More

    ಅಬ್ಬಾ, ಎಷ್ಟೊಂದ್ ಜನ… ಇಲ್ಲಿ ಯಾರು ನಮ್ಮವರು?

    ಅಬ್ಬಾ, ಎಷ್ಟೊಂದ್ ಜನ... ಇಲ್ಲಿ ಯಾರು ನಮ್ಮವರು?ಕೆಲಸ ಹುಡುಕುತ್ತಿದ್ದ ಆ ಯುವಕ 2018ರಲ್ಲೊಂದು ಟ್ವೀಟ್ ಮಾಡಿದ. ‘ಕೆಲಸ ಕೊಡಿ’ ಅಂತ ಅಲ್ಲ! ‘ಏನೂ ಕೆಲಸ ಮಾಡದ ವ್ಯಕ್ತಿಯನ್ನು ಬಾಡಿಗೆಗೆ ತೆಗೆದುಕೊಳ್ಳಿ…!’ ಅಂತ. ನಮ್ಮ ಕಡೆಗಳಲ್ಲಿ ಕೆಲಸ ಗೊತ್ತಿರುವವರನ್ನು, ಚೆನ್ನಾಗಿ ದುಡಿಯುವವರನ್ನು ದಿನಗೂಲಿಗೆ, ಸಂಬಳಕ್ಕೆ ತೆಗೆದುಕೊಳ್ಳುತ್ತಾರೆ ಎಂಬುದೇನೋ ಗೊತ್ತು. ಆದರೆ, ಇದೇನಿದು, ಏನೂ ಕೆಲಸ ಮಾಡದ ವ್ಯಕ್ತಿಯನ್ನು ಬಾಡಿಗೆಗೆ ತಗೊಂಡು ಏನು ಮಾಡೋದು ಅಂತೀರಾ. ಅಂದು ಹಾಗೆ ಟ್ವೀಟ್ ಮಾಡಿದ ವ್ಯಕ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಕ್ತ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳಿದ್ದಾರೆ. ಆತ ‘ಏನೂ ಮಾಡದೆ’ ದುಡ್ಡು ಮಾಡುತ್ತಿದ್ದಾನೆ, ಜೀವನ ಸಾಗಿಸುತ್ತಿದ್ದಾನೆ. ಶೋಜಿ ಮೋರಿಮೊಟೊ ಅವನ ಹೆಸರು. ಜಪಾನಿನವನು. ಹೌದು, ಜಪಾನ್ ದೇಶದಲ್ಲಿ ಒಂಟಿತನದ ಸಮಸ್ಯೆ ಎಷ್ಟು ಗಂಭೀರವಾಗಿದೆಯೆಂದರೆ ಶೋಜಿಯಂಥವರು ಬಾಡಿಗೆಗೆ ಲಭ್ಯವಿದ್ದಾರೆ ಮತ್ತು ಜನರು ಅವರನ್ನು ಹೈರ್ ಮಾಡುತ್ತಿದ್ದಾರೆ.

