More

  ಯುವಜಮಾನಾಕ್ಕೆ ಕೌಶಲ, ಅಂತಃಕರಣ ಎರಡೂ ಬೇಕು!

  ಮುಕ್ತವಾಗಿ ಬದುಕಬೇಕು!

  ಯಾವುದೇ ಯುವಮನಸ್ಸುಗಳನ್ನು ಕೇಳಿದರೂ ಸಿಗುವ ಉತ್ತರ ಇದುವೇ. ನಿಸ್ಸಂಶಯವಾಗಿ ಗುರಿ ಉತ್ತಮವೇ. ಆದರೆ, ಸಾಗುತ್ತಿರುವ ಹಾದಿ ಹೇಗಿದೆ, ಯುವಕರು ಅವರ ಜೀವನ ರೂಪಿಸಿಕೊಳ್ಳಬಲ್ಲರೆ? ಸಮಾಜನಿರ್ವಣದಲ್ಲಿ ಕೊಡುಗೆ ಕೊಡಬಲ್ಲರೆ? ರಾಷ್ಟ್ರೀಯ ಯುವಸಪ್ತಾಹವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಇಂಥ ಹಲವು ಜಿಜ್ಞಾಸೆಗಳು ಕಾಡುವುದುಂಟು. ಸಿಡಿಲಸಂತ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರೇರಣೆಯನ್ನು ಮತ್ತೊಮ್ಮೆ ಮೆಲುಕು ಹಾಕಿಕೊಂಡು, ಜೀವನಕ್ರಮದಲ್ಲಿ ಅದನ್ನು ಅನುಷ್ಠಾನಕ್ಕೆ ತರುವ ಜರೂರತ್ತು ಕೂಡ ಹಿಂದೆಂದಿಗಿಂತ ಹೆಚ್ಚಿದೆ. ಯುವಮನಸ್ಸುಗಳದ್ದು ವಿಶಾಲ ಲೋಕ. ಸಕಾರಾತ್ಮಕ, ನಕಾರಾತ್ಮಕ ಎರಡೂ ಸಂಗತಿಗಳು ಈ ಲೋಕದಲ್ಲಿ ಸೇರಿಕೊಂಡಿವೆ. ಆದರೆ, ವ್ಯಕ್ತಿತ್ವ ಪರಿಪೂರ್ಣ, ಪರಿಪಕ್ವವಾಗಿ ರೂಪುಗೊಳ್ಳಬೇಕು ಎಂದರೆ ಅದಕ್ಕೆ ಸಾತ್ವಿಕತೆ, ನೈತಿಕತೆಗಿಂತ ಮಿಗಿಲಾದ ಮಾರ್ಗ ಇಲ್ಲ. ಹೌದು, ಬದಲಾಗುತ್ತಿರುವ ಯುವಜಮಾನಕ್ಕೆ ಜ್ಞಾನ ಮತ್ತು ಕೌಶಲದ ತಾಕತ್ತೂ ಬೇಕು, ಅಂತಃಕರಣ ಸಂವೇದನೆಯ ಬಲವೂ ಇರಬೇಕು. ಜ್ಞಾನ, ಕೌಶಲ ಧಿಮಾಕಿನ ಕೋಡು ಮೂಡಿಸಿದರೆ ಅಧಃಪತನ. ಜ್ಞಾನ, ಕೌಶಲದ ಜತೆಗೆ ಮಾನವೀಯತೆ, ದಯೆ, ಒಳಗೊಳ್ಳುವಿಕೆಯ ಮೌಲ್ಯಗಳು ಸೇರಿಕೊಂಡರೆ ‘ಯುವಾವಸ್ಥೆ’ ಇಡೀ ಜೀವನಕ್ಕೆ ಭದ್ರ ಬುನಾದಿ ಒದಗಿಸಬಲ್ಲದು. ನಾವು ನಮ್ಮ ಜೀವನದ ಚೇಂಜ್​ವೆುೕಕರ್ಸ್ ಆಗುವ ಜತೆಗೆ, ಈ ಸಮಾಜದ, ರಾಷ್ಟ್ರದ ಆಕಾಂಕ್ಷೆಗಳ ನೈಜ ಪ್ರತಿನಿಧಿಗಳಾಗಬಹುದು.

