ರಥದಲ್ಲಿ ಬಂದ ವಿವೇಕಾನಂದರು ಹೇಳಿದ್ದೇನು ಗೊತ್ತೆ?

| ರವೀಂದ್ರ ಎಸ್​. ದೇಶಮುಖ್​

ಸಮಾಜ ದುರ್ಬಲವಾಗುವುದು ಯಾವಾಗ? ಹೇಗೆ? ನಮ್ಮದೇ ಮೌಲ್ಯಗಳು, ಶಕ್ತಿ, ಸಂಸ್ಕೃತಿ, ಪರಂಪರೆಯನ್ನು ಮರೆತಾಗ. ನಮಗೇ ನಮ್ಮ ಶಕ್ತಿ ಅಥವಾ ಬಲದ ಅರಿವಿರದಿದ್ದರೆ ಆವರಿಸಿಕೊಳ್ಳುವುದು ಕೀಳರಿಮೆ ಇಲ್ಲವೇ ಜಡತ್ವವೇ. ಮಹಾಶಕ್ತಿಶಾಲಿಯೂ, ತೇಜಸ್ಸಿನ ದಿವ್ಯರೂಪವೂ ಆದ ಆಂಜನೇಯನಿಗೂ ‘ನೀನು ಸಮುದ್ರವನ್ನು ಜಿಗಿಯಬಲ್ಲೆ’ ಎಂದು ಮನವರಿಕೆ ಮಾಡಿಕೊಟ್ಟ ಬಳಿಕವೇ ಆ ಶಕ್ತಿ ಆವಿರ್ಭವಿಸಿತು, ಆಂಜನೇಯ ಮುಂದೆ ಮತ್ತಷ್ಟು ಸತ್ ಸಂಕಲ್ಪಗಳನ್ನು ಸಾಕಾರಗೊಳಿಸಲು ಶಕ್ಯವಾಯಿತು. ಸಿಡಿಲಸಂತ ಸ್ವಾಮಿ ವಿವೇಕಾನಂದರು 125 ವರ್ಷಗಳ ಹಿಂದೆ ಷಿಕಾಗೋದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸಿಂಹವಾಣಿ ಮೊಳಗಿಸುವವರೆಗೂ ಜಗತ್ತಿನ ಬಹುತೇಕರು ಭಾರತವನ್ನು ಬಡ, ಕೃಪಣ, ಹಾವಾಡಿಗರ ದೇಶ ಎಂದೇ ಭಾವಿಸಿದ್ದರು. ದೇವತೆಗಳೂ ಜನ್ಮ ಎತ್ತಲು ಕಾತರಿಸುವ ಪುಣ್ಯಭೂಮಿ ನಮ್ಮ ಭಾರತ, ಜಗತ್ತಿಗೆ ಸಭ್ಯತೆಯನ್ನು, ಜೀವನದರ್ಶನವನ್ನು ಹೇಳಿಕೊಟ್ಟಿದ್ದೇ ಈ ಭರತನ ಭೂಮಿ ಎಂಬ ಸತ್ಯವನ್ನು ವಿವೇಕಾನಂದರು ಗಟ್ಟಿದನಿಯಲ್ಲಿ ಮೊಳಗಿಸಿದಾಗ ಭಾರತೀಯರೆಲ್ಲ ಜಡನಿದ್ರೆಯಿಂದ ಎಚ್ಚೆತ್ತರು! ವಿಶ್ವ ಭಾರತವನ್ನು ನೋಡುವ ದೃಷ್ಟಿಯೇ ಬದಲಾಯಿತು!

