ರೊಟ್ಟಿ ತಟ್ಟುತ್ತ ಸಾವಿರಾರು ಕೈಗಳಿಗೆ ಕೆಲಸ ನೀಡಿದ ಅನ್ನಪೂರ್ಣೆ!

ತ್ಯಾಗ, ಸಂಯಮ, ಸಂವೇದನೆ, ಪರಿಶ್ರಮ ಇವುಗಳ ಒಟ್ಟು ಮೊತ್ತವೇ ಹೆಣ್ಣು. ಅದಕ್ಕೆಂದೆ ನಮ್ಮ ಸಂಸ್ಕೃತಿ ಹೆಣ್ಣನ್ನು ಶಕ್ತಿ ಸ್ವರೂಪಿಣಿಯಾಗಿ, ಕೆಡಕುಗಳನ್ನೆಲ್ಲ ನಾಶಗೊಳಿಸುವ ಧೀಃಶಕ್ತಿಯಾಗಿ ಆರಾಧಿಸುತ್ತದೆ. ನಮ್ಮಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಎಷ್ಟೆಲ್ಲ ಚರ್ಚೆ ನಡೆಯುತ್ತದೆ, ಆದರೆ ಓರ್ವ ಸಾಮಾನ್ಯ ಮಹಿಳೆ ಛಲದಿಂದ ಎದ್ದುನಿಂತರೆ ಸ್ವಾವಲಂಬನೆಯ ಸುವರ್ಣಾಧ್ಯಾಯವನ್ನೇ ಬರೆಯಬಹುದು, ‘ನನ್ನಲ್ಲಿ ಹಣವಿಲ್ಲ, ನಾನು ಹೆಚ್ಚು ಶಿಕ್ಷಣ ಪಡೆದಿಲ್ಲ, ನಾನೇನು ಮಾಡಬಹುದು?’ ಎಂದು ಕೈಚೆಲ್ಲಿ ಕುಳಿತಿರುವ ಮಹಿಳೆಯರು, ನೌಕರಿಗಾಗಿ ಅಲೆದಾಡುತ್ತ ಹಲವು ವರ್ಷಗಳನ್ನು ಹಾಳುಮಾಡಿಕೊಳ್ಳುವ ಯುವಕರು ಸ್ವಲ್ಪ ಕಿವಿ ಅಗಲವಾಗಿಸಿಕೊಂಡು ಕೇಳಬೇಕಾದ ಸ್ಪೂರ್ತಿಕಥನವಿದು.

ಗುಜರಾತಿನಲ್ಲಿ ಹುಟ್ಟಿ ಬೆಳೆದು, ಮದುವೆಯಾದ ಮೇಲೆ ರಾಜಸ್ಥಾನದಲ್ಲಿ ನೆಲೆಸಿ ಅಲ್ಲಿಂದ ಗಂಡನ ಜತೆ ಪಶ್ಚಿಮ ಮಹಾರಾಷ್ಟ್ರದ ಸೋಲಾಪುರಕ್ಕೆ ಬಂದ ಚಂದ್ರಿಕಾ ಚವ್ಹಾಣ್ ಆದರ್ಶ ಗೃಹಿಣಿಯಾಗಿ ಮನೆ ಸಂಭಾಳಿಸುತ್ತಿದ್ದರು. ಗಂಡ, ಮೂವರು ಮಕ್ಕಳ ತುಂಬು ಸಂಸಾರ, ದಿನವಿಡೀ ಕೆಲಸ. ಕೆಳಮಧ್ಯಮವರ್ಗದ ಕುಟುಂಬವಾಗಿದ್ದರಿಂದ ಒಂದಿಷ್ಟು ಸಾಲಸೋಲವೂ ಇತ್ತು. ಹೀಗಿರುವಾಗ ಚಂದ್ರಿಕಾರ ಪತಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಹಾಸಿಗೆ ಹಿಡಿದರು. ದುಡಿಯುವ ವ್ಯಕ್ತಿಗೇ ಹೀಗಾದರೆ ಗತಿಯೇನು? ಈಗ ಕುಟುಂಬವನ್ನಂತೂ ನಿರ್ವಹಿಸಬೇಕಿತ್ತು. ಹಿಂದೆ ಅಷ್ಟಿಷ್ಟು ಟೇಲರಿಂಗ್ ಕಲಿತಿದ್ದ ಚಂದ್ರಿಕಾ ಮನೆಮೂಲೆಯಲ್ಲಿದ್ದ ಹೊಲಿಗೆಯಂತ್ರದ ಧೂಳು