ಎಮ್ಮೆ ಕಾಯುವ ಹುಡುಗ ಲಕ್ಷ-ಲಕ್ಷ ಮಕ್ಕಳಿಗೆ ಜ್ಞಾನದೀಪವಾದ!

ಪ್ರತೀ ಯಶಸ್ಸಿನ ಹಿಂದೆಯೂ ನೋವಿನ ಕಥೆಯಿದೆ! ಪ್ರತಿ ನೋವಿನ ಪಯಣ ಕೂಡ ಯಶಸ್ಸಿನಲ್ಲೇ ಕೊನೆಗೊಳ್ಳುತ್ತದೆ! ನಿಜ, ಈ ಜೀವನಗಾಥೆಯಂತೂ ಅಕ್ಷರಶಃ ಬೆರಗು ಮೂಡಿಸುವಂಥದ್ದು, ಪ್ರೇರಣೆ ನೀಡುವಂಥದ್ದು, ಜೀವನದ ಮೇಲೆ ಪ್ರೀತಿ ಹುಟ್ಟಿಸುವಂಥದ್ದು. ಮಗು ತೊದಲು ನುಡಿ ಆಡಲು ಶುರು ಮಾಡುತ್ತಿದ್ದಂತೆ ಈಗಿನ ಅಪ್ಪ-ಅಮ್ಮಂದಿರು ಅದನ್ನು ಶಾಲೆಗೆ ಸೇರಿಸಿ, ‘ಕಾಂಪಿಟಿಟಿವ್

ವರ್ಲ್ಡ್’ನ ಕುದುರೆಯಾಗಿಸಿ ಬಿಡುತ್ತಾರೆ. ಅಂಥದ್ದರಲ್ಲಿ 16ನೇ ವಯಸ್ಸಿನವರೆಗೂ ಈ ಹುಡುಗ ಶಾಲೆ ಮುಖವನ್ನೇ ನೋಡಿರಲಿಲ್ಲ! ಅಕ್ಷರಗಳ ಲೋಕ ಪ್ರವೇಶಿಸಿರಲಿಲ್ಲ! ಮನೆಯಲ್ಲಿ ಅಪ್ಪ-ಅಮ್ಮ, ಒಂಭತ್ತು ಮಕ್ಕಳು! ಇವನು ಐದನೇಯವನು. ಎಮ್ಮೆ ಮೇಯಿಸೋದು, ಮನೆಗೆ ಕಟ್ಟಿಗೆ ತಂದು ಹಾಕೋದು, ಕೃಷಿ ಕೆಲಸ ಮಾಡೋದು ದಿನಚರಿ. ಮನೆ-ಗದ್ದೆ ಬಿಟ್ಟರೆ ಬೇರೆ ಜಗತ್ತಿಲ್ಲ, ಆಪ್ತಸ್ನೇಹಿತರೆಂದರೆ ಎಮ್ಮೆಗಳೇ. ತನ್ನ ಮನಸ್ಸಿನ ಭಾವನೆಗಳನ್ನು ಅವುಗಳೊಡನೇ ಹಂಚಿಕೊಳ್ಳುತ್ತಿದ್ದ. ‘ಎಲ್ಲ ಚುಕ್ಕೋಳು (ಮಕ್ಕಳು) ಸಾಲಿಗ ಹೊಂಟಾವ್, ನಾನ್ಯಾಕ್ ಹೋಗ್ಬಾರದು?’ ಅಂತ ಪ್ರಶ್ನಿಸಿದರೆ ಪಾಪ ಆ ಮೂಕ ಎಮ್ಮೆಗಳು ಏನು ಉತ್ತರ ನೀಡಬೇಕು ಹೇಳಿ. ಶಾಲೆ ಕಾಂಪೌಂಡಿನ ಹೊರಗಡೆ ನಿಂತು ಒಳಗೆ ಕುತೂಹಲದ ಕಣ್ಣುಗಳಿಂದ ಇಣುಕಿ ಮೇಷ್ಟ್ರು ಮಕ್ಕಳಿಗೆ ಹೇಗೆ ಕಲಿಸುತ್ತಾರೆ ಎಂದು ಗಮನಿಸುತ್ತಿದ್ದ, ಸ್ವಲ್ಪ ಹೊತ್ತಲ್ಲೇ ಮತ್ತೆ ಎಮ್ಮೆಗಳ ನೆನಪಾಗಿ ಅವುಗಳ ಕಡೆ ಓಡುತ್ತಿದ್ದ!

ಇಂಥ ಹುಡುಗ ಮೊನ್ನೆ ಮೊನ್ನೆ ವಿಜಯಪುರದ ಕಗ್ಗೋಡಿನಲ್ಲಿ ಯುವ ಸಂಗಮವನ್ನು ಉದ್ದೇಶಿಸಿ ನಿರರ್ಗಳ ಕನ್ನಡ-ಇಂಗ್ಲಿಷಿನಲ್ಲಿ ಮಾತನಾಡುತ್ತಿರ ಬೇಕಾದರೆ ನೆರೆದ ಸಾವಿರಾರು ಯುವಕರು ತಬ್ಬಿಬ್ಬಾಗಿ ಹೋದರು! ಅಷ್ಟೇ ಅಲ್ಲ, ಉದ್ಯಮಿ ಮುಕೇಶ್ ಅಂಬಾನಿ, ನೀತು ಅಂಬಾನಿ. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ… ಇಂಥ ಘಟಾನುಘಟಿಗಳೆಲ್ಲ ಈತನ ಸಾಧನೆಗೆ ಶರಣು ಎಂದಿದ್ದಾರೆ. ‘ಶಿಕ್ಷಣದ ನೀತಿ ವಿದ್ಯಾರ್ಥಿಗಳ ಆಸಕ್ತಿ, ಭಾವನೆಗಳಿಗೆ ಅನುಸಾರವಾಗಿ ರೂಪುಗೊಳ್ಳಬೇಕು, ಆಗ ಅವರು ಆಯಾಕ್ಷೇತ್ರದ ನಾಯಕರಾಗಬಲ್ಲರು’ ಎಂದು ಖ್ಯಾತ ಶಿಕ್ಷಣ ತಜ್ಞ, ಚಿಂತಕ ಡಾ.ಬಸವರಾಜ್ ಪಾಟೀಲ್ ಸೇಡಂ ರಾಜ್ಯಸಭೆಯಲ್ಲಿ ಬಲವಾಗಿ ಪ್ರತಿಪಾದಿಸುವಾಗ ಅವರು ಉದಾಹರಣೆಯಾಗಿ ನೀಡಿದ್ದು ಈ ಹುಡುಗನ ಯಶೋಗಾಥೆಯನ್ನೇ! ಹೌದು, 16 ವರ್ಷದವರೆಗೂ ತನ್ನ ಹಳ್ಳಿಯನ್ನು ಬಿಟ್ಟರೆ ಹೊರ ಜಗತ್ತನ್ನೇ ಕಾಣದ ವ್ಯಕ್ತಿ ಪ್ರಬಲ ಇಚ್ಛಾಶಕ್ತಿ, ಕಠಿಣ ಪರಿಶ್ರಮ, ದೃಢಸಂಕಲ್ಪ, ಸಾಧನೆಯ ಹಸಿವಿನ ಪರಿಣಾಮವಾಗಿ ಎಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎಂದರೆ ಲಕ್ಷೋಪಲಕ್ಷ ಮಕ್ಕಳ ಬಾಳಲ್ಲಿ ಜ್ಞಾನಜ್ಯೋತಿ ಬೆಳಗಿ, ಈ ನಾಡಿನ ಖ್ಯಾತ ಮೋಟಿವೇಷನಲ್ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಹೆಸರು ರಮೇಶ್ ಬಲ್ಲಿದ್. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೋತಿಗುಡ್ಡ ಸ್ವಂತ ಊರು. ತಂದೆ ತಿಮ್ಮಪ್ಪ ಬಲ್ಲಿದ್, ತಾಯಿ ಬಸವ್ವ. ರಮೇಶ್ ಬದುಕಿನಲ್ಲಿ ಮಹತ್ವದ ತಿರುವು ಬಂದಿದ್ದು 2007ರಲ್ಲಿ, ಅದು ತೀರಾ ಅನಿರೀಕ್ಷಿತವಾಗಿ. ಗ್ರಾಮೀಣ ಯುವಕರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಬೆಂಗಳೂರು ಮೂಲದ ಹೆಡ್ ಹೆಲ್ಡ್ ಹೈ ಸಂಸ್ಥೆಯ ರಾಜೇಶ್ ಭಟ್ ಮತ್ತು ಮತ್ತವರ ತಂಡ ಪ್ರತಿಭಾವಂತ ಮಕ್ಕಳ ಹುಡುಕಾಟದಲ್ಲಿ ಪ್ರವಾಸ ಮಾಡುತ್ತ ಕೋತಿಗುಡ್ಡಕ್ಕೆ ತಲುಪಿದಾಗ ರಮೇಶ್ ಅವರ ಕಣ್ಣಿಗೆ ಬಿದ್ದ. ಇವನ ಬಾಯಿಂದ ‘ಮೈ ನೇಮ್ ಇಸ್ ರಮೇಶ್’ ಎಂದು ಹೇಳಿಸಲು ರಾಜೇಶ್ ಹರಸಾಹಸವನ್ನೇ ಮಾಡಬೇಕಾಯಿತು. ಆದರೆ, ಈತನ ಕಲಿಕಾಆಸಕ್ತಿ ಕಂಡು ಸಂಸ್ಥೆಯ ತರಬೇತಿಗೆ ಆಯ್ಕೆ ಮಾಡಿ, ಬೆಂಗಳೂರಿಗೆ ಬರುವಂತೆ ಪತ್ರ ಕಳಿಸಿದರು. ಆಗ ನಿಜವಾದ ಸವಾಲು ಎದುರಾಯಿತು. ಅಪ್ಪ-ಅಮ್ಮ ರಮೇಶ್​ನನ್ನು ಬೆಂಗಳೂರಿಗೆ ಕಳುಹಿಸಲು ಸುತಾರಾಂ ಒಪ್ಪಲಿಲ್ಲ. ‘ಅಲ್ಲಪ್ಪ ನೀನು ಅಲ್ಲಿಗೆ ಹೋದ್ರೆ ಹೊಲದಲ್ಲಿ ದುಡಿಯೋರಾರು? ಎಮ್ಮೆ ಮೈ ತೊಳೆಯುವರಾರು? ಆ ಕೆಲಸಕ್ಕೆಲ್ಲ ಜನ ಇಡಲು ನಮ್ಮಿಂದ ಆಗುತ್ತಾ?’ ಅಂದುಬಿಟ್ಟರು. ಆಗಲೇ ರಮೇಶ್ ಲೈಫ್​ಲ್ಲಿ ಮತ್ತೊಬ್ಬ ಹೀರೋನ ಎಂಟ್ರಿ ಆಗುತ್ತದೆ. ಅದು ಬೇರಾರೂ ಅಲ್ಲ. ರಮೇಶನ ತಮ್ಮ ಹನುಮಂತ ಬಲ್ಲಿದ್. ಅಪ್ಪ-ಅಮ್ಮ ಇವನಿಗೆ ಹೇಳಿದ ಮಾತನ್ನು ಕೇಳಿಸಿಕೊಂಡ ಹನುಮಂತ ಅಣ್ಣನನ್ನು ಹೊರಗೆ ಕರೆದ. ಎಮ್ಮೆ ಮೇಯಿಸಲು ಉಪಯೋಗಿಸುತ್ತಿದ್ದ ಕಟ್ಟಿಗೆಯಿಂದಲೇ ಈತನ ಎತ್ತರವನ್ನು ಅಳತೆ ಮಾಡಿ, ‘ಅಣ್ಣೋ, ನೀನು ಇವರ ಮಾತು ಕೇಳ್ಬೇಡ. ನೋಡು, ಎಷ್ಟು ಎತ್ತರ ಬೆಳ್ದಿ. ನಿಂಗೀಗ ವಯಸ್ಸಾಗೈತಿ, ಈಗ ಯಾರೂ ನಿನ್ನನ್ನು ಸ್ಕೂಲಿಗೆ ಸೇರಿಸಿಕೊಳ್ಳಲ್ಲ, ಅದಕ್ಕ, ಬಂದಿರೋ ಅವಕಾಶ ಕಳ್ಕೋಬೇಡ. ಪೇಟೆಯವರು ಇಂಗ್ಲಿಷ್ ಕಲಿಸ್ತಾರಂತಲ್ಲ ಹೋಗು, ನಾನಾದ್ರೆ ಚಿಕ್ಕೋನು, ಕೆಲ ವರ್ಷ ಬಿಟ್ಟೂ ಸಾಲಿಗ ಹೋಗ್ಬಹುದು, ಎಮ್ಮೆ-ಗಿಮ್ಮೆ ನಾ ನೋಡ್ಕೀತಿನಿ, ನೀ ಮಾಡ್ತಿದ್ದ ಕೆಲಸ ಎಲ್ಲ ನಾ ಮಾಡ್ತಿನಿ’ ಅಂತ ಪಟಪಟನೇ ಹೇಳಿದ. ಆಗ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 9 ವರ್ಷದ ಹನುಮಂತ ಅಣ್ಣನಿಗಾಗಿ ಶಾಲೆ ಬಿಟ್ಟು, ಎಮ್ಮೆ ಹಿಂದೆ ಹೋದ!

ಇತ್ತ ಮೊದಲಬಾರಿ ಬೆಂಗಳೂರಿಗೆ ಬಂದ ರಮೇಶನಿಗೆ ವಿದೇಶಕ್ಕೆ ಬಂದಂತೆ ಆಗಿಬಿಟ್ಟಿತ್ತು. ಆದರೆ, ಹೆಡ್ ಹೆಲ್ಡ್ ಹೈ ತಂಡದ ಸದಸ್ಯರು ಪರಿಣಾಮಕಾರಿ ತರಬೇತಿ ಆರಂಭಿಸಿದರು. ಮೊದಲಿಗೆ ಇಂಗ್ಲಿಷ್ ಕಲಿಕೆ. ಎಲ್ಲರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ. 6 ತಿಂಗಳ ತರಬೇತಿಯಲ್ಲಿ 4 ತಿಂಗಳು ಪೂರೈಸುವುದರಲ್ಲೇ ರಮೇಶ್ ಇಂಗ್ಲಿಷ್ ಕಲಿತು ಬಿಟ್ಟಿದ್ದ! ಮುಂದಿನ ಕಲಿಕೆ ಕಂಪ್ಯೂಟರ್​ನತ್ತ. ಬೇಸಿಕ್ ಸಂಗತಿಗಳನ್ನು ಬೇಗನೆ ಗ್ರಹಿಸಿದ ಈತ ಒಂದು ನಿಮಿಷದಲ್ಲಿ 70 ಶಬ್ದಗಳನ್ನು ಟೈಪಿಸುವಷ್ಟು ವೇಗ ಗಿಟ್ಟಿಸಿಕೊಂಡ. ಗ್ರಾಮೀಣ ಪ್ರದೇಶದ ಇತರೆ ಮಕ್ಕಳಿಗೆ ಈತನೇ ಪಾಠ ಮಾಡಲು ಶುರು ಮಾಡಿದ. ರಮೇಶ್​ನಲ್ಲಿ ಅಸಾಧಾರಣ ಸಾಮರ್ಥ್ಯವಿದೆ ಎಂದು ಅರಿವಾದದ್ದೇ ಆಗ. ಬೆಂಗಳೂರಿಗೆ ಬಂದ ಏಳು ತಿಂಗಳ ನಂತರ ಅಣ್ಣನ ಮದುವೆಗೆಂದು ಊರಿಗೆ ಹೋಗುವಷ್ಟರಲ್ಲಿ ಎಷ್ಟು ಬದಲಾಗಿಬಿಟ್ಟಿದ್ದನೆಂದರೆ ತಾಯಿಯೇ ರಮೇಶನನ್ನು ಗುರುತು ಹಿಡಿಯಲಿಲ್ಲ, ಯಾರೋ ಬ್ಯಾಂಕ್ ಅಧಿಕಾರಿ ಬಂದಿದ್ದಾರೆಂದು ತಿಳಿದು ಕೂಡಲು ಕುರ್ಚಿ ತಂದಿಟ್ಟರು. ಆಗ ಜೇಬಲ್ಲಿದ್ದ ಹಳೇ ಫೋಟೋ ತೆಗೆದು ತೋರಿಸಿ ‘ಅವ್ವಾ ನಾನ್ ಕಣೇ ನಿನ್ನ ರಮೇಶಾ’ ಅಂದಾಗ ಖುಷಿಯಲ್ಲಿ ಅಮ್ಮನ ಕಣ್ಣಂಚು ಒದ್ದೆ. ಮುಂದೆ ಬಿಪಿಒ ಒಂದರಲ್ಲಿ ಕೆಲಸವೂ ಸಿಕ್ಕಿತು, ತನ್ನ ಜಾಣ್ಮೆಯಿಂದ ಸ್ವಲ್ಪ ದಿನದಲ್ಲೇ ಟೀಮ್ ಲೀಡರ್ ಆದ. ಮುಂದೆ ಕಂಪ್ಯೂಟರ್ ವಿಭಾಗದ ಹೆಡ್ ಆದ.

ಆದರೆ, ತಾನು ಬೆಳೆದರೆ ಸಾಕೇ? ಕೋತಿಗುಡ್ಡದ ತನ್ನಂಥ ಯುವಕರನ್ನು ಮುಂದೆ ತರಬೇಕಲ್ವ ಎಂದು ಯೋಚಿಸಿ ಗಂಗಾವತಿ ಬಳಿಯ ಕನಕಗಿರಿಗೆ ಬಂದು ‘ರೂರಲ್ ಬ್ರಿಡ್ಜ್’ ಎಂಬ ಸಂಸ್ಥೆ ಕಟ್ಟಿ, ಅಲ್ಲಿನ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ಹೇಳಿಕೊಟ್ಟ. ಮುಂದೆ, ಅವರಿಗೆ ಉದ್ಯೋಗ ದೊರಕಿಸಲು 2009ರಲ್ಲಿ ಬಿಪಿಒ ಹುಟ್ಟುಹಾಕಿದ. ಪ್ರಸಕ್ತ ಗ್ರಾಮೀಣ ಭಾಗದ 120 ಯುವಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ತನ್ನ ಏಳ್ಗೆಗಾಗಿ ತ್ಯಾಗ ಮಾಡಿದ ಹನುಮಂತನಿಗೂ ಉತ್ತಮ ಬದುಕು ಕಲ್ಪಿಸಬೇಕು, ಅದಕ್ಕಾಗಿ ಬೆಂಗಳೂರಿನಲ್ಲಿ ತರಬೇತಿ ಕೊಡಿಸಬೇಕು ಎಂದು ನಿರ್ಧರಿಸಿದ ರಮೇಶ್. ಹನುಮಂತ ತರಬೇತಿಗೂ ಆಯ್ಕೆ ಆದ. ಆದರೆ, ವಿಧಿ ಇಲ್ಲಿ ಕ್ರೂರ ಆಟವಾಡಿತು. 2014ರ ಫೆಬ್ರವರಿ 4ರಂದು ತರಬೇತಿಗೆ ಆಯ್ಕೆ ಆಗಿದ್ದ ಹನುಮಂತ ಫೆ.10ರಂದು ಆ ಸಂಸ್ಥೆಯನ್ನು ಸೇರಿಕೊಳ್ಳಬೇಕಿತ್ತು. ಖಾಸಗಿ ಚಾನಲ್​ನ ಸಂದರ್ಶನವೊಂದಕ್ಕೆ ರಮೇಶ್​ನ ಬಾಲ್ಯರೂಪದಲ್ಲಿ ನಟಿಸಿದ ಹನುಮಂತ (ಫೆ.6) ಮುಂದೆ ಎರಡೇ ದಿನಗಳಲ್ಲಿ ಟ್ರಾ್ಯಕ್ಟರ್ ಅಪಘಾತಕ್ಕೆ ಬಲಿಯಾದ. ತನ್ನ ಬಾಳು ರೂಪಿಸಿದ ಪ್ರೀತಿಯ ತಮ್ಮನನ್ನು ಕಳೆದುಕೊಂಡ ದುಃಖ ರಮೇಶನಿಗೆ ಎಷ್ಟು ತೀವ್ರವಾಗಿ ಕಾಡಿತೆಂದರೆ, ‘ಇನ್ನು ನನ್ನ ಜೀವನಕ್ಕೇನು ಅರ್ಥ’ ಅಂತ ನೊಂದುಕೊಂಡ. ಮೂರ್ನಾಲ್ಕು ತಿಂಗಳು ಖಿನ್ನತೆಯಲ್ಲೇ ಕಳೆದ. ಆಗ ದುಃಖದಿಂದ ಮೇಲೆದ್ದು ಹೊಸ ಬದುಕು ಆರಂಭಿಸಲು ಸ್ಪೂರ್ತಿ ತುಂಬಿದ್ದು ಆ ಹನುಮಂತನೇ. ‘ನನ್ನ ಸಾವಿರಾರು ಗ್ರಾಮೀಣ ಮಕ್ಕಳಲ್ಲೇ ನನ್ನ ತಮ್ಮನನ್ನು ಹುಡುಕಬೇಕು, ಆ ಮಕ್ಕಳಲ್ಲಿ ಜ್ಞಾನ ಮತ್ತು ಕೌಶಲ ತುಂಬಬೇಕು’ ಎಂದು ನಿರ್ಧರಿಸಿದ ರಮೇಶ್ ರಾಜ್ಯದ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಿಗೆ ತೆರಳಿ ವ್ಯಕ್ತಿತ್ವ ವಿಕಸನ, ಮಾನವೀಯ ಮೌಲ್ಯ, ನಾಯಕತ್ವ ಗುಣ, ಜೀವನಕೌಶಲಗಳ ಬಗ್ಗೆ ತರಬೇತಿ ನೀಡುತ್ತ ಮೋಟಿವೇಷನಲ್ ಸ್ಪೀಕರ್ ಆಗಿ ರೂಪುಗೊಂಡ. ರಾಜ್ಯ ಮಾತ್ರವಲ್ಲದೆ ದೇಶದ ಹಲವೆಡೆ 1 ಸಾವಿರಕ್ಕೂ ಅಧಿಕ ಕಾರ್ಯಕ್ರಮ-ಕಾರ್ಯಾಗಾರಗಳನ್ನು ನಡೆಸಿರುವ ರಮೇಶ್ ಈವರೆಗೆ 4.85 ಲಕ್ಷ ಮಕ್ಕಳಿಗೆ, ಶಿಕ್ಷಕರಿಗೆ ತರಬೇತಿ ನೀಡಿದ್ದಾನೆ. ಅಷ್ಟು ಮಕ್ಕಳಲ್ಲಿ ಅವನಿಗೆ ಹನುಮಂತ ಕಂಡಿದ್ದಾನೆ. ರಮೇಶ್ ತರಬೇತಿ ನೀಡಿದಲ್ಲೆಲ್ಲ ಕಲಿಕಾ ಮಟ್ಟ ಉತ್ತಮಗೊಂಡಿದೆ, ಮಕ್ಕಳ ಹಾಜರಾತಿ ಹೆಚ್ಚಿದೆ. ಕೃಷಿಭೂಮಿಯಿಂದ ಬಂದ ತನ್ನ ಹಿನ್ನೆಲೆ ಮರೆಯಬಾರದು, ರೈತರ ಕಲ್ಯಾಣಕ್ಕಾಗಿ ಸಾಧ್ಯವಾದಷ್ಟು ಶ್ರಮಿಸಬೇಕು ಎಂದು ನಿರ್ಧರಿಸಿ ಕೋತಿಗುಡ್ಡದಲ್ಲಿ ಕೃಷಿಯನ್ನೂ ಮಾಡುತ್ತಿರುವ ರಮೇಶ್ ವರ್ಷದ 365 ದಿನಗಳಲ್ಲಿ 150 ದಿನ ಸಮಾಜಕ್ಕಾಗಿ, 100 ದಿನ ಬಿಪಿಒಗಾಗಿ, ಉಳಿದೆಲ್ಲ ದಿನಗಳನ್ನು ಕೃಷಿಗಾಗಿ ಮೀಸಲಿಟ್ಟಿದ್ದಾನೆ. ಈತನ ಸಾಧನೆಗೆ ಸಿಎನ್​ನ್-ಐಬಿಎನ್​ನ ರಿಯಲ್ ಹೀರೋ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

ಯಶಸ್ಸು ಸುಮ್ಮನೆ ಸಿಗುವುದಿಲ್ಲ, ಅದಕ್ಕೆ ಶಾರ್ಟ್​ಕಟ್ ಮಾರ್ಗವೂ ಇಲ್ಲ. ಬದ್ಧತೆ ಮತ್ತು ಕಠಿಣ ಪರಿಶ್ರಮಗಳು ಬೇಕು ಎನ್ನುವ ರಮೇಶ್- ‘ಇಂಗ್ಲಿಷ್-ಕಂಪ್ಯೂಟರ್ ಕಲಿಯುವಾಗ ದಿನದ 20 ಗಂಟೆ ಅಭ್ಯಾಸ ಮಾಡಿದ್ದೇನೆ’ ಎಂದು ನೆನಪಿಸಿಕೊಳ್ಳುತ್ತಾನೆ. ಗದ್ದೆಯಲ್ಲಿ ನಿಂತು ಆಕಾಶದಲ್ಲಿ ಹೋಗುತ್ತಿದ್ದ

ವಿಮಾನವನ್ನು ಕಂಡು ಸಂಭ್ರಮಿಸುತ್ತಿದ್ದ ರಮೇಶ್ ಈಗ ಅದೇ ವಿಮಾನಗಳಲ್ಲಿ ಬಿಡುವಿಲ್ಲದ ಪ್ರವಾಸ ಕೈಗೊಳ್ಳುತ್ತಿದ್ದಾನೆ. ದೊಡ್ಡ ಸಂಸ್ಥೆ, ಕಟ್ಟಡ ಯಾವುದು ಕಟ್ಟದೆಯೂ ಲಕ್ಷಾಂತರ ಜನರಿಗೆ ಶಿಕ್ಷಣ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿರುವ ರಮೇಶ್ ಬಲ್ಲಿದ್ ನಮ್ಮ ನಾಡಿನ ಶಿಕ್ಷಣದ, ಗ್ರಾಮಶಕ್ತಿಯ ಅದಕ್ಕಿಂತಲೂ ಹೆಚ್ಚಾಗಿ ಪ್ರೇರಣೆಯ ರಾಯಭಾರಿಯಾಗಿದ್ದಾರೆ.

ಇಂಥ ಸಾಧನೆ ನಮ್ಮ ಕಣ್ಣು ತೆರೆಸಿದರೆ ಮತ್ತೆ ಸಾವಿರ ಸಾವಿರ ರಮೇಶ್ ಬಲ್ಲಿದ್​ರು (98802-49175) ಸಿಗಬಹುದೇನೋ? ಒಮ್ಮೆ ನಮ್ಮ ಹಳ್ಳಿ-ಓಣಿಯಲ್ಲೂ ದೃಷ್ಟಿ ಹಾಯಿಸೋಣ, ಅಲ್ಲವೇ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

6 Replies to “ಎಮ್ಮೆ ಕಾಯುವ ಹುಡುಗ ಲಕ್ಷ-ಲಕ್ಷ ಮಕ್ಕಳಿಗೆ ಜ್ಞಾನದೀಪವಾದ!”

  1. very happy to say that I have seen him. The real hero Ramesh Ballid. The article narration is best .thank you sir .

  2. Extraordinary achievement & I’m really Inspired and hope all citizens will do atleast 1/4 of the same.

Comments are closed.