ಒಂದು ಸ್ವರ್ಗ, ನೂರು ಬೆಳದಿಂಗಳ ನಗುವಿನ ಕತೆ ಇದು!

ದುಕು ಅದೆಷ್ಟೋ ಬಾರಿ ದುರಸ್ತಿ ಮಾಡಲಾಗದಷ್ಟು ಹದಗೆಟ್ಟು ಹೋಗಿ ನಮ್ಮನ್ನು ಛೇಡಿಸುತ್ತದೆ. ಏನೇ ಆಗಲಿ, ಮತ್ತೊಮ್ಮೆ ಬದುಕು ಆರಂಭಿಸೋಣ ಎಂದು ಸಂಕಲ್ಪಿಸಿ ಮುನ್ನಡೆದರೆ ಗೆಲುವಿನ ಹಲವು ಮೆಟ್ಟಿಲುಗಳು ನಮ್ಮ ಬರುವಿಕೆಗಾಗಿ ಕಾಯುತ್ತಿರುತ್ತವೆಯೇನೋ. ಜೀವನದಲ್ಲಿ ಒಮ್ಮೆ ಭೀಕರ ಸಂಕಷ್ಟ ಬಂದರೆ ತತ್ತರಿಸಿ ಹೋಗುವವರೇ ಜಾಸ್ತಿ. ಅಂಥದ್ದರಲ್ಲಿ ಈ ಮಹಿಳೆ ಜೀವನದಲ್ಲಿ ಕಷ್ಟಗಳು ಪದೇಪದೆ ಬಂದೆರಗಿದರೂ ಅದನ್ನೆಲ್ಲ ಅದ್ಭುತ ನಗುವಿನ ಮೂಲಕವೇ ಸೋಲಿಸಿದ್ದಾರೆ. ತಂಪಾದ ಬೆಳದಿಂಗಳಂಥ ಅವರ ನಗುವಿನ ಮುಂದೆ ಭಾರಿ ಆಪತ್ತುಗಳೆಲ್ಲ ಕರಗಿ ಹೋಗಿವೆ. ಅದಕ್ಕೆಂದೇ, ಅವರೀಗ ‘ಸ್ವರ್ಗ’ವನ್ನೂ ಸ್ಥಾಪಿಸಿದ್ದಾರೆ. ಕಷ್ಟಗಳ ನರಕದಿಂದ ನಗುವಿನ ಸ್ವರ್ಗದವರೆಗಿನ ಹಾದಿ ಎಂಥವರಿಗೂ ಪ್ರೇರಣೆ, ಸ್ಥೈರ್ಯ ನೀಡುವಂಥದ್ದು.

ಹೆಸರು ಸ್ವರ್ಣಲತಾ ಜೆ. ಹುಟ್ಟಿ, ಬೆಳೆದಿದ್ದು ಕರುನಾಡಿನ ಬೆಂಗಳೂರಿನಲ್ಲೇ. ನಾಲ್ವರು ಹೆಣ್ಣುಮಕ್ಕಳ ಪೈಕಿ ಎರಡನೆಯವರು ಇವರು. ಕೆಳಮಧ್ಯಮವರ್ಗದ ಕುಟುಂಬದಲ್ಲಂತೂ ಹೆಣ್ಣಾಗಿ ಹುಟ್ಟಿಬಿಟ್ಟರೆ ಅವರ ಕಷ್ಟಗಳಿಗೆ ಕೊನೆಯೇ ಇಲ್ಲ. ಓದಿನಲ್ಲಿ ಚುರುಕಾಗಿದ್ದ ಸ್ವರ್ಣಲತಾ 14ನೇ ವಯಸ್ಸಲ್ಲೇ ತನಗಿಂತ ಚಿಕ್ಕ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು. ಹತ್ತನೇ ತರಗತಿ ಪಾಸಾದ ಬಳಿಕ ಸೇರಿಕೊಂಡಿದ್ದು ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾಗೆ. ಕಾಲೇಜು