ಕೊಡವಿ, ರವಿಕೆ ಹೊಲಿಯಲು, ಎಂಬ್ರಾಯ್ಡರಿ(ಕಸೂತಿ) ಮಾಡಲು ಶುರು ಮಾಡಿದರು (1993). ಸ್ವಲ್ಪ ಧೈರ್ಯ ಬಂತು. ಕ್ರಮೇಣ, ಮೆಹಂದಿ ಕ್ಲಾಸ್, ಹಪ್ಪಳ-ಸಂಡಿಗೆ ತಯಾರಿಕೆ ಆರಂಭಿಸಿದರು. ಕೊಳೆಗೇರಿ ಪ್ರದೇಶದ ಬಳಿ ಹೊಲಿಗೆ ಯಂತ್ರ ತಂದಿಟ್ಟು, ಅಲ್ಲಿನ ಮಹಿಳೆಯರಿಗೂ ಟೇಲರಿಂಗ್ ಕಲಿಸತೊಡಗಿದರು.

ಎಲ್ಲರ ಕಷ್ಟಗಳಿಗೆ ಸ್ಪಂದಿಸುವ ಗುಣ, ಮೃದುಮಾತು, ಕಳಕಳಿಯ ಕಾರಣ ಚಂದ್ರಿಕಾರಿಗೆ ಗೆಳತಿಯರ ಬಳಗ ದೊಡ್ಡದಿತ್ತು. ಆದರೆ, ಎಲ್ಲರೂ ಸೇರಿ ಏನಾದರೂ ಸಣ್ಣ ಉದ್ಯಮ ಶುರು ಮಾಡ್ಬೇಕು ಅಂದುಕೊಂಡರೆ ಯಾರಲ್ಲೂ 100 ರೂಪಾಯಿಯ ಬಂಡವಾಳವೂ ಇರಲಿಲ್ಲ. ಕುಟುಂಬದ ಹೊಣೆ ಹೊರಬೇಕಾದ ಅನಿವಾರ್ಯತೆ ತುಂಬ ಮಹಿಳೆಯರಿಗಿತ್ತಾದರೂ, ಅವರ ಕೈಗೆ ಕೆಲಸ ಇರಲಿಲ್ಲ. ‘ಭಾಭಿ ಆಮ್ಹಾಲಾ ಕೋಣ್ ಕಾಮ್ ದೇಣಾರ?’ (ಭಾಭಿ ನಮಗ್ಯಾರು ಕೆಲಸ ಕೊಡ್ತಾರೆ?) ಅಂತ ಅವರೆಲ್ಲ ಪ್ರಶ್ನಿಸುತ್ತಿದ್ದಾಗ ಹೊಳೆದ ಐಡಿಯಾ ರೊಟ್ಟಿ ಮಾಡುವುದು! ವೃತ್ತಿ ಕೌಶಲ ಕಲಿಸಿ, ಅವರ ಕೈಗೆ ಕೆಲಸ ನೀಡೋದು ತಡವಾಗುತ್ತೆ. ಆದರೆ, ಪ್ರತಿ ಮಹಿಳೆಗೂ ಅಡುಗೆ ಮಾಡೋದು ಗೊತ್ತು. ಹಾಗಾಗಿ, ರೊಟ್ಟಿ ತಯಾರಿಕೆ ಶುರು ಮಾಡಿದರು. ಆಗ ಒಂದೂವರೆ ರೂಪಾಯಿ ಖರ್ಚಲ್ಲಿ ರೊಟ್ಟಿ ಮಾಡಿ, ಎರಡು ರೂಪಾಯಿಗೆ ಮಾರಾಟ ಮಾಡತೊಡಗಿದರು. ಮೊದಲಿಗೆ ಬಂದದ್ದು ಬರೀ 25 ರೊಟ್ಟಿಗಳಿಗೆ ಆರ್ಡರ್. ಇವರ ಕೆಲಸದ ಗುಣಮಟ್ಟ, ಜೋಳದ ರೊಟ್ಟಿಯ ಸ್ವಾದ ಸ್ವಲ್ಪ ದಿನದಲ್ಲೇ ಸೋಲಾಪುರ ತುಂಬೆಲ್ಲ ಮನೆಮಾತಾಯಿತು. ಪರಿಣಾಮ, ಒಂದೂವರೆ ಸಾವಿರ ಮಕ್ಕಳಿರುವ ಶಾಲೆಗೆ ಪೌಷ್ಟಿಕ ಆಹಾರ ಒದಗಿಸುವ ಆರ್ಡರ್ ದೊರೆಯಿತು. ಅದಾಗಲೇ ಹತ್ತಾರು ಜನರಿಗೆ ಕೆಲಸ ನೀಡಿದ್ದ ಚಂದ್ರಿಕಾ ಎಲ್ಲರ ‘ಭಾಭಿ’ (ಅತ್ತಿಗೆ)ಯಾಗಿ ಜನಮನ ಗೆದ್ದರು.

