More

  ಯಶಸ್ಸಿಗಿಂತ ಸಂತೃಪ್ತಿಯ ಬದುಕು ಮುಖ್ಯವೆಂದು ಗೊತ್ತಿದ್ದರೂ…

  ಬದುಕು ಎಂದರೇನು…? ಈ ಪ್ರಶ್ನೆಗೆ ಸರಳವಾದ ಅಥವಾ ಸಿದ್ಧವ್ಯಾಖ್ಯಾನ ಸಾಧ್ಯವಿಲ್ಲ. ಏಕೆಂದರೆ, ಅದಕ್ಕೊಂದು ಅರ್ಥ ನೀಡಬೇಕಾದವರು ನಾವೇ. ಒಂದಂತೂ ನಿಜ, ಬದುಕು ಬದಲಾಗುತ್ತಲೇ ಇರುತ್ತದೆ. ಈ ಬದಲಾವಣೆಯ ಸ್ವರೂಪವೂ ಭಿನ್ನ.

  • ವಿಧಿಯ ಅನಿರೀಕ್ಷಿತ ಹೊಡೆತಗಳಿಗೆ ತತ್ತರಿಸಿ ಅನಿವಾರ್ಯವಾಗಿ ಬದಲಾಗುವ ಬದುಕು. = ಕಠಿಣ ಪರಿಶ್ರಮ, ಬದ್ಧತೆ, ಛಲದಿಂದ ಬದಲಾಗುವ ಬದುಕು.
  • ಏನು ಮಾಡದಿದ್ದರೂ ಕಾಲದ ಪ್ರವಾಹದಲ್ಲಿ ಸಹಜವಾಗಿ ಸಂಭವಿಸುವ ಬದಲಾವಣೆಗಳಿಂದ ತಿರುವು ಪಡೆಯುವ ಬದುಕು.
  • ಜ್ಞಾನ, ಅರಿವು, ತಿಳಿವಳಿಕೆ, ಅಧ್ಯಾತ್ಮದ ಪ್ರಭೆಯಿಂದ ಪರಿವರ್ತನೆಗೊಳ್ಳುವ ಬದುಕು. ಈ ಪೈಕಿ ಎಲ್ಲವೂ ಎಲ್ಲರಿಗೂ ದಕ್ಕುವುದಿಲ್ಲ ನಿಜ. ಆದರೆ, ಯಾರ ಹೃದಯ ಯಾವ ಬಗೆಯ ಪರಿವರ್ತನೆಗಾಗಿ ತುಡಿಯುತ್ತಿರುತ್ತದೋ ಆ ನಿಟ್ಟಿನಲ್ಲಿ ಮನಸ್ಸಿನ ದಾರಿ ತೆರೆದುಕೊಳ್ಳುವುದು ಖರೆ. ಬಹುತೇಕರಲ್ಲಿ ‘ನಮ್ಮ ಬದುಕು ಬದಲಾಗಬೇಕು’ ಎಂಬ ಆಸೆಯೇನೋ ಬಲಿಯುತ್ತಲೇ ಇರುತ್ತದೆ. ಸಮಸ್ಯೆ ಇರುವುದು-ಯಾವ ಬಗೆಯ ಬದಲಾವಣೆಗೆ ಒಡ್ಡಿಕೊಳ್ಳಬೇಕು ಅಂತ.

  ಈ ಗೊಂದಲ ಕಾಡುವುದು ಏಕೆ ಗೊತ್ತೆ? ಜೀವನ ಎಂದರೆ ಕೆಲವೇಕೆಲವು ಸಿದ್ಧಮಾದರಿ ಇಟ್ಟು; ಇಷ್ಟು ಪಡೆದುಕೊಂಡರೆ ‘ಯಶಸ್ವೀ ಬದುಕು’ ಎಂಬ ಭ್ರಮೆ ಸೃಷ್ಟಿಸಿರೋದು. ವಾಸ್ತವದಲ್ಲಿ, ಈ ಪಡೆದುಕೊಳ್ಳುವ ಧಾವಂತ ಜೀವನದ ಪಯಣದಲ್ಲಿ ಕೊನೆಗೊಳ್ಳುವಂಥದ್ದೇ ಅಲ್ಲ. ಪಡೆದುಕೊಳ್ಳುವುದಷ್ಟೇ ಅಲ್ಲ; ಕೊಡುವುದು, ಅರ್ಪಿಸುವುದು ಕೂಡ ಬದುಕಿನ ಸೊಗಸು ಅಂತ ಅರ್ಥವೇ ಆಗದೆ ಜೀವನದ ಪಯಣ ಎಲ್ಲೆಲ್ಲೋ ಸಾಗುತ್ತಿರುತ್ತದೆ. ಪಡೆದುಕೊಳ್ಳುವುದು ಅಂದರೆ ಏನು- ಹಣ, ಅಂತಸ್ತು, ಅಧಿಕಾರ, ವರ್ಚಸ್ಸು. ಇಷ್ಟೇ ಜೀವನವೇ? ಇನ್ನೂ ಒಂದು ವರ್ಗವಿದೆ- ಅವರದ್ದು ನಿರಾಶಾವಾದ. ‘ಏನೇ ಮಾಡಿದರೂ ಬದುಕು ಬದಲಾಗಲ್ಲ; ಲೈಫು ಇಷ್ಟೇನೆ’ ಎಂಬ ಉದ್ಗಾರ. ಆದರೆ, ನಮ್ಮ ಬದುಕಿಗೆ ಎಂಥ ಬದಲಾವಣೆ ಬೇಕು ಅಂತ ಆಯ್ಕೆ ಮಾಡಿಕೊಳ್ಳುವುದರಲ್ಲಿಯೇ ಸೋತುಬಿಟ್ಟರೆ; ವಿಧಿಯನ್ನೋ, ಸುತ್ತಲಿನ ಸಮಾಜವನ್ನೋ ಶಪಿಸಿ ಏನು ಫಲ?

  ಕಾಲೇಜಿನ ಸಂವಾದ ಕಾರ್ಯಕ್ರಮಗಳಿಗೆ ಹೋದಾಗ ವಿದ್ಯಾರ್ಥಿಗಳಿಂದ ಸಿಗುವ ಉತ್ತರ ಅಚ್ಚರಿಗೊಳಿಸುತ್ತದೆ. ‘ಬೇಗ ಸಿರಿವಂತ ವ್ಯಕ್ತಿಯಾಗಬೇಕು ಎಂಬುದು ನನ್ನ ಜೀವನದ ಗುರಿ’. ಸಿರಿವಂತರಾಗೋದು ತಪ್ಪಲ್ಲ, ಆ ಬಳಿಕ ಏನ್ಮಾಡ್ತೀರಿ ಅಂತ ಮರುಪ್ರಶ್ನಿಸಿದರೆ, ‘ನಾನು ಆರಾಮಾಗಿ ಇರ್ತಿನಿ, ದುಡ್ಡು ಒಂದಿದ್ದರೆ ಜಗತ್ತೇ ಸಲಾಂ ಹೊಡೆಯುತ್ತೆ’ ಎಂದ ವಿದ್ಯಾರ್ಥಿ. ಬದುಕಿನ ಮೌಲ್ಯವನ್ನು ಕಟ್ಟಿಕೊಳ್ಳುವಲ್ಲಿ ವಿಫಲರಾಗೋದೇ ಈ ಹಂತದಲ್ಲಿ. ಸಮಷ್ಟಿಯ ಬಗ್ಗೆ ಒಂದಿಷ್ಟು ಚಿಂತನೆ ಮಾಡದೆ ಬರೀ ಸ್ವಂತಕ್ಕಾಗಿ ಹಣ ಪೇರಿಸಿಟ್ಟುಕೊಂಡರೆ ಏನು ಸಾರ್ಥಕತೆ? ಕೆಲವು ರಾಜಕಾರಣಿಗಳನ್ನು ನೋಡಿ. ಅಧಿಕಾರ ಪಡೆಯುವುದೇ ಗುರಿ ಎಂದುಕೊಳ್ಳುತ್ತಾರೆ. ಇದಿಷ್ಟೇ ಜೀವನವಲ್ಲ ಅಂತ ಅರ್ಥವಾಗುವಷ್ಟರಲ್ಲಿ ಹಿಂದೆ ಹೋಗಲಾರದಷ್ಟು, ಮುಂದಡಿ ಇಡಲಾರದಷ್ಟು ದೂರ ಕ್ರಮಿಸಿಬಿಟ್ಟಿರುತ್ತಾರೆ.

  ನಿಜ, ಸಿದ್ಧಮಾದರಿ ಬದಿಗಿಟ್ಟು ಬದುಕು ರೂಪಿಸಿಕೊಳ್ಳುವುದಕ್ಕೆ ಧೈರ್ಯವೊಂದೇ ಅಲ್ಲ ಆಂತರ್ಯದಲ್ಲಿ ಒಂದಷ್ಟು ಭಾವ ಸಿರಿವಂತಿಕೆಯೂ ಬೇಕು. ಏಕೆಂದರೆ ಸಮಾಜದ ಮಾನಸಿಕತೆಯೇ ಬದಲಾಗಿದೆ. ಪ್ರತಿಷ್ಠಿತ ನೌಕರಿ, ಭಾರಿ ಬ್ಯಾಂಕ್ ಬ್ಯಾಲೆನ್ಸ್, ಒಳ್ಳೆಯ ಹುಡುಗ/ಹುಡುಗಿಯೊಂದಿಗೆ ವಿವಾಹ, ಆಮೇಲೆ ಗೃಹಸ್ಥ ಜೀವನ, ಕಾರು-ಸ್ವಂತಮನೆ, ವಾರಾಂತ್ಯದ ಮೋಜು… ಇಷ್ಟು ಇದ್ದರೆ ‘ಅವರ ಲೈಫು ಸೂಪರ್ ಬಿಡ್ರಿ’ ಅಂತ ಷರಾ ಬರೆದುಬಿಡುತ್ತಾರೆ. ಆದರೆ, ಬಾಹ್ಯ ಸಿರಿವಂತಿಕೆಯೇ ಬೇರೆ, ಆಂತರಿಕ ಸಿರಿವಂತಿಕೆಯೇ ಬೇರೆ. ಹಾಗಾಗಿ, ಯಾವ ದಿಕ್ಕಿನಲ್ಲಿ ಬದುಕು ಬದಲಿಸಿಕೊಳ್ಳಬೇಕು ಅಂತ ಮೊದಲು ನಿಶ್ಚಯಿಸಿಕೊಂಡರೆ, ಸಾರ್ಥಕತೆಯ ಒಂದೊಂದು ಎಳೆಗಳು ನಮಗೆ ಎದುರಾಗುತ್ತವೆ.

  ಮೊನ್ನೆ ಮಾರ್ಚ್ 15ಕ್ಕೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನವಿತ್ತು. 2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲೆ ಭಯೋತ್ಪಾದಕರು ಭೀಕರ ದಾಳಿ ನಡೆಸಿದಾಗ ವೀರಾವೇಶದಿಂದ ಹೋರಾಡಿ, ಹಲವು ಭಯೋತ್ಪಾದಕರನ್ನು ಹತ್ಯೆಗೈದು ಪ್ರಾಣವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದವರು ಸಂದೀಪ್. ಅಷ್ಟಕ್ಕೂ, ನೇರ ಕಾರ್ಯಾಚರಣೆಯಲ್ಲಿ ಕಿರಿಯ ಸಹೋದ್ಯೋಗಿಗಳನ್ನು ತೊಡಗಿಸಿ, ಇವರು ಮಾರ್ಗದರ್ಶನ ಮಾಡಿದ್ದರೆ ಸಾಕಿತ್ತು. ಆದರೆ, ಭಯೋತ್ಪಾದಕರ ಅಟ್ಟಹಾಸ, ತಾಜ್​ನಲ್ಲಿ ಸೃಷ್ಟಿಯಾದ ಭೀಕರ ಪರಿಸ್ಥಿತಿ ಅದೆಲ್ಲವನ್ನು ಕಂಡು ಸಂದೀಪ್ ಸ್ವತಃ ಕಾರ್ಯಾಚರಣೆಗಿಳಿದರು. ಉನ್ನಿಕೃಷ್ಣನ್-ಧನಲಕ್ಷ್ಮಿ ದಂಪತಿಗೆ ಒಬ್ಬನೇ ಮಗ ಸಂದೀಪ್. ಇವರು ಯುವಕರಿಗೆ ಕೊಡುತ್ತಿರುವ ಕರೆಯೇನು ಗೊತ್ತೆ- ‘ಯಾರಿಗೆ ಸಾಧ್ಯವೋ ಅವರು ಖಂಡಿತ ಸೇನೆಗೆ ಸೇರಿಕೊಳ್ಳಿ. ಆದರೆ, ರಾಷ್ಟ್ರಸೇವೆ ಮಾಡಬೇಕು ಎಂದರೆ ಸೇನೆಯನ್ನೇ ಸೇರಬೇಕು ಅಂತೇನಿಲ್ಲ. ಯಾವುದೇ ಕ್ಷೇತ್ರ, ಹುದ್ದೆಯಲ್ಲಿರಲಿ ನಿಮ್ಮ ಪೂರ್ಣಸಾಮರ್ಥ್ಯ ಬಳಸಿ ‘ದಿ ಬೆಸ್ಟ್’ ಎಂಬಂಥ ಫಲಿತಾಂಶ ನೀಡಿ. ಒಂದೊಂದು ಕ್ಷೇತ್ರ ಸದೃಢವಾದರೂ, ಸಮಸ್ಯೆಗಳಿಂದ ಮುಕ್ತವಾದರೂ ದೇಶ ಬಲಿಷ್ಠವಾದಂತೆಯೇ. ಹೌದು, ನಾವು ಒಬ್ಬ ಸಂದೀಪ್​ನನ್ನು ಕಳೆದುಕೊಂಡಿದ್ದೇವೆ. ಆದರೆ, ಅವನ ಶೌರ್ಯ, ತ್ಯಾಗ, ಬಲಿದಾನದ ಪರಿಣಾಮ ನಾವಿಂದು ಸಾವಿರ-ಸಾವಿರ ಯುವಕರಲ್ಲಿ ಸಂದೀಪ್​ನನ್ನು ಕಾಣುತ್ತಿದ್ದೇವೆ. ಹಾಗಾಗಿ, ನಮ್ಮ ಮಗ ಇಲ್ಲ ಅಂತ ಅನಿಸುತ್ತಿಲ್ಲ, ಈ ಯುವಕರ ಹೃದಯಗಳಲ್ಲಿ, ಕನಸುಗಳಲ್ಲಿ ಸಂದೀಪ್ ಬದುಕಿದ್ದಾನೆ…’ ಎಂದಾಗ ಬದುಕಿನ ಸಾವಿರ ಅರ್ಥಗಳು ಒಮ್ಮೆಗೆ ಪ್ರಕಾಶಿಸಿದಂತಾದವು.

  ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದ ಯುವಾ ಬ್ರಿಗೇಡ್ ಸಂಘಟನೆ ಹಲವಾರು ವರ್ಷಗಳಿಂದ ಸಂದೀಪ್ ಹುಟ್ಟುಹಬ್ಬವನ್ನು ಅವರ ತಂದೆ-ತಾಯಿ ಮತ್ತು ನೂರಾರು ತರುಣರ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಅವರ ಪತ್ನಿ ಶಕುಂತಲಾ ಮೊನ್ನೆ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಹುತಾತ್ಮ ಯೋಧರ ಪತ್ನಿಯರಿಗೆ ನೆರವು ನೀಡುವ ಸಾರ್ಥಕ ಕಾರ್ಯದಲ್ಲಿ ತೊಡಗಿರುವ ಶಕುಂತಲಾ ಬದುಕಿನ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಪರಿಚಯಿಸಿದರು. ‘ಅಜಿತ್ ಇಲ್ಲ ಎಂಬ ನೋವು ಇದೆಯಾದರೂ; ಆ ನೋವನ್ನೇ ಸಕಾರಾತ್ಮಕ ಛಲವಾಗಿಸಿಕೊಂಡೆವು. ಅದರ ಪರಿಣಾಮ ನನ್ನ ಇಬ್ಬರು ಮಕ್ಕಳಾದ ನಿರ್ಭಯ್ ಮತ್ತು ಅಕ್ಷಯ್ ಭಂಡಾರ್ಕರ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಿರ್ಭಯ್ ಅಂತೂ ತಂದೆ ಕೆಲಸ ಮಾಡಿದ ರೆಜಿಮೆಂಟಿನಲ್ಲೇ ಇದ್ದಾರೆ. ಮತ್ತು ಇಬ್ಬರೂ ಸಂದೀಪ್ ಉನ್ನಿಕೃಷ್ಣನ್​ರನ್ನು ಪ್ರೇರಣೆಯಾಗಿಸಿಕೊಂಡೇ, ಸೇನೆ ಸೇರಿದ್ದಾರೆ’ ಎಂದು ಹೇಳಿದಾಗ, ಎಲ್ಲರದ್ದೂ ಒಂದೇ ಉದ್ಗಾರ-ಅಬ್ಬಾ ಎಂಥ ಅದ್ಭುತ ಬದುಕು!

  ಅಷ್ಟೇಕೆ, ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಜನ್ಮದಿನದಂದು ಇಡೀ ಕರುನಾಡೇ ಸಂಭ್ರಮಿಸಿತಲ್ಲ. ಅಂದು ನಡೆದ ಅನ್ನಸಂತರ್ಪಣೆ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಮುಂತಾದ ಸಮಾಜಮುಖಿ ಚಟುವಟಿಕೆಗಳಿಗೆ ಲೆಕ್ಕವಿಡಲು ಸಾಧ್ಯವಿಲ್ಲ. ಸಮಾಜ ಈ ಬಗೆಯ ಅನನ್ಯ ಪ್ರೀತಿ ಹರಿಸುವುದು ಏಕೆ? ಪುನೀತ್ ನಟರಾಗಿದ್ದರು ಎಂಬ ಕಾರಣಕ್ಕೆ ಮಾತ್ರವಲ್ಲ; ಪುನೀತ್ ಅದೆಷ್ಟೋ ಬದುಕುಗಳಿಗೆ ಆಸರೆಯಾಗಿದ್ದರು; ಸದ್ದಿಲ್ಲದೆ ಸಮಾಜಸೇವೆಯಲ್ಲಿ ತೊಡಗಿದ್ದರು. ನೊಂದವರ ಕಣ್ಣೀರು ಒರೆಸಿದ್ದರು. ಅಂದರೆ, ತೆರೆ ಮೇಲಷ್ಟೇ ಅಲ್ಲ ನಿಜಜೀವನದಲ್ಲೂ ಪ್ರೀತಿ, ಖುಷಿ ಹಂಚಿದ್ದರು. ಹಾಗಾಗಿಯೇ, ಇಡೀ ರಾಜ್ಯ ಅಪು್ಪವನ್ನು ಮನೆಮಗನಂತೆ ಕಾಣುತ್ತಿದೆ. ಪುನೀತ್ ಭೌತಿಕವಾಗಿ ನಮ್ಮೊಂದಿಗೆ ಇರದಿದ್ದರೂ, ಅಸಂಖ್ಯ ಹೃದಯಗಳಲ್ಲಿ ಶಾಶ್ವತಸ್ಥಾನ ಪಡೆದು ನೆಲೆಸಿದ್ದಾರಲ್ಲ, ಇದು ಬದುಕು!

  ಆರಂಭದಲ್ಲಿ ಪ್ರಸ್ತಾಪಿಸಿದಂತೆ ಇವರೆಲ್ಲ ವಿಧಿಯ ಅನಿರೀಕ್ಷಿತ ಆಘಾತಗಳಿಗೆ ತುತ್ತಾದರೂ; ಬದುಕನ್ನು ಹೇಗೆ ಬದಲಿಸಿಕೊಳ್ಳಬೇಕು ಅಂತ ಸರಿಯಾಗಿ ನಿರ್ಧರಿಸಿಕೊಂಡವರು. ಪತಿಯನ್ನು ಕಳೆದುಕೊಂಡ ಶಕುಂತಲಾ ಭಂಡಾರ್ಕರ್ ಮಕ್ಕಳಿಗೆ, ‘ನಿಮಗೆ ಸೇನೆಯ ಸಹವಾಸವೇ ಬೇಡ’ ಎಂದು ಹೇಳಿದ್ದರೆ… ಈ ಸಾಧನೆ ಸಾಧ್ಯವಿತ್ತೆ? ಸಮಾಜಕಂಟಕ ಶಕ್ತಿಗಳ ಕುಕೃತ್ಯದಿಂದ ಎರಡೂ ಕಾಲನ್ನು ಕಳೆದುಕೊಂಡ ಅರುಣಿಮಾ ಸಿನ್ಹಾ ‘ಇಲ್ಲಿಗೆ ನನ್ನ ಜೀವನ ಮುಗಿಯಿತು’ ಅಂತ ಸೋಲೊಪ್ಪಿಕೊಂಡು ಕೂತಿದ್ದರೆ, ಮೌಂಟ್ ಎವರೆಸ್ಟ್​ನ ತಲೆಯ ಮೇಲೆ ವಿಜಯಪತಾಕೆ ಹಾರಿಸಲು, ಸೋತು ಹೋಗಿದ್ದ ಸಾವಿರ-ಸಾವಿರ ಮನಸ್ಸುಗಳಿಗೆ ಪ್ರೇರಣೆ ತುಂಬಲು ಸಾಧ್ಯವಿತ್ತೆ? ಉತ್ತರಾಖಂಡದ ಪ್ರದೀಪ್ ಮೆಹ್ರಾ ಎಂಬ 19 ವರ್ಷದ ಹುಡುಗನ ವಿಡಿಯೋ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡುತ್ತಿದೆ. ನೋಯ್ಡಾದಲ್ಲಿ ಅಣ್ಣನೊಂದಿಗೆ ವಾಸವಾಗಿರುವ ಪ್ರದೀಪ್ ನೌಕರಿ ಮುಗಿಸಿಕೊಂಡು, ಮಧ್ಯರಾತ್ರಿಯ ಹೊತ್ತಲ್ಲಿ 10 ಕಿ.ಮೀ. ಓಡಿಕೊಂಡು ರೂಮು ತಲುಪುತ್ತಾನೆ. ಸೇನೆಗೆ ಸೇರಲು ತಯಾರಿ ಮಾಡಿಕೊಳ್ಳುತ್ತಿರುವ ಈತ, ಬೆಳಗ್ಗೆದ್ದು ಮತ್ತೆ ಕೆಲಸಕ್ಕೆ ಹೋಗಬೇಕಲ್ಲ ಎಂದು ರಾತ್ರಿಯೇ ಓಟದ ಗುರಿ ಮುಗಿಸಿ, ಫಿಟ್​ನೆಸ್ ಸಾಧಿಸುತ್ತಿದ್ದಾನೆ. 10 ಕಿ.ಮೀ. ಧಾವಿಸಿ ಬಂದ ಮೇಲೆ ದಣಿವಾರಿಸಿಕೊಳ್ಳದೆಯೇ ರೂಮಿನಲ್ಲಿ ಅಡುಗೆ ತಯಾರಿಸುತ್ತಾನೆ. ‘ಕಠಿಣ ಪರಿಶ್ರಮವೊಂದೇ ಜೀವನಕ್ಕೆ ಸಿಹಿಫಲ ನೀಡಬಲ್ಲದು, ನಮ್ಮ ಕನಸುಗಳನ್ನು ಸಾಕಾರಗೊಳಿಸಬಲ್ಲದು’ ಎನ್ನುತ್ತಾನೆ. ಇತ್ತೀಚೆಗೆ ಯೂಕ್ರೇನಿನಿಂದ ಬಂದ ವಿದ್ಯಾರ್ಥಿಯೊಬ್ಬ ‘ಭಾರತ ಸರ್ಕಾರಕ್ಕೆ ಗಟ್ಸ್ ಇಲ್ಲ’ ಎಂದಿದ್ದ. ಆದರೆ, ಬದುಕನ್ನು ರೂಪಿಸಿಕೊಳ್ಳಲು, ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರದೀಪ್​ನಂತೆ ಪರಿಶ್ರಮಪಡುವ ಗಟ್ಸ್ ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

  ಜೀವನಕ್ಕೆ ವಿಶೇಷ ಮೌಲ್ಯವಿದೆ. ಅದನ್ನು ‘ಬೇಕು’ಗಳಿಗೆ ಸೀಮಿತಗೊಳಿಸಿ ಸಂಕುಚಿತಗೊಳಿಸಿಕೊಳ್ಳುವುದು ಬೇಡ. ಸ್ವಾರ್ಥದ ಭಾರದಲ್ಲಿ ಬದುಕನ್ನು ಬರಡಾಗಿಸಿಕೊಳ್ಳುವುದು ಬೇಡ. ತ್ಯಾಗದಿಂದಲೇ ಜೀವನ, ಪ್ರೀತಿ-ಮಮತೆಯೇ ಅಮೃತತ್ತ್ವ ಎಂಬ ಜೀವನಧರ್ಮವನ್ನು ಸಾರಿದ ನೆಲವಿದು. ಅಂಥ ಜೀವನಪಥದಲ್ಲಿ ಸಾಗೋಣ. ಇರುವಾಗಲೂ ಬದುಕೋಣ, ಹೋದ ಮೇಲೂ ಇನ್ನೂ ಹೆಚ್ಚು ಬದುಕೋಣ. ಏನಂತೀರಿ?

  (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts