Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಫುಟ್​ಪಾತಿನಿಂದ ಬುಕ್​ವರ್ಮ್​​ವರೆಗೆ ಕೃಷ್ಣನ ಬುಕ್ ಸ್ಟೋರಿ!

Wednesday, 25.04.2018, 3:04 AM       No Comments

| ರವೀಂದ್ರ ಎಸ್​. ದೇಶಮುಖ್​​

ಉದ್ಯಮ ಸ್ಥಾಪಿಸುವವರು ಅಸಂಖ್ಯ ಜನ. ಆದರೆ, ಉದ್ಯಮದಲ್ಲಿ ಮಾನವೀಯತೆ, ನೈತಿಕ ಮೌಲ್ಯ ಸ್ಥಾಪಿಸಿ ಗೊತ್ತಿಲ್ಲದೆ ಬಾಂಧವ್ಯದ ಎಳೆಯೊಂದನ್ನು ಹುಟ್ಟುಹಾಕಿ ಅಪ್ಪಟ ಪ್ರೀತಿಯನ್ನು ಸುರಿಸುತ್ತ ಜನರ ಮನಸ್ಸಲ್ಲಿ ಭದ್ರ ಸ್ಥಾನ ಗಳಿಸುವುದು ಕೃಷ್ಣರಂಥ ಕೆಲವರಿಗೆ ಮಾತ್ರ ಸಾಧ್ಯ. ಬುಕ್​ವಮ್ರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಹೆಗ್ಗಳಿಕೆ ಹಿಂದೆ ಇವರ ಶ್ರಮವಿದೆ.

ಇವರ ಹೆಸರು ಕೃಷ್ಣ! ಆದರೆ, ಆರಂಭದ ಬದುಕು ಸವೆದಿದ್ದು ಥೇಟ್ ಕುಚೇಲನಂತೆ! ತನ್ನ ಸ್ನೇಹಿತ ಕುಚೇಲನ ಬಡತನವನ್ನೇನೋ ಸರ್ವಶಕ್ತ ಕೃಷ್ಣಪರಮಾತ್ಮ ದೂರಮಾಡಿದ. ಈ ಕೃಷ್ಣ ಆ ಭಗವಂತ ಬೋಧಿಸಿದ ತತ್ತ್ವ, ಮೌಲ್ಯದ ಹಾದಿಯಲ್ಲೇ ಸಾಗಿ ಎಲ್ಲ ಸವಾಲುಗಳನ್ನು ಗೆದ್ದು ಬಂದಿದ್ದಾರೆ. ಫುಟ್​ಪಾತಿನಲ್ಲಿ ಪುಸ್ತಕ ವ್ಯಾಪಾರ ಆರಂಭಿಸಿ, ಸಾಧನೆಯ ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತ ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಬುಕ್​ವಮ್ರ್ ಎಂಬ ಪುಸ್ತಕಮಳಿಗೆಯ ಸ್ಥಾಪಕರು ಈ ಕೃಷ್ಣ. ಸಾಹಿತಿಗಳ, ವಿಮರ್ಶಕರ, ಓದುಗರ ನೆಚ್ಚಿನ ತಾಣವಾಗಿ ಮಾರ್ಪಟ್ಟಿರುವ ಬುಕ್​ವಮ್ರ್ ಯಶಸ್ಸಿನ ಹಿಂದೆ ಪ್ರೇರಣೆಯ ದೊಡ್ಡ ಕತೆ ಇದೆ, ಬದುಕನ್ನು ಅದಮ್ಯವಾಗಿ ಪ್ರೀತಿಸುವ ಹೊಸ ಲವ್ ಕಹಾನಿ ಇದೆ. ಉದ್ಯಮಿಗಳಾಗಬಯಸುವವರಿಗಂತೂ ಹಲವು ಪಾಠಗಳಿವೆ.