ವ್ಯಕ್ತಿನಿರ್ವಣ, ರಾಷ್ಟ್ರನಿರ್ವಣ, ಸೇವೆ, ತ್ಯಾಗದ ಪರಮೋಚ್ಚ ಮೌಲ್ಯಗಳನ್ನು ತಿಳಿಸಿಕೊಟ್ಟ ವಿವೇಕಾನಂದರ ಸಂದೇಶಗಳು ಭವಿಷ್ಯದ ಭಾರತ ನಿರ್ವಿುಸಲು ಪಥದರ್ಶಕ. ಆ ವಿವೇಕವಾಣಿಯನ್ನು ಮತ್ತೆ ಕರುನಾಡಿನಾದ್ಯಂತ ಮೊಳಗಿಸುವ ವಿಶಿಷ್ಟ ಪ್ರಯತ್ನವೊಂದು ಅದೆಷ್ಟು ಸಾರ್ಥಕವಾಯಿತು ಎಂದರೆ ಸಾಮರಸ್ಯದ ದರ್ಶನವಾಗಿ ಅದೆಷ್ಟೋ ಜನರ ಹೃದಯಗಳಲ್ಲಿ ಮಾನವೀಯತೆಯ ಪ್ರೀತಿ ಚಿಗುರೊಡೆಯಿತು, ಷಿಕಾಗೋ ಭಾಷಣದ ಮೂಲಕ ದಿಗ್ವಿಜಯ ಸಾಧಿಸಿದ್ದ ವಿವೇಕಾನಂದರು ಈ ಬಾರಿ ಪ್ರತಿಮೆ ರೂಪದಲ್ಲಿ ರಥದಲ್ಲಿ ವಿರಾಜಮಾನರಾಗುವ ಮೂಲಕ ಜಾಗೃತಿಯ ಹೊಸಪರ್ವವೊಂದು ಆರಂಭಗೊಂಡಿತು. ಅದಕ್ಕೆಂದೆ ಈ ರಥಯಾತ್ರೆಗೆ ‘ಮತ್ತೊಮ್ಮೆ ದಿಗ್ವಿಜಯ’ ಎಂಬ ಸಾರ್ಥಕ ಹೆಸರು! ಮಾರ್ಗರೆಟ್ ಎಲಿಜಬೆತ್ ನೊಬೆಲ್ ವಿವೇಕಾನಂದರ ಪ್ರೇರಣೆಯಿಂದ ಸೋದರಿ ನಿವೇದಿತಾ ಆಗಿ ಭಾರತವನ್ನು ಸ್ವತಂತ್ರಗೊಳಿಸಲು ಕ್ರಾಂತಿಕಾರಿಗಳ ಜತೆ ಸೇರಿ ಹೋರಾಡಿದ್ದು, ಭಾರತದ ಕುರಿತಂತೆ ಕನಸುಗಳನ್ನು ಕನವರಿಸಿ ಅದನ್ನು ಸಾಕಾರಗೊಳಿಸಲು ದುಡಿದದ್ದು ಪ್ರತಿ ಭಾರತೀಯನ ಪಾಲಿಗೆ ಪ್ರೇರಣೆ ಮತ್ತು ರೋಮಾಂಚನದ ಸಂಗತಿ. 2018 ಸೋದರಿ ನಿವೇದಿತಾಳ 150ನೇ ಜಯಂತಿ ಪೂರ್ಣಗೊಂಡ ವರ್ಷವೂ ಆಗಿದ್ದರಿಂದ ರಥದ ಮುಂಭಾಗದಲ್ಲಿ ಇರಿಸಿದ ನಿವೇದಿತಾಳ ಪ್ರತಿಮೆ ಸಾವಿರಾರು ಮಹಿಳೆಯರಲ್ಲಿ ಉತ್ಸಾಹದ ತರಂಗವನ್ನೇ ಸೃಷ್ಟಿಸಿತು. ಆಗಲೇ ಮಹಿಳಾ ಸಮಾನತೆ ಬಗ್ಗೆ ಮಾತನಾಡಿ, ಆ ನಿಟ್ಟಿನಲ್ಲಿ ಪ್ರಯತ್ನವೂ ಮಾಡಿದ್ದ ನಿವೇದಿತೆ ಪ್ರತಿಮೆ ರೂಪದಲ್ಲಿ ರಥದಲ್ಲಿ ಕುಳಿತು ಹಳ್ಳಿ-ಹಳ್ಳಿಗೂ ಬಂದಾಗ ಹಳೇ ಜಾಡ್ಯವೊಂದು ತೊಲಗಿ, ಭಗಿನಿಯರ ಆತ್ಮವಿಶ್ವಾಸ ಹೆಚ್ಚಿಸಿದ್ದು ಎಂಥ ದೊಡ್ಡ ಸಕಾರಾತ್ಮಕ ಪರಿವರ್ತನೆ ಅಲ್ಲವೇ?