  ‘ನಮ್ಮ ರಾಷ್ಟ್ರೀಯ ಆದರ್ಶಗಳು ತ್ಯಾಗ ಮತ್ತು ಸೇವೆ. ದೇಶವನ್ನು ಈ ಎರಡು ಆದರ್ಶಗಳಲ್ಲಿ ತೊಡಗಿಸಿದರೆ ಉಳಿದವೆಲ್ಲವೂ ತಮಗೆ ತಾವೇ ಸರಿಹೋಗುತ್ತವೆ’ ಎಂದ ಸ್ವಾಮಿ ವಿವೇಕಾನಂದರು, ರಾಷ್ಟ್ರಭಕ್ತಿಯು ಕೇವಲ ಭಾವನಾತ್ಮಕವಾಗಿರದೆ ಅಥವಾ ಮಾತೃಭೂಮಿಯ ಉತ್ಕಟ ಪ್ರೀತಿಯ ಭಾವನೆಯಾಗಿರದೆ, ನಮ್ಮ ದೇಶದ ಜನಸಮೂಹಕ್ಕೆ ಸೇವೆ ಮಾಡುವ ಉತ್ಕಟ ಮನೋಭಾವವಾಗಿರಬೇಕು ಎಂದು ಹೇಳುವ ಮೂಲಕ ಯುವಮನಸ್ಸುಗಳು ಸಾಗಬೇಕಾದ ಪಥವನ್ನು ದರ್ಶಿಸಿದ್ದಾರೆ. ಆದರೆ, ಇಂದಿನ ದಿನಗಳಲ್ಲಿ ಮನಸ್ಸುಗಳು ಯುವಕರನ್ನು ಆಳುತ್ತಿವೆ. ‘ಮನಸ್ಸನ್ನು ನಾವು ಆಳುವಂತಾಗಬೇಕು’ ಎಂಬುದು ವಿವೇಕಾನಂದರ ಸಂದೇಶ. ಅದು ಅಷ್ಟು ಸುಲಭವಲ್ಲ ನಿಜ; ಹಾಗಂತ ಅಸಾಧ್ಯವೂ ಅಲ್ಲ.

  ನಮ್ಮಲ್ಲಿ ರಾಜಕಾರಣಿಗಳು ಯುವಕರನ್ನು ವೋಟ್​ಬ್ಯಾಂಕ್ ಆಗಿ ಪರಿಗಣಿಸಿದ್ದಾರೆ. ಆದರೆ, ಅವರ ಆಶಯ, ಕೌಶಲ, ಕೊರತೆ… ಯಾವುದರ ಬಗ್ಗೆಯೂ ಅವರು ಗಂಭೀರವಾಗಿಲ್ಲ. ಅದು ಚರ್ಚೆಯ ಮತ್ತೊಂದು ಆಯಾಮ. ದೇಶದ ಪ್ರಧಾನಿಯೇ ಯುವಕರನ್ನು ‘ನನ್ನ ಪ್ರಿಯ ಸ್ನೇಹಿತರೇ’ ಎಂದು ಸಂಬೋಧಿಸಿ, ಖಾಸಾ ದೋಸ್ತ್​ನಂತೆಯೇ ಆಪ್ತತೆಯ ಮಾತುಗಳನ್ನು ಹೇಳಿದಾಗ, ರೋಮಾಂಚನವಾಗದೆ ಇರಲು ಸಾಧ್ಯವೇ. ‘ಪ್ರಧಾನಿ ಮಾತುಗಳು’ ಎಂದಾಕ್ಷಣ ಅದನ್ನು ರಾಜಕೀಯ ಕನ್ನಡಕದಿಂದ ನೋಡಿ, ವ್ಯಾಖ್ಯಾನಿಸುವ ದುಸ್ಸಾಹಸ ಬೇಡ. ಕಳಕಳಿಯ ಕೆಲವು ಮಾತುಗಳು ಹೃದಯದಿಂದ ಬಂದಾಗ ಅದನ್ನು ಸ್ವೀಕರಿಸುವ ಸಹೃದಯತೆ ಬೇಕು. ಮತ್ತು ಪ್ರಧಾನಿಯೇ ತರುಣರ ಸಾಮರ್ಥ್ಯವನ್ನು, ರಾಷ್ಟ್ರದ ಸಾಮರ್ಥ್ಯ ಎಂದು ಹೇಳಿರುವಾಗ, ಆ ಒಳನೋಟಗಳನ್ನು ಅರ್ಥೈಸಿಕೊಳ್ಳೋಣ.

  ಡಿಸೆಂಬರ್ 28 ಐಐಟಿ ಕಾನಪುರದ ಘಟಿಕೋತ್ಸವ. ಅಲ್ಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಖುಲೇ ದಿಲ್ ಸೇ ಜಿಯೋ’ ಎಂದು ಹೇಳುವಾಗ, ಅದಕ್ಕೆ ಮಾಡಿಕೊಳ್ಳಬೇಕಾದ ತಯಾರಿಗಳನ್ನು ವಿವರಿಸಿದ್ದು ವಿಶೇಷವಾಗಿತ್ತು. ತಂತ್ರಜ್ಞಾನದ ಬಲ ಯುವಕರಲ್ಲಿ ವಿಶ್ವಾಸ ಮೂಡಿಸುವ ಜತೆಗೆ, ತಾವು ಇತರರಿಗಿಂತ ಶ್ರೇಷ್ಠ, ‘ಮುಂದುವರಿದವರು’ ಎಂಬ ಧಿಮಾಕೂ ಮೂಡಿಸಿದೆ. ಇದಕ್ಕೆ ಪ್ರಧಾನಿ ಸೂಕ್ಷ್ಮವಾಗಿ ಹೇಳಿದ್ದೇನು ಗೊತ್ತೆ? ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್​ನ್ನು (ಕೃತಕ ಬುದ್ಧಿಮತ್ತೆ-ಎಐ) ಎಷ್ಟು ಬೇಕಾದರೂ ಬಳಸಿಕೊಳ್ಳಿ, ಆದರೆ ಹ್ಯುಮನ್ ಇಂಟಲಿಜೆನ್ಸ್​ನ್ನು ಮಾತ್ರ ಮರೆಯಬೇಡಿ’! ‘5ಜಿ, 6ಜಿ ಸಂಶೋಧಿಸಿ, ಮುಂದುವರಿಯಿರಿ, ಜತೆಗೆ, ಬೇರುಮಟ್ಟದಲ್ಲಿ ಗುರುತಿಸಿಕೊಳ್ಳಲು ಮರೆಯದಿರಿ’. ‘ಎಷ್ಟು ಬೇಕಾದರೂ ಕೋಡಿಂಗ್ ಮಾಡಿ ಪರವಾಗಿಲ್ಲ, ಆದರೆ ಜನರೊಂದಿಗೆ ಕನೆಕ್ಟ್ ಆಗುವುದನ್ನು ಮರೆಯದಿರಿ. ಎಷ್ಟು ಬೇಕಾದರೂ ಹೊಸ ಇನೋವೇಶನ್ ಮಾಡಿ; ಆದರೆ ಹ್ಯುಮನ್ ಎಲಿಮೆಂಟ್ಸ್ (ಮಾನವೀಯ ತತ್ತ್ವ)ನ್ನು ಮೂಲೆಗುಂಪು ಮಾಡಬೇಡಿ. ಎಷ್ಟೆಲ್ಲ ಓದಿ, ಸಾಧನೆ ಮಾಡಿ, ನೂರೆಂಟು ಸಂಗತಿಗಳನ್ನು ತಿಳಿದುಕೊಂಡರೂ ಭಾವನೆಗಳ (ಎಮೋಷನ್) ವಿಷಯ ಬಂದಾಗ ನಿಮ್ಮ ಮಿದುಳು ‘404 error page not found’ ಎಂದು ಹೇಳದಿರಲಿ. ಭಾವನೆಗಳ ಜತೆಗೆ ಬೆಸೆದರೆ ಮಾತ್ರ ಕೌಶಲಕ್ಕೆ ಬೆಲೆ. ಖುಷಿಯನ್ನು ಹಂಚುವಾಗ (ಶೇರಿಂಗ್ ಆಫ್ ಜಾಯ್) ಯಾವುದೇ ಪಾಸ್​ವರ್ಡ್ (ಮನಸ್ಸಿನ ಅಡೆತಡೆ) ಇಡಬೇಡಿ. ದಯೆ, ಕರುಣೆ, ಮಾನವೀಯತೆಯ ಪ್ರಶ್ನೆ ಬಂದಾಗ ನೆಟ್​ವರ್ಕ್ ಸುಲಭವಾಗಿ ಕನೆಕ್ಟ್ ಆಗಲಿ.

  ಕಂಫರ್ಟ್ ಮತ್ತು ಚಾಲೆಂಜ್​ನ ಮಧ್ಯೆ ಆಯ್ಕೆ ಸಂದರ್ಭ ಬಂದಾಗ ಸವಾಲನ್ನೇ ಆಯ್ದುಕೊಳ್ಳಿ. ಏಕೆಂದರೆ, ನೀವು ಬಯಸಿದರೂ, ಬಯಸದಿದ್ದರೂ ಜೀವನದಲ್ಲಿ ಸವಾಲುಗಳು ಬಂದೇ ಬರುತ್ತವೆ, ಅವುಗಳ ಜತೆ ಹೋರಾಡಬೇಕಾಗುತ್ತದೆ ಮತ್ತು ಇದರಲ್ಲೇ ಬದುಕಿನ ನಿಜವಾದ ಸ್ವಾರಸ್ಯವಿದೆ’ ಎನ್ನುತ್ತಲೇ, ‘ಮುಕ್ತವಾದ ಮನಸ್ಸಿನಿಂದ ಬದುಕಿ, ಭೀತಿಯನ್ನು ಕಿತ್ತು ಹಾಕಿ ಸಂತೋಷದಿಂದ ಬದುಕಿ, ಇತರರ ಬದುಕಿನಲ್ಲೂ ಸಂತೋಷವನ್ನು ತನ್ನಿ… ಏಕೆಂದರೆ ಜೀನಾ ಇಸೀ ಕಾ ನಾಮ್ ಹೈ’ ಎಂದು ಹೇಳಿದ ಮೋದಿ, ‘ಕಾಫಿಯ ಘಮ ನಿಮ್ಮ ಹುಮ್ಮಸ್ಸು ಹೆಚ್ಚಿಸಲಿ, ಜಿಲೇಬಿಯ ಸವಿ, ಸ್ನೇಹಿತರೊಂದಿಗಿನ ಹರಟೆ ಜೀವನೋತ್ಸಾಹ ಹೆಚ್ಚಿಸಲಿ ಎಂದು ಹೇಳಲು ಮರೆಯಲಿಲ್ಲ (ಹೀಗೆ ಯುವಮನಸ್ಸುಗಳ ಸಾಮರ್ಥ್ಯ ಹೆಚ್ಚಿಸುವ, ಸೃಜನಶೀಲತೆ ಅರ್ಥಮಾಡಿಕೊಳ್ಳುವನೇ ನಿಜವಾದ ಅರ್ಥದಲ್ಲಿ ನಾಯಕನಾಗಬಲ್ಲ). ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಇಂದಿನ ಜಗತ್ತಿಗೆ ಅನಿವಾರ್ಯವಾದರೂ, ಅಂತಃಕರಣದ ದಾರಿಯಲ್ಲಿ ಕ್ರಮಿಸಿದರೆ ಮೇಲಿನ ಯಾವ ಸಂಗತಿಗಳು ಹಾದಿ ತಪು್ಪವುದಿಲ್ಲ. ನಿಜ, ಯುವಮನಸ್ಸಿನ ಆದ್ಯತೆಗಳು ಬದಲಾಗುತ್ತಿವೆ. ಹಾಗಾಗಿಯೇ ಜೀವನಶೈಲಿಯ ಸಮೀಕರಣಗಳು, ಜೀವನನೋಟಗಳು ಕೂಡ ಬದಲಾಗುತ್ತಿವೆ. ಭಾರತದಲ್ಲಿ ನವೋದ್ಯಮಕ್ಕೆ ಪೂರಕ ವಾತಾವರಣ ಇಲ್ಲ ಎಂಬ ಗ್ರಹಿಕೆಗಳನ್ನು ಸುಳ್ಳುಮಾಡಿ ನವೋದ್ಯಮಗಳ ಸಂಖ್ಯೆ 50 ಸಾವಿರಕ್ಕೆ ಏರಿಕೆಯಾಗಿದೆ. ಈ ಪೈಕಿ 10 ಸಾವಿರ ಸ್ಟಾರ್ಟ್​ಪ್ಗಳು ಕಳೆದ ಆರು ತಿಂಗಳಲ್ಲೇ ಅಂದರೆ ಕರೊನಾ ಕಾಲದಲ್ಲೇ ಆರಂಭವಾಗಿವೆ. ಸ್ವಾವಲಂಬಿಯಾಗಬೇಕು ಎಂಬ ತುಡಿತ ವೈಯಕ್ತಿಕ ಉತ್ಕರ್ಷದ ಜತೆಗೆ, ಸಮಾಜದ ಅಭಿವೃದ್ಧಿಗೂ ಕಾರಣವಾಗುತ್ತಿವೆ. ಜ್ಞಾನ+ಕೌಶಲ+ಸೃಜನಶೀಲತೆ = ಉತ್ತಮ ವ್ಯಕ್ತಿತ್ವವಾಗಬೇಕೆ ಹೊರತು ಕೌಶಲ=ಸ್ವಾರ್ಥ ಆಗಬಾರದು.

  ಕನಸುಗಳಿಗೆ ಕೊರತೆ ಇಲ್ಲ: ಇಂದಿನ ಯುವಕರ ಬಳಿ ನೂರೆಂಟು ಕನಸುಗಳು, ಅಷ್ಟೇ ಸೃಜನಾತ್ಮಕ ವಿಚಾರಗಳು. ಹಾಗಾಗಿಯೇ, ಇಂದು ‘ಯುವಸಾಧಕ’ರು ಅಂದಾಕ್ಷಣ ಹೆಸರುಗಳು ಬೆರಳೆಣಿಕೆಯಲ್ಲಿ ಮುಗಿದು ಹೋಗುವುದಿಲ್ಲ. ಖಂಡಿತವಾಗಿಯೂ ಇದು ಬಾಹ್ಯಸಾಧನೆಯಲ್ಲಿ ಮುಗಿದು ಹೋಗಬಾರದು. ಮಾನವೀಯ ಸಂವೇದನೆ, ಕಲ್ಪನೆ, ಸೃಜನಾತ್ಮಕತೆ, ಕಾತರದ ಉತ್ಸಾಹ ಇದೆಲ್ಲದರ ಮಿಳಿತದಿಂದ ನಮ್ಮ ಬದುಕು ಮಾತ್ರವಲ್ಲ, ಸಮಾಜದ ಬದುಕು ಕೂಡ ಭದ್ರಗೊಳ್ಳಬೇಕು. ಹೀಗಾಗಬೇಕಾದರೆ ಒಂದಿಷ್ಟು ಕೊರತೆಗಳನ್ನು ತೊಲಗಿಸಬೇಕು, ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕು.

  ಹಿರಿಯರೊಬ್ಬರು ಇತ್ತೀಚೆಗೆ ಹೇಳುತ್ತಿದ್ದರು- ‘ಶೈಕ್ಷಣಿಕ ಪದವಿ ಪಡೆದುಕೊಂಡಾಕ್ಷಣ ಯುವಕರು ಬುದ್ಧಿವಂತರಾಗುವುದಿಲ್ಲ. ವಿಶ್ವವಿದ್ಯಾಲಯಗಳಿಂದ ಬಂದ ಬಳಿಕವೂ ಸಮಾಜದ ಬಗ್ಗೆ ಸಿನಿಕತೆ ಇದೆ, ಗುರು-ಹಿರಿಯರ ಬಗ್ಗೆ ಅನಾದರವಿದೆ, ದೇಶದ ಇತಿಹಾಸ-ಪರಂಪರೆಗಳ ಬಗ್ಗೆ ತಾತ್ಸಾರವಿದೆ, ವರ್ತಮಾನದ ಬಗ್ಗೆ ಬರೀ ನಿರಾಶೆ ಇದೆ ಎಂದರೆ ಅಂಥ ಪ್ರಮಾಣಪತ್ರವನ್ನು ಅಗ್ನಿಗೆ ಆಹುತಿ ನೀಡಿ, ಮನುಷ್ಯನಾಗುವ ಪಾಠ ಮೊದಲು ಕಲಿಯಬೇಕು’ ಅಂತ. ಅದಕ್ಕೆ ಪ್ರಧಾನಿಯೂ ಹೇಳಿದ್ದು ಭಾವನೆ, ಸೇವೆಯ ವಿಷಯ ಬಂದಾಗ ನಮ್ಮ ಹೃದಯ ಖಾಲಿ ಆಗಿರಬಾರದು ಅಂತ. ಮನಸ್ಸು, ಮಿದುಳು, ದೇಹದ ಬೆಳವಣಿಗೆ, ಒಂದಿಷ್ಟು ಭೌತಿಕ ವಿಕಾಸದ ಜತೆಗೆ ಆತ್ಮೋದ್ಧಾರದ ಗಮ್ಯದ ಕಡೆಗೆ ಸಾಗಿದಾಗಲೇ ಜೀವನಪಯಣ ಸಾರ್ಥಕವಾಗಬಲ್ಲದು.

  ಈ ಮಾನವಚೈತನ್ಯದ ಬಗ್ಗೆಯೇ ಸ್ವಾಮಿ ವಿವೇಕಾನಂದರು ಮತ್ತೆ ಮತ್ತೆ ಮಾತನಾಡಿದ್ದಾರೆ- ‘ಬಾಹ್ಯಪ್ರಪಂಚವನ್ನು ಮಾತ್ರವೇ ಅರಿಯುತ್ತಬಂದರೆ ಮಾನವ ತನ್ನನ್ನು ‘ತಾನೊಬ್ಬ ಅಲ್ಲ’ ಎಂದು ಭಾವಿಸುವ ಸ್ಥಿತಿಗೆ ಬರುತ್ತಾನೆ. ಪ್ರಕೃತಿಯ ಈ ಶಕ್ತಿಗಳು! ಇಲ್ಲಿ ಕಾಣುವ ಪ್ರಚಂಡ ಪರಿವರ್ತನೆಗಳು! ಈ ಭೂಮಿಯ ಮೇಲೆ ಒಂದು ಸಮಗ್ರ ಜನಾಂಗವೇ ಕ್ಷಣಾರ್ಧದಲ್ಲಿ ನಾಮಾವಶೇಷವಾಗುವ ಘಟನೆಗಳು! ಭಯಂಕರ ಜ್ವಾಲಾಮುಖಿಯೊಂದು ಭೂಗರ್ಭದಿಂದ ಭುಗಿಲೆದ್ದು ಭಾರೀ ಗಾತ್ರದ ಒಂದು ಭೂಭಾಗವನ್ನೇ ಪುಡಿ ಪುಡಿಯಾಗಿಸುವಂಥ ಸಂಗತಿಗಳು- ಇಂಥವೆಲ್ಲವನ್ನು ಕಂಡು, ಕೇಳಿ ಅವುಗಳ ಕುರಿತು ಅಧ್ಯಯನ ಮಾಡುತ್ತ ಬೆರಗುಗೊಳ್ಳುತ್ತ, ಇವುಗಳ ಮುಂದೆ ತಾನೆಷ್ಟು ದುರ್ಬಲ ಎಂದು ಭಾವಿಸಿಕೊಳ್ಳಲಾರಂಭಿಸುತ್ತಾನೆ. ಆದರೆ ಮನುಷ್ಯನ ಅಂತರಂಗದಲ್ಲೊಂದು ಚೈತನ್ಯವಿದೆ. ಅದು ಜ್ವಾಲಾಮುಖಿಗಿಂತಲೂ ಅಥವಾ ನಿಸರ್ಗದ ಮತ್ತಾವುದೇ ಶಕ್ತಿಗಿಂತಲೂ ಕೋಟಿಪಾಲು ಅಧಿಕ ಶಕ್ತಿಯುತವಾದದ್ದು. ಮಾನವನ ಒಳಗಣ ಈ ಚೈತನ್ಯವು ಪ್ರಕೃತಿಶಕ್ತಿಯನ್ನೂ ಪ್ರಕೃತಿನಿಯಮಗಳನ್ನೂ ಮೆಟ್ಟಿನಿಲ್ಲುತ್ತದೆ. ಅಷ್ಟೇ ಅಲ್ಲ, ಮಾನವ ದಿಟವಾಗಿ ಯಾರು – ಎಂಬುದನ್ನೂ ಅವನಿಗೆ ಅದು ಕಲಿಸಿಕೊಡುತ್ತದೆ’. ಇಂಥ ಒಳಗಿನ ಚೈತನ್ಯವನ್ನು ಬಡಿದೆಬ್ಬಿಸಲು ಮೊದಲು ಆತ್ಮನಿರೀಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಭಾರತಕ್ಕೆ ವಿದೇಶಿ ನೇರ ಹೂಡಿಕೆ ಹೆಚ್ಚುತ್ತಿರುವುದು (ಎಫ್​ಡಿಐ) ಸಮಾಧಾನದ ಸಂಗತಿಯಾದರೂ, ಜಗತ್ತಿನ ಬಹುತೇಕ ದೇಶಗಳಿಂದ ಜನರು ಇಲ್ಲಿನ ಆಧ್ಮಾತ್ಮಿಕ ಸಂಪತ್ತನ್ನು ಅರಿಸಿ ಬರುತ್ತಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.

  ‘ಮಾನವನೇ ಪ್ರಾಣಿಗಳೆಲ್ಲಕ್ಕಿಂತ ಶ್ರೇಷ್ಠ; ದೇವತೆಗಳಿಗಿಂತಲೂ ಅವನು ಮಿಗಿಲು. ಮಾನವ ಮಾತ್ರ ಪರಿಪೂರ್ಣತೆಯನ್ನು ಗಳಿಸಬಲ್ಲ; ದೇವತೆಗಳಿಗೂ ಅಸಾಧ್ಯವಿದು’ ಎಂಬ ಸ್ವಾಮಿ ವಿವೇಕಾನಂದರ ಮಾತು ನಮ್ಮೆಲ್ಲರ ಹೃದಯಗಳನ್ನು ಆವರಿಸಿಕೊಳ್ಳಲಿ. ಯುವಸಮೂಹಕ್ಕೆ ರಾಷ್ಟ್ರನಿರ್ವಣ ಕೂಡ ತಮ್ಮ ಜೀವಿತಾವಧಿಯ ಪ್ರಮುಖ ಭಾಗ ಎಂಬ ಅರಿವು ಮೂಡಲಿ. ಹೀಗೆ ಹೊಸ ಮೌಲ್ಯಗಳ ಹಾದಿಯಲ್ಲಿ ಕ್ರಮಿಸಿದಾಗಲೇ, ಶ್ರೇಷ್ಠ ಕನಸುಗಳು ಸಾಕಾರಗೊಳ್ಳುತ್ತವೆ. ಬದುಕು ನಿಜವಾಗಿಯೂ ಮುಕ್ತ ಹಾಗೂ ಆನಂದದಾಯಕವಾಗುತ್ತದೆ! ಅಲ್ಲವೇ?

  (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts