಇವರ ಜೀವನದಲ್ಲಿ ಭರವಸೆಯಾಗಿ ಬಂದವರು ಬೆಳಗಾವಿಯ ವೈದ್ಯ ಡಾ.ಶಿವರಾಮ್ ‘ಎಚ್​ಐವಿ ಅಂದರೆ ಮಾರಣಾಂತಿಕ ಕಾಯಿಲೆ ಅಲ್ಲ, ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಆರಾಮವಾಗಿ ಬದುಕಬಹುದು’ ಎಂದು ಹೇಳಿ, ಚಿಕಿತ್ಸೆ ಆರಂಭಿಸಿದರು. ಆಗಲೇ ‘ನಾವು ಬದುಕಬೇಕು’ ಎಂಬ ಆಶಾವಾದ ಇವರಲ್ಲಿ ಚಿಗುರೊಡೆದಿದ್ದು. ಮದುವೆಯಾಗಿ 4-5 ವರ್ಷಗಳು ಕಳೆದಿತ್ತು. ದಂಪತಿಗೆ ಮಗುವಿನ ಹಂಬಲ. ಆದರೆ, ಅದಕ್ಕೂ ಎಚ್​ಐವಿ ಅಂಟಿಕೊಂಡರೆ ಎಂಬ ಭಯ! ಮಗುವಿಗೆ ಎಚ್​ಐವಿ ಬರದಂತೆ ತಡೆಯಬಹುದು, ಅಂಥ ಚಿಕಿತ್ಸೆ ಲಭ್ಯ ಎಂದು ಹೇಳಿ ಡಾ.ಶಿವರಾಮ್ ಚಿಕಿತ್ಸೆ ಆರಂಭಿಸಿದರು. ಗರ್ಭೀಣಿಯಾದ ನಾಗರತ್ನಾ ಮತ್ತೆ ಹೊಸ ಕನಸುಗಳನ್ನು ಹೆಣೆಯತೊಡಗಿದರು. ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾದಾಗ ವೈದ್ಯರು, ನರ್ಸ್​ಗಳು ಮೂರು ದಿನಗಳ ಕಾಲ ಇವರ ಹತ್ತಿರವೂ ಸುಳಿಯಲಿಲ್ಲ. ಎಚ್​ಐವಿ ಬಗ್ಗೆ ವೈದ್ಯರಲ್ಲೂ ಅಂಥ ನಕಾರಾತ್ಮಕ ಚಿಂತನೆ! ಇನ್ನೇನು ತಾಯಿ-ಮಗು ಇಬ್ಬರ ಪ್ರಾಣ ಹೋಗುತ್ತೆ ಎಂಬ ಕ್ಷಣದಲ್ಲಿ ಡಾ.ಶಿವರಾಮ್ ಅವರನ್ನೇ ಪತಿ ಕರೆತಂದರು. ಅವರು ಹೆರಿಗೆ ಮಾಡಿಸಿದ ಬಳಿಕ, ನಾಗರತ್ನಾ ಮಡಿಲಲ್ಲಿ ಗಂಡುಮಗು ಕಿಲಕಿಲನೇ ನಗುತ್ತಿತ್ತು. ಆ ಮಗುವಿನ ನಗು ಕಂಡು ತಮ್ಮೆಲ್ಲ ನೋವು, ಜಂಜಾಟಗಳನ್ನು ಮರೆತರು. ಆದರೆ, ಸಂವೇದನೆ ಜಾಗೃತವಾಗಿತ್ತು.

ಅದು 2003ರ ಹೊತ್ತು. ಎಚ್​ಐವಿ ಬಾಧಿತರಲ್ಲಿ ಸ್ಥೈರ್ಯ, ಜೀವನಪ್ರೀತಿ ಮೂಡಿಸಬೇಕು ಎಂದು ಸಂಕಲ್ಪಿಸಿ ಸಮಾಜದಲ್ಲಿ ಬಹಿರಂಗವಾಗಿ ತಮಗೆ ಎಚ್​ಐವಿ ಪಾಸಿಟಿವ್ ಇರುವುದಾಗಿ, ಅದರ ಹೊರತಾಗಿಯೂ ಬದುಕು ಕಟ್ಟಿಕೊಂಡಿರುವುದಾಗಿ ಸಾರಿದರು. ರಾಷ್ಟ್ರೀಯ ಸುದ್ದಿವಾಹಿನಿಗಳು ಕೂಡ ಇವರನ್ನು ಮಾತನಾಡಿಸಿ ಭೇಷ್ ಎಂದವು. ಆದರೆ, ಆಗಲೇ ಸರಣಿ ಸಮಸ್ಯೆಗಳು ಸುತ್ತಿಕೊಂಡವು. ಇವರ ಮಗ ಆರೋಗ್ಯವಾಗಿದ್ದರೂ, ಎಚ್​ಐವಿ ಸೋಂಕು ಇಲ್ಲದಿದ್ದರೂ ಅವನನ್ನು ಶಾಲೆಯಿಂದ ಹೊರಹಾಕಲಾಯಿತು. ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಿದರಾದರೂ, ಅಂಥ ನಕಾರಾತ್ಮಕ ವಾತಾವರಣದಲ್ಲಿ ಮಗು ಬೆಳೆಯೋದು ಬೇಡ ಎಂದು ನಿರ್ಧರಿಸಿ ಬೇರೊಂದು ಶಾಲೆಗೆ ಸೇರಿಸಲಾಯಿತು. ಬಂಧುಬಳಗದವರೆಲ್ಲ ದೂರವಾದರು. ಯಾವುದೇ ಕೌಟುಂಬಿಕ ಕಾರ್ಯಕ್ರಮ ನಡೆದರೂ ಇವರನ್ನು ಬಿಟ್ಟು ಎಲ್ಲರಿಗೂ ಆಹ್ವಾನ ನೀಡುತ್ತಿದ್ದರು. ಆ ಏಕಾಂಗಿತನ, ಸಮಾಜದ ವಿಚಿತ್ರ ವರ್ತನೆಗಳಿಂದ ರೋಸಿಹೋಗಿದ್ದಾಗಲೇ 5 ವರ್ಷಗಳ ಹಿಂದೆ ನಾಗರತ್ನಾ ಅವರ ಪತಿ ನಿಧನರಾದರು. ಮಗನನ್ನು ನೋಡಿಕೊಳ್ಳುವ ಜತೆಗೆ, ಭವಿಷ್ಯ ರೂಪಿಸಿಕೊಳ್ಳುವ ಸವಾಲು.

ಅದಮ್ಯ ಛಲವಿತ್ತು. ಪಿಯುಸಿ ಪೂರ್ಣಗೊಳಿಸಿದರು. ಡಿಗ್ರಿಯನ್ನೂ ಪಡೆದರು. ಸಾಮಾಜಿಕ ಸಂಘಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸತೊಡಗಿದರು. ಹೀಗೆ ಕೆಲಸ ಮಾಡುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ 31,999 ಎಚ್​ಐವಿ ಪೀಡಿತ ಮಕ್ಕಳು ಇರುವುದು ಅರಿವಿಗೆ ಬಂತು. ತಾವು ಪಟ್ಟ ಕಷ್ಟ, ಎಚ್​ಐವಿ ಪೀಡಿತರನ್ನು ಸಮಾಜ ನಡೆಸಿಕೊಳ್ಳುವ ಬಗೆ ಇದೆಲ್ಲವೂ ನೆನಪಾಗಿ ಸಮಾಜಮುಖಿ ಜೀವನದತ್ತ ಹೊರಳಿದರು. 2016ರಲ್ಲಿ ಬೆಳಗಾವಿಯಲ್ಲೇ ‘ಆಶ್ರಯ’ ಎಂಬ ಸಂಸ್ಥೆಯನ್ನು ಕಟ್ಟಿ, ಎಚ್​ಐವಿ ಪೀಡಿತ ಮಕ್ಕಳಿಗೆ ಉಚಿತ ಆಹಾರ, ವಸತಿ, ಶಿಕ್ಷಣ, ಜೀವನಕೌಶಲ ತರಬೇತಿ ಒದಗಿಸುತ್ತಿದ್ದಾರೆ. ಇಲ್ಲೀಗ 11 ಬಾಲಕಿಯರಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಕೌಟುಂಬಿಕ ವಾತಾವರಣದಲ್ಲಿ ಬೆಳೆಯುತ್ತಿದ್ದು, ಹೊಸಜೀವನ ರೂಪಿಸಿಕೊಳ್ಳುತ್ತಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡ ಈ ಮಕ್ಕಳನ್ನು ಸಂಬಂಧಿಕರು ಮೊದಲು ಎಲ್ಲೋ ಮನೆಯಿಂದ ದೂರದಲ್ಲಿ ಇಟ್ಟು, ಎರಡು ತುತ್ತು ಅನ್ನ ನೀಡುತ್ತಿದ್ದರಷ್ಟೇ. ಆದರೆ, ಇಲ್ಲಿ ಅವರೀಗ ನಗಲು ಕಲಿತಿದ್ದಾರೆ, ಹೊಸ ಕೌಶಲಗಳನ್ನು ಅಳವಡಿಸಿಕೊಂಡು ಕ್ರಾಫ್ಟ್​ಗಳನ್ನು ತಯಾರಿಸುತ್ತ ಅವುಗಳನ್ನು ವಸ್ತು ಪ್ರದರ್ಶನದಲ್ಲಿ ಇರಿಸಿ ಹೆಮ್ಮೆಪಟ್ಟಿದ್ದಾರೆ. ಮಗನಿಗೆ ದಿನದಲ್ಲಿ ಕೇವಲ 20 ನಿಮಿಷ ಕೊಟ್ಟು ಉಳಿದ ಅವಧಿಯಲ್ಲಿ ಈ ಮಕ್ಕಳ, ವಿಧವೆಯರ ಕಲ್ಯಾಣಕ್ಕೆ ದುಡಿಯುತ್ತಿರುವ ನಾಗರತ್ನಾ ಎಚ್​ಐವಿ ಬಗ್ಗೆ ಜಾಗೃತಿ ಮೂಡಿಸಲು ಹಲವು ಸಂಘಸಂಸ್ಥೆಗಳೊಂದಿಗೆ ಸೇರಿ ಶ್ರಮಿಸುತ್ತಿದ್ದಾರೆ. ಶಾಲಾ-ಕಾಲೇಜುಗಳಲ್ಲಿ, ಉದ್ಯಮಗಳಲ್ಲಿ ಅರಿವು ಬಿತ್ತುತ್ತಿದ್ದಾರೆ. ಯಶಸ್ಸು ಬರುತ್ತಿದ್ದಂತೆ ಸಂಬಂಧಿಕರೂ ಹತ್ತಿರವಾಗಿದ್ದಾರೆ.