ಇಂಥ ಶ್ರಮಲಕ್ಷ್ಮಿಯರು ಮಹಾನಗರ ಪಾಲಿಕೆ ಪ್ರವೇಶಿಸಿದರೆ ಸೂಕ್ತ ಅಲ್ಲವೆ ಎಂಬ ಚಿಂತನೆ ಜನರಲ್ಲಿ ಮೂಡಿದ್ದೇ ತಡ 1997ರಲ್ಲಿ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿ, 2007ರವರೆಗೆ (ಎರಡು ಅವಧಿ) ಆ ಜವಾಬ್ದಾರಿ ನಿರ್ವಹಿಸಿ, ಕೊಳೆಗೇರಿ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಿದರು.

1998ರಲ್ಲಿ ಚಂದ್ರಿಕಾರ ಜೀವನಕ್ಕೆ ಮಹತ್ವದ ತಿರುವು. ಖ್ಯಾತ ಸಮಾಜಸೇವಕ ನಾನಾಜಿ ದೇಶಮುಖ್ ಚಿತ್ರಕೂಟದ ಸುತ್ತಮುತ್ತ ಗ್ರಾಮೀಣಾಭಿವೃದ್ಧಿಯಲ್ಲಿ ಸಾಧಿಸಿರುವ ಮೈಲಿಗಲ್ಲುಗಳನ್ನು ಪರಿಚಯಿಸಲು ಮತ್ತು ಸಮಾಜಸೇವೆ ಆಸಕ್ತಿ ಇರುವವರಿಗೆ ಪ್ರೇರಣೆ ನೀಡಲು ತರಬೇತಿ ಶಿಬಿರವೊಂದನ್ನು ಆಯೋಜಿಸಿದ್ದರು. ಅದರಲ್ಲಿ ಪಾಲ್ಗೊಂಡ ಚಂದ್ರಿಕಾರಿಗೆ ಅನೇಕ ಹೊಸ ಹೊಳಹುಗಳು ಗೋಚರಿಸಿದವು. ‘ನಾನಾಜೀ ನಾನು ಇಲ್ಲೇ ಇದ್ದು ಸಮಾಜಕ್ಕಾಗಿ ಕೆಲಸ ಮಾಡುತ್ತೇನೆ’ ಎಂದಾಗ, ನಾನಾಜಿ-‘ನಿಮ್ಮಲ್ಲಿ ಶಕ್ತಿ ಇದೆ. ನಿಮ್ಮ ನಿಮ್ಮ ಪ್ರದೇಶಗಳಲ್ಲಿ ಕೆಲಸ ಮಾಡಿ, ಒಳ್ಳೆದಾಗುತ್ತೆ. ಮಹಿಳೆಯರಿಗಾಗಿ ಸಣ್ಣ ಉದ್ಯಮವನ್ನೇ ಆರಂಭಿಸಿ’ ಎಂದು ಸಲಹೆ ನೀಡಿದರು. ಆಗ ಹೆಚ್ಚೇನು ಯೋಚನೆ ಮಾಡದೆ ಭಾಭಿ ಥಟ್ಟನೇ ಕೇಳಿದ್ದು-‘ರೊಟ್ಟಿ ಬಡಿಯುತ್ತ ಹೇಗೋ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ಮನೆ ನಡೆಸಲು ಪರದಾಡುತ್ತಿರುವ ನಮಗೆ ಇದೆಲ್ಲ ಹೇಗೆ ಸಾಧ್ಯ?’. ಆಗ ನಾನಾಜಿ ಮತ್ತಷ್ಟು ಸಲಹೆಗಳನ್ನು ನೀಡಿ ಈ ಮಹಿಳೆಯರ ಶಕ್ತಿ ಅನಾವರಣಗೊಳ್ಳಲು ‘ಉದ್ಯೋಗವರ್ಧಿನಿ’ ಎಂಬ ಹೆಸರನ್ನೂ ಸೂಚಿಸಿದರು.

ಚಿತ್ರಕೂಟದಿಂದ ಬಂದ ಚಂದ್ರಿಕಾ ಗೆಳತಿಯರ ಜತೆ ಸೇರಿ ‘ಉದ್ಯೋಗವರ್ಧಿನಿ’ ಆರಂಭಿಸಿಯೇ ಬಿಟ್ಟರು. ಕೇಟರಿಂಗ್, ಟೇಲರಿಂಗ್ ಮುಖ್ಯ ಉದ್ಯೋಗವಾಯ್ತು. 2007ರ ಬಳಿಕ ರಾಜಕಾರಣಕ್ಕೆ ಮರಳುವುದಿಲ್ಲವೆಂದು ನಿಶ್ಚಯಿಸಿದ ಚಂದ್ರಿಕಾ ನಾನಾಜಿ ಪ್ರೇರಣೆಯಿಂದ ಸಾಮಾಜಿಕ ಸೇವೆ, ಮಹಿಳಾ ಸಬಲೀಕರಣವನ್ನೇ ಜೀವನಮಂತ್ರವಾಗಿಸಿಕೊಂಡರು. ಶಾಸಕಿ ಸ್ಥಾನದ ಆಫರ್ ಬಂದಾಗ-‘ನನಗೀಗ ಈ ಬಡ ಮಹಿಳೆಯರೇ ಶಾಸಕಿಯರು, ನಾನೂ ಅವರಲ್ಲಿ ಒಬ್ಬಳು’ ಎಂದುಬಿಟ್ಟರು.

ಒಮ್ಮೆ ಮಹಿಳೆಯರ ಸಮಾವೇಶ ಏರ್ಪಡಿಸಿದಾಗ ಏಳೂವರೆ ಸಾವಿರ ಗೃಹಿಣಿಯರು ಪಾಲ್ಗೊಂಡು ‘ನಾವು ನಿಮ್ಮ ಜತೆ ಕೈಬಲಪಡಿಸಲು ಸಿದ್ಧ’ ಎಂದರು. ಆದರೆ, ಅವರೆಂದೂ ಮನೆಬಿಟ್ಟು ಆಚೆ ನೌಕರಿ ಮಾಡಿದವರಲ್ಲ. ಎಷ್ಟೋ ಮನೆಗಳಲ್ಲಿ ಗಂಡಂದಿರ ವಿರೋಧ. ಆಗೆಲ್ಲ ಸ್ವತಃ ಚಂದ್ರಿಕಾರೇ ಅಂಥ ಕುಟುಂಬಗಳೊಂದಿಗೆ ಮಾತಾಡಿ, ಹೆಣ್ಣು ಸ್ವಾವಲಂಬಿಯಾದರೆ ಕುಟುಂಬ ಸಮೃದ್ಧವಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಟ್ಟರು. ರೊಟ್ಟಿ ಜತೆ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಶಾವಿಗೆ, ಶೇಂಗಾ ಚಟ್ನಿ ತಯಾರಿಕೆ ಶುರುವಾಯಿತು. ಸೋಲಾಪುರದ ಮೂರು ಕಡೆಗಳಲ್ಲಿ ರೊಟ್ಟಿ ಕೇಂದ್ರ ಆರಂಭವಾದವು. ಖ್ಯಾತ ಸಮಾಜಸೇವಕ ರಾಮಭಾವು ಮಾಳಗಿಯವರ ಸಂಸ್ಥೆ ಇವರ ‘ಉದ್ಯೋಗವರ್ಧಿನಿ’ಯನ್ನು ಒಂದು ವರ್ಷ ದತ್ತು ತೆಗೆದುಕೊಂಡು ಮತ್ತಷ್ಟು ಕೌಶಲಗಳನ್ನು ಕಲಿಸಿಕೊಟ್ಟಿತು. ಪರಿಣಾಮ, 2002-03ರಲ್ಲಿ ಉದ್ಯೋಗವರ್ಧಿನಿ ಕಂಪನಿಯಾಗಿ ನೋಂದಣಿಯಾಯಿತು.

ಈ ಮಹಿಳೆಯರು ಮಾಡುವ ರೊಟ್ಟಿಗಳಿಗೆ ಸೋಲಾಪುರದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಬೇಡಿಕೆ ಸೃಷ್ಟಿಯಾಗಿದೆ. ರೊಟ್ಟಿ, ಶೇಂಗಾ ಚಟ್ನಿ ಆಸ್ಟ್ರೇಲಿಯಾ, ಅಮೆರಿಕಕ್ಕೆ ರಫ್ತುಗೊಳ್ಳುತ್ತಿವೆ. ಮುಂಬೈ-ಪುಣೆ ನಗರದಲ್ಲೂ ಉತ್ತಮ ಮಾರುಕಟ್ಟೆ ಸಿಕ್ಕಿದೆ. ಬಟ್ಟೆಬ್ಯಾಗ್​ಗಳ ತಯಾರಿ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಭಾರಿ ಬೇಡಿಕೆ ಇದೆ. ಶ್ರದ್ಧೆಯಿಂದ ಮಾಡಿದ ದುಡಿಮೆಗೆ ಮೋಸವಿಲ್ಲ ಎಂದು ಚಂದ್ರಿಕಾ ಮತ್ತವರ ತಂಡ ಸಾಬೀತು ಮಾಡಿದೆ. ಲೋಕಮಂಗಲ ಸಂಸ್ಥೆಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಾಗ 24 ಗಂಟೆಯಲ್ಲಿ ಒಂದು ಲಕ್ಷ ಚಪಾತಿ ತಯಾರಿಸಿ ಈ ಮಹಿಳೆಯರು ದಾಖಲೆಯನ್ನೇ ನಿರ್ವಿುಸಿದರು. ಹೀಗೆ ಕೆಲವೇ ಮಹಿಳೆಯರಿಂದ ಆರಂಭಗೊಂಡ ಈ ಉದ್ಯಮ ಪ್ರಸಕ್ತ ಎಂಟು ಸಾವಿರಕ್ಕೂ ಅಧಿಕ ಮಹಿಳೆಯರನ್ನು ಸ್ವಾವಲಂಬಿಯಾಗಿಸಿದೆ. 370ಕ್ಕೂ ಅಧಿಕ ಉದ್ಯಮಿಗಳನ್ನು ತಯಾರು ಮಾಡಿದೆ. ಈ ಪೈಕಿ ಬಹುತೇಕರು ತೀರಾ ಬಡ ಮತ್ತು ಕೆಳಮಧ್ಯಮ ವರ್ಗದವರಾಗಿದ್ದರು ಎಂಬುದು ವಿಶೇಷ. ‘ನೌಕರರಾಗಿ ಇರಬೇಡಿ, ಮಾಲೀಕರಾಗಿ’ ಎಂದು ಹುರಿದುಂಬಿಸುತ್ತ ವಿವಿಧ ಬಗೆಯ ವ್ಯಾಪಾರೋದ್ಯಮ ಆರಂಭಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಪರಿಣಾಮ, ಇಲ್ಲಿಂದ ತರಬೇತಿ/ಪ್ರೇರಣೆ ಪಡೆದು ಸಣ್ಣ ಉದ್ಯಮ ಆರಂಭಿಸಿದ ನೂರಾರು ಮಹಿಳೆಯರು ವರ್ಷಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ! ಬರೀ ಐದು ಸಾವಿರ ರೂಪಾಯಿ ಬಂಡವಾಳದಿಂದ ಆರಂಭಿಸಬಹುದಾದ 50 ಉದ್ದಿಮೆಗಳನ್ನು ಗುರುತಿಸಿ, ಆ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ. ಸವಿತಾ ಸಮಾಜದ ಸುಲೋಚನಾ ಭಾಕ್ರೆ ಎಂಬ ಭಗಿನಿ 300 ರೂಪಾಯಿ ಬಂಡವಾಳದಲ್ಲಿ ಕ್ಷೌರದಂಗಡಿಗೆ ಬೇಕಾಗುವ ಸಾಮಗ್ರಿಗಳನ್ನು ಮಾರಾಟ ಮಾಡತೊಡಗಿದರು, ಈಗ ಸೋಲಾಪುರದಲ್ಲಿ ಅವರದ್ದೇ ಆದ ದೊಡ್ಡ ಷೋರೂಮ್ ತಲೆಎತ್ತಿದ್ದು, ಹೇರ್​ಸಲೂನ್ ವ್ಯಾಪಾರಸ್ಥರು ದೂರದೂರದಿಂದ ಇಲ್ಲಿ ಬಂದು ಖರೀದಿ ಮಾಡುತ್ತಾರೆ. ಹಾಗೇ ಶಾಂತಾ ಪಾಕೆ ಎಂಬ ಅನಕ್ಷರಸ್ಥ ಮಹಿಳೆ ಉಟಣೆ(ಹಬ್ಬ ಹರಿದಿನಗಳಲ್ಲಿ ಅಭ್ಯಂಜನ ಸ್ನಾನದ ವೇಳೆ ಹಚ್ಚಿಕೊಳ್ಳುವ ಆಯುರ್ವೆದೀಯ ಸುಗಂಧಸಾಮಗ್ರಿ) ಮಾರಾಟ ಆರಂಭಿಸಿದ್ದು ಬರೀ ಕಾಲುಕೆಜಿಯಿಂದ. ಈಗ ವರ್ಷಕ್ಕೆ ಎರಡ್ಮೂರು ಕ್ವಿಂಟಾಲ್ ಉಟಣೆ ತಯಾರಿಸಿ ಮಾರಾಟ ಮಾಡುತ್ತಿದ್ದು ವರ್ಷಕ್ಕೆ ಮೂರ್ನಾಲ್ಕು ಲಕ್ಷಗಳ ವಹಿವಾಟು ಹೊಂದಿದ್ದಾರೆ. ಹೀಗೆ, 370ಕ್ಕೂ ಅಧಿಕ ಉದ್ಯಮಿಗಳದ್ದೂ ಒಂದೊಂದು ಯಶೋಗಾಥೆ. ಇವರಿಗೆ ಮಾರ್ಗದರ್ಶನ ಮಾಡಿದ್ದಲ್ಲದೆ, ಆರಂಭಿಕ ಬಂಡವಾಳವನ್ನು ಸ್ವಯಂಸೇವಾ ಸಂಘಗಳಿಂದ ಕೊಡಿಸಿದ್ದು ಉದ್ಯೋಗವರ್ಧಿನಿಯೇ.

ತನ್ನ ಮನೆ-ಮಕ್ಕಳ ಹಸಿವನ್ನು ನೀಗಿಸಬೇಕು ಎಂದು ಹೊರಟ ಚಂದ್ರಿಕಾ ಭಾಭಿ ಇಂದು ಸಾವಿರಾರು ಮನೆಗಳ ಒಲೆ ಉರಿಯುವಂತೆ ಮಾಡಿದ್ದಾರೆ. ತಾನು ಬೆಳೆದರೆ ಸಾಲದು, ಜತೆಯವರು ಬೆಳೆಯಬೇಕು ಎಂಬ ಉದಾತ್ತ ಮನೋಭಾವದಿಂದ ಸಬಲೀಕರಣದ ಸಶಕ್ತ ಮಾದರಿ ಪರಿಚಯಿಸಿದ್ದಾರೆ. ಅದೊಂದು ದಿನ ವೃದ್ಧರೊಬ್ಬರು ಬಂದು ಊಟ ಕೇಳಿದರಂತೆ. ಊಟ ಆದ ಮೇಲೆ ಗೊತ್ತಾಗಿದ್ದು ಅವರು ಮೂರು ದಿನಗಳಿಂದ ಉಪವಾಸ ಇದ್ದರೆಂದು! ಇಂಥ ನಿರ್ಗತಿಕ-ಅಶಕ್ತ ವೃದ್ಧರಿಗೆ ನೆರವು ಆಗಬೇಕೆಂದು ಚಂದ್ರಿಕಾರ ತಂಡ ಪ್ರತಿನಿತ್ಯ ಇನ್ನೂರು ಜನ ವೃದ್ಧರಿಗೆ ಉಚಿತವಾಗಿ ಪೌಷ್ಟಿಕ ಆಹಾರವನ್ನು ಒದಗಿಸುತ್ತಿದೆ. ಈ ಪೈಕಿ ನೂರು ವೃದ್ಧರ ಖರ್ಚನ್ನು ರೋಟರಿ ಸಂಸ್ಥೆ ವಹಿಸಿಕೊಂಡಿದ್ದರೆ, ಉಳಿದವನ್ನು ಉದ್ಯೋಗವರ್ಧಿನಿಯೇ ಭರಿಸುತ್ತಿದೆ. ಹತ್ತಾರು ಅಂಧ ಬಾಲಕಿಯರಿಗೂ ಸಂಸ್ಥೆ ಉಚಿತವಾಗಿ ಆಹಾರ ನೀಡುತ್ತಿದೆ, ಬಡವರಿಗಾಗಿ ಉಚಿತ ರೊಟ್ಟಿಕೇಂದ್ರವನ್ನೂ ತೆರೆಯಲಾಗಿದೆ. ಹತ್ತಾರು ಮಹಿಳಾ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ‘ಹತ್ತು ರೂಪಾಯಿಗೂ ಬೇರೆಯವರ ಮೇಲೆ ಅವಲಂಬಿತವಾಗಿದ್ದ ಈ ಹೆಣ್ಣುಮಕ್ಕಳು ಇಂದು ತಾವೇ ನೀಡುವ ಕೈಗಳಾಗಿದ್ದಾರೆ, ಮ್ಯಾನೇಜ್​ವೆುಂಟ್, ನಾಯಕತ್ವದ ಕೌಶಲವನ್ನೂ ಕಲಿತಿದ್ದಾರೆ. ಹೆಣ್ಣಿನ ಶಕ್ತಿಯನ್ನು ಜಾಗೃತಗೊಳಿಸಿದರೆ ಆಕೆ ಅಸಾಮಾನ್ಯವಾದದ್ದನ್ನು ಸಾಧಿಸಬಲ್ಲಳು. ಉದ್ಯೋಗವರ್ಧಿನಿ ಅದೊಂದು ಸಂಸ್ಥೆಯಲ್ಲ, ದೊಡ್ಡ ಪರಿವಾರ, ಮತ್ತಷ್ಟು ಹೆಣ್ಣುಮಕ್ಕಳನ್ನು ಸ್ವಾವಲಂಬಿಗೊಳಿಸಬೇಕು ಎಂಬುದಷ್ಟೇ ನಮ್ಮ ಇರಾದೆ’ ಎನ್ನುವ ಚಂದ್ರಿಕಾ ಚವ್ಹಾಣ್​ರ (094220-69455, 093700-66670) ಕಾರ್ಯ ಮತ್ತು ಉದ್ಯೋಗವರ್ಧಿನಿಯನ್ನು ಜನ ‘ಮಹಾರಾಷ್ಟ್ರದ ಸಾಮಾಜಿಕ ಶಕ್ತಿಪೀಠ’ ಎಂದೇ ಕರೆಯುತ್ತಾರೆ.

ಕಣ್ಣೀರು ಒರೆಸಿಕೊಂಡು, ರೊಟ್ಟಿ ಬಡಿಯಲು ಆರಂಭಿಸಿದರೂ ಮಹಿಳೆ ಕ್ರಾಂತಿಯನ್ನೇ ಮಾಡಬಲ್ಲಳು, ಸಾವಿರ-ಸಾವಿರ ದುರ್ಗೆಯರನ್ನು ಸೃಷ್ಟಿಸಬಲ್ಲಳು ಎಂಬುದಕ್ಕೆ ಬೇರೆ ನಿದರ್ಶನ ಬೇಕೆ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)