Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಹಸಿವಿನ ವಿರುದ್ಧ ಸಮರ ಸಾರಿರುವ ಹುಡುಗರು

Wednesday, 12.07.2017, 3:00 AM       No Comments

ಸಿದ ಹೊಟ್ಟೆಯ ಸಂಕಟ ಪ್ರಪಂಚದಲ್ಲೇ ಅತಿ ಕ್ರೂರವಾದ ಯಾತನೆ. ಹಸಿದ ಹೊಟ್ಟೆಗೆ ತತ್ತ್ವ, ಆದರ್ಶ ಬೋಧಿಸಬೇಡಿ, ಮೊದಲು ಅವರಿಗೆ ರೊಟ್ಟಿ ನೀಡಿ ಎಂದರು ತೇಜಸ್ವಿ ಸಂತ ಸ್ವಾಮಿ ವಿವೇಕಾನಂದ. ‘ದುಡಿಯುವುದೇ ಗೇಣು ಹೊಟ್ಟೆಗಾಗಿ, ತುಂಡು ಬಟ್ಟೆಗಾಗಿ‘ ಎಂಬ ಮಾತು ಅನುರಣನಗೊಳ್ಳುತ್ತಲೇ ಇರುತ್ತದೆ. ಆದರೂ, ಪ್ರಪಂಚದಲ್ಲಿ ಅತಿ ಹೆಚ್ಚು ಜನ ಸಾಯುವುದು ಯಾವ ಕಾರಣಕ್ಕಾಗಿ ಎಂದು ಅವಲೋಕಿಸಿದರೆ ಏಡ್ಸ್, ಕ್ಯಾನ್ಸರ್, ಮಲೇರಿಯಾ, ಮತ್ತೊಂದು-ಮಗದೊಂದು ಈ ಎಲ್ಲ ರೋಗಕ್ಕಿಂತ ಹಸಿವಿನಿಂದಲೇ ಹೆಚ್ಚು ಜನ ಪ್ರಾಣ ಕಳೆದುಕೊಳ್ಳುತ್ತಾರೆ ಎಂಬ ವಾಸ್ತವಾಘಾತ ಗೋಚರಿಸಿದಾಗ ನಾವು ಉಣ್ಣುವ ತಟ್ಟೆಯಲ್ಲಿ, ಉಳ್ಳವರು ಮಾಡುವ ವೀಕೆಂಡ್ ಪಾರ್ಟಿ, ಭರ್ಜರಿ ಔತಣಕೂಟಗಳಲ್ಲಿ ಪೋಲಾಗುವ ಆಹಾರ ಕಣ್ಣೆದುರು ಬಂದು ಎದೆ ಸಂಕಟದಿಂದ ಹಿಂಡಿದಂತಾಗುತ್ತದೆ. ಆಶ್ಚರ್ಯ ಎನಿಸಬಹುದು, ಇಂದಿಗೂ ಭಾರತದಲ್ಲಿ 20 ಕೋಟಿ ಜನರು ಹಸಿದ ಹೊಟ್ಟೆಯಲ್ಲೇ ಮಲಗುತ್ತಿದ್ದಾರೆ. ಈ ಸಂಖ್ಯೆ ಫ್ರಾನ್ಸ್​ನ ಜನಸಂಖ್ಯೆಗಿಂತ ಮೂರುಪಟ್ಟು ಹೆಚ್ಚು! ಅಪೌಷ್ಟಿಕತೆಯ ಪರಿಣಾಮವೇ ಪ್ರತಿವರ್ಷ ಭಾರತದಲ್ಲಿ ಮರಣವನ್ನಪ್ಪುತ್ತಿರುವ ಮಕ್ಕಳ ಸಂಖ್ಯೆ 13 ಲಕ್ಷ! ಈಗ ಇನ್ನೊಂದು ಮಗ್ಗುಲು ನೋಡಿ, ಭಾರತದಲ್ಲಿ ದಿನನಿತ್ಯ ತಯಾರಿಸುವ ಆಹಾರದ ಪೈಕಿ ಶೇಕಡ 40ರಷ್ಟು ಆಹಾರ ಪೋಲಾಗುತ್ತಿದೆ. ತಜ್ಞರೇ ಲೆಕ್ಕಾಚಾರ ಹಾಕಿರುವಂತೆ ವಾರ್ಷಿಕವಾಗಿ ಪೋಲಾಗುವ ಆಹಾರದ ಮೌಲ್ಯ 58 ಸಾವಿರ ಕೋಟಿ ರೂಪಾಯಿ ಅಂತೆ! ಅಂದರೆ, ಒಂದೆಡೆ ಅನ್ನಕ್ಕಾಗಿ ಹಾಹಾಕಾರ, ಮತ್ತೊಂದೆಡೆ ಅದರ ಮಹತ್ವ ಅರಿಯದೆ ವ್ಯರ್ಥವಾಗುತ್ತಿರುವ ದಾರುಣ ಸ್ಥಿತಿ.

ಇದೆಲ್ಲ ಕಂಡು ದೆಹಲಿಯ ಹುಡುಗನೊಬ್ಬ ಚಿಂತಾಕ್ರಾಂತನಾದ. ಅಂಕಿತ್ ಕ್ವಾಟ್ರಾ ಅವನ ಹೆಸರು. ವಯಸ್ಸು ಈಗಷ್ಟೇ 25. ಮೂರು ವರ್ಷದ ಹಿಂದೆ ನೋಯ್ಡಾಕ್ಕೆ ಪರಿಚಿತರೊಬ್ಬರ ಮದುವೆಗೆ ಹೋದಾಗ ಒಂದು ಸಾವಿರ ಅತಿಥಿಗಳಿಗೆ 5 ಸಾವಿರ ಜನರಿಗಾಗುವಷ್ಟು ಅಡುಗೆ ತಯಾರಿಸಲಾಗಿತ್ತು! ಊಟದ ಮೆನುವಿನಲ್ಲಿ 36 ಬಗೆಯ ಪದಾರ್ಥಗಳು. ‘ಇಷ್ಟೊಂದು ಅಡುಗೆ ಮಾಡಿದ್ದೀರಲ್ಲ, ಬಳಸದೆ ಉಳಿದದ್ದನ್ನು ಏನು ಮಾಡುತ್ತೀರಿ?’ ಎಂದು ಬಾಣಸಿಗನನ್ನು ಕೇಳಿದಾಗ ‘ಚೆಲ್ಲಿಬಿಡ್ತೀವಿ‘ ಅಂತ ನಿರ್ಭಾವುಕವಾಗಿ ಹೇಳಿದ. ಬಾಣಸಿಗನ ಮನವೊಲಿಸಿ ಆ ದಿನ ಸಂಜೆಯೇ ಉಳಿದ ಊಟವನ್ನೆಲ್ಲ ಕಂಟೇನರ್​ಗಳಲ್ಲಿ ಪ್ಯಾಕ್ ಮಾಡಿಕೊಂಡು ಸ್ನೇಹಿತನೊಂದಿಗೆ ಕಾರ್ ಹತ್ತಿದ್ದ ಅಂಕಿತ್ 10 ಕಿಲೋಮೀಟರ್ ದೂರದಲ್ಲಿದ್ದ ಕಾವಿರ್åಕರ ಶೆಡ್​ವೊಂದಕ್ಕೆ ಹೋಗಿ ಅಡುಗೆಯನ್ನು ತನ್ನ ಕೈಯಾರೆ ಬಡಿಸಿ ಬಂದಿದ್ದ. ಈ ಘಟನೆ ಆತನ ಜೀವನದ ದಿಕ್ಕನ್ನೇ ಬದಲಿಸಿತು. ಆಹಾರ ಪೋಲಾಗುವುದನ್ನು ತಪ್ಪಿಸಲು ಹಸಿದವರು ಮತ್ತು ಉಳ್ಳವರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಲು ನಿಶ್ಚಯಿಸಿದ. ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಚಿಂತನೆ ಹಂಚಿಕೊಂಡಾಗ ಬಹುತೇಕ ಸ್ನೇಹಿತರು ‘ಈತ ಮುಂದೆ ರಾಜಕಾರಣಿ ಆಗುವ ಉದ್ದೇಶ ಹೊಂದಿರಬಹುದು‘ ಎಂದು ಲೇವಡಿ ಮಾಡಿದರು. ಆದರೆ, ಕೆಲ ಬೆರಳೆಣಿಕೆ ಗೆಳೆಯರು ಇವನ ಜತೆಗೂಡಿದರು.

ಮದುವೆ, ಪಾರ್ಟಿ, ರೆಸ್ಟೊರೆಂಟ್​ಗಳಲ್ಲಿ ಬಳಸದೆ ಮಿಕ್ಕದ ಆಹಾರವನ್ನು ಹಸಿದವರಿಗೆ ತಲುಪಿಸುವ ಕೆಲಸ ಆರಂಭವಾಯಿತು. ಆಹಾರದ ಗುಣಮಟ್ಟ ಪರಿಶೀಲಿಸಿಯೇ ವಿತರಿಸುತ್ತಿದ್ದ ಹುಡುಗರು ಈ ಎಲ್ಲ ಕೆಲಸಕ್ಕೆ ತಮ್ಮ ಜೇಬಿನಿಂದಲೇ ದುಡ್ಡು ಹಾಕಿದರು. ಮೊದಲಿಗೆ, ರೆಸ್ಟೊರೆಂಟ್​ಗಳನ್ನು ಒಪ್ಪಿಸುವುದು ಕಷ್ಟವಾಯಿತು. ಆದರೆ, ಇವರ ಉದ್ದೇಶ, ಸಮರ್ಪಣಾಭಾವದ ಕೆಲಸವನ್ನು ಕಂಡು ಖ್ಯಾತ ಬಾಣಸಿಗರೂ ಇವರ ತಂಡದೊಂದಿಗೆ ಒಂದಾದರು. ಆಗ ‘ಫೀಡಿಂಗ್ ಇಂಡಿಯಾ‘ ಎಂಬ ಲಾಭರಹಿತ ಸ್ವಯಂಸೇವಾ ಸಂಸ್ಥೆಯನ್ನೇ ಆರಂಭಿಸಿದ ಅಂಕಿತ್ ಇಂದು ದೇಶದ 45 ನಗರಗಳಲ್ಲಿ ತನ್ನ ತಂಡದ ಸಹಾಯದಿಂದ ಬಡವರು, ನಿರಾಶ್ರಿತರಿಗೆ ಊಟ ತಲುಪಿಸುತ್ತಿದ್ದಾನೆ! 20-26 ವಯೋಮಾನದ 5 ಸಾವಿರ ಯುವಕರು ಈ ನಗರಗಳಲ್ಲಿ ಸ್ವಯಂಸೇವಕರಾಗಿ ಫೀಡಿಂಗ್ ಇಂಡಿಯಾದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇವರನ್ನು ‘ಹಂಗರ್ ಹೀರೋ‘ಗಳೆಂದೇ ಸಂಸ್ಥೆ ಸಂಬೋಧಿಸುತ್ತದೆ. ‘‘ಈವರೆಗೆ 85 ಲಕ್ಷಕ್ಕಿಂತ ಅಧಿಕ ಜನರಿಗೆ ಆಹಾರ ತಲುಪಿಸಿದ್ದು, ಈ ಮೂಲಕ 45 ಕೋಟಿ ರೂ. ಮೌಲ್ಯದ ಆಹಾರ ಪೋಲಾಗುವುದನ್ನು ತಪ್ಪಿಸಲಾಗಿದೆ‘ ಎನ್ನುವ ಅಂಕಿತ್ 2030ರ ವೇಳೆಗೆ ಭಾರತವನ್ನು ಬಡತನಮುಕ್ತ, ಹಸಿವುಮುಕ್ತ ಗೊಳಿಸುವ ಗುರಿ ಇದೆ ಎನ್ನುತ್ತಾರೆ.

ದೊಡ್ಡ ಗುರಿ ತಲುಪಬೇಕಾದರೆ ಕೆಲ ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ ಎನ್ನುವಂತೆ 2014ರಲ್ಲಿ ಅಂಕಿತ್ ಕಾಪೋರೇಟ್ ನೌಕರಿಗೆ ರಾಜೀನಾಮೆ ನೀಡಿ, ಸಂಸ್ಥೆಗೆ ಪೂರ್ತಿಸಮಯವನ್ನು ಮೀಸಲಾಗಿರಿಸಿದ್ದಾರೆ. ಈ ನಿರ್ಧಾರಕ್ಕೆ ಮೊದಲಿಗೆ ಮನೆಯವರಿಂದಲೂ ವಿರೋಧ ಬಂತು. ತಾಯಿಯಂತೂ ಅದೆಷ್ಟೋ ಬಾರಿ ‘ಕಮಾತಾ ನಹೀ ತೋ ತುಝುಸೇ ಶಾದಿ ಕೌನ್ ಕರೇಗಾ?’ (ನೀನು ಹಣ ಗಳಿಸುವುದಿಲ್ಲ ಎಂದಾದರೆ ಯಾರು ನಿನ್ನನ್ನು ಮದುವೆಯಾಗುತ್ತಾರೆ?) ಎಂದು ಪ್ರಶ್ನಿಸುತ್ತಲೇ ಇದ್ದರು. ಗೆಳೆಯರು ಕೂಡ ‘ಇಷ್ಟೊಂದು ದೊಡ್ಡ ರಿಸ್ಕ್ ತಗೋಬಾರದಿತ್ತು ಕಣೋ‘ ಅಂದರು. ಆದರೆ, ಅಂಕಿತನ ಜಾಗೃತ ಸಂವೇದನೆಯ ಮುಂದೆ ಬಾಕಿ ಎಲ್ಲ ಸಂಗತಿಗಳು ಗೌಣವಾದವು. ಇದು ಬರೀ ಊಟ ಒದಗಿಸುವ ಕೆಲಸವಲ್ಲ. ಊಟದ ಮಾಧ್ಯಮದ ಮೂಲಕ ಮನುಷ್ಯನಿಗೆ ಅವನ ಘನತೆಯನ್ನು ಮರಳಿಸುವ, ಸಮಾಜದಲ್ಲಿನ ಅಸಮಾನತೆ ನಿವಾರಿಸುವ, ಆಹಾರದ ಮಹತ್ವವನ್ನು ಮನದಟ್ಟು ಮಾಡುವ, ಹಸಿವನ್ನು ನಿವಾರಿಸುವ ಮುಖ್ಯವಾಗಿ ಈ ಎಲ್ಲ ಕೆಲಸಗಳ ಮೂಲಕ ಭಾರತದ ದೌರ್ಬಲ್ಯವನ್ನು ನಿವಾರಿಸಿ ಅದನ್ನು ಶಕ್ತಿಯುತಗೊಳಿಸುವ ಮಹಾನ್ ಪ್ರಯತ್ನವಾಗಿದೆ. ದೆಹಲಿಯಿಂದ ಇತರೆ ನಗರಗಳಿಗೂ ವೇಗವಾಗಿ ಈ ಕೆಲಸ ಹಬ್ಬಿದಾಗ ಹಲವು ಸಾಮಾಜಿಕ ಸಂಘಟನೆಗಳು, ಸಮಾಜಸೇವಕರು ಅಂಕಿತ್ (ಡಿಡಿಡಿ.ಛಿಛಿಛಜ್ಞಿಜಜ್ಞಿಛಜಿಚ.ಟ್ಟಜ) ಮತ್ತು ಆತನ ಸ್ನೇಹಿತರ ಚಿಂತನೆಯನ್ನು ಶ್ಲಾಘಿಸಿ, ಇವರ ಕೆಲಸವನ್ನು ಬೆಂಬಲಿಸುತ್ತಿದ್ದಾರೆ.

24 ಗಂಟೆಯ ಸಹಾಯವಾಣಿ (098711-78810) ತೆರೆಯಲಾಗಿದ್ದು ಆಹಾರ ದಾನ ಮಾಡಲು ಬಯಸುವವರು ಈ ನಂಬರ್​ಗೆ ಕರೆ ಮಾಡಿದರೆ ಸ್ವಯಂಸೇವಕರೇ ಬಂದು ಆಹಾರ ತೆಗೆದುಕೊಂಡು, ಅಗತ್ಯ ಜನರಿಗೆ ತಲುಪಿಸುತ್ತಾರೆ. ಅಲ್ಲದೆ, 2015ರಲ್ಲಿ ಫೀಡಿಂಗ್ ಇಂಡಿಯಾ ಎಂಬ ಮೊಬೈಲ್ ಆಪನ್ನೂ ಆರಂಭಿಸಲಾಗಿದೆ. ಕೊಳೆಗೇರಿ ಪ್ರದೇಶ, ಕಾರ್ವಿುಕರ ಕಾಲನಿ ಸೇರಿದಂತೆ ಹಲವೆಡೆ ಊಟ ವಿತರಣೆಯಿಂದ ಮಕ್ಕಳಲ್ಲಿ ಪೌಷ್ಟಿಕಾಂಶದ ಸಮಸ್ಯೆ ದೂರವಾಗಿದ್ದು, ಸಾಮಾಜಿಕ ಜೀವನ ಕೂಡ ಸಂತೃಪ್ತಿಯಿಂದ ಕೂಡಿದೆ. 2016ರಲ್ಲಿ ವಿಶ್ವಸಂಸ್ಥೆ ಜಗತ್ತಿನ 17 ಯುವ ನಾಯಕರ ಹೆಸರು ಘೋಷಿಸಿದಾಗ ಅಂಕಿತ್ ಅದರಲ್ಲಿ ಒಬ್ಬರಾಗಿದ್ದರು. 2030ಕ್ಕೆ ಸುಸ್ಥಿರ ಅಭಿವೃದ್ಧಿಯ ಗುರಿ ನಿಶ್ಚಯಪಡಿಸಿರುವ ವಿಶ್ವಸಂಸ್ಥೆ ಇದಕ್ಕಾಗಿ 17 ಕ್ಷೇತ್ರಗಳ ಸುಧಾರಣೆಗೆ ಕಾರ್ಯನಿರ್ವಹಿಸುತ್ತಿದೆ. ಹಸಿವು ಮುಕ್ತ ಪ್ರಪಂಚ, ಬಡತನ ನಿವಾರಣೆ, ಉತ್ತಮ ಗುಣಮಟ್ಟದ ಶಿಕ್ಷಣ ಅವುಗಳಲ್ಲಿ ಪ್ರಮುಖವಾದವು. ಈ ನಿಟ್ಟಿನಲ್ಲಿ ಈ ಯುವ ನಾಯಕರ ಚಿಂತನೆಗಳನ್ನು ಅರಿಯಲು, ಅನುಷ್ಠಾನಗೊಳಿಸಲು ವಿಶ್ವಸಂಸ್ಥೆ ವೇದಿಕೆಗೆ ಕರೆದಾಗ ಅಂಕಿತ್ ಮಂಡಿಸಿದ ವಿಚಾರಗಳು ನೆರೆದ ನಾಯಕರ ಮನಗೆದ್ದವು. ಅಷ್ಟೇ ಅಲ್ಲ, ‘ನೀವು ಸಂಘಟನೆ ಹೆಸರನ್ನು ಫೀಡಿಂಗ್ ಇಂಡಿಯಾ ಬದಲಾಗಿ ಫೀಡಿಂಗ್ ವರ್ಲ್ಡ್ ಅಂತ ಬದಲಾಯಿಸಿಕೊಳ್ಳಿ’ ಎಂಬ ಸಲಹೆಗಳೂ ಬಂದವು. ಅದಕ್ಕಿಂತ ಮುಖ್ಯವಾಗಿ, ಹಲವು ದೇಶಗಳು ಅಂಕಿತ್ ಮಾದರಿಯನ್ನು ಆಯ್ದುಕೊಂಡಿದ್ದು ಉಳ್ಳವರಿಂದ ಆಹಾರ ಪಡೆದು ಬಡವರಿಗೆ ತಲುಪಿಸುತ್ತಿವೆ. ರಾಣಿ ಎಲಿಜಬೆತ್-2 ಇದೇ ಜೂನ್​ನಲ್ಲಿ ಲಂಡನ್​ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅಂಕಿತ್​ರನ್ನು ಸನ್ಮಾನಿಸಿದ್ದಾರೆ. ಆದರೆ ‘ನಮ್ಮ ದೇಶದ ಪ್ರತಿಯೊಬ್ಬರಿಗೂ ಹೊಟ್ಟೆ ತುಂಬ ಅನ್ನ ಸಿಗುವಂತಾಗಬೇಕು. ಯಾರೂ ಉಪವಾಸದಿಂದ ಸಾಯುವಂತಾಗಬಾರದು. ಆ ದಿನ ಮಾತ್ರ ನನಗೆ ನಿಜವಾದ ಪ್ರಶಸ್ತಿ ದೊರಕಿದಂತೆ’ ಎನ್ನುವ ಅಂಕಿತ್ ಈ ಗುರಿ ಸಾಧಿಸುವವರೆಗೂ ವಿಶ್ರಮಿಸುವುದಿಲ್ಲ ಎನ್ನುತ್ತಾರೆ.

25ರ ಹರೆಯದ ಹುಡುಗನೊಬ್ಬನ ಗಟ್ಟಿ ಸಂಕಲ್ಪ ಲಕ್ಷಾಂತರ ಜನರ ಹೊಟ್ಟೆ ತುಂಬಿಸುತ್ತಿರುವಾಗ ನಾವು-ನೀವು ನಮ್ಮ ಸುತ್ತಮುತ್ತಲಿನವರ ಹಸಿವನ್ನಾದರೂ ನೀಗಿಸಬಹುದಲ್ಲವೇ? ಗೃಹಿಣಿಯರು ಪ್ರತಿನಿತ್ಯ ಒಂದು ಮುಷ್ಟಿ ಅಕ್ಕಿಯನ್ನೋ ಅಥವಾ ಅನ್ನವನ್ನೋ ಬಡವರಿಗೆ ನೀಡಿದರೆ ಒಂದು ಹೊಟ್ಟೆಯಾದರೂ ನೆಮ್ಮದಿಯಿಂದ ಮಲಗಬಹುದಲ್ಲವೇ? ಸಣ್ಣ ಸಣ್ಣ ಪ್ರಯತ್ನಗಳಿಂದಲೇ ಪರಿವರ್ತನೆಯ ಹೆದ್ದೆರೆಯನ್ನು ಸೃಷ್ಟಿಸಬಹುದು. ಅದಕ್ಕೆ ನಮ್ಮ ಅಂತರಂಗದ ಕತ್ತಲು ಕಳೆದು ಮಾನವೀಯತೆಯ ಸಣ್ಣ ಹಣತೆ ಬೆಳಗಿದರೆ ಸಾಕು.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top