ಬಡತನ, ಅದರ ಮೇಲೊಂದಿಷ್ಟು ಸಾಲ, ದೊಡ್ಡ ಕುಟುಂಬ… ಹೀಗೆ ಗ್ರಾಮೀಣ ಪರಿಸರದ ಸವಾಲಿನ ಸನ್ನಿವೇಶಗಳ ನಡುವೆಯೇ ಎಳವೆಯಲ್ಲಿ ಶಾಲೆಗೆ ಹೋದವರು ಕೃಷ್ಣ. ಮೈಸೂರಿನ ಬನ್ನೂರು ಬಳಿಯ ರಂಗಸಮುದ್ರ ಎಂಬ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದುವಾಗ ‘ಮುಂದೇನು’ ಎಂಬುದು ಗೊತ್ತಿರಲಿಲ್ಲ. ಹತ್ತನೇ ತರಗತಿ ಪಾಸಾಗುತ್ತಿದ್ದಂತೆ ತಂದೆ ನೌಕರಿ ಮಾಡುವಂತೆ ಒತ್ತಾಯಿಸಿದರಾದರೂ, ಬನ್ನೂರಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಮುಗಿಸಿದ ಕೃಷ್ಣ ಆ ಬಳಿಕ ಉದ್ಯೋಗಬೇಟೆ ಶುರು ಮಾಡಿದರು. ಅದೊಂದು ದಿನ ಇವರ ಊರಿನ ವ್ಯಕ್ತಿಯೊಬ್ಬರು ‘ಕೆಲಸ ಬೇಕಾದರೆ ಬೆಂಗಳೂರಿಗೆ ಬಾ’ ಎಂದು ಕಾಗದ ಬರೆದರು. ಸಾಲ ತೀರಿಸಬೇಕಿತ್ತು, ಕುಟುಂಬ ನಿರ್ವಹಣೆಗೆ ನೆರವಾಗಬೇಕಿತ್ತು. ಹಾಗಾಗಿ, ಹೆಚ್ಚೇನೂ ಯೋಚಿಸದೆ ಕೃಷ್ಣ ಸೀದಾ ಬೆಂಗಳೂರಿಗೆ ಬಂದರು. ಇವರಿಗೆ ಪತ್ರ ಬರೆದ ವ್ಯಕ್ತಿ ಮಾಯಿ ಗೌಡ ಪುಸ್ತಕ ಮಾರಾಟ ಮಾಡೋಣ ಎಂದರು. ಆ ಬಗ್ಗೆ ಹೆಚ್ಚೇನೂ ಗೊತ್ತಿರದ ಕೃಷ್ಣ ‘ಹೂಂ’ ಎಂದರು. ಮಹಾತ್ಮ ಗಾಂಧಿ ರಸ್ತೆಯ ಬೀದಿಬದಿಯಲ್ಲಿ ಕನ್ನಡ-ಇಂಗ್ಲಿಷ್ ಪುಸ್ತಕಗಳ ಮಾರಾಟ ಶುರುವಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಪುಸ್ತಕ ಮಾರಾಟ ಮಾಡುತ್ತಿದ್ದ ಕೃಷ್ಣ ಸಂಜೆ ವಿಜಯಾ ಕಾಲೇಜಿಗೆ ಸೇರಿಕೊಂಡು ಬಿ.ಕಾಂ. ತರಗತಿಗಳಿಗೆ ಹಾಜರಾಗುತ್ತಿದ್ದರು.

ವ್ಯಾಪಾರ ಇಲ್ಲದಿದ್ದ ಸಮಯದಲ್ಲಿ ಕೃಷ್ಣ ಪುಸ್ತಕದ ಓದಿನಲ್ಲಿ ತನ್ಮಯರಾಗುತ್ತಿದ್ದರು. ಓದಿನ ಆಸಕ್ತಿ ಹೀಗೆ ಹುಟ್ಟಿಕೊಂಡಿದ್ದು ಎಂಜಿ ರಸ್ತೆಯ ಫುಟ್​ಪಾತಿನಲ್ಲೇ! ಅದೆಷ್ಟೋ ದಿನಗಳ ಕಾಲ ಮಲಗಲು ಚಿಕ್ಕಕೋಣೆಯೂ ಇರಲಿಲ್ಲ. ಉಪ್ಪಾರಪೇಟೆ ಪೊಲೀಸ್ ಠಾಣೆ ಬಳಿ ಇದ್ದ ನಿರಾಶ್ರಿತರ ಕೇಂದ್ರದಲ್ಲಿ ನೂರಾರು ರಾತ್ರಿಗಳನ್ನು ಕಳೆದದ್ದುಂಟು. ಕ್ರಮೇಣ ಪುಸ್ತಕಗಳೇ ಇವರ ಆತ್ಮೀಯ ಸ್ನೇಹಿತರಾದರು. ಕತೆ, ಕಾದಂಬರಿ, ಕವನ, ಆತ್ಮಕತೆ… ಹೀಗೆ ಎಲ್ಲ ಬಗೆಯ ಸಾಹಿತ್ಯ ಓದುತ್ತ ಓದುತ್ತ ‘ಪುಸ್ತಕದ ಹುಳು’ವಾಗಿ ಹೋದರು. ಇದರಿಂದ ಗ್ರಾಹಕರ ಓದಿನ ಆಸಕ್ತಿ, ಅವರು ಯಾವುದನ್ನು ಹೆಚ್ಚು ಓದಲು ಇಷ್ಟಪಡುತ್ತಾರೆ ಎಂಬ ಸೂಕ್ಷ್ಮಗಳೆಲ್ಲ ಅರ್ಥವಾದವು. ಕೃಷ್ಣರಿಗೆ ವರದಾನವಾಗಿದ್ದು ಅವರ ಸೌಮ್ಯ ಸ್ವಭಾವ ಹಾಗೂ ಸರಳತೆ. ಗ್ರಾಹಕರೊಂದಿಗೆ ಸೌಜನ್ಯದಿಂದ ಮಾತಾಡುತ್ತ ಅವರಿಗೆ ಬೇಕಾದ ಪುಸ್ತಕ ಹುಡುಕಿ ಕೊಡುವುದು, ಒಂದು ವೇಳೆ ಇಲ್ಲದಿದ್ದರೆ ಇಂತಿಷ್ಟೇ ದಿನಗಳಲ್ಲಿ ಬೇರೆಕಡೆಯಿಂದ ಪುಸ್ತಕ ತರಿಸಿ ಕೊಡುವುದು… ಹೀಗೆ ಗ್ರಾಹಕರಿಗೆ ಕೃಷ್ಣ ಹೆಚ್ಚು ಆಪ್ತರಾಗುತ್ತಾರೆ, ಇಷ್ಟವಾಗುತ್ತಾರೆ. ಬೀದಿಬದಿ ವ್ಯಾಪಾರ ಮಾಡುತ್ತಲೇ ಬಿ.ಕಾಂ. ಪದವಿ ಪೂರ್ಣಗೊಳಿಸಿದ ಕೃಷ್ಣ ಆ ಬಳಿಕ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದುಕೊಂಡರು.

ಎಂಬಿಎ ಮುಗಿದ ಬಳಿಕ ‘ಕೆರಿಯರ್’ ಎಂಬ ಪೆಡಂಭೂತ ಹುಟ್ಟಿಕೊಂಡಿತು! ತುಂಬ ಜನರು ಯಾವುದಾದರೂ ಒಳ್ಳೆ ನೌಕರಿಗೆ ಸೇರಿಕೋ ಎಂದರು. ಅಷ್ಟೊತ್ತಿಗಾಗಲೇ, ಪುಸ್ತಕಗಳು ಮತ್ತು ಕೃಷ್ಣರ ನಡುವೆ ಗಟ್ಟಿ ಬಾಂಧವ್ಯ ಬೆಸೆದುಬಿಟ್ಟಿತ್ತು. ‘ನೌಕರಿಗೆ ಸೇರೋದಾ, ಪುಸ್ತಕ ವ್ಯಾಪಾರ ಮುಂದುವರಿಸೋದಾ’ ಈ ಪ್ರಶ್ನೆ ಕಗ್ಗಂಟಿನಂತೆ ಕಾಡಿದಾಗ ಹೃದಯದ ಮಾತನ್ನು ಆಲಿಸಿದರು. ಪುಸ್ತಕಗಳ ಸಹವಾಸ ಎಂದರೆ ಅದು ಸಾಕ್ಷಾತ್ ಶಾರದೆಯ ಸೇವೆ. ಮುಂದೆ ಏನಾದರೂ ಆಗಲಿ ಪುಸ್ತಕ ವ್ಯಾಪಾರವನ್ನೇ ಮುಂದುವರಿಸೋಣ ಎಂದು ನಿರ್ಧರಿಸಿದರು.

