Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಗಿಡ, ಮರ, ಪಕ್ಷಿಗಳೇ ಇವರ ಜಿಗ್ರಿದೋಸ್ತ್!

Wednesday, 04.04.2018, 3:05 AM       No Comments

ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಷಾದಪಟ್ಟು, ಕಾಲ ಕೆಟ್ಟುಹೋಯ್ತು ಎಂದು ನಿಟ್ಟುಸಿರುಬಿಡುವ ಬದಲು ಸಣ್ಣಸಣ್ಣ ಪ್ರಯತ್ನಗಳ ಮೂಲಕವೇ ಹಸಿರಿಗೆ ಉಸಿರು ತುಂಬುವ ಕಾರ್ಯ ಮಾಡುತ್ತಿರುವ ಈ ಯುವಪಡೆ ಸದ್ದಿಲ್ಲದೆ ಪರಿಸರ ಶಿಕ್ಷಣ ಪಸರಿಸುತ್ತಿದೆ, ಪ್ರೇರಣೆ ಬಿತ್ತುತ್ತಿದೆ.

 ಮನುಷ್ಯ-ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧವೇ ಸೊರಗುತ್ತಿರುವ ಈ ಕಾಲಘಟ್ಟದಲ್ಲಿ ಗಿಡ-ಮರ, ನೀರು, ಪಕ್ಷಿ… ಇವುಗಳೊಡನೆ ಭಾವತಂತಿಯನ್ನು ಬೆಸೆದು ಮಾನವೀಯ ರಾಗ ಹೊಮ್ಮಿಸುವ ಮೂಲಕ ಪ್ರಕೃತಿ ಸಂಬಂಧದ ತಲ್ಲಣಗಳಿಗೆ ಬೇರುಮಟ್ಟದಲ್ಲಿ ಪರಿಹಾರ ಒದಗಿಸುವ ಸಾರ್ಥಕ ಪ್ರಯತ್ನ ಉತ್ತರ ಕರ್ನಾಟಕದಿಂದ ಶುರುವಾಗಿ ರಾಜ್ಯಾದ್ಯಂತ ಹಬ್ಬಿದೆ. ಮೊನ್ನೆ, ಏಪ್ರಿಲ್ ಒಂದರಂದು ಸಾಮಾಜಿಕ ಮಾಧ್ಯಮಗಳಲ್ಲೆಲ್ಲ ತುಂಬ ಹರಿದಾಡಿದ ಮತ್ತು ಸಂಚಲನ ಮೂಡಿಸಿದ ‘ಏಪ್ರಿಲ್ ಫೂಲ್ ಆಗಬೇಡಿ, ಕೂಲ್ ಆಗಿಸಿ’ ಎಂಬ ಚಿಂತನೆ ಹೊಮ್ಮಿದ್ದು ಈ ಯುವಪಡೆಯಿಂದಲೇ. ತಾಜಾ ಚಿಂತನೆಗಳಿಗೆ ಸಮಾಜ ಹೇಗೆ ಸಕಾರಾತ್ಮಕವಾಗಿ ಪ್ರತಿಸ್ಪಂದಿಸುತ್ತೆ ಎಂಬುದಕ್ಕೂ ಇದು ಸಾರ್ಥಕ ನಿದರ್ಶನ ಒದಗಿಸಿತು. ಧಾರವಾಡದ ಯುವಕನೊಬ್ಬ ಪೋಸ್ಟ್ ಮಾಡಿದ ಈ ಸಂದೇಶ ಜಿಲ್ಲೆ, ರಾಜ್ಯಗಳ ಗಡಿಯನ್ನು ದಾಟಿ ಏಪ್ರಿಲ್ ಒಂದು ಒಂದರ್ಥದಲ್ಲಿ ಪರಿಸರ ದಿನದಷ್ಟೇ ಸಶಕ್ತವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲ್ಪಟ್ಟಿತು. ಹಸಿರುಮಂತ್ರ ಅನುರಣಿಸಿತು. ಸಸಿಗಳನ್ನು ನೆಡುವ, ಪಕ್ಷಿಗಳಿಗೆ ನೀರು, ಕಾಳು ಉಣಿಸುವ ಅಷ್ಟೇ ಅಲ್ಲ ಮರಗಳನ್ನು ದತ್ತು ಪಡೆಯುವ, ಸುತ್ತಲ ಪರಿಸರವನ್ನು ಉಳಿಸಿ-ಬೆಳೆಸುವ ಸಂಕಲ್ಪ ಚಿಗುರೊಡೆಯಿತು.

ನಿಜ, ಅಭ್ಯುದಯದ ಯಾವುದೇ ಕಾರ್ಯಗಳು ಒಬ್ಬಿಬ್ಬರಿಂದ ಅಥವಾ ಬೆರಳೆಣಿಕೆಯ ಸಂಘಸಂಸ್ಥೆಗಳಿಂದ ಸಂಪೂರ್ಣವಾಗಿ ಸಾಕಾರಗೊಳ್ಳುವುದಿಲ್ಲ. ಅದಕ್ಕಾಗಿ ಸಮುದಾಯದ ಸಹಭಾಗಿತ್ವ ಅತ್ಯಗತ್ಯ. ಅದು ಪರಿಸರ ಸಂರಕ್ಷಣೆ ಆಗಿರಬಹುದು ಅಥವಾ ಸಾಕ್ಷರತೆ, ಸ್ತ್ರೀಸಮ್ಮಾನ ಹೆಚ್ಚಿಸುವ ಪ್ರಯತ್ನಗಳು ಇರಬಹುದು. ಸಮುದಾಯದ ಸಕ್ರಿಯ ಸಹಭಾಗಿತ್ವ ಮಾತ್ರ ಈ ಆಶಯಗಳನ್ನು ಯಶಸ್ವಿ ಆಗಿಸಬಲ್ಲದು. ಈ ವಾಸ್ತವವನ್ನು ಅರಿತೇ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಮೊದಲು ತನ್ನನ್ನು ತೊಡಗಿಸಿಕೊಂಡು ಆ ಬಳಿಕ ಸಮಷ್ಟಿಯ ಸಹಭಾಗಿತ್ವ ಹೆಚ್ಚಿಸು ತ್ತಿರುವ ಯುವಕ ಹೊಸ ಭರವಸೆ ಮೂಡಿಸಿದ್ದಾನೆ. ಹೆಸರು ಲಿಂಗರಾಜ್ ನಿಡುವಣಿ.

ಈ ಯುವಕನ ಅಜ್ಜ ಬಸವರಾಜ್ ಕೊಂಚಿಗೇರಿ ನಿಸರ್ಗದೊಂದಿಗೆ ತಾದಾತ್ಮ್ಯ ಸಾಧಿಸಿ ಆಯುರ್ವೆದದಲ್ಲಿ ಸಿದ್ಧಿ ಪಡೆದವರು. ಈ ವಿದ್ಯೆಯ ಪ್ರಯೋಜನವನ್ನು ಜನಸಾಮಾನ್ಯರ ಕಲ್ಯಾಣಕ್ಕೆ ವಿನಿಯೋಗಿಸಿದ ಬಸವರಾಜ್ ಅವರು ಮೊಮ್ಮಗನಿಗೆ ಔಷಧ ಸಸ್ಯ, ಯಾವುದೋ ಸೊಪು್ಪ, ಮಣ್ಣು, ಗೊಬ್ಬರ ತರಲು ಹೇಳಿದರೆ ಆ ಕುತೂಹಲದ ಲೋಕದಲ್ಲಿ ಲಿಂಗರಾಜ್ ಸಾಕಷ್ಟು ಪಾಠ ಕಲಿಯತೊಡಗಿದ. ಆಗಲೇ ಮಣ್ಣಿನೊಂದಿಗೆ, ಮರದ ಬೇರುಗಳೊಂದಿಗೆ ಅನುಬಂಧ, ಬಾಂಧವ್ಯ ಹುಟ್ಟಿಕೊಂಡಿದ್ದು. ಪರಿಸರ ರಕ್ಷಣೆಯ ಮಹತ್ವ ಅರಿವಾಗತೊಡಗಿದ್ದು.

ಮೂಲತಃ ಗದಗ ಜಿಲ್ಲೆಯವರಾದ ಲಿಂಗರಾಜ್ ತರುಣಾವಸ್ಥೆಯಲ್ಲೇ ಅಜ್ಜನಿಂದ ಪ್ರೇರಣೆಗೊಂಡು ಸಾಮಾಜಿಕ ಕಾರ್ಯಗಳ ಕಡೆಗೆ ಆಸಕ್ತರಾದರು. ಹಾಗಾಗಿಯೇ, ಶೈಕ್ಷಣಿಕ ಪಯಣವನ್ನು ಇದೇ ದಿಕ್ಕಿನಲ್ಲಿ ಮುಂದುವರಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎಸ್.ಡಬ್ಲ್ಯು ಪದವಿ, ಎಂ.ಎಸ್.ಡಬ್ಲ್ಯು ಸ್ನಾತಕೋತ್ತರ ಪದವಿ ಪಡೆದರು. ಪದವಿ ಓದುತ್ತಿರುವಾಗಲೇ ಪರಿಸರ ಸಂಬಂಧಿ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ‘ವಿನೂತನ’ ಎಂಬ ಸ್ವಯಂಸೇವಾ ಸಂಸ್ಥೆ ಸ್ಥಾಪಿಸಿದರು. ಗೆಳೆಯರ ತಂಡ ಕಟ್ಟಿಕೊಂಡು ಸಸಿ ನೆಡುವುದು, ಪೋಷಿಸುವುದು, ಅರಿವು ಮೂಡಿಸುವುದು ಹೀಗೆ… ಹಸಿರು ಹಂಚುವ, ವಿಸ್ತರಿಸುವ ಕಾರ್ಯ ವೇಗಪಡೆಯಿತು. ಎಂಎಸ್​ಡಬ್ಲ್ಯು ವ್ಯಾಸಂಗದ ಬಳಿಕ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿದ ಲಿಂಗರಾಜ್ ಅವರಿಗೆ ತಾವು ಮಾಡಬೇಕಿರುವ ಕೆಲಸ ಬೇರೆಯೇ ಇದೆ ಎಂಬ ಅರಿವು ಮೂಡಿತು. ಕೆಲಸಕ್ಕೆ ರಾಜೀನಾಮೆ ನೀಡಿ, ‘ವಿನೂತನ’ ಸಂಸ್ಥೆಗೆ ಹೊಸಜೀವ ತುಂಬಿದರು. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಸಂಸ್ಥೆಯ ಚಟುವಟಿಕೆಗಳನ್ನು ವಿಸ್ತರಿಸಿ, ಪರಿಸರ ಕಾರ್ಯಕರ್ತರ ಪಡೆಯನ್ನೇ ಕಟ್ಟಿದರು. ತರುವಾಯ, ಒಂದಾದ ಬಳಿಕ ಒಂದರಂತೆ ಹೊಸ ಉಪಕ್ರಮಗಳನ್ನು, ಅಭಿಯಾನಗಳನ್ನು ಕೈಗೊಳ್ಳುತ್ತ ಹಸಿರಿನ ಜತೆಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಮಾಡಿದರು. ಜತೆಗೆ ಉಪಜೀವನಕ್ಕಾಗಿ ‘ಕ-ಕನ್ನಡಿಗರ ಕನಸು’ ಎಂಬ ಸಂಸ್ಥೆ ಹುಟ್ಟು ಹಾಕಿ, ಸಾಮಾಜಿಕ ನವೋದ್ಯಮಿ ಆಗಿರುವ ಲಿಂಗರಾಜ್ ಇದರಿಂದ ಬರುವ ಆದಾಯವನ್ನು ಸಮಾಜಮುಖಿ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿದ್ದಾರೆ.

ಪಂಚವಟಿಯ ಚಮತ್ಕಾರ: ವಾತಾವರಣ ತೀವ್ರವಾಗಿ ಕಲುಷಿತಗೊಳ್ಳುತ್ತಿರುವ ಸಮಸ್ಯೆ ಪೆಡಂಭೂತದಂತೆ ಕಾಡತೊಡಗಿದಾಗ ‘ಪಂಚವಟಿ’ ಅಂದರೆ ಪರಿಸರ ಹಾಗೂ ಮನುಕುಲದ ಸ್ವಾಸ್ಥ್ಯಕ್ಕೆ ಪೂರಕವಾಗಿರುವ ಐದು ಮರಗಳನ್ನು ಒಂದೇ ಸ್ಥಳದಲ್ಲಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದವರು ಲಿಂಗರಾಜ್​ರ ಅಜ್ಜ ಬಸವರಾಜ್ ಕೊಂಚಿಗೇರೆ ಅವರೇ. ಮುಂದೆ, ಇದಕ್ಕೆ ಅಭಿಯಾನದ ಸ್ವರೂಪ ನೀಡಿದ ಲಿಂಗರಾಜ್ ಮತ್ತವರ ಪಡೆ ‘ಪಂಚವಟಿ’ ಅಭ್ಯುದಯದ ಸಂಕೇತವಾಗಿ ಬೆಳೆಯುವಂತೆ ಮಾಡಿದ್ದಾರೆ. ಮರಗಳೊಂದಿಗೆ ಧಾರ್ವಿುಕ ನಂಟನ್ನು ಬೆಳೆಸಿಕೊಂಡಿರುವ ಸಂಸ್ಕೃತಿ ನಮ್ಮದು. ಇದರೆ ಜತೆಗೆ, ವೃಕ್ಷಗಳ, ಸಸಿಗಳ ಔಷಧೀಯ ಮಹತ್ವವನ್ನೂ ಮನದಟ್ಟು ಮಾಡಿಕೊಟ್ಟರೆ ಪರಿಸರ ರಕ್ಷಣೆ ಪರಿಣಾಮಕಾರಿಯಾಗುತ್ತದೆ ಎಂಬ ಮಹೋದ್ದೇಶ ಪಂಚವಟಿ ಅಭಿಯಾನದ್ದು. ಬಿಲ್ವ, ಔದುಂಬರ, ಶಮಿ(ಬನ್ನಿ), ಅಶ್ವತ್ಥ ಮತ್ತು ಬೇವು- ಈ ಐದು ಮರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ, ಆಸ್ಪತ್ರೆ, ಶಾಲೆ, ಉದ್ಯಾನಗಳ ಆವರಣದಲ್ಲಿ ಹೀಗೆ ವಿವಿಧೆಡೆ ನೆಡುವ ಸಾರ್ಥಕ ಕಾರ್ಯ ಹುಬ್ಬಳ್ಳಿ ತಾಲೂಕಿನ ಶೇರೆವಾಡಾ ಗ್ರಾಮದಿಂದ ಆರಂಭಗೊಂಡು 760ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾಕಾರಗೊಂಡಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ 35ಕ್ಕೂ ಹೆಚ್ಚು ಸ್ಥಳಗಳಲ್ಲಿ ‘ಪಂಚವಟಿ’ ತಲೆಯೆತ್ತಿದೆ. ಈ ಐದೂ ವೃಕ್ಷಗಳು ವಾತಾವರಣದಲ್ಲಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುವುದಲ್ಲದೆ, ವೈದ್ಯಕೀಯ ಗುಣಗಳನ್ನು ಹೊಂದಿವೆ. ಹಾಗಾಗಿ, ಇವುಗಳನ್ನು ನೆಡುವಾಗಲೇ ಸಣ್ಣ ಕಾರ್ಯಕ್ರಮ ಮಾಡಿ ಈ ವೃಕ್ಷಗಳ ಮಹತ್ವ ಮನದಟ್ಟು ಮಾಡಿಕೊಡಲಾಗುತ್ತದೆ. ಜನರು ಈ ವೃಕ್ಷಗಳೊಂದಿಗೆ ಭಾವನಾತ್ಮಕವಾಗಿ ಬೆಸೆಯುವಂತೆ ಮಾಡಿ, ಅದರ ಪೋಷಣೆ, ನಿರ್ವಹಣೆಯ ಹೊಣೆಯನ್ನು ಸ್ಥಳೀಯರಿಗೆ ವಹಿಸಲಾಗುತ್ತದೆ. ಮರಗಳು ಕಣ್ಮರೆಯಾಗುತ್ತಿವೆ ಎಂಬ ಕೊರಗಿನ ಮಧ್ಯೆ ಪಂಚವಟಿ ಸಮಾಧಾನದ ಭಾವ ಮೂಡಿಸುತ್ತಿದೆ. ಹಾಗೆಯೇ ಮತ್ತೊಂದು ಮಹತ್ತರ ಕಾರ್ಯ ಔಷಧವನಗಳ ನಿರ್ವಣ. ಕಣ್ಮರೆಯಾಗುತ್ತಿರುವ ಸಸ್ಯಪ್ರಬೇಧಗಳನ್ನು ಗುರುತಿಸಿ, ರಕ್ಷಿಸುವುದು, ಆಯುರ್ವೆದದಲ್ಲಿ ಅಗಾಧವಾಗಿ ಬಳಕೆಯಾಗುವ, ಮನೆಮದ್ದಿಗೆ ನೆರವಾಗುವ ಸಸ್ಯಗಳನ್ನು ನೆಟ್ಟು, ಪೋಷಿಸುವ ಪ್ರಯತ್ನ ಔಷಧವನಗಳ ಮೂಲಕ ನಡೆಯುತ್ತಿದೆ. ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಯ ಐದು ಕಡೆ ಪ್ರಾಯೋಗಿಕವಾಗಿ ಈಗಾಗಲೇ ಔಷಧವನಗಳು ತಲೆಯೆತ್ತಿದ್ದು, ತಲಾ 100-150 ಸಸಿಗಳನ್ನು ನೆಡಲಾಗಿದೆ.

ಅಲ್ಲದೆ, ‘ವಿನೂತನ’ ತಂಡ ಪ್ರತಿವರ್ಷ ರಕ್ಷಾಬಂಧನವನ್ನು ವಿನೂತನವಾಗಿಯೇ ಆಚರಿಸಿಕೊಂಡು ಬರುತ್ತಿದೆ. ಅಂದು, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮರಗಳಿಗೆ ರಕ್ಷೆ ಕಟ್ಟಿ, ಅವುಗಳನ್ನು ಉಳಿಸುವ ಸಂಕಲ್ಪ ಕೈಗೊಳ್ಳಲಾಗುತ್ತದೆ. ಯುವಪೀಳಿಗೆಯಲ್ಲಿ ಅದರಲ್ಲೂ ವಿದ್ಯಾರ್ಥಿವೃಂದದಲ್ಲಿ ಪರಿಸರ-ಪ್ರೀತಿ ಮೂಡಿದರೆ ಭವಿಷ್ಯದ ದಿನಗಳನ್ನು ನೆಮ್ಮದಿಕರವಾಗಿಸಬಹುದು ಎಂಬ ಆಶಯದೊಂದಿಗೆ ಲಿಂಗರಾಜ್ ಮತ್ತವರ ತಂಡ ಸರ್ಕಾರಿ, ಖಾಸಗಿ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಪರಿಸರ ರಕ್ಷಣೆಯ ಅಗತ್ಯವನ್ನು ಹೇಳಿಕೊಡುತ್ತಿದೆ. ಮಕ್ಕಳಿಂದಲೇ ಸಸಿ ನೆಡಿಸಿ, ಅವುಗಳ ಪೋಷಣೆ ಹೊಣೆ ನೀಡುತ್ತಿದೆ. ಜಲ ಸಂರಕ್ಷಣೆ, ನೀರು ಇಂಗಿಸುವಿಕೆಯ ಸುಲಭ ತಂತ್ರಗಳನ್ನು ಹೇಳಿಕೊಡುತ್ತಿದೆ. ಜನರಿಗೆ ಉಚಿತವಾಗಿ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ರಸ್ತೆಬದಿಗಳಲ್ಲಿ ನೆರಳು ನೀಡುವ, ಹಣ್ಣು ಬಿಡುವ ಮರಗಳನ್ನು ಬೆಳೆಸುತ್ತಿದೆ. ಹೀಗೆ ಹತ್ತುಹಲವು ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಲಿಂಗರಾಜ್ ಅವರ ತಂಡ ಅನ್ಯಾಯದ ವಿರುದ್ಧ ಪ್ರತಿಭಟಿಸುವುದರಲ್ಲಿಯೂ ಹಿಂದೆ ಬಿದ್ದಿಲ್ಲ.

ಕಪ್ಪತ್ತಗುಡ್ಡದಲ್ಲಿ ಸರ್ಕಾರ ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ಹೊರಟಿದೆ ಎಂಬ ಸುದ್ದಿ ಆತಂಕ ಹರಡಿದಾಗ ಪರಿಸರವಾದಿಗಳ ಜತೆ ಲಿಂಗರಾಜ್ ಕೂಡ ಉಪವಾಸ ಸತ್ಯಾಗ್ರಹಕ್ಕೆ ಕೂತುಬಿಟ್ಟರು. ಗಣಿಗಾರಿಕೆಗೆ ಅವಕಾಶ ನೀಡೋದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ ಬಳಿಕವಷ್ಟೇ ಹೋರಾಟ ಕೊನೆಗೊಂಡಿತು.

ಹೀಗೆ, 27ರ ಈ ಯುವಕ ಪರಿಸರ ಜಾಗೃತಿ, ಅರಿವಿಗೆ ಸಂಬಂಧಿಸಿದಂತೆ 400ಕ್ಕೂ ಹೆಚ್ಚು ಕಾರ್ಯಕ್ರಮ, ಕಾರ್ಯಾಗಾರಗಳನ್ನು ನಡೆಸಿ, ತಮ್ಮ ತಂಡದ ನೆರವಿನೊಡನೆ 45-50 ಸಾವಿರ ಮರಗಳನ್ನು ನೆಟ್ಟಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ, ಯುವಮನಸುಗಳಲ್ಲಿ ಹಸಿರು ಪ್ರೀತಿ ಹುಟ್ಟಿಸಿ, ಅವರೆಲ್ಲ ಪರಿಸರಕ್ಕೆ ಪೂರಕವಾದಂಥ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತಿದ್ದಾರೆ.

‘ಗಿಡಗಳು ನಮ್ ಹಾಂಗೇ ಅಲ್ಲೇನ್ರಿ ಸರ್. ಅವುಗಳ ಛಂದ್ ಆಗಿ ಜೋಪಾನ ಮಾಡಿದ್ರೆ ತಾಪಮಾನ ಕಮ್ಮಿಯಾಗುತ್ತೆ, ಮಾಲಿನ್ಯ ಕಮ್ಮಿಯಾಗುತ್ತೆ. ಆಗ ಕಾಯಿಲೆ ಕಸಾಲೆಗಳೂ ಕಮ್ಮಿಯಾಗಿ ಸ್ವಸ್ಥ ಸಮಾಜ ಕಟ್ಟಬಹುದ್ರಿ. ಗಿಡ ಮನುಷ್ಯನಿಗೆ ಮಾಡುವ ಉಪಕಾರ ಅಷ್ಟಿಷ್ಟಲ್ಲ. ಆ ಉಪಕಾರಕ್ಕಾಗಿ ನಾವು ಒಂದಿಷ್ಟಾದರೂ ಕೆಲಸ ಮಾಡಿದ್ರೆ ಪರಿಸರ ಉಳಿತೈತಿ, ನಾವೂ ಉಳಿತೀವಿ’ ಎಂದು ಹೇಳುವ ಲಿಂಗರಾಜ್ (8050501377) ‘ವಿಚಾರವಂತರ ವೇದಿಕೆ’ ಎಂಬ ವಾಟ್ಸ್​ಆಪ್ ಗ್ರೂಪಿನ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಇಂಬು ನೀಡುತ್ತಿದ್ದಾರೆ. ಹುಬ್ಬಳ್ಳಿಯ ‘ಅವ್ವ’ ಪ್ರತಿಷ್ಠಾನದ ಪ್ರಶಸ್ತಿ, ರಾಜ್ಯ ಸರ್ಕಾರದ ಪರಿಸರ ಪ್ರಶಸ್ತಿ, ಸಾಲುಮರದ ತಿಮ್ಮಕ್ಕ ಗ್ರೀನ್ ಅವಾರ್ಡ್, ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ- ಹೀಗೆ ಹಲವು ಗೌರವಗಳು ಸಂದಿದ್ದರೂ ‘ಜನ ಮರ ನೆಟ್ಟು ಪೋಷಿಸಿದ್ರೆ ಅದೇ ನನಗೆ ನಿಜವಾದ ಅವಾರ್ಡ, ಗೌರವ’ ಎನ್ನುತ್ತಾರೆ ಲಿಂಗರಾಜ್. ಹಸಿರು ಪ್ರೀತಿಯನ್ನು ನಿತ್ಯದ ಜೀವನಮಂತ್ರವಾಗಿಸಿಕೊಂಡರೆ ಎಷ್ಟೆಲ್ಲ ಬದಲಾವಣೆಗಳನ್ನು ಸಾಕಾರಗೊಳಿಸಬಹುದು ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top