ಸಮಾಜದಲ್ಲಿ ಸ್ವಾರ್ಥ ಹೆಚ್ಚಿದ್ದು, ಯಾರ ನೋವು ಯಾರೂ ಕೇಳುತ್ತಿಲ್ಲ. ಇದರಿಂದ ಖಿನ್ನತೆ, ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಫೋನ್ ಇನ್ ಕೌನ್ಸೆಲಿಂಗ್ ಆರಂಭಿಸಿದ್ದಾರೆ. ತಿಂಗಳಿಗೆ 50-60 ಫೋನ್ ಇನ್ ಕೌನ್ಸೆಲಿಂಗ್ ನಡೆಸುವ ಇವರು, ಆತ್ಮಹತ್ಯೆ ನಿರ್ಧಾರ ತಳೆದಿದ್ದ ಎಷ್ಟೋ ಜನರನ್ನು ಮತ್ತೆ ಜೀವನಮುಖಿಯಾಗಿಸಿದ್ದಾರೆ. ಮುಂಬರುವ ದಿನಗಳಲ್ಲಿ, ಬೆಳಗಾವಿಯಲ್ಲೇ ಕೌನ್ಸೆಲಿಂಗ್ ಕೇಂದ್ರ ಆರಂಭಿಸಲು ಚಿಂತನೆ ನಡೆಸಿದ್ದಾರೆ. ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ತುಂಬಲು ‘ಪಾಸಿಟಿವ್ ಟಾಕ್’ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಎಚ್​ಐವಿ ಹರಡುವುದನ್ನು ತಡೆಯಲು ವಧು-ವರರಿಬ್ಬರಿಗೂ ವಿವಾಹಪೂರ್ವ ಎಚ್​ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸುವ ನಾಗರತ್ನಾ ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದಾರೆ. ಕಳೆದೆರಡು ವರ್ಷಗಳಲ್ಲಿ 250ಕ್ಕೂ ಹೆಚ್ಚು ಕಾರ್ಯಕ್ರಮ, ಚಟುವಟಿಕೆ ನಡೆಸಿದ್ದು, ಮಾನಸಿಕ ಸ್ಥೈರ್ಯ ತುಂಬಲು ಶ್ರಮಿಸುತ್ತಿದ್ದಾರೆ.