2002ರಲ್ಲಿ ಎಂಜಿ ರಸ್ತೆಯ ಶೃಂಗಾರ ಕಾಂಪ್ಲೆಕ್ಸ್​ನ ಸಣ್ಣ ಅಂಗಡಿಯಲ್ಲಿ ಹೊಸ ವ್ಯಾಪಾರ ಶುರುಮಾಡಿಯೇ ಬಿಟ್ಟರು. ಅದಕ್ಕೆ ‘ಬುಕ್​ವಮ್ರ್’ ಎಂಬ ಚೆಂದದ ಹೆಸರು. ಆದರೆ, ಒಳ್ಳೆ ಕೃತಿಗಳನ್ನು ಸಂಗ್ರಹಿಸುವುದು ದೊಡ್ಡ ಸವಾಲಾಗಿತ್ತು. ಬೆಳಗ್ಗೆ 6 ಗಂಟೆಯ ಹೊತ್ತಿಗೆ ಪುಸ್ತಕ ಸಂಗ್ರಹ ಇರುವವರ ಮನೆಗೆ ಹೋಗಿ ಅಲ್ಲಿ ಅವುಗಳನ್ನು ಸೆಕೆಂಡ್​ಹ್ಯಾಂಡ್​ಗೆ ಖರೀದಿಸಿ ಸೈಕಲ್ ಮೇಲೆ ತಂದು 10 ಗಂಟೆಯೊಳಗೆ ಅಂಗಡಿ ಬಾಗಿಲು ತೆರೆಯುವುದು, ರಾತ್ರಿವರೆಗೆ ವ್ಯಾಪಾರ ಮಾಡುವುದು, ಆ ಬಳಿಕ ಪುಸ್ತಕಗಳನ್ನು ವಿಭಾಗವಾರು ಅಚ್ಚುಕಟ್ಟಾಗಿ ಜೋಡಿಸುವುದು, ಹೊಸ ಕೃತಿಗಳ ಬಗೆಗಿನ ಮಾಹಿತಿ ಸಂಗ್ರಹಿಸುವುದು… ಹೀಗೆ ದಣಿವೇ ಅರಿಯದಂತೆ ಕೆಲಸ ಮಾಡತೊಡಗಿದರು. ವರ್ಷದ 365 ದಿನ ಅಂಗಡಿ ಬಾಗಿಲು ತೆರೆದಿಡುವ ಇವರಿಗೆ ರಜೆ, ವಿಶ್ರಾಂತಿ ಎಂಬುದೆಲ್ಲ ಪುಸ್ತಕಪ್ರೇಮಿಗಳ ಜತೆಗಿನ ಭೇಟಿ, ಹರಟೆಯೇ!

ಪರಿಣಾಮ, ಅಪೂರ್ವವಾದ ಪುಸ್ತಕಗಳು ಬುಕ್​ವಮ್ರ್ ಛಾವಣಿಯಡಿ ಸಿಗುವಂತಾಯಿತು. ಇದು ಗೊತ್ತಾಗುತ್ತಿದ್ದಂತೆ ಲೇಖಕರು, ವಿಮರ್ಶಕರ ಕಾಯಂಭೇಟಿಯ ತಾಣವಾಗಿ ಬದಲಾಯಿತು ಬುಕ್​ವಮ್ರ್. ಬಂದವರಿಗೆಲ್ಲ ಅವರ ಆಸಕ್ತಿ ಮೇರೆಗೆ ಯಾವ ಕೃತಿ ಓದಿದರೆ ಚೆನ್ನ, ಆ ಓದಿನ ಬಳಿಕ ಮುಂದಿನ ಓದು ಯಾವುದು… ಇದನ್ನೆಲ್ಲ ಕಾಳಜಿಯಿಂದ, ಆತ್ಮೀಯತೆಯಿಂದ ಹೇಳುವ ಕೃಷ್ಣ ಗ್ರಾಹಕರ ಬಗ್ಗೆ ತೆಗೆದುಕೊಳ್ಳುವ ಕಾಳಜಿ ಅನನ್ಯ. ಮೊದಲಿಗೆ ಆಂಗ್ಲ ಕೃತಿಗಳನ್ನಷ್ಟೇ ಇರಿಸುತ್ತಿದ್ದ ಇವರು 2007ರ ನಂತರ ಕನ್ನಡದ ಕೃತಿಗಳನ್ನು ಮಾರಾಟಕ್ಕೆ ಇರಿಸಿದ್ದಾರೆ.