ದಿನಗಳು ಚೆನ್ನಾಗಿಯೇ ಸಾಗಿತ್ತು. ಡಿಪ್ಲೊಮಾ ಮೂರನೇ ವರ್ಷದಲ್ಲಿದ್ದಾಗ ಎದುರಾಯಿತು ಆಘಾತ. ಹತ್ತಿರದ ಸಂಬಂಧಿಯೇ ಇವರಿಗೆ ಲೈಂಗಿಕ ಕಿರುಕುಳ ನೀಡಿದ! ಇದನ್ನು ಮನೆಯಲ್ಲಿ ಹೇಳಿದರೆ ಮಗಳಿಗೆ ಬೆಂಬಲ ನೀಡಿ, ಸ್ಥೈರ್ಯ ತುಂಬುವುದನ್ನು ಬಿಟ್ಟು ‘ನೀನು ಕಾಲೇಜಿಗೆ ಅಷ್ಟೇ ಅಲ್ಲ, ಎಲ್ಲಿಗೂ ಹೋಗಕೂಡದು’ ಎಂದು ಗೃಹಬಂಧನ ವಿಧಿಸಿದರು. ಒಂದು ವರ್ಷ ಮನೆಯಲ್ಲೇ ಉಳಿದುಕೊಂಡಾಗ ಸ್ವರ್ಣಾ ಮನದಲ್ಲಿ ಹೆಣ್ಣಾಗಿ ಹುಟ್ಟಿದ್ದೇ ತಪ್ಪಾ ಎಂಬ ಕಳವಳ ಆಕ್ರೋಶದ ರೂಪ ಪಡೆಯತೊಡಗಿತು. ಹಾಗೂಹೀಗೂ ಕಾಡಿಬೇಡಿ ಮನೆಯವರಿಗೆ ತಿಳಿಹೇಳಿ ಕಾಲೇಜಿಗೆ ಹೋಗಲು ಅನುಮತಿ ಪಡೆದುಕೊಂಡರು. ಅಷ್ಟರಲ್ಲಾಗಲೇ ಒಂದು ವರ್ಷ ಹಾಳಾಗಿತ್ತು. ಆದರೂ, ಹಳೆಯದನ್ನೆಲ್ಲ ಮರೆತು ಓದು ಮುಂದುವರಿಸಿದರು.

ಮತ್ತೆ ಕಾಲೇಜಿಗೆ ಹೋಗಲು ಶುರುಮಾಡಿ ಒಂದು ವಾರ ಆಗಿತ್ತಷ್ಟೇ. ಸಂಬಂಧಿಕರ ಜತೆ ಪರವೂರಿಗೆ ಹೋದಾಗ ಶಿವಮೊಗ್ಗದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತು. ಘಟನೆಯಲ್ಲಿ ಸ್ವರ್ಣಾರ ಅಜ್ಜಿ ಸ್ಥಳದಲ್ಲೇ ಮೃತಪಟ್ಟರೆ ಸ್ವರ್ಣಲತಾ ಕಾಲು ಮತ್ತು ದವಡೆಗೆ ಫ್ರ್ಯಾಕ್ಚರ್, ಹಲವೆಡೆ ತೀವ್ರ ಗಾಯಗಳಾದವು. ಪರಿಣಾಮ, ಆರು ತಿಂಗಳ ಕಾಲ ತಿನ್ನಲು, ಮಾತನಾಡಲು ಮತ್ತು ಎದ್ದು ಓಡಾಡಲು ಆಗಲಿಲ್ಲ. ಮೊದಲೇ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು. ಅಂಥದರಲ್ಲಿ ಹಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಬೇಕಾಯಿತು. ಆಸ್ಪತ್ರೆ ಬೆಡ್​ನಲ್ಲಿ ಮಲಗಿಕೊಂಡೇ ಕಾಲೇಜು ಪಠ್ಯಗಳನ್ನು ಓದುತ್ತಿದ್ದ ಸ್ವರ್ಣಾ ಒಂದು ವರ್ಷದ ನಂತರ ಗುಣಮುಖರಾಗಿ ಮತ್ತೆ ಕಾಲೇಜಿಗೆ ಹೋದರು. ಡಿಪ್ಲೊಮಾ ಪೂರ್ಣಗೊಳಿಸಿದ ಬಳಿಕ ಇಂಜಿನಿಯರಿಂಗ್ ಓದಬೇಕೆಂಬ ಆಸೆ. ಆಗ ತಂದೆ ಹೇಳಿದ್ದು- ‘ನಿನ್ನ ಹಿಂದೆ ಇನ್ನಿಬ್ಬರು ತಂಗಿಯರಿದ್ದಾರೆ. ನೀನು ಇಂಜಿನಿಯರಿಂಗ್ ಮಾಡಿದರೆ ಅವರನ್ನು ಓದಿಸಲು ನನ್ನಿಂದ ಖಂಡಿತ ಸಾಧ್ಯವಿಲ್ಲ…. ನೌಕರಿ ಮಾಡಿ ಮನೆಗೆ ನೆರವಾಗು’. ಮುಂದೆ ಓದಬೇಕೆಂಬ ಆಸೆಯಿದ್ದರೂ ಮನೆ ಸ್ಥಿತಿ ನೋಡಿ 18ನೇ ವಯಸ್ಸಿಗೆ ನೌಕರಿಗೆ ಸೇರಿಕೊಂಡರು. ಮುಂದೆ ಕೆಲ ಸಮಯದಲ್ಲೇ ತಂದೆಯ ನಿಧನವಾದ ಬಳಿಕ ಮತ್ತಷ್ಟು ಜವಾಬ್ದಾರಿ ಹೆಗಲೇರಿತು. ದುಡಿಯೋದು, ಮನೆ ಸಾಗಿಸೋದು ಈ ಜಂಜಾಟದಲ್ಲೇ ನೆರೆಮನೆಯ ಗುರುಪ್ರಸಾದ್​ರ ಜತೆ ಅನುರಾಗ ಅಂಕುರಿಸಿತು. ಮದುವೆಗೆ ಮನೆಯವರ ವಿರೋಧ. ಆದರೂ, ಮದುವೆಯಾಗಿ ಹೊಸಜೀವನ ಆರಂಭಿಸಿದರು. ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಪತಿ ಸಿಕ್ಕಿದ್ದರಿಂದ ಇನ್ನು ತನ್ನ ಕಷ್ಟದ ದಿನಗಳೆಲ್ಲ ಕಳೆಯಿತು ಎಂದು ಸ್ವಣಾಲತಾ ನಿರುಮ್ಮಳರಾದರು. ಗಂಡುಮಗುವಿನ ಜನನ(ಗಗನ್) ಸಂತೋಷ ಇಮ್ಮಡಿಗೊಳಿಸಿತು.

ಆ ವಿಧಿ ಸ್ವರ್ಣಲತಾರ ಚೆಂದದ ನಗು ನೋಡಿ ಕರುಬಿತೇನೋ. ಅಂದು 2009ರ ಅಕ್ಟೋಬರ್ 26. ಬೆಳಗ್ಗೆ ಜ್ವರ ಬಂದಿದ್ದರಿಂದ ಮಾತ್ರೆ ತೆಗೆದುಕೊಂಡು ಮಲಗಿದ ಸ್ವರ್ಣಲತಾ ಮಧ್ಯಾಹ್ನ ಎದ್ದು ನಡೆಯಲು ಹೋದಾಗ ಕುಸಿದು ಬಿದ್ದರು. ದೇಹಚಲನೆ ಆಗುತ್ತಿಲ್ಲ. ಗಾಬರಿಗೊಂಡು ಪತಿಗೆ ವಿಷಯ ತಿಳಿಸಲು ಫೋನ್ ತೆಗೆದುಕೊಳ್ಳಬೇಕೆಂದರೂ ಸಾಧ್ಯವಾಗುತ್ತಿಲ್ಲ. ತೆವಳುತ್ತಲೇ ಫೋನ್ ಬಳಿ ಸಾಗಿ ಗಂಡನಿಗೆ ಬೇಗ ಬರಲು ಹೇಳಿದರು. ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಹಲವು ಪರೀಕ್ಷೆಗಳನ್ನು ನಡೆಸಿದಾಗ ಗೊತ್ತಾಗಿದ್ದು ಅದು multiple sclerosis ಎನ್ನಲಾಗುವ ದೀರ್ಘಕಾಲೀನ ನರಸಂಬಂಧಿ ಕಾಯಿಲೆ. ಇದರಲ್ಲಿ ದೇಹದ ಹಲವು ಭಾಗಗಳು ಪಾರ್ಶ್ವವಾಯುಗೆ ತುತ್ತಾಗಿ, ಚಲನೆ ಕಳೆದುಕೊಂಡುಬಿಡುತ್ತವೆ. ‘ಇಂಥ ಕಾಯಿಲೆ ನನಗೇಕೆ ಬಂತಪ್ಪ ದೇವರೇ’ ಎಂದು ಆಘಾತಗೊಂಡ ಸ್ವರ್ಣಾ ಬದುಕಿನ ಮತ್ತೊಂದು ಹೋರಾಟಕ್ಕೆ ಅಣಿಯಾಗಬೇಕಾಯಿತು. ಉತ್ಸಾಹದಿಂದ ಓಡಾಡಿಕೊಂಡಿದ್ದ ತಾನು ಈಗ ಮತ್ತೊಬ್ಬರ ಮೇಲೆ ಅವಲಂಬಿತವಾಗಬೇಕಾ ಎಂಬ ಚಿಂತೆ ಕಾಡತೊಡಗಿತು. ಆಗ ಮಗನಿಗೆ ಬರೀ ಎರಡು ವರ್ಷ. ದೇಹ ಶೇ. 70ರಷ್ಟು ಚಲನೆ ಕಳೆದುಕೊಂಡಿತ್ತು. ‘ಇಂಥ ಸ್ಥಿತಿಯಲ್ಲಿ ಬದುಕೋದಕ್ಕಿಂತ ಸತ್ತುಹೋಗಬಾರದೆ ಎಂಬ ಯೋಚನೆ ಬಂದಿತ್ತಾದರೂ ಮಗ ಏನು ತಪು್ಪ ಮಾಡಿದ್ದಾನೆ, ಅವನೇಕೆ ತಬ್ಬಲಿಯಾಗಬೇಕು? ಎಂದು ಪ್ರಶ್ನಿಸಿಕೊಂಡು ಆ ಪರಿಸ್ಥಿತಿ ಎದುರಿಸಲು ಸಜ್ಜಾದೆ’ ಎನ್ನುತ್ತಾರೆ ಸ್ವರ್ಣಲತಾ. ಇವರ ಕಾಯಿಲೆ ಕಂಡು ನೆರವಾಗೋದು ಬಿಟ್ಟು ಖಾಸಗಿ ಕಂಪನಿ ಕೆಲಸದಿಂದಲೇ ತೆಗೆದುಹಾಕಿತು. ಈ ಮಧ್ಯೆ, ಮತ್ತೊಮ್ಮೆ ಗರ್ಭೀಣಿಯಾದ ಸ್ವರ್ಣಾ ‘ಈ ಬಾರಿ ಹೆಣ್ಣುಮಗು ಹುಟ್ಟಲಿ. ಆಕೆಯನ್ನು ರಾಣಿಯಂತೆ ಬೆಳೆಸುತ್ತೇನೆ’ ಎಂದು ದೇವರಲ್ಲಿ ಮೊರೆಯಿಟ್ಟರು. ಆ ಮಗುವಿಗೆ ತನ್ನಂಥ ಕಾಯಿಲೆ ಬರದಿರಲಿ ಎಂದು ಮುಂಜಾಗ್ರತೆ ವಹಿಸಿ ಯೋಗ, ಧ್ಯಾನ, ಸ್ವಿಮಿಂಗ್ ಹೀಗೆ ಹಲವು ತಂತ್ರ ಪ್ರಯೋಗಿಸಿದರು. 2011ರಲ್ಲಿ ಮುದ್ದಾದ ಹೆಣ್ಣುಮಗುವಿಗೆ (ಗಾನಾ) ಜನ್ಮ ನೀಡಿದರು. ಪತಿಗೆ ಕೊಯಮತ್ತೂರಿನಲ್ಲಿ ಉದ್ಯೋಗ ದೊರೆತಿದ್ದರಿಂದ ಕುಟುಂಬ ಅಲ್ಲಿ ವರ್ಗವಾಯಿತು. 2012ರಲ್ಲಿ ಮತ್ತೊಮ್ಮೆ ಆಸ್ಪತ್ರೆವಾಸ ಎದುರಾಯಿತು. ಆಗ ಎರಡನೇ ಮಗುವಿಗೆ ಬರೀ 10 ತಿಂಗಳು. 92 ದಿನಗಳ ಆಸ್ಪತ್ರೆವಾಸದಲ್ಲಿ ಹೊಸ ಜಗತ್ತನ್ನೇ ಕಂಡರು. ಚಿಕ್ಕಚಿಕ್ಕ ಮಕ್ಕಳು, ವಯಸ್ಸಾದವರು ನರಸಂಬಂಧಿ ಕಾಯಿಲೆಯಿಂದ ನರಕಯಾತನೆ ಅನುಭವಿಸುತ್ತಿದ್ದರು. ಈ ಕಾಯಿಲೆ ಸಂಪೂರ್ಣ ಗುಣಮುಖವಾಗುವುದಿಲ್ಲವಾದರೂ ಅದನ್ನು ಮ್ಯಾನೇಜ್ ಮಾಡಿ, ಜೀವನದಬಂಡಿ ಮುಂದೆ ಸಾಗಿಸಬಹುದು, ಅದಕ್ಕಾಗಿ ಇಂಥ ರೋಗಿಗಳಲ್ಲಿ ಜೀವನೋತ್ಸಾಹ ತುಂಬಬೇಕು ಎಂದು ನಿರ್ಣಯಿಸಿದ ಸ್ವರ್ಣಾ ಅದಕ್ಕಾಗಿ ಮೊದಲು ತಮ್ಮ ನೋವನ್ನೆಲ್ಲ ಎದೆಯಾಳದಿಂದ ತೆಗೆದು ಬಿಸಾಕಿ ಹೊಸದೊಂದು ಮುಗುಳ್ನಗೆಯನ್ನು ಧರಿಸಿಕೊಂಡರು. ಸಂಜೆ ಆಸ್ಪತ್ರೆಯಲ್ಲೇ ರೋಗಿಗಳಿಗೆ ಭಜನೆ, ಹಾಡು ಜತೆಗೆ ಯೋಗ, ಧ್ಯಾನ ಹೇಳಿಕೊಡುತ್ತ ಮೆಹಂದಿ, ಪೇಂಟಿಂಗ್ ಎಲ್ಲ ಕಲಿಸತೊಡಗಿದರು. ನೋಡನೋಡುತ್ತ ಆಸ್ಪತ್ರೆಯ ವಾತಾವರಣವೇ ಬದಲಾಯಿತು. ಜೀವನವೇ ಮುಗಿದುಹೋಯಿತು ಎಂಬಂತೆ ಮುದುಡಿಹೋಗಿದ್ದ ಅನೇಕ ರೋಗಿಗಳು ಹೊಸ ಕೌಶಲಗಳನ್ನು ಕಲಿಯತೊಡಗಿ, ಬಿಜಿಯಾದರು. ಸ್ವರ್ಣಾ ರೋಗಿಗಳನ್ನೇ ಮಾಡೆಲ್​ಗಳಾಗಿಸಿ ಫೋಟೋಗ್ರಫಿ ಶುರುಮಾಡಿದರು, ಅವುಗಳ ಸಂಗ್ರಹವನ್ನು ಕ್ಯಾಲೆಂಡರ್ ಆಗಿ ತಂದರು.

2013ರಲ್ಲಿ ಬೇರೆಯವರ ನೆರವಿನಿಂದ, 2015ರಲ್ಲಿ ವಾಕರ್ ಸಹಾಯದಿಂದ ನಡೆಯಲು ಆರಂಭಿಸಿ 2016ರಲ್ಲಿ ಗಾಲಿಕುರ್ಚಿಗೆ ಅವಲಂಬಿತರಾದರು. ನರಸಂಬಂಧಿ ರೋಗಿಗಳಿಗೆ ತಾಂತ್ರಿಕ ಮಾಹಿತಿ ಮತ್ತು ಸಕಾರಾತ್ಮಕ ಜೀವನ ಸಾಗಿಸಲು ಕೌನ್ಸೆಲಿಂಗ್ ನೀಡಬೇಕೆಂದು ನಿರ್ಧರಿಸಿ ಸ್ವರ್ಣಾ-ಗುರು ದಂಪತಿ ಸ್ವರ್ಗ ಫೌಂಡೇಷನ್ (www.swargafoundation.org) ([email protected]) ಅನ್ನು ಸ್ಥಾಪಿಸಿದ್ದು, ಅರಿವಿನ ಬೆಳಕು ವಿಸ್ತರಿಸಿದ್ದಾರೆ. ಅಷ್ಟೆ ಅಲ್ಲ, ಕೊಯಮತ್ತೂರಿನಲ್ಲಿ ಅಂಗವಿಕಲ-ಸ್ನೇಹಿ ಸಾರಿಗೆವ್ಯವಸ್ಥೆ ಪರಿಚಯಿಸಿದ್ದು, ಅದು ರ್ಯಾಂಪ್, ಕೆಮಿಕಲ್ ಶೌಚಗೃಹ, ಸೋಫಾ ಸೆಟ್ ಒಳಗೊಂಡಿದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರು ಈ ಮಿನಿಬಸ್ ಅನ್ನು ಆಶ್ರಯಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ರ‍್ಯಾಂಪ್ ಮತ್ತು ಶೌಚಗೃಹ ಇಲ್ಲದ್ದರಿಂದ ಹಲವು ಮಕ್ಕಳು ಶಾಲೆಯನ್ನೇ ಬಿಟ್ಟಿದ್ದರು. ಇದನ್ನು ಗಮನಿಸಿ ಸ್ವರ್ಗ ಫೌಂಡೇಷನ್ ಕೊಯಮತ್ತೂರಿನ ಹಲವು ಸರ್ಕಾರಿ ಶಾಲೆಗಳಲ್ಲಿ ರ‍್ಯಾಂಪ್ ಅಳವಡಿಸಿ, ಅಂಗವಿಕಲ-ಸ್ನೇಹಿ ಶೌಚಗೃಹ ನಿರ್ವಿುಸಿದೆ. ಇದೇ ನಗರದ ರೈಲ್ವೆ ನಿಲ್ದಾಣದ ಪ್ರತಿ ಪ್ಲಾಟ್​ಫಾಮರ್್​ನಲ್ಲೂ ಅಂಗವಿಕಲ-ಸ್ನೇಹಿ ಶೌಚಗೃಹ ನಿರ್ವಿುಸಲಾಗಿದೆ. ಅಲ್ಲದೆ, ಮಹಾನಗರಪಾಲಿಕೆ ನೀಡಿರುವ ಜಾಗದಲ್ಲಿ ಉಚಿತ ಫಿಜಿಯೋಥೆರಪಿ ಕೇಂದ್ರ ತೆರೆಯಲಾಗಿದ್ದು, ಬಡರೋಗಿಗಳಿಗೆ ವರದಾನವಾಗಿ ಪರಿಣಮಿಸಿದೆ. ಮುಂದೆ ಇಂಥ ರೋಗಿಗಳಿಗೆ ಆಧಾರ/ಆಶ್ರಯ ಕೇಂದ್ರ ತೆರೆಯಬೇಕೆಂಬ ಆಶಯ ಈ ದಂಪತಿಯದ್ದು.

ಸ್ವಾರಸ್ಯವೆಂದರೆ, ‘ಮಿಸೆಸ್ ಕೊಯಮತ್ತೂರು’ ಸ್ಪರ್ಧೆಯಲ್ಲಿ ಭಾಗವಹಿಸಿ ‘ಮಿಸೆಸ್ ಕಾನ್ಪಿಡೆನ್ಸ್’ ಬಿರುದು ಗಳಿಸಿರುವ ಸ್ವರ್ಣಲತಾ ಗೋವಾದಲ್ಲಿ ನಡೆದ ‘ಮಿಸೆಸ್ ಇಂಡಿಯಾ’ ಸ್ಪರ್ಧೆಯಲ್ಲಿ ಮೊದಲ ರನ್ನರಪ್ ಆಗಿ ಹೊರಹೊಮ್ಮಿದ್ದಾರೆ. ಮೊಟಿವೇಷನಲ್ ಸ್ಪೀಕರ್ ಆಗಿ 200ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. 10 ಭಾಷೆಗಳನ್ನು ಕಲಿತಿದ್ದು, ವೃತ್ತಿಪರ ಗಾಯಕಿಯೂ ಆಗಿದ್ದಾರೆ. ಹಲವು ಸಂಗೀತವಾದ್ಯಗಳನ್ನು ನುಡಿಸುವ ಅವರು ಉತ್ತಮ ಫೋಟೋಗ್ರಾಫರ್ ಮತ್ತು ಬರಹಗಾರ್ತಿಯೂ ಹೌದು.

‘‘ಶೇ. 80ರಷ್ಟು ಅಂಗವೈಕಲ್ಯ ಹೊಂದಿರುವ ನಾನು ಇಷ್ಟೆಲ್ಲ ಮಾಡಲು ಸಾಧ್ಯವಾದರೆ ಶೇ.100ರಷ್ಟು ಸಾಮಾನ್ಯವಾಗಿರುವ ವ್ಯಕ್ತಿಗಳು ಎಷ್ಟೆಲ್ಲ ಮಾಡಬಹುದು? ಆದರೆ ಮಾಡುತ್ತಿಲ್ಲ, ಹಾಗಾದರೆ ನಿಜಾರ್ಥದಲ್ಲಿ ವೈಕಲ್ಯ ಯಾರಿಗಿದೆ ಹೇಳಿ’ ಎಂದು ಪ್ರಶ್ನಿಸುತ್ತ ಸಮಾಜದ ಕಣ್ಣು ತೆರೆಸುತ್ತಾರೆ. ತಾವು ಅಂಗವೈಕಲ್ಯವನ್ನು ಮೆಟ್ಟಿ ನಿಂತದ್ದಲ್ಲದೆ, ಸಮಾಜಕ್ಕೆ ಊರುಗೋಲಾಗಿ ಅಸಂಖ್ಯ ಜನರಿಗೆ ಸ್ಪೂರ್ತಿ ತುಂಬುತ್ತಿರುವ ಸ್ವರ್ಣಲತಾ ಮಾತಿನ ಕೊನೆಯಲ್ಲಿ ನನ್ನ ಮನವಿ ಮೇರೆಗೆ ‘ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ಹೃದಯದ ತಾಳದಲಿ…’’ ಎಂದು ಹಾಡುತ್ತಿರಬೇಕಾದರೆ, ನನ್ನ ಕಣ್ಣಂಚು ಖುಷಿಯಲ್ಲಿ ಒದ್ದೆಯಾಗಿತ್ತು, ಬದುಕಿನ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿತು.

ನಮ್ಮ ನಡುವೆಯೇ ಇಂಥ ನೈಜಸಾಧಕರು ಇರುವಾಗ ಪ್ರೇರಣೆಗೇನು ಕೊರತೆ?

ಬನ್ನಿ, ನೋವುಗಳನ್ನೆಲ್ಲ ಮರೆತು, ಮತ್ತೊಮ್ಮೆ ಬದುಕೋಣ! ನಮ್ಮ ಬಾಳಿನಲ್ಲೊಂದು ಸುಂದರ ಸ್ವರ್ಗ ನಿರ್ವಿುಸಿಕೊಳ್ಳೋಣ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)