‘ಎಚ್​ಐವಿ ಪೀಡಿತರನ್ನು ಸಮಾಜ ಕಾಣುವ ಬಗೆ ಬದಲಾಗಬೇಕಿದೆ. ಅವರಿಗೂ ಎಲ್ಲರಂತೆ ಬದುಕುವ ಹಕ್ಕಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು’ ಎನ್ನುವ ನಾಗರತ್ನಾ (99641-65566) ಸದ್ಯ ಸಂಸ್ಥೆಯ ಬಾಡಿಗೆ ಕಟ್ಟಡವನ್ನು ಬದಲಿಸಬೇಕಿದ್ದು, ಮನೆಯ ಹುಡುಕಾಟದಲ್ಲಿದ್ದಾರೆ. ‘ಮನೆ ಖಾಲಿ ಇದೆ ಬನ್ನಿ’ ಎಂದು ಕರೆಯುವವರು ಎಚ್​ಐವಿ ಪೀಡಿತರು ಎಂದು ಗೊತ್ತಾಗುತ್ತಲೇ ‘ನೋ’ ಎನ್ನುತ್ತಿದ್ದಾರೆ. ಅಲ್ಲದೆ, ‘ಆಶ್ರಯ’ ಸದ್ಯ ಸ್ಥಳೀಯ ದಾನಿಗಳ ನೆರವಿನಿಂದ ನಡೆಯುತ್ತಿದ್ದು, ಮಕ್ಕಳ ಆಹಾರ, ವೈದ್ಯಕೀಯ ಶುಶ್ರೂಷೆ, ನಿರ್ವಹಣೆಗೆ ಹಣಕಾಸಿನ ಬಲವೂ ಬೇಕಿದೆ.

ಸೋದರಿ ನಿವೇದಿತಾ ಪ್ರತಿಷ್ಠಾನದಲ್ಲಿಯೂ ಸಕ್ರಿಯವಾಗಿರುವ ನಾಗರತ್ನಾ ಶಿವರಾತ್ರಿಯ ದಿನದಂದು ಮಧ್ಯರಾತ್ರಿ ಸ್ಮಶಾನ ಸ್ವಚ್ಛತೆಯ ಶ್ರಮದಾನದಲ್ಲಿ ಪಾಲ್ಗೊಂಡು ಸಾವಿನ ಭಯವನ್ನು ದೂರ ತಳ್ಳಿದ್ದಾರಂತೆ. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಬೇಕು, ಬೆಳಗಾವಿಯ ಮತ್ತಷ್ಟು ಎಚ್​ಐವಿ ಪೀಡಿತ ಮಕ್ಕಳಿಗೆ ಆಶ್ರಯ ಕಲ್ಪಿಸಬೇಕು ಎಂಬೆಲ್ಲ ಕನಸುಗಳೊಂದಿಗೆ ಮುಂದಡಿ ಇಟ್ಟಿರುವ ನಾಗರತ್ನಾ ವೈಯಕ್ತಿಕ ಬದುಕಿನ ನೂರೆಂಟು ಕಷ್ಟಗಳನ್ನು ಸೋಲಿಸಿ, ಸಮಾಜದ ಶಕ್ತಿ ಹೆಚ್ಚಿಸಲು ಎಚ್​ಐವಿ ಪೀಡಿತರ ಕೈಹಿಡಿದು ಸಾಗುತ್ತಿದ್ದು ಆತ್ಮವಿಶ್ವಾಸದ ಶಕ್ತಿಯನ್ನು ದರ್ಶಿಸಿದ್ದಾರೆ.

ಈ ನವರಾತ್ರಿಯಲ್ಲಿ ನವದೇವಿಗಳನ್ನು ಪೂಜಿಸುವಾಗ ಸಮಾಜದ ಇಂಥ ಶಕ್ತಿಗಳ ಸಾಧನೆಯನ್ನೂ ಆರಾಧಿಸೋಣ, ನಾಗರತ್ನಾ ಎಂಬ ಅದಮ್ಯ ಶಕ್ತಿಯ ಕಾರ್ಯಗಳಿಗೆ ಸ್ಪಂದಿಸುವ ಮೂಲಕ ನಿಜವಾದ ವಿಜಯದಶಮಿ ಆಚರಿಸೋಣ.

ಏಕೆಂದರೆ, ಮೂಲಾ ನಕ್ಷತ್ರ, ಎಚ್​ಐವಿಗಿಂತಲೂ ಸಂಕಲ್ಪಶಕ್ತಿ ದೊಡ್ಡದು. ಅಲ್ಲವೇ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)