ಲೇಖಕರೊಂದಿಗೆ ಸಂವಾದ, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಗಳು ‘ಬುಕ್​ವಮ್ರ್’ ಅಡಿ ನಡೆಯಬೇಕು ಎಂದು ಬಯಸಿ ದೊಡ್ಡ ಮಳಿಗೆಗಾಗಿ ಹುಡುಕಾಟ ನಡೆಸಿದರು. ಆ ಹುಡುಕಾಟ ದೊಡ್ಡ ಕತೆಯಾಗಿ, ಅನುಭವವಾಗಿ ಮಾರ್ಪಟ್ಟು 2015-16ರಲ್ಲಿ ಚರ್ಚ್​ಸಿ್ಟ್ರಟ್​ಗೆ ಸ್ಥಳಾಂತರಗೊಂಡರು. ಹೆಚ್ಚಿದ ಬಂಡವಾಳ, ಭಾರಿ ಬಾಡಿಗೆಯಿಂದ ಹೊಣೆಗಾರಿಕೆ ಹೆಚ್ಚಿತು. ಭಯವೂ ಕೂಡ. ಆಗ ಇವರ ಜತೆಯಾಗಿ ನಿಂತ ಬಾಳಸಂಗಾತಿ ಉಮಾ ಮಳಿಗೆಯಲ್ಲೂ ಅವರ ಸಹಾಯಕ್ಕೆ ನಿಲ್ಲುತ್ತಾರೆ.

ಎತ್ತರಕ್ಕೇರಿದರೂ ಅದೇ ಸರಳತೆ, ಉದಾರತೆ ಮತ್ತು ಬಾಂಧ್ಯವದ ಫಲ ಕೃಷ್ಣ([email protected]) ಪುಸ್ತಕಪ್ರೇಮಿಗಳ ಮನೆಮಾತಾಗಿದ್ದಾರೆ. ಇದು ದೂರದ ದೆಹಲಿಯ ‘10 ಜನಪಥ’ವರೆಗೂ ತಲುಪಿದ ಪರಿಣಾಮ ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರು ಭೇಟಿಯ ವೇಳೆ ಬುಕ್​ವಮರ್್​ಗೆ ಹೋಗಿ ಕೆಲಸಮಯ ಪುಸ್ತಕಗಳ ಸಾಂಗತ್ಯದಲ್ಲಿ ಕಳೆದರು. ಒಳ್ಳೆಯ ಕೃತಿಗಳನ್ನು ಪಡೆದುಕೊಳ್ಳಬೇಕೆಂಬ, ಓದಬೇಕೆಂಬ ಹಂಬಲ ಈಗಲೂ ತುಂಬ ಜನರಲ್ಲಿ ಜೀವಂತವಾಗಿದ್ದು ಅವರು ಪುಸ್ತಕಗಳನ್ನು ಜೀವನದ ಅವಿಭಾಜ್ಯ ಅಂಗದಂತೆ ಪ್ರೀತಿಸುತ್ತಾರೆ ಎನ್ನುವ ಕೃಷ್ಣ ಈ ಉದ್ಯಮವನ್ನು ಸಮಾಜಮುಖಿಯಾಗಿ ಕೊಂಡೊಯ್ಯುತ್ತಿದ್ದಾರೆ. ಬಡ ಮಕ್ಕಳಿಗೆ ಉಚಿತವಾಗಿ ಪುಸ್ತಕ ಒದಗಿಸುವುದಲ್ಲದೆ, ಹಳ್ಳಿಗಳಲ್ಲಿ, ಅಲ್ಲಿನ ಶಾಲೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ನೆರವಾಗುತ್ತಿದ್ದಾರೆ.

ಅದೊಂದು ದಿನ ವೃದ್ಧರೊಬ್ಬರು ಹದಿನೈದು ವರ್ಷಗಳಿಂದ ಹುಡುಕುತ್ತಿದ್ದ ಪುಸ್ತಕವನ್ನು ‘ಬುಕ್​ವಮ್ರ್’ನಲ್ಲಿ ಕಾಣುತ್ತಿದ್ದಂತೆ, ಹೊರಗಡೆ ಹೋಗಿ ಪಾದರಕ್ಷೆ ತೆಗೆದಿಟ್ಟು ಪುಸ್ತಕಕ್ಕೆ ಭಕ್ತಿಯಿಂದ ನಮಸ್ಕರಿಸಿ, ಎದೆಗೆ ತಬ್ಬಿಕೊಂಡರಂತೆ. ತನ್ನ ತಾಯಿ ಪುಸ್ತಕವೊಂದಕ್ಕಾಗಿ ಹಲವು ವರ್ಷಗಳಿಂದ ಪರಿತಪಿಸುತ್ತಿದ್ದ ಸಂಗತಿ ಅರಿತ 15 ವರ್ಷದ ಬಾಲಕಿಯೊಬ್ಬಳು ತನ್ನ ಪಾಕೆಟ್​ವುನಿಯನ್ನೆಲ್ಲ ನೀಡಿ ಆ ಪುಸ್ತಕ ಕೊಂಡು, ಮನೆಗೆ ನಡೆದೇ ಹೋದಳಂತೆ! ಇಂಥ ನೂರಾರು ಅನುಭವಗಳನ್ನು ಹೃದಯದಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದಾರೆ ಕೃಷ್ಣ. ಪುಸ್ತಕಗಳನ್ನು ಓದಿಕೊಂಡು, ಅದರ ಜ್ಞಾನವನ್ನು ಸಮಾಜಕ್ಕೆ ಹಂಚುವ ಕೃಷ್ಣರ ಈ ಜ್ಞಾನಯಜ್ಞವನ್ನು ‘ವಸಂತ’ ಪ್ರಕಾಶನದ ಮುರಳಿ, ನೋ ಯುವರ್ ಸ್ಟಾರ್ ತಂಡದ ಸಾಮಾಜಿಕ ನವೋದ್ಯಮಿ ಜೈದೀಪ್ ರಾವ್ ಸೇರಿದಂತೆ ಹಲವು ಆತ್ಮೀಯರ ಬಳಗ ಬೆಂಬಲಿಸುತ್ತಿದೆ.

‘ಎಳವೆಯಲ್ಲೇ ಓದಿನ ಹವ್ಯಾಸ ರೂಪುಗೊಳ್ಳಬೇಕು. ಅದರಿಂದ ಭಾಷೆ ಮತ್ತು ವ್ಯಕ್ತಿತ್ವ ಗಟ್ಟಿಯಾಗುತ್ತದೆ’ ಎಂದು ಕೃಷ್ಣ ಬಲವಾಗಿ ನಂಬಿದ್ದು, ಮಕ್ಕಳಿಗೆ ಸಂಬಂಧಿಸಿದ ಕೃತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನಸಮುದಾಯಕ್ಕೆ ತಲುಪಿಸುತ್ತಿದ್ದಾರೆ. ಖ್ಯಾತ ಲೇಖಕ ನೀಲ್ ಗೈಮಾನ್ ‘ಅಮೆರಿಕನ್ ಗಾಡ್ಸ್’ ಕೃತಿಯಲ್ಲಿ ‘ಒಂದು ಪುಸ್ತಕಮಳಿಗೆ ಇರದ ಪಟ್ಟಣವೊಂದು ಪಟ್ಟಣವೇ ಅಲ್ಲ. ಅದು ತನ್ನನ್ನು ತಾನು ಪಟ್ಟಣ ಎಂದು ಎಂದೇನೋ ಕರೆಸಿಕೊಳ್ಳಬಹುದು; ಆದರೆ ಪುಸ್ತಕ ಮಳಿಗೆಯೊಂದನ್ನು ಒಳಗೊಳ್ಳದಿದ್ದ ಪಕ್ಷದಲ್ಲಿ ಅದು ತನಗೆ ತಾನೇ ಮಾಡಿಕೊಳ್ಳುವ ವಂಚನೆಯಾಗುತ್ತದಷ್ಟೇ’ ಎಂದಿದ್ದಾರೆ. ಆದರೆ ಕೃಷ್ಣ ಉದ್ಯಮಕ್ಕೆ ಮಾನವೀಯ ಸ್ಪರ್ಶ ನೀಡಿ, ಪುಸ್ತಕ ಮಳಿಗೆಯನ್ನು ಜ್ಞಾನದ ಭಂಡಾರವಾಗಿಸಿರುವುದು ವಿಶೇಷ. ಹೀಗೆ ಫುಟ್​ಪಾತಿನಲ್ಲಿ ಆರಂಭಗೊಂಡ ಪಯಣ ಉನ್ನತ ಧ್ಯೇಯದ ಸಾಕಾರದತ್ತ ತಲುಪಿರುವ ಪರಿ ಪ್ರೇರಣಾದಾಯಿ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top