    ಡಿನ್ನರ್​ಗೆ ಜತೆಯಾಗಲು, ಬರ್ತ್​ಡೇ ಕೇಕ್ ಶೇರ್ ಮಾಡಿಕೊಳ್ಳಲು, ಸಿನಿಮಾ, ಶಾಪಿಂಗ್​ಗೆ ಹೋಗಲು, ಪಾರ್ಕ್​ನಲ್ಲಿ ಸುತ್ತಾಡಲು, ಹರಟೆ ಹೊಡೆಯಲು, ಹಾಡು ಕೇಳಿಸಲು, ಕಾಫಿಶಾಪ್​ನಲ್ಲಿ ಕಾಫಿ ಸವಿಯಲು, ಪಿಕ್​ನಿಕ್ ಹೋಗಲು… ಹೀಗೆ ವಿವಿಧ ಕಾರಣಗಳಿಗಾಗಿ ವ್ಯಕ್ತಿಗಳನ್ನು ಬಾಡಿಗೆಗೆ ಪಡೆಯಲಾಗುತ್ತಿದೆ. ‘ನಾನು ಉದ್ಯೋಗ ಹುಡುಕುತ್ತಿದ್ದೆ. ಆದರೆ, ಎಲ್ಲಡೆ ಓಡಾಡುವಾಗ ಜನರು ಒಂಟಿತನ ಮತ್ತು ಏಕತಾನತೆಯಿಂದ ಬಳಲುತ್ತಿರುವುದನ್ನು ಗಮನಿಸಿ, ಈ ಐಡಿಯಾ ಮಾಡಿದೆ. ಯಾರ ಜತೆಗಾದರೂ ಒಂದಿಷ್ಟು ಸಮಯ ಕಳೆದರೆ ಅವರಿಗೆ ಸಂತೋಷ ಸಿಗುತ್ತದೆ, ನನಗೆ ದುಡ್ಡು’ ಎನ್ನುವ ಶೋಜಿ ಈವರೆಗೆ ಮೂರು ಸಾವಿರಕ್ಕೂ ಅಧಿಕ ಬುಕಿಂಗ್​ಗಳನ್ನು ಪೂರೈಸಿದ್ದು, ದಿನಕ್ಕೆ ಸರಾಸರಿ ಮೂರು ಆರ್ಡರ್​ಗಳನ್ನು ಪಡೆಯುತ್ತಿದ್ದಾರೆ. ಅದೀಗ ವ್ಯಕ್ತಿಗಳಿಂದ ಮುಂದುವರಿದು, ಸ್ನೇಹ ಎಂಬುದು ಮಾರುಕಟ್ಟೆಯ ದೊಡ್ಡ ಸ್ವರೂಪವೇ ಪಡೆದುಕೊಂಡಿದೆ. ಗಂಟೆಗೆ 500 ರೂಪಾಯಿ ಬಾಡಿಗೆ ಆಧಾರದಲ್ಲಿ ಸ್ನೇಹಿತರನ್ನು ಒದಗಿಸುವ ವೆಬ್​ಸೈಟ್​ಗಳು, ಆಪ್​ಗಳು ಹುಟ್ಟಿಕೊಂಡಿವೆ. ಬುಕ್ ಮಾಡುವವರು ಸ್ನೇಹಿತನನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಾರೋ, ಶಾಪಿಂಗ್ ಹೆಸರಲ್ಲಿ ಸಿಕ್ಕಾಪಟ್ಟೆ ಸುತ್ತಿಸುತ್ತಾರೋ ಎಂಬುದರ ಆಧಾರದ ಮೇಲೆ ಬಾಡಿಗೆ ದರಗಳು ಹೆಚ್ಚುಕಮ್ಮಿಯಾಗುತ್ತವಂತೆ.

    ಈ ಬೆಳವಣಿಗೆ ಮೇಲ್ನೋಟಕ್ಕೆ ವಿಚಿತ್ರ ಎನಿಸಿದರೂ, ಅರಳಿಕಟ್ಟೆಗಳಲ್ಲಿ ಹರಟೆ ರಂಗೇರುವ ಗ್ರಾಮೀಣ ಭಾರತದವರಿಗೆ ಆಶ್ಚರ್ಯ ಎನಿಸಿದರೂ ಒಂಟಿತನ, ಖಿನ್ನತೆ, ಭಯ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದಂತೂ ಹೌದು. ಒಂಟಿತನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಜಪಾನಿನಲ್ಲಿ ಹೆಚ್ಚುತ್ತಲೇ ಇದೆ. ಅದರಲ್ಲೂ, 10-19 ಮತ್ತು 20-35 ವಯೋಮಾನದವರ ಆತ್ಮಹತ್ಯೆ ಪ್ರಕರಣಗಳು ಏರಿಕೆ ಕಂಡಿವೆ. ಅಮೆರಿಕದಲ್ಲಿ ಮಕ್ಕಳು ಖಿನ್ನತೆ, ಒಂಟಿತನಕ್ಕೆ ಬೇಸತ್ತು ಶೂಟೌಟ್​ನಂಥ ಕ್ರೌರ್ಯಕ್ಕೆ ಮುಂದಾದ ಘಟನೆಗಳನ್ನೂ ನೋಡಿದ್ದೇವೆ. ಆದರೆ, ಜಪಾನಿನಲ್ಲಿ ಒಂಟಿತನ, ಖಿನ್ನತೆಯ ಸಮಸ್ಯೆ ಅಲ್ಲಿನ ಹಲವು ರಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸ್ನೇಹಿತರನ್ನು ದೂರವಿಟ್ಟು, ಕುಟುಂಬಸದಸ್ಯರೂ ಬೇಡವಾಗಿ ಬರೀ ಮೊಬೈಲನ್ನೇ ಜತೆಯಾಗಿಸಿಕೊಳ್ಳುವ ಇಂದಿನ ಮಕ್ಕಳು ಇಂಥ ಘಟನೆಗಳಿಂದ ಪಾಠ ಕಲಿಯಬೇಕಿದೆ. ಸಮಸ್ಯೆಯ ಗಂಭೀರತೆ ಅರಿತು ಜಪಾನ್ ಸರ್ಕಾರ ಒಂಟಿತನ ನಿವಾರಣೆಗಾಗಿ ಹೊಸ ಸಚಿವಾಲಯವನ್ನೇ ಸ್ಥಾಪಿಸಿದೆ. ಜನರಲ್ಲಿ ಸಂವಹನವನ್ನು ಹೆಚ್ಚಿಸುವ, ವೈಯಕ್ತಿಕ, ಸಾಮಾಜಿಕ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನಗಳಿಗೆ ಈ ಸಚಿವಾಲಯ ಮುಂದಾಗಿದೆ. ಅಲ್ಲದೆ, ಹೊಸದಾಗಿ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಕರ ವಾತಾವರಣವನ್ನು ರೂಪಿಸುತ್ತಿದೆ.

    ಇದು ಜಪಾನಿನ ಕಥೆ ಬಿಡಿ, ನಮ್ಮಲ್ಲೇನೂ ಈ ಸಮಸ್ಯೆ ಇಲ್ಲ ಎಂದು ನಿರಾಳವಾಗುವಂತಿಲ್ಲ. ಕರೊನಾದ ಎರಡನೇ ಅಲೆಯ ಹೊತ್ತಲ್ಲಿ ಮತ್ತು ಆ ಬಳಿಕ ಯುವಕರ ಆತ್ಮಹತ್ಯೆ ಪ್ರಕರಣಗಳು ಭಾರತದಲ್ಲೂ ಹೆಚ್ಚಾಗುತ್ತಿವೆ. ನೆನ್ನೆ, ಮೊನ್ನೆಯವರೆಗೂ ಲವಲವಿಕೆಯಿಂದ ಇರುವ ವ್ಯಕ್ತಿಗಳು ‘ಲೈಫ್ ಬೋರಾಗಿದೆ’ ಅಂತ ಆತ್ಮಹತ್ಯೆಗೆ ಶರಣಾಗುವ ನಿದರ್ಶನಗಳನ್ನು ನೋಡುತ್ತಲೇ ಇದ್ದೇವೆ. ಯುವಕರ ಸಾವಿನ ಮೂರು ಪ್ರಮುಖ ಕಾರಣಗಳಲ್ಲಿ ಆತ್ಮಹತ್ಯೆಯೂ ಒಂದಾಗಿದೆ. ಒಂಟಿತನ, ಖಿನ್ನತೆ ಸಮಸ್ಯೆಯ ಪರಿಣಾಮ ಸ್ನೇಹ ಇಲ್ಲೂ ಮಾರುಕಟ್ಟೆಯ ಸ್ವರೂಪ ಪಡೆದುಕೊಂಡಿದೆ. ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಚಂಡೀಗಢ, ಹೈದರಾಬಾದ್ ಮುಂತಾದ ನಗರಗಳಲ್ಲಿ ಶೋಜಿಯಂತೆಯೇ ವ್ಯಕ್ತಿಗಳು ‘ಸ್ನೇಹಿತ’ರಾಗಿ ಬಾಡಿಗೆಗೆ ಸಿಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯಂತೆ ಭಾರತದಲ್ಲಿ 20 ಕೋಟಿ ಜನರು ಖಿನ್ನತೆ, ಅ್ಡಛಿಠಿಢ ಹಾಗೂ ಇತರ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇನ್ನೊಂದು ಸಮೀಕ್ಷೆಯ ಪ್ರಕಾರ ಉದ್ಯೋಗ ರಂಗದಲ್ಲಿರುವ ಸಿಬ್ಬಂದಿಯಲ್ಲೂ ಖಿನ್ನತೆಯ ಪ್ರಕರಣಗಳು ಹೆಚ್ಚುತ್ತಿವೆ. ಆದರೂ, ‘ಮಾನಸಿಕ ಆರೋಗ್ಯ’ದ ಬಗ್ಗೆ ಮುಕ್ತವಾಗಿ ಮಾತನಾಡಲು ಇನ್ನೂ ಮೀನಮೇಷ ಎಣಿಸುವ ಮನೋಭಾವವಿದೆ. ‘ಹೌದು, ನಾನು ಖಿನ್ನತೆಯನ್ನು ಅನುಭವಿಸಿ, ಅದರ ಕೂಪದಿಂದ ಆಚೆ ಬಂದಿದ್ದೇನೆ’ ಎಂದು ಹಲವು ಸೆಲೆಬ್ರಿಟಿಗಳು ಹೇಳಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಂತೂ ಹಲವು ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಜನವರಿ 28ಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಹಾಗೂ ಗಾಯಕಿ ಶ್ರುತಿ ಹಾಸನ್ ಹುಟ್ಟುಹಬ್ಬದಂದೇ ಮಾನಸಿಕ ಆರೋಗ್ಯದ ಕುರಿತಂತೆ ಮಾತನಾಡಿದ್ದಾರೆ. ಅಲ್ಲದೆ, ‘ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಚಲನಚಿತ್ರಗಳಲ್ಲಿ ನಟಿಸುವೆ’ ಎಂದು ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್​ನಲ್ಲಿ ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮವನ್ನು ಘೋಷಿಸಿದೆ. ಹೌದು, ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವ ಮತ್ತು ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಮನೋಭಾವ ಜನರಲ್ಲಿ ಬೆಳೆಯಬೇಕಿದೆ. ಕರೊನಾ ಸಾಂಕ್ರಾಮಿಕ ಸಾವಿರಾರು ಜೀವಗಳನ್ನು ಬಲಿ ಪಡೆಯುವ ಜತೆಗೆ, ಅಸಂಖ್ಯ ಜನರನ್ನು ಖಿನ್ನತೆಗೆ ತಳ್ಳಿದೆ ಎಂಬ ವಾಸ್ತವವನ್ನು ಮನಗಾಣಬೇಕಿದೆ.

    ಅಷ್ಟಕ್ಕೂ, ಒಂಟಿತನ ಬೇರೆ, ಏಕಾಂತವೇ ಬೇರೆ. ಏಕಾಂತವೆಂದರೆ ಆಂತರ್ಯದೊಂದಿಗೆ ಸಂಪರ್ಕ ಸಾಧಿಸಿಕೊಳ್ಳುವುದು. ಆ ಸ್ಥಿತಿಯಲ್ಲಿ ಅಸಮಾಧಾನ, ಹಳಹಳಿಕೆ, ದುಃಖ, ಗೊಂದಲಗಳು ಇರುವುದಿಲ್ಲ. ಮತ್ತು ಏಕಾಂತ ಒತ್ತಾಯಪೂರ್ವಕವಲ್ಲ. ನಮ್ಮ ಒಳಗಿನಿಂದಲೇ ಬರುವ ಪ್ರೇರಣೆ. ಏಕಾಂತದ ಆಹ್ಲಾದದಲ್ಲಿ ಮನಸ್ಸನ್ನು ಅರಳಿಸಿಕೊಳ್ಳಬಹುದು, ಮನಸ್ಸನ್ನು ಸ್ವಲ್ಪ ತರಬೇತುಗೊಳಿಸಿ ಪರಿವರ್ತಿಸಿಕೊಳ್ಳಬಹುದು. ಹಾಗಾಗಿಯೇ, ಧ್ಯಾನ, ಜಪ-ತಪದಂಥ ಆಧ್ಯಾತ್ಮಿಕ ಸಾಧನೆಯಿಂದ ಹಿಡಿದು, ಸಂಗೀತಾಭ್ಯಾಸ, ಗಂಭೀರ ಬರವಣಿಗೆಗಳಿಗೆಲ್ಲ ಏಕಾಂತವನ್ನೇ ಆಯ್ದುಕೊಳ್ಳುತ್ತಾರೆ. ಒಂಟಿತನ ಹೀಗಲ್ಲ. ಅದು ಕ್ಷಣಕ್ಷಣಕ್ಕೂ ಚುಚ್ಚುತ್ತದೆ. ‘ನನಗಾಗಿ ಯಾರೂ ಇಲ್ಲ’ ಎಂಬ ಭಾವವನ್ನು ತೀವ್ರಗೊಳಿಸುತ್ತದೆ. ಇಂದಿನ ತರುಣರಿಗಂತೂ ತಾಳ್ಮೆಯೆಂಬುದೇ ಕಮ್ಮಿಯಾಗುತ್ತಿದೆ. ಎದುರಿನವರು ಫೋನ್ ಕಾಲ್ ರಿಸೀವ್ ಮಾಡಲಿಲ್ಲ ಎಂದಾಕ್ಷಣ ಅವರು ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಭಾವಿಸಿಕೊಳ್ಳುತ್ತ ತಮ್ಮನ್ನೇ ಶಪಿಸಿಕೊಳ್ಳುತ್ತಾರೆ. ‘ನನಗೆ ನೀಡಲು ಯಾರ ಬಳಿಯೂ ಸಮಯವಿಲ್ಲ’ ಎಂದುಕೊಳ್ಳುತ್ತ ಒಂಟಿತನದ ಪ್ರಪಾತಕ್ಕೆ ಜಾರುತ್ತಾರೆ. ‘ಗೊತ್ತಿಲ್ಲದವರಿಗೆ ರಕ್ತದಾನ ಮಾಡುವ ನಾವು, ಗೊತ್ತಿರುವವರಿಗೆ ಸಮಯದಾನ ಮಾಡಲು ಹಿಂದೆ-ಮುಂದೆ ನೋಡುತ್ತೇವೆ’ ಎಂಬಂಥ ಹೇಳಿಕೆಗಳು ಹೆಚ್ಚಾಗಿ ಕೇಳಿಬರುತ್ತಿವೆ.

    ಇಲ್ಲಿ ಒಂದು ಸಿಂಪಲ್ ಲಾಜಿಕ್ ಕೂಡ ಇದೆ. ‘ಯಾರೂ ನನಗೆ ಸಮಯ ನೀಡುವುದಿಲ್ಲ, ಕೇಳುವುದಿಲ್ಲ’ ಅಂತ ಕೊರಗುವ ಬದಲು, ಇವರೇ ಒಂದಿಷ್ಟು ಜನರಿಗೆ ಸಮಯ ನೀಡಲು ಮುಂದಾದರೆ, ಹೊಸ ಮತ್ತು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಹೊಸ ಸ್ನೇಹಿತರೂ ಸಿಗುತ್ತಾರೆ, ಸಂಬಂಧಗಳೂ ಅರಳುತ್ತವೆ. ವೃದ್ಧಾಶ್ರಮಗಳಲ್ಲಿ, ಅನಾಥಾಶ್ರಮಗಳಲ್ಲಿ ವೃದ್ಧರು, ಮಕ್ಕಳು ಕೂಡ ಒಂಟಿತನ ಅನುಭವಿಸುತ್ತಿರುತ್ತಾರೆ. ಯಾರೋ ಬಂದು ನಾಲ್ಕು ಕ್ಷಣ ಮಾತನಾಡಬೇಕು, ಕಷ್ಟಸುಖ ಕೇಳಬೇಕು ಎಂದು ಹಂಬಲಿಸುತ್ತಾರೆ. ಇಂಥವರ ಬಳಿಗೆ ಹೋಗಿ ಒಂದಿಷ್ಟು ಗುಣಮಟ್ಟದ ಸಮಯ ಕಳೆದರೆ ಅವರಿಗೂ ಸಂತೋಷ, ನಮಗೂ ಸಮಾಧಾನ. ಬರೀ ಸುತ್ತಾಟ, ಶಾಪಿಂಗ್​ಗಳಲ್ಲಿ ಸಂತೋಷ ಸಿಗುವುದಿಲ್ಲ. ಭೌತಿಕ ವಸ್ತುಗಳಿಂದ ಸಿಗುವ ಸಂತೋಷವೇನಿದ್ದರೂ ಕ್ಷಣಿಕ. ಹೊಸ ಅಂಗಿ ಹಾಕಿಕೊಂಡಾಗ, ಹೊಸ ಮೊಬೈಲ್ ಕೊಂಡಾಗ ಹೆಚ್ಚೆಂದರೆ ನಾಲ್ಕು ದಿನ ಸಂಭ್ರಮ ಪಡಬಹುದು ಅಷ್ಟೇ. ಆಮೇಲೆ ಮತ್ತೆ ಎಲ್ಲವೂ ಬೋರ್ ಅನಿಸಲು ಶುರುವಾಗುತ್ತದೆ. ಹಾಗಾಗಿ, ಮನಸ್ಸಿಗೆ ಅಂದರೆ ನಮ್ಮ ಹೃದಯಕ್ಕೆ ಏನು ಬೇಕು ಅಂತ ಒಮ್ಮೆ ಯೋಚಿಸಬೇಕು. ಅದು ಬಯಸುವುದು ಮಧುರ ಸಂಬಂಧಗಳನ್ನು, ಹಿತವಾದ ಸ್ನೇಹವನ್ನು, ಆಪ್ತ ಅಪು್ಪಗೆಯನ್ನು, ಕಣ್ಣೀರನ್ನು ಒರೆಸುವ ಕೈಯನ್ನು ಮಾತ್ರ. ಮನುಷ್ಯ ಗುಡಿಸಲಿನಲ್ಲೇ ಇರಲಿ, ಮಹಲಿನಲ್ಲೇ ಇರಲಿ ಅವನ ನಿಜವಾದ ಅಗತ್ಯಗಳು ಇಷ್ಟೇ. ಸಮಸ್ಯೆ ಬರೋದು ಬಹುತೇಕರು ವಾಸ್ತವಗಳಿಂದ ದೂರ ಹೋಗುವುದರಿಂದ, ಸತ್ಯವನ್ನು ಒಪ್ಪಿಕೊಳ್ಳಲು ಹಿಂಜರಿಯುವುದರಿಂದ. ಮನಸ್ಸು ಬಿಚ್ಚಿ ಮಾತನಾಡಲು ಅಹಂನ ಗೋಡೆ ಅಡ್ಡಿಯಾಗಿಬಿಡುತ್ತದೆ, ಪ್ರತಿಷ್ಠೆಯ ಭ್ರಮೆ ಸುಮ್ಮನಾಗಿಸಿಬಿಡುತ್ತದೆ. ಆಗ, ಹೊರಗಿನ ಲೋಕ ಥಳಕುಬಳುಕಿನಿಂದ ಕಂಡರೂ; ಆಂತರ್ಯದ ಲೋಕ ಮಾತ್ರ ಭರವಸೆಯ ಪುಟ್ಟ ಹಣತೆಯನ್ನು ನಿರೀಕ್ಷಿಸುತ್ತಿರುತ್ತದೆ.

