ಕಷ್ಟಗಳು ಪುಣ್ಯವಂತರಿಗೇ ಬರುತ್ತವೆ ಅಂತೆ, ಏಕೆಂದರೆ…

| ರವೀಂದ್ರ ಎಸ್​ ದೇಶ್​ಮುಖ್​

ನೋವನ್ನೆಲ್ಲ ಮೀರಿ ನಿಂತು ನಗುವುದನ್ನು ಈ ಅಕ್ಕನಿಂದ ಕಲಿಯಬೇಕು! ಆ ನಗುವಿನಲ್ಲಿ ಅದೆಷ್ಟು ಶಕ್ತಿ ಇದೆ, ಧುಮ್ಮಿಕ್ಕಿ ಹರಿಯುವ ಜಲಪಾತದಂಥ ಖುಷಿಯಿದೆ ಎಂದರೆ ಅದೊಂದು ದೊಡ್ಡ ಸಮಾವೇಶದಲ್ಲಿ ವಿದೇಶಿ ಸಾಧಕಿಯೊಬ್ಬರು ಇವರ ನಿಷ್ಕಲ್ಮಶ ನಗುವನ್ನು ಕಂಡೇ ಇವರ ಬಳಿ ಬಂದು ತಾವೇ ಪರಿಚಯ ಮಾಡಿಕೊಂಡು ‘ಹೌ ಆರ್ ಯೂ’ ಎಂದೆಲ್ಲ ಪಿಸಪಿಸ ಅಂತ ವಿದೇಶಿ ಇಂಗ್ಲಿಷ್​ನಲ್ಲಿ ಮಾತಾಡಿ ಮೂರೇ ನಿಮಿಷದಲ್ಲಿ ಎಷ್ಟು ಆತ್ಮೀಯರಾದರೆಂದರೆ ‘ನಾನು ನಿಮ್ಮ ಮನೆಗೇ ಬರ್ತೆನೆ’ ಎಂದರು! ತಥಾಕಥಿತ ಮಾಧ್ಯಮಗಳು ಯಾರ್ಯಾರನ್ನೋ ‘ದೀದಿ’, ‘ಬಹೇನ್​ಜೀ’ ಎಂದೆಲ್ಲ ಕರೆಯುತ್ತವೆ, ಬಿರುದು-ಬಾವಲಿ ಕೊಡುತ್ತವೆ. ಆದರೆ, ಕರ್ನಾಟಕದ ಸಾವಿರಾರು ಯುವತಿಯರಿಗೆ, ತರುಣರಿಗೆ ಇವರು ನಿಜಾರ್ಥದಲ್ಲಿ ಅಕ್ಕ. ‘ಅಕ್ಕ’ ಎಂಬ ಸ್ಥಾನವನ್ನು ಆ ಸೃಷ್ಟಿಕರ್ತ ಇವರನ್ನು ನೋಡಿಯೇ ಸೃಷ್ಟಿಸಿದ್ದಾನೆಯೋ ಎಂಬಷ್ಟು ಸಾರ್ಥಕ್ಯ ಇವರ ಕಾರ್ಯ(ಅದಕ್ಕೆಂದೆ ನಾನೂ ಲೇಖನದಲ್ಲಿ ಅಕ್ಕ ಎಂದೇ ಸಂಬೋಧಿಸಿದ್ದೇನೆ). ಸೋದರಿ ನಿವೇದಿತಾ ಪ್ರತಿಷ್ಠಾನದ ಮೂಲಕ ನಿವೇದಿತಾಳ ಸಂದೇಶವನ್ನು ನಾಡಿನಾದ್ಯಂತ ತಲುಪಿಸುತ್ತ ಸಾವಿರಾರು ಮನಸುಗಳನ್ನು ಕಟ್ಟುತ್ತಿದ್ದಾರೆ, ಮಹಿಳಾ ಸಬಲೀಕರಣದ ಸಶಕ್ತ ಮಾದರಿಯನ್ನು ಸಮಾಜಕ್ಕೆ ಪರಿಚಯಿಸುತ್ತಿದ್ದಾರೆ. ಎಂಥದ್ದೇ ಸವಾಲು ಬಂದರೂ ತಂಡಸ್ಪೂತಿಯಿಂದ, ಚಾಕಚಾಕ್ಯತೆಯಿಂದ ನಿಭಾಯಿಸುತ್ತಾರೆ. ಬಿಗ್ ಬಿಂದಿ ಇರಿಸಿಕೊಂಡು ಮೊಗದಲ್ಲಿ ಅಷ್ಟೇ ಸುಂದರ ನಗು ಅರಳಿಸಿಕೊಂಡು ಕೆಲಸಕ್ಕೆ ತೊಡಗಿದರೆಂದರೆ ಸೇನೆಯಂಥ ಶಿಸ್ತು! ಕೆಲಸ ಮುಗಿಯುವ ತನಕ ವಿರಾಮದ ಪ್ರಶ್ನೆಯೇ ಇಲ್ಲ.

ಹೌದು, ಶ್ವೇತಾ ಎಂಬ ಅದ್ಭುತ ಶಕ್ತಿ ಹೀಗೆ ನಾಡಿನ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಏನು ಗೊತ್ತೆ- ‘ಗೋಡೆಯನ್ನೇ ನೋಡುತ್ತ ನನ್ನ ಜೀವನ ಕಳೆದು ಹೋಗಬಾರದು’ ಎಂಬ ಛಲ! ಶ್ವೇತಕ್ಕನಿಗೆ ಎದ್ದು ಓಡಾಡಲು ಆಗುವುದಿಲ್ಲ, ಓಡಾಡೋದು ಬಿಡಿ, ಅರ್ಧ-ಮುಕ್ಕಾಲು ಗಂಟೆ ಕುಳಿತುಕೊಳ್ಳಲೂ ಶಕ್ಯವಿಲ್ಲ. ಇವರ ದೈಹಿಕ ಶಕ್ತಿಯನ್ನು ಕಸಿದುಕೊಂಡದ್ದು ಠಟಜ್ಞಿಚ್ಝ ್ಚ್ಟ ಜ್ಞಿj್ಟ (ಬೆನ್ನುಮೂಳೆ ಗಾಯ). ಕಾರು ಅಪಘಾತದ ಪರಿಣಾಮ ಇವರ ದೇಹದ ಶೇ. 60ಕ್ಕಿಂತ ಹೆಚ್ಚಿನ ಭಾಗ ಚಲನೆಯನ್ನೇ ಕಳೆದುಕೊಂಡಿದೆ. ಗಾಯದ ಮೇಲೆ ಗಾಯ, ಅವು ನೀಡುವ ಯಮಯಾತನೆ, ಗಾಯಗಳನ್ನೇ ಸ್ನೇಹಿತರಾಗಿ ಮಾಡಿಕೊಂಡು ನೋವನ್ನು ಮಡಿಲಲ್ಲಿ ಹಾಕಿಕೊಂಡು ಸಂತೈಸುವ ಅನಿವಾರ್ಯತೆ, ಹಲವು ಶಸ್ತ್ರಚಿಕಿತ್ಸೆಗಳು, ಥರಹೇವಾರಿ ಚಿಕಿತ್ಸೆಗಳು, ಔಷಧಗಳು, ‘ನಿನ್ನ ಜೀವನ ಮುಗಿದು ಹೋಯ್ತಲ್ಲ’ ಎಂದು ಕೊಂಕು ನುಡಿಯುವವರು… ಅಯ್ಯೋ ದೇವರೇ ಆ ಕಷ್ಟಗಳು ಒಂದೇ, ಎರಡೇ. ಅದೇನೋ ಕಷ್ಟಗಳು ಪುಣ್ಯವಂತರಿಗೇ ಬರುತ್ತವೆ ಅಂತಾ ಹೇಳುತ್ತಾರೆ. ಇವರು ಹೆಚ್ಚು ಪುಣ್ಯ ಸಂಪಾದಿಸಿದ್ದರೇನೋ, ಅದಕ್ಕೆಂದೆ ದಂಡಿದಂಡಿ ಕಷ್ಟಗಳು ಮತ್ತಿಗೆ ಹಾಕಿ, ಇವರ ಸ್ಥೈರ್ಯವನ್ನು ಕೆಣಕಿದರೆ, ‘ನೀನು ಗೆಲ್ಲಲು ಸಾಧ್ಯವೇ ಇಲ್ಲ’ ಎಂದು ರಗಳೆ ಮಾಡಿದರೆ ಈ ಅಕ್ಕ ಒಮ್ಮೆ ಜೋರಾಗಿ ನಕ್ಕಿ ಬಿಟ್ಟು, ಅವನ್ನೆಲ್ಲ ಮಂಗಮಾಯ ಮಾಡಿಬಿಡುತ್ತಾರೆ. ‘ಓಡಾಡಲೂ ಆಗದಿದ್ದರೂ ಗೋಡೆ ನೋಡಿಕೊಂಡು ಮಲಗುವುದಿಲ್ಲ’ ಎಂದು ತಮ್ಮನ್ನೇ ತಾವು ಹೇಳಿಕೊಂಡ ಶ್ವೇತಕ್ಕ ಮೊನ್ನೆಮೊನ್ನೆಯಷ್ಟೇ ದೂರದ ಬದ್ರಿಗೆ ಹೋಗಿ, ಎತ್ತರೆತ್ತರದ ಪರ್ವತಗಳ ಎದುರು ನಿಂತು, ಆತ್ಮಸ್ಥೈರ್ಯವನ್ನು ಅದೇ ಎತ್ತರಕ್ಕೆ ಏರಿಸಿಕೊಂಡಿದ್ದಾರೆ.

ನಾವೆಲ್ಲ ಸಾಮಾನ್ಯ ಕಷ್ಟಕ್ಕೇ ನಲುಗಿ ಹೋಗುವಾಗ ಹೀಗೆ ಎದೆಯಾಳದ ನೋವಿನ ಮಧ್ಯೆಯೂ ಹೃದಯದಲ್ಲಿ ನಗುವಿನ ಪುಟ್ಟ ಗೂಡು ಕಟ್ಟುವುದು ಸಾಮಾನ್ಯಸಂಗತಿಯಲ್ಲ. ಹುಟ್ಟಿನಿಂದಲೇ ಅಂಗವಿಕಲರಾಗಿದ್ದವರು ಪರಿಸ್ಥಿತಿಗೆ ಹೇಗೋ ಹೊಂದಿಕೊಂಡು, ಜೀವನ ರೂಪಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಜೀವನ ಗಮ್ಮತ್ತಿನಲ್ಲಿ ಸಾಗುತ್ತಿದ್ದಾಗ ಹೀಗೆ ಒಮ್ಮೆಲೆ ಅಂಗವೈಕಲ್ಯ ಬಂದೆರಗಿದರೆ ಅದನ್ನು ಎದುರಿಸುವುದು, ನಿಭಾಯಿಸುವುದು, ಮುಂದೆ ಸಾಗೋದು ಕಡುಕಷ್ಟ. ಅದಕ್ಕೇ ಶ್ವೇತಕ್ಕ ಗ್ರೇಟ್ ಎನಿಸುತ್ತಾರೆ.

ಇವರ ಪೂರ್ಣ ಹೆಸರು ಶ್ವೇತಾ ಡಿ.ಜಿ. ಊರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದೇವವೃಂದ ಎಂಬ ಪುಟ್ಟ ಹಳ್ಳಿ. ತಂದೆ ಗೋಪಾಲ್ ಭಟ್ಟ ಪೋಸ್ಟ್ ಮಾಸ್ಟರ್ ಆಗಿದ್ದವರು. ತಾಯಿ ಸೀತಮ್ಮ ಗೃಹಿಣಿ. ಒಬ್ಬ ಅಣ್ಣ-ಒಬ್ಬ ತಮ್ಮ ಇರುವ ಈ ಸಂಸಾರದಲ್ಲಿ ಆನಂದಕ್ಕೆ ಕೊರತೆಯೇನೂ ಇರಲಿಲ್ಲ. ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣವನ್ನು ಹಲವು ಊರುಗಳಲ್ಲಿ ಇದ್ದು ಪೂರೈಸಿದ ಶ್ವೇತಕ್ಕ ಬಿ.ಎ. ಪದವಿಗಾಗಿ ಸೇರಿಕೊಂಡಿದ್ದು ಬೆಳ್ತಂಗಡಿ (ದಕ್ಷಿಣ ಕನ್ನಡ ಜಿಲ್ಲೆ) ಪ್ರಥಮ ದರ್ಜೆ ಕಾಲೇಜಿಗೆ. ಆಗಲೇ ಸಮಾಜಕಾರ್ಯದ ಆಸಕ್ತಿ ಬೆಳೆಸಿಕೊಂಡು ಎನ್​ಎಸ್​ಎಸ್ ಶಿಬಿರಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಅರಳು ಹುರಿದಂತೆ ಪಟಪಟನೇ ಮಾತನಾಡುವ ಇವರಿಗೆ ತುಂಬ ಜನರು ‘ಎಲ್​ಎಲ್​ಬಿಗೆ ಸೇರಿಕೊಂಡು ವಕೀಲೆಯಾಗಿ’ ಎಂದು ಸಲಹೆ ನೀಡಿದ್ದರು. ಇವರು ಕರಿಕೋಟು ತೊಡುವ ಕನಸು ಕಾಣುತ್ತಿರುವಾಗಲೇ 2005ರಲ್ಲಿ ತಂದೆ ವಿಧಿವಶರಾದರು. ಹಾಗಾಗಿ, ಪದವಿ ಮುಗಿದ ಬಳಿಕ ಅನಿವಾರ್ಯವಾಗಿ ಸೇರಿಕೊಂಡಿದ್ದು ಬಿ.ಎಡ್.ಗೆ. ಆ ಹೊತ್ತಿಗೆ ಇವರ ಕುಟುಂಬ ಕೂಡ ಬೆಂಗಳೂರಿಗೆ ಬಂದು ನೆಲೆಸಿತ್ತು. ಬಿ.ಎಡ್. ತರಗತಿಗಳು ಆರಂಭವಾಗಿ ಒಂದು ವಾರ ಆಗಿತ್ತಷ್ಟೇ, ಯಾವುದೋ ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಇವರು ವಾಪಸ್ ತೆರಳಲು ಸಂಬಂಧಿಕರ ಜತೆಯೇ ಕಾರು ಹತ್ತಿದರು. ಅಂದು 2006ರ ಡಿಸೆಂಬರ್ 22. ರಾತ್ರಿ 11.45ರ ಹೊತ್ತಿಗೆ ಬೇಲೂರು ರಸ್ತೆಯಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸೋದರಸಂಬಂಧಿಯೊಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಶ್ವೇತಕ್ಕನ ಬೆನ್ನುಹುರಿ ನುಜ್ಜುಗುಜ್ಜಾಗಿತ್ತು. ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಅದು ಠಟಜ್ಞಿಚ್ಝ ್ಚ್ಟ ಜ್ಞಿj್ಟ (ಠಿ12) ಎಂಬುದು ಗೊತ್ತಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಿದರೂ ಏನೂ ಪ್ರಯೋಜನವಾಗಲಿಲ್ಲ. ವಿಷಯ ಗೊತ್ತಾಗಿ ಅಮ್ಮ ದೌಡಾಯಿಸಿ ಬಂದಾಗ ವೈದ್ಯರು ‘ಅಮ್ಮ ನಿಮ್ಮ ಮಗಳಿಗೆ ಇನ್ನು ಕಾಲೇಜಿಗೆ ಹೋಗಲಾಗದು’ ಎಂದಾಗ ಮೊದಲಿಗೆ ಏನೂ ಅರ್ಥವಾಗಲಿಲ್ಲ. ತೀವ್ರಗಾಯ ಆಗಿದ್ದರಿಂದ ಡಾಕ್ಟರ್ ಹಾಗೆ ಹೇಳಿರಬಹುದು, ನಾಲ್ಕಾರು ದಿನದಲ್ಲಿ ಎದ್ದು ಓಡಾಡಬಹುದು ಎಂದೇ ಭಾವಿಸಿದ್ದರು. ಕ್ರಮೇಣ ಶ್ವೇತಕ್ಕರ ಅಣ್ಣ ಈ ವಾಸ್ತವವನ್ನು ನಿಧಾನವಾಗಿ ಮನದಟ್ಟು ಮಾಡಿಕೊಟ್ಟರೂ, ಅದನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಿರಲಿಲ್ಲ. ಯಾವಾಗಲೂ ಲವಲವಿಕೆಯಿಂದ ಓಡಾಡುತ್ತ, ತಮ್ಮ ನಗುವಿನಿಂದಲೇ ಇಡೀ ವಾತಾವರಣವನ್ನು ಆಹ್ಲಾದಗೊಳಿಸುತ್ತಿದ್ದ ಶ್ವೇತಕ್ಕ ಮಂಕಾಗಿಬಿಟ್ಟರು. ದಿನನಿತ್ಯದ ಚಟುವಟಿಕೆಗೂ ಇತರರನ್ನು ಅವಲಂಬಿಸುವ ಅನಿವಾರ್ಯತೆ ಅವರ ದುಃಖವನ್ನು ಹೆಚ್ಚಿಸಿತು. ಬೆಂಗಳೂರಿನ ಜಯನಗರದ ಶ್ರೀಕೃಷ್ಣ ಸೇವಾಶ್ರಮದಲ್ಲೂ ಆರು ತಿಂಗಳ ಚಿಕಿತ್ಸೆ ನಡೆಯಿತು, ಆಗಲೇ ಇವರು ಮಾನಸಿಕವಾಗಿ ತಯಾರಾಗತೊಡಗಿದರು. ಬೆನ್ನು ಮೂಳೆಯ ಗಾಯ ಅಥವಾ ಇತರೆ ಅಂಗವೈಕಲ್ಯದಿಂದ ಇನ್ನೂ ಕಷ್ಟದಲ್ಲಿ ಬದುಕುತ್ತಿರುವವರ ಸ್ಥಿತಿ ಕಂಡು ಆ ದೇವರು ನನ್ನ ಅರ್ಧ ಶರೀರವನ್ನಾದರೂ ಚೆನ್ನಾಗಿ ಇರಿಸಿದ್ದಾನಲ್ಲ ಎಂದು ಸಮಾಧಾನ ಮಾಡಿಕೊಂಡು ಭವಿಷ್ಯದತ್ತ ನೋಡತೊಡಗಿದರು. ಮುಖ್ಯವಾಗಿ, ತಾನು ಬೇಜಾರು ಮಾಡಿಕೊಂಡು ಕುಸಿದುಬಿಟ್ಟರೆ, ಮನೆಯವರೆಲ್ಲ ಸಾವರಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಅರ್ಥ ಮಾಡಿಕೊಂಡು ಕಳೆದುಹೋಗಿದ್ದ ನಗುವನ್ನು ಮತ್ತೆ ಹುಡುಕಿ ತಂದು ಮನಸಾರೆ ನಗಾಡಿದರು! ಶ್ವೇತಕ್ಕರ ಬದುಕಿನ ಹೊಸ ಅಧ್ಯಾಯ ಆರಂಭವಾಯಿತು. ಅದರಲ್ಲಿ ಪರಿಚಯದ ಪ್ರಸಾದಣ್ಣ ಎಂಬುವರು ‘ನೀನು ಹೀಗೆ ಇರಬೇಡ. ಏನಾದರೂ ಮಾಡು’ ಎಂದು ಹುರಿದುಂಬಿಸುತ್ತಲೇ ಇದ್ದರು.

ಶ್ವೇತಕ್ಕರ ತಾಯಿ ಸೀತಮ್ಮ ತೋರಿದ ಸ್ಥೈರ್ಯವೂ ಬಹುತೇಕ ತಾಯಂದಿರಿಗೆ ಮಾದರಿ. ಮಗಳಿಗೆ ಅದೇ ಪ್ರೀತಿ ಕೊಡುತ್ತ, ಈ ಸ್ಥಿತಿಯಿಂದ ಗೆದ್ದು ಬರಲು ಉತ್ಸಾಹ ತುಂಬುತ್ತ ‘ಬೇಜಾರ್ ಮಲ್ಪೋಡ್ಚಿ, ದೇವೆರ್ ತೂವೊನುವೆರ್… ಪೂರಾ ಎಡ್ಡಂತಿನ ಆಪುಂಡು’ ಎಂದು ಸಕಾರಾತ್ಮಕ ಭಾವ ತುಂಬುತ್ತ ಬಂದಿದ್ದಾರೆ. ಅದೊಮ್ಮೆ, ಬೆನ್ನುಹುರಿಗೆ ಹಲವೆಡೆ ಗಾಯ ವಿಷಮಗೊಂಡು ಅಸಾಧ್ಯ ನೋವು, ಆ ನೋವಿನಿಂದ ಪ್ರತಿದಿನ ಜ್ವರಬಾಧೆ. ಗಾಯಗಳ ಮೇಲೇ ಮಲಗಿಕೊಳ್ಳುವ, ನೋವಿನೊಂದಿಗೆ ಗುದ್ದಾಡುವ ಪರಿಸ್ಥಿತಿಯಲ್ಲಿ 6 ತಿಂಗಳು ಕಳೆದಾಗ ಮತ್ತೊಮ್ಮೆ ಬದುಕು ಗೆದ್ದುಬಂದಂತಾಗಿತ್ತು. ಬಳಿಕ, ಗಾಲಿಕುರ್ಚಿಯಲ್ಲೇ ಕುಳಿತುಕೊಂಡು ಮನೆಗೆಲಸ ಮಾಡಲು ಶುರುಮಾಡಿದರು, ಪುಸ್ತಕಗಳ ಓದಿನಲ್ಲಿ ತನ್ಮಯರಾದರು. ಬೇಜಾರು ಕಳೆಯಲು ಮಕ್ಕಳಿಗೆ ಉಚಿತ ಟ್ಯೂಷನ್ ಹೇಳಿಕೊಟ್ಟರು. ಇದಕ್ಕಿಂತ ಮಿಗಿಲಾಗಿ ಏನಾದರೂ ಮಾಡಬೇಕು ಅಂದುಕೊಂಡಾಗಲೇ, 2016ರಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನದ ಪರಿಚಯವಾಯಿತು. ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಇವರ ಉತ್ಸಾಹ ಕಂಡು ಪ್ರತಿಷ್ಠಾನದಲ್ಲಿ ಮಹತ್ತರ ಜವಾಬ್ದಾರಿ ನೀಡಿದರು. ಅಲ್ಲಿಂದ ಜೀವನ ಮತ್ತಷ್ಟು ಸಮಾಜಮುಖಿಯಾಯಿತು. ಸೇವಾಬಸ್ತಿ(ಸ್ಲಂಪ್ರದೇಶ)ಯ ಮಕ್ಕಳಲ್ಲಿ ಸಂಸ್ಕಾರವರ್ಧನೆಗೆ ‘ಸ್ವಚ್ಛ ಮನಸ್ಸು’ ಕಾರ್ಯಕ್ರಮ, ಶಾಲೆಗಳಿಗೆ ಹೋಗಿ ‘ಕಾರ್ಗಿಲ್ ವಿಜಯ’ ವಿಡಿಯೋ ಪ್ರದರ್ಶನ, ಬಡ ಕುಟುಂಬದ ಗರ್ಭಿಣಿಯರಿಗೆ ಸೀತಾ ನವಮಿಯಂದು ಸೀಮಂತ ಕಾರ್ಯಕ್ರಮ, ನವರಾತ್ರಿ ಹೊತ್ತಲ್ಲಿ ಕೊಳೆಗೇರಿ ಪ್ರದೇಶಗಳಲ್ಲಿ ಮಾತೆಯರಿಂದ ಶಕ್ತಿದೇವತೆಗೆ ಪೂಜೆ, ಭಜನೆ ಹೀಗೆ ಹತ್ತುಹಲವು ಕಾರ್ಯಕ್ರಮಗಳನ್ನು ತಮ್ಮ ತಂಡದೊಂದಿಗೆ ನಿರ್ವಹಿಸುತ್ತ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರತಿಷ್ಠಾನವನ್ನು ವಿಸ್ತರಿಸಿದ್ದಾರೆ, ಆ ಮೂಲಕ ಮಹಿಳೆಯರ ಶಕ್ತಿಯನ್ನು ರಾಷ್ಟ್ರಚಿಂತನೆಯ ದಿಕ್ಕಿನತ್ತ ಹರಿಸುತ್ತಿದ್ದಾರೆ. ಇಷ್ಟೆಲ್ಲ ಜವಾಬ್ದಾರಿ, ಕಾರ್ಯಗಳ ಮಧ್ಯೆ ಮೈಸೂರು ಮುಕ್ತ ವಿ.ವಿ.ಯಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದು, ಹೊಸ ಕನಸುಗಳನ್ನು ಹೆಣೆಯುತ್ತ ಅವುಗಳನ್ನು ನನಸು ಮಾಡುತ್ತಿದ್ದಾರೆ.

‘‘ಅಂಗವೈಕಲ್ಯವಿದ್ದವರೂ ಸಮಾಜದ ಮುಖ್ಯವಾಹಿನಿಗೆ ಬರಲು ಅಳಕಬಾರದು. ದೈಹಿಕ ಶಕ್ತಿಗಿಂತ ಮನಸ್ಸಿನ ಶಕ್ತಿ ಮಿಗಿಲು. ಧೈರ್ಯ ಮಾಡಿ ಮುಂದೆ ಬಂದರೆ ಸಮಾಜ ಒಪ್ಪಿಕೊಳ್ಳುತ್ತದೆ, ಅಪ್ಪಿಕೊಳ್ಳುತ್ತದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದ್ದೆ. ಸಮಸ್ಯೆಯನ್ನು ನಾವೇ ದೊಡ್ಡದು ಮಾಡಿಕೊಳ್ಳಬಾರದು’ ಎನ್ನುವ ಶ್ವೇತಕ್ಕ ‘ಈಗ ನನಗೆ ನಕಾರಾತ್ಮಕ ಚಿಂತನೆ ಮಾಡಲೂ ಪುರುಸೊತ್ತಿಲ್ಲ’ ಎಂದು ಹೇಳಿ ಮನದುಂಬಿ ನಗಾಡಿದಾಗ ನಾನು ಬೆರಗಾಗಿದ್ದೆ, ಅವರ ಆತ್ಮಸ್ಥೈರ್ಯಕ್ಕೆ ಸಾವಿರ ಸಲಾಂ ಹೇಳಿದೆ.

ಜೀವನ ಅಂದ್ರೆ ಇದೇ ಅಲ್ವಾ, ನೋವಿನಿಂದ ಆಚೆ ಬಂದು ಮತ್ತೊಬ್ಬರ ನೋವನ್ನೂ ಕಡಿಮೆ ಮಾಡುತ್ತ ಹೋದರೆ ಶ್ವೇತಕ್ಕರಂಥ (94487-31557)ಬೆರಗಿನ ನಗು ನಮ್ಮ ಮೊಗದಲ್ಲೂ ಅರಳಬಹುದು!!

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)