ಸ್ವಾಮಿ ವಿವೇಕಾನಂದರ ಷಿಕಾಗೋ ಭಾಷಣದ 125ನೇ ಸಂಭ್ರಮಾಚರಣೆಯನ್ನು ನೆಪವಾಗಿಟ್ಟುಕೊಂಡು ವಿವೇಕಸಂದೇಶಗಳನ್ನು ನಾಡಿನ ಮನೆಮನೆಗೂ ತಲುಪಿಸಲು ವರ್ಷವಿಡೀ ಬಿಡುವಿಲ್ಲದೆ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ‘ಯುವಾ ಬ್ರಿಗೇಡ್’ ಸಂಘಟನೆಯೇ ಈ ‘ಮತ್ತೊಮ್ಮೆ ದಿಗ್ವಿಜಯ’ ಯಾತ್ರೆಯ ರೂವಾರಿ. ಆಗಸ್ಟ್ 31ರಂದು ಬೆಂಗಳೂರಿನಿಂದ ಆರಂಭಗೊಂಡು 65 ದಿನಗಳ ಕಾಲ ನಾಡಿನುದ್ದಕ್ಕೂ ಸಂಚರಿಸಿದ ಯಾತ್ರೆ ಬಾಗಲಕೋಟೆಯಲ್ಲಿ ಸಮಾರೋಪಗೊಂಡರೂ ಬಳಿಕ ಗೋವಾದಲ್ಲಿ ಸಂಚರಿಸಿ ತಮಿಳುನಾಡು ತಲುಪಿ ನವೆಂಬರ್ 2ರಂದು ಕೊನೆಗೊಂಡಿತು. ಸ್ವಾಮಿ ವಿವೇಕಾನಂದ ಮತ್ತು ಸೋದರಿ ನಿವೇದಿತಾ ಕನಸಿನ ಭಾರತ ನಿರ್ವಣಕ್ಕೆ ಅಣಿಯಾಗೋಣ; ಮುಖ್ಯವಾಗಿ ನಮ್ಮಲ್ಲಿನ ಕೊರತೆಗಳನ್ನು ನೀಗಿಸಿಕೊಂಡು ‘ನಾವೆಲ್ಲ ಒಂದೇ’ ಎಂಬ ಏಕತಾಸೂತ್ರದಲ್ಲಿ ಮುಂದೆ ಸಾಗೋಣ ಎಂಬ ಸಂಕಲ್ಪಶಕ್ತಿಯೊಂದು ಜನರಿಂದ ಹೊಮ್ಮಿದ್ದು ಈ ಯಾತ್ರೆಯ ಯಶಸ್ಸು ಮತ್ತು ಸಾರ್ಥಕತೆಗೆ ನಿದರ್ಶನ. ನಾಡನ್ನು ಬೆಸೆದ ಈ ರಥಯಾತ್ರೆ ಸಾಮರಸ್ಯ, ಸಹಬಾಳ್ವೆಯ ಶಕ್ತಿಯನ್ನು ತೋರಿಸಿಕೊಟ್ಟಿದೆ. ವಿವೇಕ ಚಿಂತನೆಯ ಅನುಷ್ಠಾನ ಸಮಾಜದ, ರಾಷ್ಟ್ರದ ಪ್ರಮುಖ ಸಮಸ್ಯೆಗಳಿಗೆ ಮದ್ದರೆಯಬಲ್ಲದು ಎಂಬ ಅರಿವು ಮೂಡಿಸಿದೆ.