    ಮಾತು ಎಂಬುದು ಶಕ್ತಿ. ಭಾವನೆಗಳ ಅಭಿವ್ಯಕ್ತಿಗೆ ಇರುವ ದೊಡ್ಡ ವರ. ಇದನ್ನು ಅರ್ಥಮಾಡಿಕೊಳ್ಳದೆ ಅದನ್ನು ನಕಾರಾತ್ಮಕ ಕಾರಣಕ್ಕಾಗಿ ಬಳಸಿ, ಮನಸ್ಸನ್ನು ಗೊಂದಲದ ಗೂಡಾಗಿಸಿಕೊಂಡರೆ ಅದಕ್ಕೆ ಯಾರು ಹೊಣೆ? ಸಂಬಂಧಗಳು ಶಿಥಿಲವಾಗುತ್ತಿರುವುದು ಘಾಸಿಗೊಳಿಸುವ ಮಾತುಗಳಿಂದಲೇ. ಹಾಗಾಗಿ, ಸಂಬಂಧಗಳ ಮರುವ್ಯಾಖ್ಯಾನ ಆಗಬೇಕಾದರೆ ಭಾವನೆಗಳ ಬೆಲೆ ಅರಿಯಬೇಕಿದೆ. ಜಗತ್ತು ನಮ್ಮನ್ನು ನಿರ್ಲಕ್ಷಿಸಿದರೆ ಏನಾಯಿತು; ನಮ್ಮದೇ ಒಂದು ಲೋಕವನ್ನು ಸೃಷ್ಟಿಸೋಣ ಎಂಬ ಭರವಸೆಯ ಒರತೆ ಎದೆಯಂಗಳದಲ್ಲಿ ಚಿಮ್ಮಬೇಕಿದೆ. ದುಃಖ, ನೋವುಗಳ ಭಾರ ಎಲ್ಲರ ಹೆಗಲಿಗೂ ಇದೆ. ಕೆಲವರಿಗೆ ಸ್ವಲ್ಪ ಜಾಸ್ತಿ; ಕೆಲವೊಬ್ಬರಿಗೆ ಕಡಿಮೆ. ಆದರೆ, ಇದ್ಯಾವುದೂ ಶಾಶ್ವತವಲ್ಲ. ಜೀವನ ಬದಲಾಗುತ್ತಲೇ ಇರುತ್ತದೆ. ಅಷ್ಟಕ್ಕೂ, ಜೀವನ ಇರುವುದು ಶೋಕಿಸಲು, ವ್ಯಥೆಪಡಲು ಅಲ್ಲ, ಬದಲಾಗಿ ಆನಂದದಿಂದ ಜೀವಿಸಲು ಎಂಬ ಸರಳಸತ್ಯ ಅರ್ಥಮಾಡಿಕೊಂಡರೆ ಬೇಕುಗಳು, ನಿರೀಕ್ಷೆಗಳು ಕಡಿಮೆಯಾಗುತ್ತವೆ, ಒಂಟಿತನ, ಖಿನ್ನತೆ ದೂರವಾಗಿ ಉಲ್ಲಾಸದ ಅಲೆಗಳು ಮನಸ್ಸನ್ನು ಪ್ರಫುಲ್ಲಿತಗೊಳಿಸುತ್ತವೆ. ಬನ್ನಿ, ಮತ್ತೊಮ್ಮೆ ಬದುಕೋಣ!

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts