ಸರ್ಕಾರಿ ಶಾಲೆಗಳಿಗೆ ಬೇಕಾದುದು ಬೀಗವಲ್ಲ ಜ್ಞಾನದ ಬಲ!

| ರವೀಂದ್ರ ಎಸ್​. ದೇಶಮುಖ್​

(ದೃಶ್ಯ-1)

ಎರಡು ವರ್ಷಗಳ ಹಿಂದೆ…

ಅದು ಬೆಂಗಳೂರಿನ ಇಂದಿರಾನಗರ ಬಳಿ ಎರಡು-ಮೂರು ಪುಟ್ಟ ಕೋಣೆಗಳುಳ್ಳ ಕಿಷ್ಕಿಂಧೆಯಂಥ ಪ್ರದೇಶ. ಅದರ ಸುತ್ತಮುತ್ತ ಇರುವವರು ಉತ್ತರ ಕರ್ನಾಟಕದಿಂದ ಬಂದ ಕಟ್ಟಡ ಕಾರ್ವಿುಕರು. ಆ ಕೋಣೆಗಳಲ್ಲಿ ಶಾಲೆಯೊಂದು ನಡೆಯುತ್ತಿದೆ ಎಂದು ಅದೇ ರಸ್ತೆಯ ನಿವಾಸಿಗಳಿಗೂ ಗೊತ್ತಿರಲಿಲ್ಲ. ಸುತ್ತಮುತ್ತ ಗಲೀಜು, ಅಸ್ವಚ್ಛತೆ. ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನಗಳು ನೆಲಕಚ್ಚುತ್ತಲೇ ಇದ್ದವು. ಹಾಜರಾತಿ ಅಷ್ಟಕ್ಕಷ್ಟೆ. ಒಟ್ಟಾರೆ, ಬಹುತೇಕ ಸರ್ಕಾರಿ ಶಾಲೆಗಳ ದಯನೀಯ ಸ್ಥಿತಿಯೇ ಈ ಬೃಂದಾವನ ಟೆಂಟ್ ಸ್ಕೂಲಿನದ್ದೂ ಆಗಿತ್ತು.

ಎರಡು ವರ್ಷಗಳ ನಂತರ…

ಬೃಂದಾವನ ಟೆಂಟ್ ಸ್ಕೂಲ್ ಈಗ ಇಡೀ ಕ್ಲಸ್ಟರ್​ನಲ್ಲೇ ಮಾದರಿ ಶಾಲೆ! ಮೊದಲು ತಮ್ಮ ಹೆಸರನ್ನೇ ತಪು್ಪತಪ್ಪಾಗಿ ಬರೆಯುತ್ತಿದ್ದ ವಿದ್ಯಾರ್ಥಿಗಳು ಈಗ ಕನ್ನಡ-ಇಂಗ್ಲಿಷ್ ಎರಡನ್ನೂ ಸುಲಲಿತವಾಗಿ ಓದಬಲ್ಲರು, ಬರೆಯಬಲ್ಲರು! ಅಷ್ಟೆ ಅಲ್ಲ, ಸಂವಾದಿಸಬಲ್ಲರು. ಒಂದು ದಿನ ಶಾಲೆಗೆ ಬಂದರೆ ಎರಡು ದಿನ ಗೈರಾಗುತ್ತಿದ್ದ ಮಕ್ಕಳು ಈಗ ಶಾಲೆ ಆರಂಭವಾಗುವ 10 ನಿಮಿಷ ಮುಂಚೆಯೇ ಹಾಜರ್! (ಮಕ್ಕಳ ಸಂಖ್ಯೆ 44ರಿಂದ 58ಕ್ಕೆ ಹೆಚ್ಚಿದೆ) ಶಾಲೆಯ ಗೋಡೆಗಳು ಬಣ್ಣ ಬಳಿದುಕೊಂಡು ಚಿತ್ತಾಕರ್ಷಕವಾಗಿವೆ. ಡಿಜಿಟಲ್ ಕ್ಲಾಸ್ ಕೂಡ ಆರಂಭಗೊಂಡಿದ್ದು, ಪ್ರತಿ ಶನಿವಾರ ಕಸದಿಂದ ಕರಕುಶಲ ವಸ್ತುಗಳನ್ನು ಮಕ್ಕಳೇ ತಯಾರಿಸುತ್ತಾರೆ. ಈ ಶಾಲೆಯ ವಾರ್ಷಿಕೋತ್ಸವಕ್ಕೆ ಖ್ಯಾತ ಗಾಯಕ ರಘು ದೀಕ್ಷಿತ್ ಬಂದು ಮಕ್ಕಳ ಜತೆ ಬೆರೆತರೆ, ಏಷ್ಯಾದ ಸ್ಪೀಡ್ ಪೇಂಟರ್ ಎಂದು ಖ್ಯಾತಿ ಪಡೆದಿರುವ ಪ್ರಸಿದ್ಧ ಕಲಾವಿದ ವಿಲಾಸ್ ನಾಯಕ್ ರೋಲ್ ಮಾಡೆಲ್ ಕ್ಲಾಸ್​ಗಳನ್ನು ಉದ್ಘಾಟಿಸಿದ್ದಾರೆ. ಇಲ್ಲಿನ ಬ್ಲಾ್ಯಕ್​ಬೋರ್ಡ್​ಗಳಲ್ಲಿ ಈಗ ಅಕ್ಷರಗಳಷ್ಟೇ ಮೂಡುತ್ತಿಲ್ಲ, ಮಕ್ಕಳ ಭವಿಷ್ಯವನ್ನೇ ಸೃಷ್ಟಿಸಲಾಗುತ್ತಿದೆ. ಸರಳಾ ಮೇಡಂ ಎಂಬ ಒಳ್ಳೆಯ ಮಿಸ್ಸು ಮಕ್ಕಳೊಂದಿಗೆ ಮಕ್ಕಳಾಗಿ, ಕಲಿಕೆಗೆ ಶಕ್ತಿ ತುಂಬಿದ್ದಾರೆ.

(ದೃಶ್ಯ-2)

ಬೆಂಗಳೂರಿನಿಂದ 100 ಕಿಲೋಮೀಟರ್ ದೂರವಿರುವ ಮದ್ದೂರು ಬಳಿಯ ಚಿಕ್ಕರಸಿನಕೆರೆ ಪ್ರೌಢಶಾಲೆಯ ಮಕ್ಕಳು ಇಂಗ್ಲಿಷ್ ಓದಲು, ವಾಕ್ಯ ರಚಿಸಲು ಪ್ರಯಾಸ ಪಡುತ್ತಿದ್ದರು. ಕಲಿಕೆಯಲ್ಲೂ ತುಂಬ ಹಿಂದೆ. ಮೂಕಾಭಿನಯ, ಸ್ಟೋರಿ ರೀಡಿಂಗ್, ಸಂಭಾಷಣಾ ಶಿಬಿರ ಹೀಗೆ ಹತ್ತಾರು ತಂತ್ರಗಳ ಮೂಲಕ ಈ ಮಕ್ಕಳ ಆತ್ಮವಿಶ್ವಾಸ ಜಾಗೃತಗೊಳಿಸಿದಾಗ ಕಳೆದ ವರ್ಷದ ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಐವರು ಮಕ್ಕಳಿಗೆ ಡಿಸ್ಟಿಂಕ್ಷನ್ ಗರಿ! ಉಳಿದ ಮಕ್ಕಳ ಕಲಿಕಾ ಮಟ್ಟದಲ್ಲಿ ಗಣನೀಯ ಸುಧಾರಣೆ.

ಇದ್ಯಾವುದೂ ಸಿನಿಮಾದ ಕಹಾನಿಯಲ್ಲ ಅಥವಾ ಧಾರಾವಾಹಿಯ ದೃಶ್ಯಾವಳಿಯೂ ಅಲ್ಲ. ಸರ್ಕಾರಿ ಶಾಲೆಗಳ ಭೌತಿಕ ವಿಕಾಸವಷ್ಟೇ ಅಲ್ಲ, ಅಲ್ಲಿ ನೂತನ ಮತ್ತು ಪರಿಣಾಮಕಾರಿ ಕಲಿಕಾ ತಂತ್ರಗಳನ್ನು ಅಳವಡಿಸಿದರೆ ಮಕ್ಕಳು, ಶಿಕ್ಷಕರು ಮತ್ತು ಶಾಲೆಯ ವಿಕಾಸ ಸಾಧ್ಯ ಎಂಬ ಮಹತ್ವದ ಪ್ರಯೋಗವನ್ನು ಯಶಸ್ವಿಯಾಗಿ ಸಾಕಾರಗೊಳಿಸಿರುವ ಯುವಸಮೂಹದ ಕಥೆ ಇದು.

ಸಮಾಜದಲ್ಲಿ ನಕಾರಾತ್ಮಕ ಸಂಗತಿಗಳು ಹೆಚ್ಚುತ್ತಿರುವಾಗ ಜನರಿಗೆ ಪ್ರೇರಣಾದಾಯಿ ಮತ್ತು ಸಕಾರಾತ್ಮಕ ಸಂಗತಿಗಳನ್ನು ತಲುಪಿಸಬೇಕೆಂದು 2012ರಲ್ಲಿ ‘ನೋ ಯುವರ್ ಸ್ಟಾರ್ ಡಾಟ್ ಕಾಮ್ ಎಂಬ ವೆಬ್​ಪೋರ್ಟಲ್ ಶುರು ಮಾಡಿದವರು ಸಾಫ್ಟ್​ವೇರ್ ಇಂಜಿನಿಯರ್​ಗಳಾದ ಜೈದೀಪ್ ರಾವ್ ಮತ್ತು ಪ್ರಣೀತಾ ಭಟ್. ಇದಕ್ಕೆ ಅವರ ಸ್ನೇಹಿತರ ಸಾಥ್. ಇವರೆಲ್ಲ ಐಟಿ ರಂಗದ ಝುಗಮಗದಲ್ಲಿ ಬಿಜಿಯಾಗಿದ್ದರೂ ವಾರಾಂತ್ಯದ ರಜೆಯಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗಿ ಪಾಠ ಮಾಡೋದು, ವ್ಯಕ್ತಿತ್ವವಿಕಸನಕ್ಕೆ ಪೂರಕವಾದ ಕಥೆಗಳನ್ನು ಹೇಳುವುದು, ಜೀವನಮೌಲ್ಯಗಳನ್ನು ಬಿತ್ತುವುದು… ಹೀಗೆ ಮಕ್ಕಳ ಮನೋವಿಕಾಸಕ್ಕೆ ಅವಶ್ಯವಾದುದೆಲ್ಲ ಮಾಡುತ್ತಿದ್ದರು. ಆದರೆ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬರುವವರೆಗೂ ಈ ಸ್ಥಿತಿಯಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ, ಅದಕ್ಕೆ ಒಂದಿಷ್ಟು ವರ್ಷಗಳಾದರೂ ತಪಸ್ಸಿನಂತೆ ಕಾರ್ಯನಿರ್ವಹಿಸಬೇಕಾಗುತ್ತದೆ ಎಂಬ ಸಂಕಲ್ಪದೊಂದಿಗೆ ಭಾರಿ ಸಂಬಳದ ನೌಕರಿಗೆ ರಾಜೀನಾಮೆ ನೀಡಿ ಕೈಗೆತ್ತಿಕೊಂಡಿದ್ದು ಮೆಂಟರ್ ಇಂಡಿಯಾ ಎಂಬ ಯೋಜನೆ! ಇದು ಶಿಕ್ಷಣ ರಂಗದ ಸಂಪನ್ಮೂಲ ವ್ಯಕ್ತಿಗಳು, ಹೊಸ ಚಿಂತನೆಯ ಯುವಕರು ಸೇರಿ ತಯಾರಿಸಿದ ಯೋಜನೆ. ಕಲಿಕೆಯಲ್ಲಿ ಹೊಸ ಹೊಸ ಪ್ರಯೋಗ ಮತ್ತು ತಂತ್ರಗಳನ್ನು ಅನ್ವಯಿಸಿರುವುದೇ ಇದರ ಯಶಸ್ಸಿನ ಸೀಕ್ರೆಟ್. ಮೇಲಿನ ಎರಡು ಪ್ರಸಂಗಗಳು ಮೆಂಟರ್ ಇಂಡಿಯಾ ಮತ್ತು ಈ ತಂಡದ ಶ್ರಮ, ಸೃಜನಶೀಲತೆ, ಕ್ರಿಯಾಶೀಲತೆಗೆ ಸಾಕ್ಷಿ. ಈ ಯೋಜನೆಯನ್ನು ಬೆಂಗಳೂರು ಮತ್ತು ಸುತ್ತಮುತ್ತ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ದೂರದ ದೆಹಲಿಗೂ ಕೊಂಡೊಯ್ದಿದ್ದಾರೆ. ಹಲವು ಯುವಮನಸ್ಸುಗಳು ಯೋಜನೆಗೆ ಕೈಜೋಡಿಸಿದ ಪರಿಣಾಮ ಪ್ರಸಕ್ತ ವರ್ಷ 16 ಶಾಲೆಗಳನ್ನು ದತ್ತು ಪಡೆಯಲಾಗಿದ್ದು, ಸಾವಿರಕ್ಕೂ ಅಧಿಕ ಮಕ್ಕಳು ‘ಸ್ಟೂಡೆಂಟ್ ಲೀಡರ್’ಗಳಾಗಿ ರೂಪುಗೊಳ್ಳುತ್ತಿದ್ದಾರೆ.

ಇಂದಿರಾನಗರದ ಬೃಂದಾವನ ಟೆಂಟ್​ಶಾಲೆ ಮತ್ತು ಚಿಕ್ಕರಸಿನಕೆರೆ ಪ್ರೌಢಶಾಲೆಯ ಬದಲಾದ ಚಿತ್ರಣ ನಮ್ಮೆಲ್ಲ ಸರ್ಕಾರಿ ಶಾಲೆಗಳಿಗೂ ಮಾದರಿ. ಮಾತ್ರವಲ್ಲ, ಸಮುದಾಯದ ಸಹಭಾಗಿತ್ವದೊಂದಿಗೆ ಎಂಥ ಅದ್ಭುತ ಫಲಿತಾಂಶ ಪಡೆಯಬಹುದು ಎಂಬುದಕ್ಕೆ ಸಮರ್ಥ ನಿದರ್ಶನ ಕೂಡ. ಈಗ ಈ ತಂಡ ದೆಹಲಿ ಹೊರವಲಯದ ಬಾಗಪತ್ ಜಿಲ್ಲೆಯ ಖೇಖ್ರಾ ಮತ್ತು ಸುತ್ತಮುತ್ತಲಿನ 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದೆ. ಇನ್ನೂ ಐದು ಶಾಲೆಗಳನ್ನು ದತ್ತು ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ರಾಷ್ಟ್ರ ರಾಜಧಾನಿಗೆ ಹತ್ತಿರವಿದ್ದರೂ ಈ ಹಳ್ಳಿಗಳಲ್ಲಿ ಶಿಕ್ಷಣದ ಬಗ್ಗೆ ಸೂಕ್ತ ಅರಿವಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಶೇಕಡ 50ಕ್ಕಿಂತಲೂ ಕಡಿಮೆ. ಹಾಗಾಗಿ, ಇಲ್ಲಿ ಮಕ್ಕಳ ಆಸಕ್ತಿಯನ್ನು ತಿಳಿದುಕೊಂಡು, ಅವರನ್ನು ಶಾಲೆಯತ್ತ ಸೆಳೆಯಲು ಕಬಡ್ಡಿ ಮೈದಾನ ರೂಪಿಸಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ದಶಕಗಳಿಂದ ಸಾಧ್ಯವಾಗದ ಸುಧಾರಣೆಯನ್ನು ಈ ತಂಡ ಸಾಕಾರ ಗೊಳಿಸುತ್ತಿರುವುದು ಹೇಗೆ ಎಂಬ ಪ್ರಶ್ನೆಯ ಹಿಂದೆ ಸ್ವಾರಸ್ಯಕರ ಕಥನವಿದೆ. ಮೆಂಟರ್ ಇಂಡಿಯಾ ಆರಂಭಿಕ ಹಂತದಲ್ಲಿ 45 ಗಂಟೆಗಳ ಪಠ್ಯಕ್ರಮ ರೂಪಿಸಿದೆ. ಇದರ ಆಧಾರದ ಮೇಲೆ 8 ಹಾಗೂ 9ನೇ ತರಗತಿಯ ವಿದ್ಯಾರ್ಥಿ/ವಿದ್ಯಾರ್ಥಿನಿ ಜತೆ ಮಾತನಾಡಿ ಅವರ ಆಸಕ್ತಿ, ಸಾಮರ್ಥ್ಯವನ್ನು ಪಟ್ಟಿ ಮಾಡುತ್ತದೆ. ಆ ಬಳಿಕ ಅವರವರ ಆಸಕ್ತಿಗೆ ಅನುಗುಣವಾಗಿ ಈಗಿನ ಉದ್ಯೋಗ ಮಾರುಕಟ್ಟೆಯಲ್ಲಿರುವ ಕನಿಷ್ಠ ಐದು ವೃತ್ತಿ ಅವಕಾಶಗಳನ್ನು ಮತ್ತು ಆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು ರೋಲ್​ವಾಡೆಲ್​ಗಳನ್ನು ಪರಿಚಯಿಸಲಾಗುತ್ತದೆ.

ಇಂಗ್ಲಿಷಿನ ಭಯ ಹೋಗಲಾಡಿಸಲು ಇಂಗ್ಲಿಷ್ ಪದಗಳ ಬಳಕೆ, ವಾಕ್ಯರಚನೆ ಕಲಿಸಿಕೊಟ್ಟು ಕ್ರಮೇಣ ಇಂಗ್ಲಿಷ್ ಸಂಭಾಷಣೆಯನ್ನು ಹೇಳಿಕೊಡಲಾಗುತ್ತದೆ. ಜತೆಗೆ ಅಂಕಗಣಿತ, ರೇಖಾಗಣಿತ ಹೇಳಿಕೊಡುವುದಲ್ಲದೆ ಜೀವನದಲ್ಲಿ ಬರುವ ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಕೌಶಲ, ಪಬ್ಲಿಕ್ ಸ್ಪೀಕಿಂಗ್, ಬಾಡಿ ಲಾಂಗ್ವೆಜ್ ಸೇರಿದಂತೆ ವ್ಯಕ್ತಿತ್ವವನ್ನು ಸಮಗ್ರವಾಗಿ ವಿಕಾಸಗೊಳಿಸಲಾಗುತ್ತದೆ. 21ನೇ ಶತಮಾನದ ಸ್ಪರ್ಧೆಯಲ್ಲಿ ಈ ಮಕ್ಕಳು ಮುಂಚೂಣಿಯಲ್ಲಿರುವಂತೆ ಮತ್ತು ಜ್ಞಾನ, ಕೌಶಲದ ಬಲದಿಂದಲೇ ಉತ್ಕರ್ಷ ಸಾಧಿಸುವಂತೆ ತಯಾರು ಮಾಡಲಾಗುತ್ತದೆ.

ಹೀಗೆ 110 ವೃತ್ತಿಗಳನ್ನು, 400 ರೋಲ್ ಮಾಡೆಲ್​ಗಳನ್ನು ಪಟ್ಟಿ ಮಾಡಲಾಗಿದ್ದು, ವಿದ್ಯಾರ್ಥಿಗಳ ಸಾಮರ್ಥ್ಯ-ಆಸಕ್ತಿಗೆ ಅನುಗುಣವಾಗಿ ಅವರಿಗೆ ಅದನ್ನು ವಿವರಿಸಲಾಗುತ್ತದೆ. ‘ಮಿತ್ರ ಬುಕ್’ ಮತ್ತು ‘ನೋ ಯೂವರ್ ಸ್ಟಾರ್’ ಎಂಬ ವಿಶೇಷ ಜ್ಞಾನವಿನ್ಯಾಸದ ಪುಸ್ತಕಗಳು ಮಕ್ಕಳಿಗೆ ಆತ್ಮವಿಶ್ವಾಸದ ಬುತ್ತಿಯನ್ನು ಉಣಿಸುತ್ತಿವೆ. ಒಮ್ಮೆ ಕನಸಿನ ಬೀಜವನ್ನು ಬಿತ್ತಿದರೆ ಪ್ರೇರಣೆಯ ಮೊಳಕೆ ಚಿಗುರೊಡೆಯಲು ತುಂಬ ಸಮಯವೇನೂ ಬೇಕಿಲ್ಲ. ಹೀಗೆ ಬಿತ್ತಿದ ಪ್ರೇರಣೆ ಸದಾಕಾಲ ಕಾಪಿಡುವಂತೆಯೂ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತದೆ. 8 ಮತ್ತು 9ನೇ ತರಗತಿಯ ಮಕ್ಕಳನ್ನು ಇದಕ್ಕೆ ಫೆಲೋಗಳಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಂದಹಾಗೆ, ಈ ಎರಡು ವರ್ಷದಲ್ಲಿ ಸಂಸ್ಥೆಯ ಸ್ವಯಂಸೇವಕರಷ್ಟೇ ಕಾರ್ಯನಿರ್ವಹಿಸುವುದಿಲ್ಲ. ಇದರಲ್ಲಿ ಶಿಕ್ಷಕರ ಸಕ್ರಿಯ ಸಹಭಾಗಿತ್ವ ಪಡೆಯಲಾಗುತ್ತಿದ್ದು, ಈ ಮೂಲಕ ಶಿಕ್ಷಕರ ಆತ್ಮವಿಶ್ವಾಸವೂ ಇಮ್ಮಡಿಗೊಂಡಿದೆ. 2 ವರ್ಷದ ಬಳಿಕ ಈ ಮಕ್ಕಳನ್ನು ಅವರ ಪಾಡಿಗೆ ಬಿಡುವುದಿಲ್ಲ. ಏಕೆಂದರೆ, ವೃತ್ತಿ ಮತ್ತು ಇತರೆ ಅವಕಾಶಗಳ ಕುರಿತ ನಿರೀಕ್ಷೆಗಳು ಈಡೇರಬೇಕಾದರೆ ಅದಕ್ಕೆ ಪೂರಕ ಶಿಕ್ಷಣ, ಕೋರ್ಸ್ ಪಡೆಯುವುದು ಅವಶ್ಯ. ಹೀಗಾಗಿ 9ನೇ ತರಗತಿ ಪೂರ್ಣಗೊಳಿಸಿದ ಮಕ್ಕಳಿಗೆ ಮುಂದಿನ ದಿಕ್ಕು ದರ್ಶಿಸುವುದಲ್ಲದೆ, ಅವರ ಆಸಕ್ತಿ ಮತ್ತು ಸಾಮರ್ಥ್ಯವನ್ನೇ ಮುಂದೆ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ.

2020ರ ವೇಳೆಗೆ 100 ಶಾಲೆಗಳನ್ನು ದತ್ತು ಪಡೆಯುವ ಆಶಯ ಹೊತ್ತಿರುವ ಮೆಂಟರ್ ಇಂಡಿಯಾದ ಸ್ಥಾಪಕ ಜೈದೀಪ್- ([email protected]) ‘ಭಾರತದ ಶೇ.45 ವಿದ್ಯಾರ್ಥಿ/ ಯುವಸಮೂಹ ತಮ್ಮ ಭವಿಷ್ಯದ ಬಗೆಗಿನ ಆಯ್ಕೆ ಮತ್ತು ಯಾವ ವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದು ಎಂಬ ಸಂಗತಿಯಿಂದಲೇ ಅಪರಿಚಿತವಾಗಿದೆ. ಅದಕ್ಕೆಂದೆ, ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ‘ನೀವೇನಾಗುತ್ತೀರಿ?’ ಎಂದು ಪ್ರಶ್ನಿಸಿದರೆ ‘ಡಾಕ್ಟರ್’, ‘ಇಂಜಿನಿಯರ್’ ಎಂಬ ಉತ್ತರವೇ ಮಾರ್ದನಿಸುತ್ತದೆ. ಮಾರ್ಗದರ್ಶನದ ಕೊರತೆ, ಒಂದೊಮ್ಮೆ ಶಿಕ್ಷಣ ಪಡೆದರೂ ನೌಕರಿಗಾಗಿ ಪರದಾಟ-ಇದಕ್ಕೆಲ್ಲ ಭಯಪಟ್ಟು ಯುವಸಮೂಹ ಆತ್ಮಹತ್ಯೆಯ ದಾರಿ ತುಳಿಯುತ್ತಿದೆ. ಈ ಸ್ಥಿತಿ ಬದಲಿಸುವ ಗುರಿಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ’ ಎನ್ನುತ್ತಾರೆ. ಸಮುದಾಯವೂ ಕೈಜೋಡಿಸಿದರೆ ಯಾವ ಸರ್ಕಾರಿ ಶಾಲೆಯನ್ನೂ ಮುಚ್ಚುವ ಪ್ರಮೇಯವೇ ಬರುವುದಿಲ್ಲ ಎಂದು ವಿಶ್ವಾಸದಿಂದ ಹೇಳುತ್ತಾರೆ. ಸಿಎಸ್​ಆರ್ ದೇಣಿಗೆಯಿಂದ ಕಾರ್ಯನಿರ್ವಹಿಸುತ್ತಿರುವ ಮೆಂಟರ್ ಇಂಡಿಯಾ ಮತ್ತಷ್ಟು ನೆಲದ ನಕ್ಷತ್ರಗಳನ್ನು ಬೆಳಗುವ ಆಶಯ ಹೊಂದಿದೆ. ಅಂಥ ವಿದ್ಯಾರ್ಥಿಗಳ ಭವಿಷ್ಯ ಕಟ್ಟಲು ತನ್ಮೂಲಕ ಜ್ಞಾನದ ಶಕ್ತಿಯಿಂದ ಸಮಸ್ಯೆಗಳನ್ನು ಪರಿಹರಿಸಲು ಸಮಷ್ಟಿಯ ಸಹಕಾರ ಅಗತ್ಯವಿದ್ದು, ಆರ್ಥಿಕ ನೆರವು ಕೂಡ ಆ ನಿಟ್ಟಿನಲ್ಲಿ ಅವಶ್ಯ. (ಹೆಚ್ಚಿನ ಮಾಹಿತಿಗಾಗಿ- http://knowyourstar.com/donate).

ನಿಜವಾದ ಅರ್ಥದಲ್ಲಿ ರಾಷ್ಟ್ರ ಕಟ್ಟುವುದೆಂದರೆ ಇದೇ ತಾನೆ? ಇಂಥ ಪ್ರಯತ್ನಗಳು ಸರ್ಕಾರ, ಸಮುದಾಯದ ಕಣ್ಣು ತೆರೆಸಿದರೆ ಪ್ರತೀ ಸರ್ಕಾರಿ ಶಾಲೆಯೂ ಜ್ಞಾನೋತ್ಕರ್ಷದ ದೇಗುಲವೇ ಆಗಬಲ್ಲದು. ಏನಂತೀರಿ?