ಅಷ್ಟಕ್ಕೂ, ನಮ್ಮಲ್ಲಿ ಜನರನ್ನು, ಸಮುದಾಯವನ್ನು ಜಾಗೃತಗೊಳಿಸಲು ರಥಯಾತ್ರೆಗಳ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದ ದೊಡ್ಡ ಪರಂಪರೆಯೇ ಇದೆ. ಜನರ ಬಳಿಯೇ ಹೋಗಿ ಅವರಿಗೆ ವಾಸ್ತವದ ದರ್ಶನ ಮಾಡಿಸಿ, ಉತ್ಸಾಹ ತುಂಬುವುದಿದೆಯಲ್ಲ ಅದು ಇಡೀ ಸಮಾಜಕ್ಕೆ ಹೊಸ ಚೈತನ್ಯ ತುಂಬಿದಂತೆ. ಆ ನಿಟ್ಟಿನಲ್ಲಿ ‘ಮತ್ತೊಮ್ಮೆ ದಿಗ್ವಿಜಯ’ ಸಾಧಿಸಿದ ಜನಜಾಗೃತಿಯೂ ಅಪೂರ್ವ. ಒಟ್ಟು 65 ದಿನಗಳಲ್ಲಿ 6 ಸಾವಿರ ಕಿ.ಮೀ. ಸಂಚರಿಸಿದ ರಥಯಾತ್ರೆ ಕರ್ನಾಟಕದ 29 ಜಿಲ್ಲೆಗಳಲ್ಲಿ, ಕೇರಳದ ಕಾರಸಗೋಡು ಜಿಲ್ಲೆಯಲ್ಲಿ, ಗೋವಾ ರಾಜ್ಯದಲ್ಲೆಲ್ಲ ಓಡಾಡಿತು. ಈ ಸಂದರ್ಭದಲ್ಲಿ ಒಟ್ಟು ನಡೆದ ಕಾರ್ಯಕ್ರಮಗಳು 175 ಮತ್ತು ಶೋಭಾಯಾತ್ರೆಗಳು 250ಕ್ಕೂ ಹೆಚ್ಚು. 5 ಲಕ್ಷ ಜನರ ನೇರಸಂಪರ್ಕ, ಸಮೂಹ ಮಾಧ್ಯಮಗಳ ಮೂಲಕ 50 ಲಕ್ಷ, ಸಾಮಾಜಿಕ ಮಾಧ್ಯಮಗಳ ಮೂಲಕ 1 ಕೋಟಿ ಜನರ ಸಂಪರ್ಕ ಮಾಡಲಾಯಿತು.

ವಿವೇಕಾನಂದರನ್ನು ಗರ್ಭಗುಡಿಗಳಲ್ಲಿ, ಬೃಹತ್ ಪುಸ್ತಕಗಳಲ್ಲಿ ಕಂಡಿದ್ದ ಶ್ರೀಸಾಮಾನ್ಯರು ರಥದ ಮೂಲಕ ಅವರ ಮೂರ್ತಿ ಬೀದಿ-ಬೀದಿಗೆ ಬಂದಾಗ ರೋಮಾಂಚನಗೊಂಡರು, ಸಿಡಿಲಸಂತನಿಗೆ ಮನದುಂಬಿ ಜೈಕಾರ ಹಾಕಿದರು. ಮುನಿದಿದ್ದ ಮನಸುಗಳು ಒಂದಾದವು, ದ್ವೇಷ ತುಂಬಿದ್ದ ಹೃದಯಗಳು ನಿರ್ಮಲವಾದವು. ಈ ರಥಯಾತ್ರೆಗೆ ಪ್ರೇರಣೆ ನೀಡಿದ್ದು ಚೆನ್ನೈ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಗೌತಮಾನಂದಜೀ ಮಹಾರಾಜ್. ಅವರ ನಿರ್ದೇಶನದಂತೆ ಕೊಯಮತ್ತೂರಿನ ರಾಮಕೃಷ್ಣ ಆಶ್ರಮದಿಂದ ರಥ, ಚೆನ್ನೈ ಮಠದಿಂದ ನಿವೇದಿತೆಯ ಮೂರ್ತಿಯನ್ನು ತರಲಾಯಿತು.

ಎಲ್ಲ ಯೋಗಗಳ ಸಂಗಮ: ‘ರಥಯಾತ್ರೆಗೂ ಮುನ್ನ ಸಾಕಷ್ಟು ತಯಾರಿ ನಡೆಸಲಾಗಿತ್ತು, ಹಾಗಾಗಿ ಅಲ್ಲಿ ಕರ್ಮಯೋಗವಿತ್ತು. ರಥ ಸಂಚರಿಸಿದಲ್ಲೆಲ್ಲ ಜನರು ಭಕ್ತಿಭಾವದಿಂದ ವಿವೇಕಾನಂದ-ನಿವೇದಿತಾರಿಗೆ ನಮಿಸುತ್ತಿದ್ದರು, ಮಾತೆಯರು ಹೂಗಳನ್ನು ಅರ್ಪಿಸಿ, ಪೂರ್ಣಕುಂಭದ ಸ್ವಾಗತ ಕೋರಿ ಧನ್ಯತೆ ಅನುಭವಿಸುತ್ತಿದ್ದರು. ಹಾಗಾಗಿ, ಭಕ್ತಿಯೋಗವಿತ್ತು. ವಿವೇಕಾನಂದರ ಚಿಂತನೆಗಳು ಇಂದಿನ ಸಮಸ್ಯೆಗಳಿಗೆ ಹೇಗೆ ಪರಿಹಾರ ಒದಗಿಸಬಲ್ಲವು ಎಂಬುದನ್ನು 175ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ವಿವರಿಸಲಾಯಿತು. ಆದ್ದರಿಂದ ಜ್ಞಾನಯೋಗವೂ ಮಿಳಿತಗೊಂಡು ಎಲ್ಲ ಯೋಗಗಳ ಸಂಗಮವಾಗಿತ್ತು. ಎಲ್ಲೆಲ್ಲೂ ವಿವೇಕಾನಂದರ ಹೆಸರು, ಚಿಂತನೆಗಳು ಅನುರಣನಗೊಂಡವು’ ಎಂದು ವಿವರಿಸುವ ಯುವಾ ಬ್ರಿಗೇಡ್​ನ ಮಾರ್ಗದರ್ಶಕ ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ನಿಜವಾದ ಅರ್ಥದಲ್ಲಿ ತರುಣರ ಹೃದಯದಲ್ಲಿ ವಿವೇಕಾನಂದರು ಪ್ರತಿಷ್ಠಾಪಿತರಾಗಿದ್ದಾರೆ ಎನ್ನುತ್ತಾರೆ.

ಮುಸ್ಲಿಮರು ಧಾವಿಸಿ ಬಂದರು: ರಾಷ್ಟ್ರೀಯತೆಯ ಅರಿವು ಜಾಗೃತವಾದರೆ ಅಸಾಧಾರಣ ಪರಿವರ್ತನೆಗಳು ಸಾಕಾರಗೊಳ್ಳಬಹುದು ಎಂಬುದನ್ನು ಈ ಯಾತ್ರೆ ತೋರಿಸಿಕೊಟ್ಟಿತು. ಅದೆಷ್ಟೋ ಕಡೆ ಮುಸ್ಲಿಂ ಸಮಾಜದ ಗಣ್ಯರು ದರ್ಗಾಗಳಿಂದ ಆಗಮಿಸಿ ರಥಕ್ಕೆ ಭಕ್ತಿಯಿಂದ ನಮಿಸಿ, ಪೂಜೆ ಸಲ್ಲಿಸಿದರು, ಮುಸ್ಲಿಂ ತರುಣರು ರಥದೊಂದಿಗೆ ನಿಂತು ಫೋಟೋ ತೆಗೆಸಿಕೊಂಡರು, ವಿವೇಕಾನಂದರಿಗೆ ಪುಷ್ಪಾರ್ಪಣೆ ಮಾಡಿದರು. ಶೋಭಾಯಾತ್ರೆಯಲ್ಲೂ ಹೆಜ್ಜೆ ಹಾಕಿದರು. ‘ವಿವೇಕಾನಂದರ ಚಿಂತನೆಗಳನ್ನು ಮುಕ್ತವಾಗಿ ಅಪ್ಪಿಕೊಳ್ಳುತ್ತೇವೆ, ಅದರಿಂದ ಇಡೀ ಸಮಾಜದ ಏಳ್ಗೆ ಸಾಧ್ಯ’ ಎಂದು ಮನಸಾರೆ ಹೇಳಿದರು. ಹೀಗೆ ಹಿಂದೂ-ಮುಸ್ಲಿಮರೆಲ್ಲ ಒಟ್ಟಾಗಿ ಸಾಗುತ್ತ ಐಕ್ಯತೆಯ ಹೊಸಭಾಷ್ಯ ಬರೆಯುತ್ತಿರಬೇಕಾದರೆ ಅದು ಸೃಷ್ಟಿಸಿದ ಚೇತೋಹಾರಿ ವಾತಾವರಣ ಅದೆಷ್ಟೋ ಕಾಲದ ಕೊರತೆ, ಜಡತ್ವವನ್ನು ಕೊನೆಗಾಣಿಸಿತು. ವಿಶೇಷವೆಂದರೆ, ರಥಯಾತ್ರೆಯುದ್ದಕ್ಕೂ ಕೇಸರಿ (ಭಗ್ವಾ) ಬಾವುಟಗಳ ಜತೆ ಓಂಕಾರದ ಚಿತ್ರವುಳ್ಳ ಹಸಿರು ಬಾವುಟಗಳೂ ರಾರಾಜಿಸುತ್ತಿದ್ದವು. ಬಣ್ಣಗಳ ಆಧಾರದ ಮೇಲೆ ಧರ್ಮಗಳ ವಿಭಜನೆ ಸಲ್ಲ, ಸನಾತನ ಧರ್ಮಕ್ಕೆ ಹೊರತಾದದ್ದು ಯಾವುದೂ ಇಲ್ಲ ಎಂಬ ಸಂದೇಶವನ್ನು ಇದು ನೀಡಿ, ಸಾಮರಸ್ಯದ ಭಾವವನ್ನು ಗಟ್ಟಿಗೊಳಿಸಿತು. ಚಿನ್ಮಯ ಮಿಷನ್ ಪ್ರತಿನಿಧಿಗಳು, ಜೈನಮುನಿಗಳು ಕೂಡ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಮೆರುಗು ಹೆಚ್ಚಿಸಿತು.

ಮಸ್ಕಿಯಲ್ಲಿ ಕಾರ್ಯಕ್ರಮ ಸ್ಥಳದ ಬಗ್ಗೆ ಸ್ವಲ್ಪ ಗೊಂದಲವುಂಟಾದಾಗ ಕಡೆಗೆ ಕಾರ್ಯಕ್ರಮ ಸಂಪನ್ನಗೊಂಡಿದ್ದು ಸ್ಥಳೀಯ ಚರ್ಚ್ ಆವರಣದಲ್ಲಿ! ಅಷ್ಟೇ ಅಲ್ಲ, ಸ್ವತಃ ಅಲ್ಲಿನ ಪಾದ್ರಿ ವೇದಿಕೆಗೆ ಬಂದು ಮಾತನಾಡಿ- ‘ಇಂಥ ಸಮಾಜಪ್ರೇರಕ ಕಾರ್ಯಕ್ರಮಗಳಿಗೆ ಚರ್ಚ್ ಸದಾ ಬೆಂಬಲಿಸುತ್ತದೆ. ವಿವೇಕಾನಂದರ ಚಿಂತನೆಗಳನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ’ ಎಂದರು. ಸಮಾಜದಲ್ಲಿ ‘ಒಳಗೊಳ್ಳುವಿಕೆ(ಇನ್​ಕ್ಲೂಜನ್)’ ಬಗ್ಗೆ ದೊಡ್ಡದೊಡ್ಡ ವೇದಿಕೆಗಳಲ್ಲಿ ಚರ್ಚೆಗಳು ನಡೆದು, ಅಲ್ಲೇ ಮರೆತುಹೋಗುತ್ತವೆ. ಆದರೆ, ಇಂಥ ಪ್ರಯತ್ನಗಳಿಂದ, ನಿಜವಾದ ಹೃದಯಸಂಪನ್ನತೆಯಿಂದ ಒಳಗೊಳ್ಳುವಿಕೆ ಸಾಕಾರಗೊಳ್ಳುತ್ತದೆ ಎಂಬುದನ್ನು ಯಾತ್ರೆ ತೋರಿಸಿಕೊಟ್ಟಿತು.

ರಥಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರಾದರೂ ರಥದ ಜತೆಯೇ 65 ದಿನಗಳ ಕಾಲ ಹಗಲು-ರಾತ್ರಿ ಇದ್ದು ಅಪೂರ್ವ ಅನುಭವಗಳನ್ನು ತಮ್ಮದಾಗಿಸಿಕೊಂಡವರು, ಮಳೆ-ಬಿಸಿಲು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿ ಮುಂದೆ ಸಾಗಿದವರು ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಆರು ಸಮರ್ಪಿತ ಸ್ವಯಂಸೇವಕರು. ಧರ್ಮ ಹೊನ್ನಾರಿ, ಪಂಚಾಕ್ಷರಿ ಹಿರೇಮಠ, ಪ್ರವೀಣ ಕುಮರ್ ನಂದಿಕೋಲಮಠ, ಶ್ರೀನಾಥ ಮಾನೆ, ಪ್ರಮೋದ್ ಶಿವಳ್ಳಿ ಮತ್ತು ಪ್ರಿಯಾ ಶಿವಮೊಗ್ಗ ಇವರೆಲ್ಲ 65 ದಿನಗಳ ಕಾಲ ಪಾದರಕ್ಷೆ ಧರಿಸದೆ ರಥದ ಜತೆಗೇ ಹೆಜ್ಜೆಹಾಕಿದರು. ಅಷ್ಟೇ ಅಲ್ಲ, ನವರಾತ್ರಿ ಸಂದರ್ಭದಲ್ಲಿ ಒಂಭತ್ತು ದಿನ ಉಪವಾಸ ಮಾಡಿಯೂ ರಥಯಾತ್ರೆಯನ್ನು ಸುಗಮವಾಗಿ ನಡೆಸಿಕೊಂಡು ಹೋದರು. ಮುಖ್ಯವಾಗಿ, ಈ ಅವಧಿಯಲ್ಲಿ ತರುಣರಲ್ಲಿ ನಾಯಕತ್ವದ ಮೌಲ್ಯಗಳನ್ನು ಬಿತ್ತಲಾಯಿತಲ್ಲದೆ ಅವರ ಸಂಘಟನಾ ಸಾಮರ್ಥ್ಯವೂ ಅನಾವರಣಗೊಂಡಿತು. ಎಂಥ ಸವಾಲನ್ನೂ ಎದುರಿಸಿ ಸಮಾಜಪರ ಕಾರ್ಯಕ್ರಮ ನಡೆಸುತ್ತೇವೆ ಎಂಬ ಸಂಕಲ್ಪ ಅವರಲ್ಲಿ ಜಾಗೃತವಾಯಿತು.

ಬಾಗಲಕೋಟೆಯಲ್ಲಿ ಸಮಾರೋಪ ನಡೆದಾಗ ಸಕಾರಾತ್ಮಕ ವಾತಾವರಣವೇ ಸೃಷ್ಟಿಯಾಯಿತು. ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಒಳಗೊಂಡ ರಥಯಾತ್ರೆಯನ್ನು 60 ಸಾವಿರ ಕಿ.ಮೀ. ನಡೆಸಿದ ಹೆಗ್ಗಳಿಕೆಯ ಸಮಾಜಸುಧಾರಕ, ಪಶ್ಚಿಮ ಬಂಗಾಳ ರಾಮಕೃಷ್ಣ ಆಶ್ರಮದ ಶಿವಪ್ರೇಮಾನಂದ್ ಸ್ವಾಮೀಜಿ, ‘ಬಂಗಾಳ ಬಿಟ್ಟರೆ ಸೋದರಿ ನಿವೇದಿತಾಳ ವಿಚಾರಗಳ ಬಗ್ಗೆ ಕರ್ನಾಟಕದಲ್ಲೇ ಹೆಚ್ಚು ಕೆಲಸವಾಗಿದೆ. ಅದುವೇ ಈ ಯಾತ್ರೆಯ ಸಾರ್ಥಕತೆ’ ಎಂದರು.

‘ಮೈಸೂರು ರಾಜ್ಯದಿಂದಲೇ ಭವಿಷ್ಯದ ಬೆಳಕು ಕಾಣುತ್ತಿದೆ’ ಎಂಬ ವಿವೇಕಾನಂದರ ಮಾತು ನಿಜವಾಗುವ ದಿನಗಳು ಹತ್ತಿರದಲ್ಲಿವೆಯೇನೋ ಎಂಬಂತೆ ಈ ಘಟಾನವಳಿಗಳು ನಡೆದಿವೆ.

ವಿವೇಕಮಂತ್ರದ ಅನುರಣನ ಹೊಸ ಶಕ್ತಿ, ಉತ್ಸಾಹವನ್ನು ಬಡಿದೆಬ್ಬಿಸಿದೆ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)