Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ವಿವೇಕಾನಂದರ ಒಂದು ಮಾತು ಆತನ ಜೀವನವನ್ನೇ ಬದಲಿಸಿತು!

Thursday, 17.05.2018, 3:03 AM       No Comments

| ರವೀಂದ್ರ ಎಸ್​. ದೇಶಮುಖ್​

‘ರಸ್ತೆಯಲ್ಲಿ ಅನಾಥ ಶವ ಪತ್ತೆ’, ‘ಚಿಕಿತ್ಸೆ ಸಿಗದೆ ಫುಟ್​ಪಾತಿನಲ್ಲೇ ಪ್ರಾಣಬಿಟ್ಟ ವೃದ್ಧ…’ ಇಂಥ ಸುದ್ದಿಗಳು ಬೆಳಗ್ಗೆಯೇ ದಿನಪತ್ರಿಕೆ ಪುಟಗಳನ್ನು ತಿರುವಿ ಹಾಕುವಾಗ ಕಣ್ಣಿಗೆ ರಾಚುತ್ತವೆ. ಕೆಲವರಿಗೆ ಇದನ್ನು ಓದಿ ಕರುಳು ಚುರ್ ಎಂದರೆ, ಮತ್ತೆ ಕೆಲವರು ಹೆಚ್ಚೇನು ತಲೆ ಕೆಡಿಸಿಕೊಳ್ಳದೆ ಮುಂದಿನ ಪುಟಕ್ಕೆ ಹೋಗುತ್ತಾರೆ! ಇನ್ನು ಪ್ರಯಾಣಕ್ಕೆ ಹೊರಟಾಗಲೋ, ಇಲ್ಲವೆ ಮಾರುಕಟ್ಟೆಗೋ, ದೇವಸ್ಥಾನಕ್ಕೋ ಹೋದಾಗ ದೈಹಿಕ ಅಂಗವಿಕಲರು, ವೃದ್ಧರು ಊಟಕ್ಕಾಗಿ ಅಥವಾ ಹಣಕ್ಕಾಗಿ ಕೈಚಾಚುವುದನ್ನು ನೋಡಿರುತ್ತೀರಿ. ಅಷ್ಟಕ್ಕೂ ಇವರು ಮಾಡಿದ ತಪ್ಪೇನು? ಸಮಾಜ ಇಷ್ಟೊಂದು ವಿಶಾಲವಾಗಿರುವಾಗಲೂ ಅನಾಥರು ಎಂಬ ಕಾರಣಕ್ಕೆ ದಯನೀಯ ಬದುಕು ಸಾಗಿಸಬೇಕಾ? ಒಂದು ಸ್ಥಳದಿಂದ ಮತ್ತೊಂದೆಡೆ ತೆರಳಲು ಆಗದ ಅಸಹಾಯಕರಿಗೆ ಎರಡು ಹೊತ್ತಿನ ಊಟ, ವೈದ್ಯಕೀಯ ಶುಶ್ರೂಷೆ, ಒಂದಿಷ್ಟು ಪ್ರೀತಿಮಾತು ನೀಡದಷ್ಟು ನಮ್ಮ ಸಮಾಜದ ಸಂವೇದನೆ ಬರಡಾಗಿದೆಯಾ?

ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಲೇ ಈ ಹುಡುಗನ ಕಥೆ ಕೇಳಿ. ಹೆಸರು ರಾಜೇಶ್ ಕೊತ್ವಾಲ್. ಊರು ತೆಲಂಗಾಣದ ಹೈದರಾಬಾದ್. ಮನೆಯಲ್ಲಿದ್ದದ್ದು ಸಾತ್ವಿಕ ವಾತಾವರಣ. ಮಗ ಉತ್ತಮ ವ್ಯಕ್ತಿಯಾಗಬೇಕು ಎಂಬ ಆಶಯದಿಂದ ಶಿಕ್ಷಕಿಯಾಗಿದ್ದ ಅಮ್ಮ ಭಾರತಿ ಸದಾ ನೀತಿಕಥೆಗಳನ್ನು ಹೇಳೋರು. ಜೀವನದ ಉದ್ದೇಶ, ಧ್ಯೇಯ ವಿವರಿಸುವಾಗ ‘ಮಗೂ, ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಮಾನವೀಯತೆ. ಕಷ್ಟದಲ್ಲಿ ಇರುವವರಿಗೆ ನಮ್ಮ ಕೈಯಿಂದಾದ ಸಹಾಯ ಮಾಡಬೇಕು’ ಎಂದು ತಿಳಿಹೇಳುತ್ತಿದ್ದರು. ಅಷ್ಟೇ ಅಲ್ಲ, ಹಾಗೇ ಸ್ಪಂದಿಸಲು ಅನುವು ಮಾಡಿಕೊಡುತ್ತಿದ್ದರು. ಅದೇ ಹೊತ್ತಿಗೆ ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದ ಹುಡುಗ. ರಾಮಕೃಷ್ಣ ಆಶ್ರಮ ಎಂದರೆ ಮಾನವೀಯತೆ, ಕರುಣೆ, ಸಂಸ್ಕಾರದ ಮಹಾಸಾಗರ. ಅಲ್ಲಿನ ಚಿಂತನೆಗಳು, ವಿಚಾರಧಾರೆಗಳು ಮಾನವನನ್ನು ಮಾಧವನಾಗಿಸುತ್ತವೆ. ರಾಜೇಶ್ ಸತ್ಸಂಗ, ಪ್ರಾರ್ಥನೆಗಳಿಗೆ ಹಾಜರಾಗತೊಡಗಿದ. ಆಶ್ರಮದ ಸ್ವಯಂಸೇವಕನಾಗಿ ಕೆಲಸ ಮಾಡಿದ. ಹೃದಯದ ಅಂಗಳದಲ್ಲಿ ಕರುಣೆ, ದಯೆಯ ಭಾವಗಳು ಅರಳತೊಡಗಿದವು. ವಯಸ್ಸಾದವರಿಗೆ ಸಹಾಯ ಮಾಡೋದು, ಅಂಗವಿಕಲರಿಗೆ ಊರುಗೋಲಾಗೋದು, ಮನೆ ಬಳಿಯ ಫುಟ್​ಪಾತನಲ್ಲಿ ಇದ್ದವರಿಗೆ ಊಟ ಒಯ್ದು ಕೊಡೋದು… ಹೀಗೆ ಆನಂದ ಕಾಣತೊಡಗಿದ.

ರಾಜೇಶ್ 9ನೇ ತರಗತಿ ಓದುತ್ತಿದ್ದ ಸಮಯ (1996). ಓರ್ವ ಅನಾಥವೃದ್ಧ ಅನಾರೋಗ್ಯದಿಂದ ಬಳಲುತ್ತ ಫುಟ್​ಪಾತಿನಲ್ಲಿ ನರಳಾಡುತ್ತಿದ್ದ. ಹೆಚ್ಚೇನೂ ಯೋಚಿಸದೆ ಆತನನ್ನು ಉಸ್ಮಾನಿಯಾ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದ ಈ ಹುಡುಗ. ಆದರೆ, ಬಳಲಿದ ಶರೀರ, ದೇಹದ ಕೆಲ ಭಾಗಗಳಲ್ಲಿ ಆದ ಗಾಯ, ತುಂಬಿಕೊಂಡಿದ್ದ ಕೀವು, ದುರ್ವಾಸನೆ… ಇದೆಲ್ಲ ಕಂಡು ಆಸ್ಪತ್ರೆಯವರು ಆ ವೃದ್ಧನನ್ನು ಅಡ್ಮಿಟ್ಟೇ ಮಾಡಿಕೊಳ್ಳಲಿಲ್ಲ. ಬೇರೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಆರಂಭ ಮಾಡುವಷ್ಟರಲ್ಲೇ ವೃದ್ಧ ಶಾಶ್ವತವಾಗಿ ಕಣ್ಣುಮುಚ್ಚಿದ. ಇದು ಬಾಲಮನದ ಮೇಲೆ ಭಾರಿ ಆಘಾತ ಉಂಟುಮಾಡಿತು. ಎಲ್ಲರೂ ಏಕಿಷ್ಟು ಸ್ವಾರ್ಥಿಗಳಾಗುತ್ತಿದ್ದಾರೆ? ಬಡವರು, ಅನಾಥರಾದ ಮಾತ್ರಕ್ಕೆ ಅವರಿಗೆ ಘನತೆಯ ಬದುಕು ಸಾಗಿಸಲು ಹಕ್ಕಿಲ್ಲವೆ? ಅದಕ್ಕೆ ನಮ್ಮ ಸಮಾಜ ಯಾಕೆ ನೆರವು ನೀಡುತ್ತಿಲ್ಲ ಎಂದು ಯೋಚಿಸಿ ತಾನೇ ಪರಿಹಾರ ಹುಡುಕತೊಡಗಿದ. ಆಶ್ರಮದ ಸ್ವಾಮೀಜಿಗಳೊಡನೆ, ಅಮ್ಮನೊಡನೆ ಮಾತನಾಡಿದ.

ಮುಂದೆ ಕೆಲವೇ ತಿಂಗಳಲ್ಲಿ ಒಂದು ಸಣ್ಣ ಶೆಡ್​ನಲ್ಲಿ ಅಸಹಾಯಕ ವೃದ್ಧರಿಗೆ, ಕಾಯಿಲೆಪೀಡಿತ ಅಂಗವಿಕಲರಿಗೆ ಆಸರೆ ನೀಡಿ ಅವರ ಕಾಳಜಿ ಮಾಡತೊಡಗಿದ. ಮನೆಯಿಂದ ಊಟ ತಂದು ನೀಡತೊಡಗಿದ. ಚಳಿ, ಮಳೆಯಲ್ಲಿ ರಸ್ತೆಬದಿಗಳಲ್ಲೇ ನಡಗುತ್ತ, ಕೊರಗುತ್ತ ಬದುಕಿನ ಸಂಧ್ಯಾಕಾಲ ಕಳೆಯುತ್ತಿದ್ದ ವೃದ್ಧರಿಗೆ ಈ ಶೆಡ್ ಮಮತೆಯ ಗೂಡಾಯಿತು. ಇವರ ಸೇವೆ ಮಾಡುತ್ತ ಮಾಡುತ್ತ ಇಂಥವರಿಗೆ ಆರೈಕೆ ಮತ್ತು ವೈದ್ಯಕೀಯ ನೆರವು ಎಷ್ಟು ಅಗತ್ಯ ಎಂಬ ಸಂಗತಿ ರಾಜೇಶ್​ಗೆ ಮನದಟ್ಟಾಯಿತು. ಆದರೆ, ಸವಾಲುಗಳು ಬರತೊಡಗಿದವು. ಸಣ್ಣ ಶೆಡ್​ನ ಜಾಗ ಸಾಕಾಗದಂತಾಯಿತು. ಅಮ್ಮನ ಆಸರೆಯನ್ನೂ ಆ ದೇವರು ಕಿತ್ತುಕೊಂಡ. ನೆರೆಹೊರೆಯವರೆಲ್ಲ ‘ಕಾಯಿಲೆಪೀಡಿತರನ್ನು ಇಲ್ಲಿ ಕರ್ಕೆಂಡು ಬರಬೇಡ’ ಎಂದು ಗದರಿಸತೊಡಗಿದರು. ಹಣಕಾಸಿನ ಮುಗ್ಗಟ್ಟು ಎದುರಾಯಿತು. ಆದರೆ, ರಾಜೇಶ್ ಸ್ವಾಮಿ ವಿವೇಕಾನಂದರ ಸಾಹಿತ್ಯವನ್ನು ಓದಿಕೊಂಡು, ಅವರ ಚಿಂತನೆಗಳಿಂದ ಪ್ರೇರಣೆ ಹೊಂದಿದಾತ. ಅದರಲ್ಲೂ ಸ್ವಾಮಿ ವಿವೇಕಾನಂದರು ಹೇಳಿದ- ‘ಜಗತ್ತಿನಲ್ಲಿ ತುಂಬ ದುಃಖವಿದೆ. ಒಂದು ದಿನದ ಮಟ್ಟಿಗಾದರೂ ಆ ದುಃಖ ಕಡಿಮೆಮಾಡಲು ಯತ್ನಿಸಿದರೆ ಜೀವನ ಸಾರ್ಥಕ’ ಎಂಬ ಮಾತು ಸದಾ ಈತನಲ್ಲಿ ಅನುರಣಿಸುತ್ತಿತ್ತು. ‘ದುಃಖ ಕಡಿಮೆ ಮಾಡಲು ಸಾಧ್ಯವಾದಷ್ಟು ಯತ್ನಿಸುತ್ತೇನೆ’ ಎಂದು ಮುನ್ನುಗ್ಗಿದ. ‘ಸವಾಲುಗಳು ಬಂದಾಗ ವಿವೇಕಾನಂದರ ಆ ಒಂದು ಮಾತನ್ನು ನೆನಪಿಸಿಕೊಂಡು ಸ್ಥೈರ್ಯ ತಂದುಕೊಳ್ಳುತ್ತೇನೆ’ ಎನ್ನುತ್ತಾನೆ ರಾಜೇಶ್.

ನಿರಾಶ್ರಿತರಿಗೆ, ಕೈ-ಕಾಲು ಸ್ವಾಧೀನ ಕಳೆದುಕೊಂಡು ರಸ್ತೆ, ದೇವಸ್ಥಾನ, ಬಸ್​ಸ್ಟಾ್ಯಂಡ್, ರೈಲು ನಿಲ್ದಾಣ… ಹೀಗೆ ಎಲ್ಲೆಲ್ಲೋ ದುರ್ಭರ ಬದುಕು ಸಾಗಿಸುವವರಿಗೆ ಆಸರೆ ಒದಗಿಸಲು ಒಂದು ಪ್ರಶಸ್ತ ತಾಣ ರೂಪಿಸಬೇಕು ಎಂದು ನಿರ್ಧರಿಸಿದ ರಾಜೇಶ್ ಸಮಾನಮನಸ್ಕರ ನೆರವಿನಿಂದ ಹೈದರಾಬಾದ್ ಹೊರವಲಯದಲ್ಲಿ, ತಾಯಿ ಸ್ಮರಣೆಯಲ್ಲಿ ‘ಭಾರತಿ ಮೆಮೋರಿಯಲ್ ಫೌಂಡೇಷನ್’ ಸ್ಥಾಪಿಸಿದ(2009) (www.bharathimemorialfoundation.org). ಅಲ್ಲಿನ ಕಟ್ಟಡದಲ್ಲಿ ಆಸರೆಯ ತಾಣ ತಲೆಯೆತ್ತಿದ್ದು, ಮಾನವೀಯತೆಯ ದಿವ್ಯದರ್ಶನ ಮಾಡಿಸುತ್ತಿದೆ. ಹದಿನಾಲ್ಕು ಅನಾಥ ಮಕ್ಕಳು ಹೊಸ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಕ್ಯಾನ್ಸರ್, ಪಾರ್ಶ್ವವಾಯು ಪೀಡಿತ, ಕಿಡ್ನಿ ವೈಫಲ್ಯ, ಹೃದಯ ಸಮಸ್ಯೆ ಹೊಂದಿರುವ 85 ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ, ಪ್ರೀತಿಯ ಆರೈಕೆ ದೊರೆಯುತ್ತಿದೆ. ದೃಷ್ಟಿಹೀನ, ಪೋಲಿಯೋಪೀಡಿತ, ಬುದ್ಧಿಮಾಂದ್ಯ, ಕಾಲು ಇಲ್ಲದ ಹತ್ತಾರು ಮಕ್ಕಳು ಇಲ್ಲೀಗ ಭರವಸೆಯ ಬದುಕು ಕಾಣುತ್ತಿವೆ. 20 ಜನರಿಗೆ ಆಶ್ರಯ ನೀಡುವುದರಿಂದ ಆರಂಭವಾದ ಫೌಂಡೇಷನ್ ಈಗ ನೂರಾರು ಜನರಿಗೆ ಬಾಳಆಸರೆಯಾಗಿದೆ.

ವಿವೇಕಾನಂದರ ‘ದರಿದ್ರ ದೇವೋಭವ’, ‘ರೋಗಿ ದೇವೋಭವ’ ಸಂದೇಶವನ್ನು ಅಕ್ಷರಶಃ ಜೀವನದಲ್ಲಿ ಅನುಷ್ಠಾನಕ್ಕೆ ತಂದು ನಿರಾಶ್ರಿತರ ತಂದೆ-ತಾಯಿಯಾಗಿ ಪೊರೆಯುತ್ತಿರುವ ರಾಜೇಶ್ ಅವರ ಮೇಲೆ ಸುರಿಸುತ್ತಿರುವ ಪ್ರೀತಿ ಕಂಡರೆ ದೇವರೂ ನಿಬ್ಬೆರಗಾಗಬೇಕು. 38 ವರ್ಷದ ಈ ಯುವಕನಿಗೆ ವೃದ್ಧರು, ಮಕ್ಕಳು ‘ಅಪ್ಪ’ ‘ಅಣ್ಣ’ ಎಂದು ಕರೆದರೆ ಈತ ಅವರನ್ನು ‘ಏನ್ ಮಗು’ ಎಂದು ಮುದ್ದಿನಿಂದ ಮಾತಾಡಿಸಿ, ಅವರಲ್ಲೇ ದೇವರನ್ನು ಕಾಣುತ್ತಾನೆ.

ಒಬ್ಬೊಬ್ಬರು ಒಂದೊಂದು ಬಗೆಯ ರೋಗ, ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರೆಲ್ಲಲ್ಲ ಮತ್ತೆ ಜೀವನಪ್ರೀತಿ ಹುಟ್ಟಿಸಿ, ಬದುಕಿನ ದರ್ಶನ ಮಾಡಿಸುತ್ತಿರುವ ರಾಜೇಶ್ ಸೇವೆಗೊಂದು ಹೊಸ ಭಾಷ್ಯ ಬರೆದಿದ್ದಾನೆ ಎಂದರೆ ಅತಿಶಯೋಕ್ತಿಯಲ್ಲ. ‘ಒಂದು ಹೆಜ್ಜೆ ಕೂಡ ಮುಂದಿಡಲು ಆಗುತ್ತಿರಲಿಲ್ಲ. ಭಿಕ್ಷೆ ಬೇಡೋಣವೆಂದರೂ ಆಗದಂಥ ಸ್ಥಿತಿ. ಫುಟ್​ಪಾತೇ ನಮ್ಮ ಜಗತ್ತು. ಹಸಿವಿನಿಂದ ಸತ್ತೇ ಹೋಗುವಂಥ ಸ್ಥಿತಿ. ಕಷ್ಟ ನೋಡಿಯೂ ನೆರವಿಗೆ ಬರುತ್ತಿದ್ದವರು ತುಂಬ ವಿರಳ. ಹೀಗಾಗಿ, ಪ್ರತಿದಿನವೂ ದೇವರಲ್ಲಿ ‘ಸಾವು ಕೊಡಪ್ಪ’ ಎಂದು ಮೊರೆಯಿಡುತ್ತಿದ್ದೆ. ಆದರೆ, ಇಲ್ಲಿ ಬಂದ ಮೇಲೆ ಇನ್ನೂ ಬದುಕಬೇಕು ಅನಿಸ್ತಾ ಇದೆ. ಯಾರೂ ಇಲ್ಲದ ನನಗೆ ಇಲ್ಲಿ ಪ್ರೀತಿಯ ಜೀವಗಳು, ಸಂಬಂಧಗಳು ದೊರೆತಿವೆ. ಇನ್ನೇನು ಬೇಕು ನನಗೆ’ ಎನ್ನುವ ವೃದ್ಧರೋಗಿ ಆನಂದಬಾಷ್ಪ ಸುರಿಸುತ್ತಿದ್ದರೆ ಅಲ್ಲಿದ್ದವರ ಕಣ್ಣಂಚೆಲ್ಲ ಒದ್ದೆಒದ್ದೆ.

ರಾಜೇಶ್​ನ ಈ ಕಾರ್ಯ ಕಂಡು ಸಮಾಜ ಬೆರಗಾಗಿದೆ. ಪರಿಣಾಮ ಸೇವೆಯ ಪಥ ವಿಸ್ತರಿಸಿದೆ. ರಸ್ತೆಬದಿಯಲ್ಲಿ ವಾಸಿಸುವವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಮತ್ತು ನಮ್ಮ ಸಂಸ್ಕೃತಿಯಲ್ಲಿ ಅನ್ನದಾನಕ್ಕೆ ಇರುವ ಮಹತ್ವ ಅರಿತು ಕಳೆದ 12 ವರ್ಷಗಳಿಂದ ನಿರಂತರವಾಗಿ ಪ್ರತಿನಿತ್ಯ 100-110 ಜನರಿಗೆ ರಾಜೇಶ್ ಊಟ ಒದಗಿಸುತ್ತಿದ್ದಾರೆ. ಆ ಪ್ರತಿ ತುತ್ತಲ್ಲೂ ಮಮತೆ, ಕಾಳಜಿಯ ಸುಗಂಧವಿದೆ. ಚಳಿ ಸಹಿಸದೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಸಾಕಷ್ಟಿದೆ. ಹಾಗಾಗಿ, ಚಳಿಗಾಲ ಆರಂಭವಾಗುತ್ತಿದ್ದಂತೆ ರಾಜೇಶ್ ಮತ್ತವರ ತಂಡ ಹೈದರಾಬಾದ್ ಸುತ್ತಮುತ್ತಲಿರುವ ನಿರಾಶ್ರಿತರಿಗೆ ಕಂಬಳಿ, ಹೊಸಬಟ್ಟೆ ವಿತರಿಸುತ್ತಾರೆ. ಈ ಚಟುವಟಿಕೆಗಳಿಗೆಲ್ಲ ಆಧಾರ ದಾನಿಗಳ ನೆರವು ಮತ್ತು ಸಿಎಸ್​ಆರ್ ಅಡಿ ಬರುತ್ತಿರುವ ದೇಣಿಗೆ.

‘ಇಂಡಿಯಾ ಪಾಸಿಟಿವ್ ಅವಾರ್ಡ್’, ‘ಐಬಿಎನ್ ರಿಯಲ್ ಹೀರೋ’, ನೆಹರು ಕೇಂದ್ರದ ಯುವ ರಾಷ್ಟ್ರೀಯ ಪ್ರಶಸ್ತಿ ಹೀಗೆ ಹಲವು ಗೌರವಾದರಗಳು ಅರಸಿ ಬಂದಿದ್ದರೂ ನೊಂದವರ, ನಿರಾಶ್ರಿತರ ಮೊಗದಲ್ಲಿ ಕಾಣುವ ನಗೆಯೇ ನನಗೆ ಶ್ರೇಷ್ಠವಾದ ಪ್ರಶಸ್ತಿ ಎನ್ನುವ ರಾಜೇಶ್([email protected]) ಯುವ ಮನಸ್ಸುಗಳನ್ನು ಸೇವಾಜಗತ್ತಿನತ್ತ ಕೊಂಡೊಯ್ಯುತ್ತಿದ್ದಾರೆ.

ಬಹುತೇಕರು ಮನುಷ್ಯನಲ್ಲಿರುವ ಅಸೂಯೆ, ಸ್ವಾರ್ಥವನ್ನು ಕಂಡು ಕಿಚ್ಚು ಹೆಚ್ಚಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ರಾಜೇಶ್ ಮನುಷ್ಯನಲ್ಲಿನ ದೈವತ್ವವನ್ನು ಕಂಡಿದ್ದಾನೆ, ಆ ದೈವತ್ವವನ್ನು ಜಾಗೃತಗೊಳಿಸಿ ನಲಿವು, ಪ್ರೀತಿ ಹಂಚುತ್ತಿದ್ದಾನೆ.

ಭೂಮಿಯಲ್ಲೇ ಸ್ವರ್ಗ ನಿರ್ವಿುಸೋದು ಎಂದರೆ ಇದೇ ತಾನೆ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top